ಬಾಲಿವುಡ್‌ ಸಿನಿಮಾ ನಿರ್ದೇಶಿಸಲಿದ್ದಾರೆ ಅರುಣ್ ಸಾಗರ್!

ರಾಜ್ಯ ಪ್ರಶಸ್ತಿ ಪಡೆದಿರುವಂಥ ಸಿನಿಮಾ ಕಲಾ ನಿರ್ದೇಶಕ. ಕುಂಚ ಹಿಡಿದರೂ ಕಲಾವಿದ; ಕೊಂಚ ಬಣ್ಣ ಹಚ್ಚಿದರೂ ಕಲಾವಿದ. ಒಟ್ಟಿನಲ್ಲಿ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಅರುಣ್ ಸಾಗರ್ ವ್ಯಕ್ತಿತ್ವವೇ ಆಕರ್ಷಕ. ಇಂತಿಪ್ಪ ಇವರು ಈಗ ಆಗಲು ಹೊರಟಿದ್ದಾರೆ, ಸಿನಿಮಾ ನಿರ್ದೇಶಕ. 

Actor art director Arun Sagar to direct bollywood movie an Interview

- ಶಶಿಕರ ಪಾತೂರು

ರಾಜ್ಯ ಪ್ರಶಸ್ತಿ ಪಡೆದಿರುವಂಥ ಸಿನಿಮಾ ಕಲಾನಿರ್ದೇಶಕ. ಕುಂಚ ಹಿಡಿದರೂ ಕಲಾವಿದ; ಕೊಂಚ ಬಣ್ಣ ಹಚ್ಚಿದರೂ ಕಲಾವಿದ. ಒಟ್ಟಿನಲ್ಲಿ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಅರುಣ್ ಸಾಗರ್ ವ್ಯಕ್ತಿತ್ವವೇ ಆಕರ್ಷಕ. ಕಿರುತೆರೆಗೆ ಬಂದರೆ ನಿರೂಪಕ! ಮಾತಿನಲ್ಲಿ ವಿದೂಷಕ, ಕೃತಿಯಲ್ಲಿ ಮಾರ್ಗದರ್ಶಕ. ಇಂತಿಪ್ಪ ಇವರು ಈಗ ಆಗಲು ಹೊರಟಿದ್ದಾರೆ, ಸಿನಿಮಾ ನಿರ್ದೇಶಕ. ಅದು ಕೂಡ ಕನ್ನಡದಲ್ಲಿ ಅಲ್ಲ! ಬಾಲಿವುಡ್‌ನಲ್ಲಿ ಎನ್ನುವುದು ಮಾತ್ರ ಗಮನಾರ್ಹ ವಿಚಾರ. ಹಾಗಾದರೆ ಆ ಚಿತ್ರ ಯಾವುದು? ಅದರ ಸಬ್ಜೆಕ್ಟ್ ಏನು? ನಾಯಕ ಯಾರು ಎನ್ನುವ ಕುತೂಹಲ ಸಹಜ. ಅವೆಲ್ಲ ಸಂದೇಹಗಳನ್ನು ಮುಂದಿರಿಸಿದಾಗ ಸುವರ್ಣ ನ್ಯೂಸ್.ಕಾಮ್‌ಗೆ ಅರುಣ್‌ ಸಾಗರ್‌ ನೀಡಿದಂಥ ಉತ್ತರಗಳು ಇಲ್ಲಿವೆ.

ನಿಮ್ಮ ಬಾಲಿವುಡ್ ಪ್ರವೇಶ ಆಗಿದ್ದು ಹೇಗೆ?

ನೀವು ತುಂಬ ಅವಸರ ಪಡುತ್ತಿದ್ದೀರ! ನಾನಿನ್ನೂ ಪ್ರವೇಶ ಮಾಡಿಲ್ಲ. ಆದರೆ ಪ್ರವೇಶಿಸುವ ಯೋಜನೆ ಇರುವುದು ನಿಜ. ಮರಾಠಿ ನಿರ್ಮಾಪಕರೊಬ್ಬರು ನನ್ನ ಪ್ರಾಜೆಕ್ಟ್‌ ಮಾಡುವುದಾಗಿ ಗ್ರೀನ್‌ ಸಿಗ್ನಲ್ ನೀಡಿದ್ದಾರೆ. ಮಲ್ಲಕಂಬದ ಕುರಿತಾದ ಸಬ್ಜೆಕ್ಟ್‌ ಇರಿಸಿಕೊಂಡು ಚಿತ್ರ ಮಾಡುತ್ತಿದ್ದೇನೆ. ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು, ಐತಿಹಾಸಿಕ ಚಿತ್ರವಾಗಿ ಮಾಡುವ ಯೋಜನೆಯಿದೆ. ಅದಕ್ಕಾಗಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಇನ್ನೇನು ತಾರಾಗಣ ಫೈನಲ್ ಆಗಬೇಕಿದೆ. ಎಲ್ಲವೂ ಪಕ್ಕ ಆದ ಬಳಿಕ ನಾನೇ ಮಾಧ್ಯಮದ ಮುಂದೆ ಬಂದು ಹೇಳಲಿದ್ದೇನೆ.  

ನನ್ನ ರೀತಿಯೇ ವಿಭಿನ್ನ: ಸ್ವಾತಿ ಭಟ್

ನಿರ್ದೇಶನಕ್ಕೆ ಹಿಂದಿ ಚಿತ್ರರಂಗವನ್ನು ಆರಿಸಲು ಕಾರಣವೇನು?

