ಸಾಧು ಕೋಕಿಲ, ಚಿಕ್ಕಣ್ಣನ ಬಳಿಕ ಅಭಿಮಾನಿಗಳನ್ನು ಪಡೆಯುತ್ತಿರುವ ಹಾಸ್ಯನಟನಾಗಿ ಬೆಳೆಯುತ್ತಿರುವವರು ಧರ್ಮಣ್ಣ. ಕೈ ತುಂಬ ಚಿತ್ರಗಳನ್ನಿರಿಸಿಕೊಂಡು ಬ್ಯುಸಿಯಾಗಿರುವ ಹೊತ್ತಲ್ಲೇ ಈ ಲಾಕ್ಡೌನ್ ಸಂಭವಿಸಿತ್ತು. ಅದಾಗಲೇ ಚಿಕ್ಕಮಗಳೂರು ಸನಿಹದಲ್ಲಿರುವ ಕಡೂರಿನ ಮನೆ ಸೇರಿಕೊಂಡಿದ್ದ ಧರ್ಮಣ್ಣ ಇದುವರೆಗೆ ಅಲ್ಲಿಯೇ ಇದ್ದಾರೆ. ಅವರು ಮನೆಯಲ್ಲಿ ದಿನ ಕಳೆದ ರೀತಿಯೇ ವಿಭಿನ್ನ. ಅದರ ಬಗ್ಗೆ ಮತ್ತು ಮುಂದಿನ ಚಿತ್ರಗಳ ಬಗ್ಗೆ ಸುವರ್ಣ ನ್ಯೂಸ್‌.ಕಾಮ್ ಜತೆಗೆ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.

- ಶಶಿಕರ ಪಾತೂರು

ನಿಮ್ಮ ನಟನೆಯ ಚಿತ್ರಗಳ ಶೂಟಿಂಗ್ ಇನ್ನೂ ಆರಂಭವಾಗಿಲ್ಲವೇ?
ಎಲ್ಲ ಸರಿಯಾಗಿದ್ದರೆ ಈಗಾಗಲೇ ನಾನು ನಟಿಸಿರುವ `ರಾಬರ್ಟ್' ಮತ್ತು `ಇನ್ಸ್‌ಪೆಕ್ಟರ್ ವಿಕ್ರಂ' ಚಿತ್ರಗಳು ತೆರೆಕಂಡಿರಬೇಕಿತ್ತು. ಗಣೇಶ್ ಅವರು ನಾಯಕರಾಗಿರುವ `ಸಕತ್' ಮತ್ತು ಶ್ರೀ ಮುರಳಿಯವರ `ಮದಗಜ' ಸಿನಿಮಾದ ಒಂದು ಶೆಡ್ಯೂಲ್ ಮುಗಿದಿತ್ತು. ಎರಡು ಸಿನಿಮಾಗಳಲ್ಲಿಯೂ ನನಗೆ ಪಾತ್ರವಿದೆ. ಬಹುಶಃ ಸದ್ಯದಲ್ಲೇ ಮತ್ತೆ ಅವುಗಳ ಚಿತ್ರೀಕರಣ ಶುರುವಾಗಲಿದೆ. `ಗ್ರಾಮಾಯಣ' ಸಿನಿಮಾದ ಶೂಟ್ ಕೂಡ ಆರಂಭಿಸಲಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಆ ಹೊತ್ತಿಗೆ ಬೆಂಗಳೂರಲ್ಲಿರುತ್ತೇನೆ. ಇವುಗಳೊಂದಿಗೆ ಇನ್ನೂ ಹೆಸರಿಟ್ಟಿಲ್ಲದ ಒಂದು ಚಿತ್ರ ಕೂಡ ಇದೆ. ಮೂರು ನಾಲ್ಕು ಹೊಸ ಸಿನಿಮಾಗಳ ಮಾತುಕತೆಯೂ ನಡೆದಿದೆ.

