ವಿಜಯಪ್ರಸಾದ್‌ ನಿರ್ದೇಶನದ, ಕೆಎ ಸುರೇಶ್‌ ನಿರ್ಮಾಣದ, ಜಗ್ಗೇಶ್‌, ಅದಿತಿ ಪ್ರಭುದೇವ ನಟನೆಯ ‘ತೋತಾಪುರಿ’ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಗ್ಗೇಶ್‌ ಜೊತೆ ಮಾತುಕತೆ.

ರಾಜೇಶ್‌ ಶೆಟ್ಟಿ

‘ನಾನು, ನೀನು ತಾನು ಇತ್ಯಾದಿ ಘರ್ಷಣೆಗಳಿರುವ ಸಮಾಜ ಇದು. ಆ ಎಲ್ಲಾ ಘರ್ಷಣೆಗಳನ್ನು, ಗೊಂದಲಗಳನ್ನು ಬಿಟ್ಟು ಪ್ರೀತಿ ಹುಡುಕಿಕೊಂಡು ಹೋಗೋಣ ಅನ್ನುವುದೇ ಈ ಸಿನಿಮಾ.’

- ಜಗ್ಗೇಶ್‌ ಅವರು ತಾವು ತುಂಬಾ ವಿಶ್ವಾಸ ಇರಿಸಿಕೊಂಡಿರುವ ‘ತೋತಾಪುರಿ’ ಸಿನಿಮಾದ ಕುರಿತು ಕಾಡುಮಲ್ಲೇಶ್ವರನ ಜಾಗದಲ್ಲಿರುವ ತಮ್ಮ ಮನೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಮನೆ ವಾತಾವರಣ ಹಿತವಾಗಿತ್ತು. ಮಾತೂ ಮನಸ್ಸು ಮುಟ್ಟುವಂತಿತ್ತು.

‘ನನ್ನದು ಒಬ್ಬ ಟೇಲರ್‌ ಪಾತ್ರ. ಅವನಿಗೆ ಎಲ್ಲರೂ ಬೇಕು. ಎಲ್ಲಾ ಜಾತಿಯವರೂ ಅವನ ಬಳಿ ಬರುತ್ತಾರೆ. ಅದಿತಿ ಪ್ರಭುದೇವ ಅವರದು ಮುಸ್ಲಿಂ ಹುಡುಗಿಯ ಪಾತ್ರ. ಆಕೆ ಶುದ್ಧ ಕನ್ನಡ ಮಾತನಾಡುವುದಷ್ಟೇ ಅಲ್ಲ, ವೀಣೆ ನುಡಿಸುತ್ತಾಳೆ. ರಾಯರ ಮಠದಲ್ಲಿ ರಾಯರ ಮುಂದೆ ಕುಳಿತು ಕಾರ್ಯಕ್ರಮ ನೀಡುತ್ತಾಳೆ. ಆಕೆಯ ಜೊತೆ ಅಸಹಾಯಕ ಹೆಣ್ಣು ಮಗಳು ದೊಣ್ಣೆ ರಂಗಮ್ಮ, ಶೋಷಿತ ವರ್ಗದ ಪ್ರತಿನಿಧಿ ನಂಜಮ್ಮ ಇರುತ್ತಾರೆ. ಈ ಮೂರೂ ಪಾತ್ರಗಳೂ ಭಯಂಕರ ಪವರ್‌ಫುಲ್‌ ಆಗಿದೆ. ಶೋಷಿತ ವರ್ಗ, ಮುಸ್ಲಿಂ ಹುಡುಗಿ, ಕ್ರಿಶ್ಚಿಯನ್‌ ಮಹಿಳೆ ಹೀಗೆ ಬೇರೆಬೇರೆಯವರ ಕತೆ ಇದೆ. ಆ ಎಲ್ಲಾ ಕತೆ ಈ ಟೇಲರ್‌ ಸುತ್ತಾ ಸುತ್ತುತ್ತದೆ. ವಿಜಯಪ್ರಸಾದ್‌ ಎಂಥಾ ಅದ್ಭುತ ಸಿನಿಮಾ ಬರೆದಿದ್ದಾರೆ ಎಂದರೆ ನನಗೆ ನೆನೆಯುವಾಗಲೇ ಖುಷಿಯಾಗುತ್ತದೆ. ಈ ಸಿನಿಮಾದಲ್ಲಿ ಶೋಷಿತ ವರ್ಗದ ಪರವಾಗಿ ಸಂವಿಧಾನದ ಬಗ್ಗೆ ಮಾತನಾಡು ದೃಶ್ಯವೊಂದಿದೆ. ನಾನು ನಟಿಸಿ ಪಕ್ಕಕ್ಕೆ ಹೋಗಿ ಕಣ್ಣೀರು ಹಾಕಿಬಿಟ್ಟೆ. ಆ ಒಂದು ದೃಶ್ಯವೇ ಆ ಪಾತ್ರದ ಘನತೆಯನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ.’ ಎಂದು ಮೌನವಾಗುತ್ತಾರೆ ಜಗ್ಗೇಶ್‌.

