ಕನ್ನಡ ಕಿರುತೆರೆಗೆ ಡಬ್ಬಿಂಗ್ ಒಳ್ಳೆಯದಲ್ಲ: ಶ್ರುತಿ ನಾಯ್ಡು!
ಹಿಂದಿ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಬಂದು, ಇಲ್ಲಿನ ಪ್ರೇಕ್ಷಕರೂ ಒಂದು ಹಂತಕ್ಕೆ ಅವುಗಳನ್ನು ನೋಡಲು ಶುರು ಮಾಡಿದ್ದಾರೆ. ಆದರೆ ಇದು ಕನ್ನಡ ಕಿರುತೆರೆ ಕ್ಷೇತ್ರಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ. ಕನ್ನಡದಲ್ಲಿ ಅತ್ಯುತ್ತಮ ಕಂಟೆಂಟ್ ಒಳಗೊಂಡ ಧಾರಾವಾಹಿಗಳು ಬರುತ್ತಿವೆ. ಕೊರೋನಾ ಕಾಲದಲ್ಲಿ ಕೊಂಚ ಸಂಕಷ್ಟಕ್ಕೆ ಸಿಲುಕಿಕೊಂಡು ತುಸು ವ್ಯತ್ಯಾಸವಾಗಿರುವುದು ಸತ್ಯವಾದರೂ ನಾವು ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡುವುದಿಲ್ಲ. ನಮ್ಮನ್ನು ಎಂದಿನಂತೆ ಹರಸಿ, ಹಾರೈಸಿ ಎನ್ನುತ್ತಿದ್ದಾರೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು.
ಕೆಂಡಪ್ರದಿ
ಡಬ್ಬಿಂಗ್‌ನಿಂದ ಕನ್ನಡ ಕಿರುತೆರೆಗೆ ಸಮಸ್ಯೆಯಾಗಿದೆಯೇ?
ಸಮಸ್ಯೆ ಅಂತ ಏನು ಇಲ್ಲ. ಆದರೆ ನಮ್ಮ ಪ್ರೇಕ್ಷಕರು ಕೊಂಚ ಮಟ್ಟಿಗೆ ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಸೀರಿಯಲ್‌ಗಳನ್ನು ನೋಡಲು ಶುರು ಮಾಡಿದ್ದಾರೆ. ಹಿಂದಿ ಭಾಷೆಗೆ ದೊಡ್ಡ ಮಟ್ಟದ ಮಾರುಕಟ್ಟೆಇದೆ. ಅದರ ವೀಕ್ಷಕರು ದೇಶ ವಿದೇಶಗಳಲ್ಲಿ ಹರಡಿದ್ದಾರೆ. ಹಾಗಾಗಿ ದೊಡ್ಡ ಬಜೆಟ್, ಅದ್ದೂರಿ ನಿರ್ಮಾಣ, ಗ್ರ್ಯಾಂಡ್ ಎನ್ನಿಸುವಂತಹ ದೃಶ್ಯಗಳು ಅಲ್ಲಿ ಸಹಜ. ಆದರೆ ಕನ್ನಡದ ಮಟ್ಟಿಗೆ ಇದು ದೂರದ ಮಾತು. ನಮ್ಮ ಮಾರುಕಟ್ಟೆಚಿಕ್ಕದು, ನಾವೇನಿದ್ದರೂ ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಸೀರಿಯಲ್ ಮಾಡುತ್ತಾ ಬಂದಿದ್ದೇವೆ. ಈಗ ನಾವು ಸ್ವಲ್ಪ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದೇವೆ. ಈ ವೇಳೆ ಪ್ರೇಕ್ಷಕ ಪ್ರಭು ನಮ್ಮನ್ನು ಕೈ ಹಿಡಿಯಬೇಕಿದೆ. ನಮ್ಮ ಧಾರಾವಾಹಿಗಳನ್ನು ನೋಡಿ ಹರಸಬೇಕಿದೆ. ಇಡೀ ಕಿರುತೆರೆಯನ್ನು ಉಳಿಸಬೇಕಿದೆ. ಆ ದೊಡ್ಡ ಜವಾಬ್ದಾರಿ ಈಗ ನಮ್ಮ ನೋಡುಗರ ಮೇಲೆ ಇದೆ.