ಕನ್ನಡ ಕಿರುತೆರೆಗೆ ಡಬ್ಬಿಂಗ್ ಒಳ್ಳೇದಲ್ಲ

ಮುಂದಿನ ತಿಂಗಳಿನಿಂದ ಎಲ್ಲ ಸಿನಿಮಾಗಳಿಗೂ ಶೂಟಿಂಗ್ ಒಪ್ಪಿಗೆ ಸಿಗುವಂತಿದೆ ಅಲ್ಲವೇ?
ಸರ್ಕಾರವೇನೋ ಶೂಟಿಂಗ್‌ ಗೆ ಒಪ್ಪಿಗೆ ನೀಡಬಹುದು. ಆದರೆ ಇಲ್ಲಿ ಇನ್ನೊಂದು ತೊಂದರೆ ಇದೆ. ಬಹಳಷ್ಟು ಬಾರಿ ಏನಾಗುತ್ತಿದೆ ಎಂದರೆ ಚಿತ್ರೀಕರಣ ನಡೆಸಬೇಕಾಗಿರುವಲ್ಲಿ, ಆ ಜಾಗಕ್ಕೆ ಸಂಬಂಧಿಸಿದವರ ಒಪ್ಪಿಗೆ ಪಡೆಯುವುದು ಕಷ್ಟವೇ. ಯಾಕೆಂದರೆ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವುಗಳು ಹೆಚ್ಚುತ್ತಿರುವ ಕಾರಣ ಅವರಿಗೂ ಆತಂಕ ಇರುತ್ತದೆ. ಚಿತ್ರೀಕರಣದ ವೇಳೆ ಎಚ್ಚರಿಕೆ ವಹಿಸಬಹುದಾದರೂ, ಬಿಗ್ ಬಜೆಟ್ ಇರುವ ಸ್ಟಾರ್ ಸಿನಿಮಾಗಳ ಶೂಟಿಂಗ್‌ ನಲ್ಲಿ ಹಲವಾರು ಅಗತ್ಯಗಳಿಗಾಗಿ ಕಲಾವಿದರು, ತಂತ್ರಜ್ಞರು ಗುಂಪು ಸೇರಲೇಬೇಕಾಗುತ್ತದೆ. ಹಾಗಾಗಿ ಶೂಟಿಂಗ್ ಜಾಗದವರಿಂದ ಸರಿಯಾಗಿ ಒಪ್ಪಿಗೆ ಸಿಕ್ಕೊಡನೆ ಎಲ್ಲ ಚಿತ್ರಗಳ ಚಿತ್ರೀಕರಣ ಸರಾಗವಾಗಿ ನಡೆಯಬಹುದು.

ಲಾಕ್ಡೌನ್ ದಿನಗಳನ್ನು ನೀವು ಹೇಗೆ ಕಳೆದಿರಿ?
ನಾನು ಕಡೂರಲ್ಲಿದ್ದ ಕಾರಣ, ಕುಟುಂಬದ ಜತೆಗೆ ಕಾಲ ಕಳೆಯಲು ಒಳ್ಳೆಯ ಅವಕಾಶ ದೊರಕಿತು. ಊರಲ್ಲಿ ನಾವು ಹೂವಿನ ವ್ಯಾಪಾರಿಗಳು. ಬೆಂಗಳೂರಿಗೆ ಬರುವ ಮೊದಲು ನಾನು ಕೂಡ ಹೂವು ಕಟ್ಟಿ ಮಾರುತ್ತಿದ್ದೆ. ಹಳ್ಳಿಗಳಿಂದ ನಮ್ಮನೆಗೆ ದಿನಾ ಹೂವು ಬರುತ್ತವೆ. ಈಗ ಲಾಕ್ಡೌನ್ ಸಮಯದಲ್ಲಿ ನಾನು ಪುನಃ ಹೂವು ಕಟ್ಟುವ ಕೆಲಸ ಮಾಡಿದೆ. ಈ ದಿನಗಳು ಸೂಜಿಮಲ್ಲೆ,  ದುಂಡು ಮಲ್ಲಿಗೆ ಹೇರಳವಾಗಿ ಅರಳುವ ಕಾಲ. ಇನ್ನು ಸ್ವಲ್ಪ ದಿನ ದಾಟಿದರೆ ಸೇವಂತಿಗೆ ಮೂಡುತ್ತವೆ. ಕನಕಾಂಬರ,  ಕಾಕಡಾ ಎಂದು ಕರೆಯಲ್ಪಡುವ ಮಲ್ಲಿಗೆ ಇವೆಲ್ಲವನ್ನು ಮನೆಯಲ್ಲೇ ಕಟ್ಟುತ್ತೇನೆ. ಸಂಜೆಯಿಂದ ರಾತ್ರಿ ತನಕ ಅದರಲ್ಲೇ ಟೈಮ್ ಪಾಸ್ ಆಗುತ್ತದೆ. ಅವುಗಳನ್ನು ಮುಂಜಾನೆ ಅಣ್ಣ ಸಂತೆಗೆ ಹೋಗುವಾಗ ಕೊಂಡೊಯ್ಯುತ್ತಾನೆ. ವಾರದಲ್ಲಿ ಮೂರು ದಿನ ಸಂತೆಯಲ್ಲಿ ಮತ್ತು ಉಳಿದ ದಿನ ಮನೆ ಸನಿಹದ ನಮ್ಮ ಅಂಗಡಿಯಲ್ಲೇ ಮಾರುತ್ತೇವೆ. 

ಡಬ್ಬಿಂಗ್ ಸೀರಿಯಲ್‌ನಲ್ಲಿ ಕನ್ನಡ ಬಲ್ಲವರಿಗೇನು ಕೆಲಸ?