ಸಾಮಾನ್ಯವಾಗಿ ಜಗ್ಗೇಶ್‌ ಪಕ್ಕದಲ್ಲಿ ಕೂತರೆ ಮಾತು ಮಾತು ಮಾತು. ಅಂಥಾ ಜಗ್ಗೇಶ್‌ ಅವರನ್ನು ಕೂಡ ತೋತಾಪುರಿ ಸಿನಿಮಾ ಮೌನಕ್ಕೆ ದೂಡಿದೆ.

ಕಾಮಿಡಿ ಚಿತ್ರ ಎರಡು ಪಾರ್ಟ್‌ನಲ್ಲಿ ಬರ್ತಿರೋದು ಇದೇ ಮೊದಲು; ನಟ ಜಗ್ಗೇಶ್

‘ಜನರಿಗೆ ಹೊಸ ಥರದ ಕಂಟೆಂಟ್‌ ಬೇಕು. ಚಾರ್ಲಿ ಚಾಪ್ಲಿನ್‌ ಥರದ ಕತೆಗಳು ಬೇಕು. ನಾಯಕ ಸಾಮಾನ್ಯ ವ್ಯಕ್ತಿಯಾಗಿರಬೇಕು. ಎಲ್ಲರ ಮಧ್ಯೆ ಇರುವಂತವನಾಗಿರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿರಬೇಕು. ಅವನ ಸುತ್ತಲೂ ಕತೆ ನಡೆದಾಗ ಜನರಿಗೂ ಅದು ನಮ್ಮ ಕತೆ ಅನ್ನಿಸುತ್ತದೆ. ಇದು ಅಂಥಾ ಕತೆ. ಗಂಭೀರ ವಿಚಾರವನ್ನು ತಮಾಷೆಯಾಗಿ ಹೇಳಿದ್ದೇವೆ. ಪ್ರೀತಿ ಎಲ್ಲಕ್ಕಿಂತ ದೊಡ್ಡದು ಎಂದು ಸಾರುವ ಸಿನಿಮಾ ಇದು’ ಎನ್ನುತ್ತಾರೆ.

‘ ವಿಜಯಪ್ರಸಾದ್‌ ಪೆನ್ನು ಹಿಡಿದರೆ ಅವರನ್ನು ಮೀರಿಸುವವರೇ ಇಲ್ಲ, ಅದ್ಭುತ ಬರಹಗಾರ. ಅಂಥಾ ಅವರೇ ಬಯಸಿದರೂ ಇಂಥಾ ಸಿನಿಮಾ ಇನ್ನೊಂದು ಮಾಡೋಕಾಗಲ್ಲ. ನಿರ್ಮಾಪಕ ಕೆಎ ಸುರೇಶ್‌ ‘ಮಗುವಿನಂತಹ ಮನಸ್ಸಿನ ವ್ಯಕ್ತಿ. ಸಿನಿಮಾಗಾಗಿ ತನ್ನೆಲ್ಲವನ್ನೂ ಧಾರೆ ಎರೆಯುವಂತಹ ವ್ಯಕ್ತಿತ್ವ. ಅವನು ಒಳ್ಳೆಯವನು, ಹಾಗಾಗಿ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಜಗ್ಗೇಶ್‌