ಹಾಗಿದ್ದರೆ ಎಲ್ಲಾ ಭಾರವೂ ಪ್ರೇಕ್ಷಕನ ಮೇಲೆಯೇ ಇದೆ ಎಂದಾ?
ಒಂದು ರೀತಿಯಲ್ಲಿ ಹೌದು. ಯಾಕೆಂದರೆ ನಾವು ನಮ್ಮ ಚೌಕಟ್ಟಿನಲ್ಲಿ ಅತ್ಯುತ್ತಮವಾದ ಕಂಟೆಂಟ್, ಒಳ್ಳೆಯ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸೀರಿಯಲ್ ಮಾಡುತ್ತಿದ್ದೇವೆ. ಸೇತುರಾಮ್, ಟಿ.ಎನ್. ಸೀತಾರಾಮ್, ರಮೇಶ್ ಇಂದಿರಾ ಸೇರಿ ಇನ್ನೂ ಹಲವಾರು ಪ್ರಸಿದ್ಧ ನಿರ್ದೇಶಕರು ಒಳ್ಳೆಯ ಸೀರಿಯಲ್ ಮಾಡಿದ್ದಾರೆ, ಮಾಡುತ್ತಿದ್ದಾರೆ. ಈಗ ‘ಮಗಳು ಜಾನಕಿ’ ಧಾರಾವಾಹಿ ನಿಂತಿದ್ದಕ್ಕೆ ಸಾಕಷ್ಟುಕಡೆಗಳಿಂದ ಬೇಸರ ವ್ಯಕ್ತವಾಯಿತು. ತುಂಬಾ ಮಂದಿ ಪ್ರೇಕ್ಷಕರು ನಿಲ್ಲಿಸಬೇಡಿ ಎಂದು ಕೋರಿಕೊಂಡರು. ಇದೆಲ್ಲವನ್ನು ನೋಡಿದರೆ ನಿಜವಾದ ಪ್ರೇಕ್ಷಕರು ಇದ್ದೇ ಇದ್ದಾರೆ. ಆದರೆ ಒಂದು ಹಂತದಲ್ಲಿ ಡಬ್ ಸೀರಿಯಲ್‌ಗಳನ್ನು ನೋಡುವ ಪ್ರಮಾಣವೂ ಅಧಿಕವಾಗುತ್ತಿದೆ. ಇದು ಕಡಿಮೆಯಾಗಿ ನಮ್ಮ ನೆಲದ ಸೀರಿಯಲ್‌ಗಳನ್ನು ಮತ್ತೆ ನೋಡಬೇಕು. ಆ ಮೂಲಕ ನಮ್ಮ ಕಲಾವಿದರು, ತಂತ್ರಜ್ಞರು, ನಮ್ಮ ಕಿರುತೆರೆಯನ್ನು ಉಳಿಸಬೇಕು. ಕನ್ನಡದ ಬಗ್ಗೆ ಗರ್ವ ಬೆಳೆಸಿಕೊಂಡು ಕನ್ನಡವನ್ನು ಉಳಿಸುವ ಕಾರ್ಯವನ್ನು ಮಾಡಬೇಕಿದೆ.
ನಾವು ಡಬ್ ಸೀರಿಯಲ್‌ಗಳ ಜೊತೆ ಸಮರ್ಥವಾಗಿ ಸ್ಪರ್ಧೆ ಮಾಡುವುದು ಕಷ್ಟವೇ?