ನಿಮ್ಮ ಕುಟುಂಬ ಮತ್ತು ಕಲಾಸಕ್ತಿಯ ಬಗ್ಗೆ ಹೇಳಿ
ನಮ್ಮದು ಅವಿಭಕ್ತ ಕುಟುಂಬ. ನನಗೆ ಮದುವೆಯಾಗಿ ಐದು ವರ್ಷ ಆಗಿದೆ. ನಾಲ್ಕು ವರ್ಷದ ಮಗನಿದ್ದಾನೆ. ಅವನ ಹೆಸರು ಶಶಾಂಕ್. ನಾವೆಲ್ಲ ಸೇರಿ ಮನೆಯಲ್ಲಿ ಒಂಬತ್ತು ಜನ ಇದ್ದೇವೆ. ನಮ್ಮಪ್ಪ ನಾಟಕಗಳಲ್ಲಿ, ಕೋಲಾಟದ ಜನಪದ ಗೀತೆಗಳ ಗಾಯಕರಾಗಿ ಹೆಸರಾದವರು. ಆದರೆ ಚಿತ್ರೋದ್ಯಮದ ಜತೆಗೆ ನಮಗೆ ಯಾರಿಗೂ ಸಂಬಂಧವಿಲ್ಲ. ನನಗೆ ಹಾಸ್ಯದ ಮೇಲೆ  ಮೊದಲಿನಿಂದಲೂ ಆಸಕ್ತಿ. ಹಾಗಾಗಿ ಲಾಕ್ಡೌನ್ ಬಿಡುವಲ್ಲಿ ಬೀಚಿಯವರ 'ಉತ್ತರ ಭೂಪ', 'ತಿಂಮ ರಸಾಯನ' ಮತ್ತು ಪುಸ್ತಕಗಳನ್ನು ಓದಿದೆ. ನಮಗೆ ತೆಂಗು, ಅಡಿಕೆ ತೋಟವಿದೆ. ತೋಟದ ಕೆಲಸ ಮಾಡುತ್ತೇನೆ.  ನಾನು ನಟಿಸಿದ ಸಿನಿಮಾ ತೆರೆಗೆ ಬಂದಾಗ ಎಲ್ಲರೂ ಥಿಯೇಟರ್‌ಗೆ ಹೋಗಿ ನೋಡುತ್ತಾರೆ. ನಾನೇ  ಮನೆಯಲ್ಲಿದ್ದರೆ ಖುದ್ದಾಗಿ  ಅವರನ್ನು ಸಿನಿಮಾಗೆ ಕರೆದೊಯ್ಯುತ್ತೇನೆ. 

ನಟನಾಗಿ ಜನ ನಿಮ್ಮನ್ನು ಹೇಗೆ ಗುರುತಿಸಬೇಕು ಎಂದು ಬಯಸುತ್ತೀರಿ?
ಸಿನಿಮಾಗಳಲ್ಲಿ ಒಂದು ಟೈಮಲ್ಲಿ ಅನಂತನಾಗ್, ಶಶಿಕುಮಾರ್ ಅವರೆಲ್ಲ ಮಾಡುತ್ತಿದ್ದಂಥ ಕೌಟುಂಬಿಕ ಪಾತ್ರಗಳಿವೆ. `ಮನೇಲಿ ಇಲಿ ಬೀದೀಲಿ ಹುಲಿ', `ಗಣೇಶನ ಗಲಾಟೆ', `ಪೊಲೀಸ್‌ನ ಹೆಂಡ್ತಿ' ಮೊದಲಾದ ಫ್ಯಾಮಿಲಿ ಡ್ರಾಮಗಳು ಬರುತ್ತಿದ್ದವಲ್ಲ? ಅಂಥ ಚಿತ್ರಗಳಲ್ಲಿ ನಟಿಸುವಾಸೆ. ಹಾಗಂತ ನಾಯಕನಾಗುವ ಆಸೆ ಏನಿಲ್ಲ. ವರ್ಷಾರಂಭದಲ್ಲಿ ತೆರೆಕಂಡ `ಕಾಣದಂತೆ ಮಾಯವಾದನು' ಚಿತ್ರ ನೀವು ನೋಡಿರುತ್ತೀರಿ. ಅದರಲ್ಲಿ ಒಂದು ಒಳ್ಳೆಯ ಪಾತ್ರ ನನಗೆ ದೊರಕಿತ್ತು. ಆ ರೀತಿಯಲ್ಲಿ, ಚಿತ್ರ ನೋಡಿದವರು ನೆನಪಲ್ಲಿ ಇರಿಸಿಕೊಳ್ಳುವಂಥ ಪಾತ್ರ ಸಿಕ್ಕರೆ ಸಾಕು. ಒಟ್ಟಿನಲ್ಲಿ ಪಾತ್ರಗಳು ಕತೆಯಲ್ಲೇ ಸೇರಿಕೊಂಡ ಹಾಗಿರಬೇಕು. ಅಂಥ ಪಾತ್ರ ಸಿಕ್ಕರೆ ಕೌಟುಂಬಿಕ ಪ್ರೇಕ್ಷಕರು ನನ್ನನ್ನು ತಮ್ಮೊಳಗೊಬ್ಬನಂತೆ ಆತ್ಮೀಯವಾಗಿ ಗುರುತಿಸುತ್ತಾರೆ ಎನ್ನುವ ಆಸೆ ನನ್ನದು.

ಮಂಗಳಗೌರಿ ಮದುವೆಯಿಂದ ಹೊರ ಬಂದ ನಟಿ