ಅಪ್ಪ ಅಲ್ಲಿ ಕೂಲಿ ಕೆಲಸ ಮಾಡ್ತಿದ್ರು; ಮಂತ್ರಿಮಾಲ್ ಜಾಗದಲ್ಲಿ ಮೊದಲೇನಿತ್ತು ಎಂದು ರಿವೀಲ್ ಮಾಡಿದ ನಟ ಜಗ್ಗೇಶ್

ಜಗ್ಗೇಶ್‌ಗೆ ಸಿನಿಮಾ, ಟಿವಿ, ಕತೆ, ನಿರ್ದೇಶನ, ರಾಜಕೀಯ, ಬ್ಯುಸಿನೆಸ್‌ ಎಲ್ಲವೂ ತಿಳಿದಿದೆ. ತಾವು ಪೋಸ್ಟರ್‌ ಹಂಚಿದ ದಿನಗಳು, ಪ್ರಚಾರಕ್ಕೆ ಹಾತೊರೆದ ಸಂದರ್ಭ, ಒಂದೊಂದು ಜಾಣತನದ ಹೆಜ್ಜೆ ಇಟ್ಟುಕೊಂಡು ಗೆದ್ದ ಕತೆಗಳು ಹೀಗೆ ಅವರ ಮಾತುಗಳಲ್ಲಿ ತಮಾಷೆ ಮತ್ತು ಜ್ಞಾನ ಎಲ್ಲವೂ ಸಿಗುತ್ತವೆ.

‘ಈಗ ಕಂಟೆಂಟ್‌ ಆಧರಿತ ಸಿನಿಮಾಗಳು ಬೇಕು. ಓಟಿಟಿಗಳು ಸ್ಪರ್ಧೆ ಮಾಡುತ್ತಿವೆ. ಅವರಿಗೆ ಒಳ್ಳೆಯ ಸಿನಿಮಾ ಬೇಕು. ನಮ್ಮ ಸಿನಿಮಾ ಅಂತೂ ಓಟಿಟಿಗೆ ಹಬ್ಬ ಇದ್ದಂತೆ. ಈಗ ಎಷ್ಟುಪ್ರಚಾರ ಮಾಡಿದರೂ ಸಾಲದು. ಸಾಕಷ್ಟುಪ್ರಚಾರ ಮಾಡಿ ಮನೆಗೆ ಬಂದ ನಂತರವೂ ಯಾವಾಗ ಸಿನಿಮಾ ರಿಲೀಸ್‌ ಎಂದು ಕೇಳುತ್ತಾರೆ. ನಾವು ಗೆದ್ದು ದಡ ದಾಟಿ ಬಂದಾಯಿತು. ಮುಂದಿನ ಜನರೇಷನ್‌ ನೋಡಿದಾಗ ಆತಂಕ ಆಗುತ್ತದೆ. ಅವರಿಗೆ ತುಂಬಾ ಕಷ್ಟಇದೆ. ಕಷ್ಟವನ್ನು ಇಷ್ಟದಂತೆ ಮಾಡಬೇಕು’ ಎಂದ ಹೇಳುವಾಗ ತತ್ವಜ್ಞಾನಿಯಂತೆ ಕಾಣಿಸುತ್ತಾರೆ.

ಸಿನಿಮಾದ ಜೊತೆ ಲೋಕೋದ್ಧಾರ ಮಾಡುವ ಆಸೆಯುಳ್ಳ ಜಗ್ಗೇಶ್‌ ಮಾತಿನ ಕೊನೆಗೆ ರಾಯರ ಫೋಟೋದ ಬಳಿ ನಿಂತು ಭಗವದ್ಗೀತೆಯ ಒಂದು ಶ್ಲೋಕ ಹೇಳಿ ಮಾತು ಮುಗಿಸಿದರು.

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್‌

ಅದನ್ನು ಹೇಳುವಾಗ ಜಗ್ಗೇಶ್‌ ಅವರ ಮುಖದಲ್ಲಿ ನಿರಾಳ ಭಾವವಿತ್ತು.