ಕಷ್ಟಎಂದು ಏನಿಲ್ಲ. ನಮ್ಮ ಕಂಟೆಂಟ್ ನಮಗೆ ಶ್ರೀರಕ್ಷೆ. ಆದರೆ ಮೊದಲೇ ಹೇಳಿದ ಹಾಗೆ ಅವರದ್ದು ದೊಡ್ಡ ಮಾರುಕಟ್ಟೆ. ನಮಗೆ ಒಂದು ಎಪಿಸೋಡ್‌ಗೆ 90 ಸಾವಿರ ರು. ಸಿಕ್ಕರೆ ಅವರಿಗೆ 9 ಲಕ್ಷ ರು. ಸಿಕ್ಕುತ್ತದೆ. ಸಹಜವಾಗಿಯೇ ಅವರು ಆ ಹಣದಿಂದ ಅದ್ದೂರಿ ನಿರ್ಮಾಣ ಮಾಡುತ್ತಾರೆ. ಆದರೆ ನಮಗೆ ಇದು ಅಸಾಧ್ಯ. ಕೊರೋನಾ ಬಂದದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ ನಿಜ. ಆದರೆ ಒಂದೆರಡು ವಾರ ಸಮಯ ಸಿಕ್ಕರೆ ಮತ್ತೆ ನಾವು ಪ್ರೇಕ್ಷಕನನ್ನು ರಂಚಿಸುತ್ತೇವೆ. ಈಗ ಕೆಲವು ಧಾರಾವಾಹಿಗಳ ಶೂಟಿಂಗ್‌ಗೆ ಮನೆಗಳು ಸಿಕ್ಕುತ್ತಿಲ್ಲ. ಮೊದಲು ಇದ್ದಷ್ಟುಸ್ವತಂತ್ರ ಈಗ ಇಲ್ಲ. ಸ್ಕಿ್ರಪ್ಟ್ ಬದಲಾಯಿಸಿಕೊಂಡು, ಹಲವಾರು ಅನಿವಾರ್ಯತೆಗಳಿಗೆ ಸಿಲುಕಿದ್ದೇವೆ. ಇದೆಲ್ಲದರಿಂದ ಸಾಧ್ಯವಾದಷ್ಟುಬೇಗ ಹೊರಗೆ ಬರುತ್ತೇವೆ. ಇದಕ್ಕೆ ಪ್ರೇಕ್ಷಕರ ಸಹಕಾರವೂ ಬೇಕಿದೆ. ಪ್ರೇಕ್ಷಕ ನೋಡಿದರೆ ನಮ್ಮ ಶಕ್ತಿ ಹೆಚ್ಚಾಗುತ್ತದೆ, ಶಕ್ತಿ ಹೆಚ್ಚಾದರೆ ನಾವೂ ಬೇಗ ಚೇತರಿಸಿಕೊಳ್ಳುತ್ತೇವೆ.
ಶ್ರುತಿ ನಾಯ್ಡು ವಿಚಾರಗಳು: ಮಕ್ಕಳಿಗೆ ವಿದೇಶದ ಬದಲು ಕಾಡು ತೋರಿಸೋಣ!
ನಿಮ್ಮ ನಿರ್ಮಾಣದ ಸೀರಿಯಲ್‌ಗೆ ಪ್ರತಿಕ್ರಿಯೆ ಹೇಗಿದೆ?
ಹಿಂದೆಯೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಈಗಲೂ ಬರುತ್ತಿದೆ. ನಮ್ಮ ‘ಮಹಾದೇವಿ’ ಸೀರಿಯಲ್ 1250 ಎಪಿಸೋಡ್ ಕಂಡಿದೆ. ‘ಯಾರೆ ನೀ ಮೋಹಿನಿ’, ‘ದೇವಿ’ ಸೇರಿ ಎಲ್ಲಾ ಸೀರಿಯಲ್‌ಗಳೂ ಚೆನ್ನಾಗಿಯೇ ನಡೆದು ಬಂದಿವೆ. ಈಗ ‘ಯಾರೆ ನೀ ಮೋಹಿನಿ’ ಸೀರಿಯಲ್‌ನಲ್ಲಿ ಒಂದು ಮದುವೆಯ ಶೂಟ್ ಇತ್ತು. ಅದನ್ನು ಅದ್ದೂರಿಯಾಗಿ ಮಾಡೋಣ ಎನ್ನುವ ಪ್ಲಾನ್ ಮಾಡಿಕೊಂಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ನಮ್ಮವು ಸೇರಿದಂತೆ ಎಲ್ಲಾ ಧಾರಾವಾಹಿಗಳು ಪೀಕ್ ಎನ್ನಬಹುದಾದ ಹಂತಕ್ಕೆ ಬಂದಿದ್ದವು. ಈ ವೇಳೆಯಲ್ಲಿಯೇ ಹೀಗಾಯಿತು, ಪ್ರೇಕ್ಷಕರ ಸಂಖ್ಯೆ ಕಡಿಮೆಯಾಯಿತು. ಹೀಗಿರುವಾಗ ಚಾನೆಲ್‌ಗಳು ಡಬ್ ಕಂಟೆಂಟ್‌ಗೆ ಹೆಚ್ಚಿನ ಒತ್ತು ನೀಡುತ್ತಾರೆ, ನಮ್ಮ ಕಡೆಗೆ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದ ನಮಗೆ ಉಸಿರು ಕಟ್ಟುವ ಪರಿಸ್ಥಿತಿ ಉಂಟಾಗುತ್ತದೆ.
ಹಾಗಿದ್ದರೆ ಇದರಿಂದ ಹೊರ ಬರುವ ಮಾರ್ಗ ಯಾವುದು?
ಪ್ರೇಕ್ಷಕ ನಮ್ಮನ್ನು ಕೈ ಬಿಡದಿರುವುದೇ ಇರುವ ಸರಿಯಾದ ಮಾರ್ಗ. ಇದೊಂದು ಯುದ್ಧದ ಕಾಲ. ಇಂತಹ ವೇಳೆಯಲ್ಲಿ ಪ್ರೇಕ್ಷಕ ನಮ್ಮ ಕೈ ಹಿಡಿದು ಮೇಲೆ ಎತ್ತಿದರೆ ಖಂಡಿತ ನಾವು ಚೇತರಿಸಿಕೊಳ್ಳುತ್ತೇವೆ. ಉತ್ತಮ ಕಂಟೆಂಟ್‌ನೊಂದಿಗೆ ಮತ್ತೆ ಬರುತ್ತೇವೆ. ಡಬ್ ಸೀರಿಯಲ್‌ಗಳು ಮತ್ತು ನಮ್ಮ ಸೀರಿಯಲ್‌ಗಳ ನಡುವೆ ಕಂಪ್ಯಾರಿಸನ್ ಇಟ್ಟುಕೊಳ್ಳಬಾರದು. ಅದರಾಚೆಗೆ ಬಂದು ನಮ್ಮ ಕಲಾವಿದರು, ನಮ್ಮ ಕಿರುತೆರೆ ಎನ್ನುವ ಅಭಿಮಾನವನ್ನು ಹೆಚ್ಚು ಮಾಡಿಕೊಂಡು ಅಪ್ಪಟ ಕನ್ನಡದ ಧಾರಾವಾಹಿಗಳನ್ನು ನೋಡಬೇಕು. ಒಳ್ಳೆಯ ಮತ್ತು ನವೀನ ಕಂಟೆಂಟ್ ಕೊಡಬೇಕು ಎನ್ನುವುದು ನಮ್ಮ ಉದ್ದೇಶ. ಅದನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ. ಆದರೆ ಈಗ ನಾವು ಸಂಕಷ್ಟಕ್ಕೆ ಸಿಲುಕಿರುವಾಗ, ನದಿಯ ಮಧ್ಯದಲ್ಲಿ ಸುಳಿಗೆ ಸಿಲುಕಿರುವಾಗ ಪ್ರೇಕ್ಷಕ ನಮ್ಮ ಕೈ ಹಿಡಿದು ನಡೆಸಬೇಕಿದೆ. ಹಾಗಾಗಿ ನನ್ನ ಕೋರಿಕೆ ಕನ್ನಡ ಧಾರಾವಾಹಿಗಳನ್ನು ನೋಡಿ ಹರಸಿ ಎನ್ನುವುದು.