ನನಗೆ ಕಲಾನಿರ್ದೇಶಕನಾಗಿ ಕರ್ನಾಟಕ ಸ್ಥಾನ ನೀಡಿದೆ. ನಟನಾಗಿಯೂ ಗುರುತಿಸಿಕೊಂಡಿದ್ದೇನೆ. ಆದರೆ ನಿರ್ದೇಶಕನಾಗುವ ಅವಕಾಶ ಯಾಕೋ ಸಿಗಲೇ ಇಲ್ಲ. ಇಲ್ಲವಾದರೆ ನಾನು ಸುಮಾರು 12 ವರ್ಷಗಳ ಹಿಂದೆಯೇ ಕನ್ನಡದಲ್ಲಿ ನಿರ್ದೇಶಕನಾಗಬೇಕಿತ್ತು! ಅದು ಕುಸ್ತಿಯ ಸಬ್ಜೆಕ್ಟ್‌ ಹೊಂದಿತ್ತು. ನನಗೆ ಪೈಲ್ವಾನ್‌ನನ್ನು ನೈಜವಾಗಿ ತೋರಿಸಬೇಕಿತ್ತು. ಗರಡಿ ಮನೆ, ಕೆಂಪುಮಣ್ಣು ಜತೆಗೆ ನಾಯಕನ ಮೈ ಕಟ್ಟು ಮಾತ್ರ ತೋರಿಸಿ ಕೈ ಸನ್ನೆ ಮಾಡಿಸಿದರೆ ಜಟ್ಟಿಯೆಂದು ಹೇಳುವುದು ನನಗೆ ಒಗ್ಗದು. ಹಾಗಾಗಿ ದುನಿಯಾ ವಿಜಯ್‌ ಅವರನ್ನು ನಾಯಕನಾಗಿ ಕಲ್ಪಿಸಿಕೊಂಡು ಕತೆಯೊಂದನ್ನು ಸಿದ್ಧ ಮಾಡಿದ್ದೆ. ಕತೆಗೆ ಬೇಕಾಗಿರುವುದನ್ನೆಲ್ಲ ಸಿದ್ಧ ಮಾಡಿ ರಾಕ್‌ಲೈನ್ ವೆಂಕಟೇಶ್‌ ಅವರಿಗೆ ಹೇಳಿದೆ. ಆದರೆ ಅವರು ಕುಸ್ತಿ ಮಾಡೋರನ್ನೆಲ್ಲ ನಾಯಕನಾಗಿ ಜನ ನಾಯಕನಾಗಿ ಒಪ್ತಾರ? ಚಿತ್ರ ವರ್ಕೌಟ್‌ ಆಗುತ್ತಾ ಎಂದು ಸಂದೇಹ ಪಟ್ಟರು. ಮತ್ತೆ ಕತೆ ಮುಂದುವರಿಸಲಿಲ್ಲ. ಪ್ರಯತ್ನವನ್ನೇ ಬಿಟ್ಟು ಬಿಟ್ಟೆ.

ಆದರೆ ಈಗ ನಮ್ಮಲ್ಲಿ ಪರಿಸ್ಥಿತಿ ಬದಲಾಗಿದೆ ಅನಿಸುತ್ತಿಲ್ಲವೇ?

ಖಂಡಿತವಾಗಿ ಇಲ್ಲ. ಬಾಲಿವುಡ್‌ನಲ್ಲಿ `ದಂಗಲ್‌'ನಂಥ ಚಿತ್ರ ಬಂದ ಮೇಲೆಯೂ ನಮ್ಮಲ್ಲಿ ಅಂಥ ಸಿನಿಮಾಗಳು ಬಂದಿಲ್ಲ. ಅಲ್ಲದೆ, ನಮ್ಮವರು ಐತಿಹಾಸಿಕ ಸಿನಿಮಾ ಮಾಡುವಾಗಲೂ ನೈಜತೆಗೆ ಒತ್ತು ಕೊಡುವುದಿಲ್ಲ. ಉದಾಹರಣೆಗೆ ಒಬ್ಬ ವೀರ ಸೈನಿಕನ ಬಗ್ಗೆ ಚಿತ್ರ ಮಾಡುವುದಾದರೆ ಆತನನ್ನು ರಾಜನಂತೆ ತೋರಿಸಲಾಗುತ್ತಿದೆ. ಪಾತ್ರ ಮಾಡುತ್ತಿರುವಾತ ನಮ್ಮ ಸ್ಟಾರ್‌ ನಟ ಎನ್ನುವ ಕಾರಣಕ್ಕೆ ಇತಿಹಾಸದಲ್ಲಿ ಇರದ ಮಾದರಿ ವೈಭವೀಕರಿಸುವುದು ಎಷ್ಟು ಸರಿ? ಕಮರ್ಷಿಯಲ್‌ ಸಿನಿಮಾಗಳನ್ನೇ ಗಮನಿಸಿ;

ದರ್ಶನ್ ಸಿನಿಮಾ ನಿರ್ದೇಶಿಸುವ ಕನಸಿದೆ ಕವಿರಾಜ್‌ಗೆ

ಇತ್ತೀಚೆಗೆ ಹೆಸರು ಮಾಡಿದ ಯುವ ನಿರ್ದೇಶಕರೊಬ್ಬರ ಕನ್ನಡ ಸಿನಿಮಾ ನೋಡಿದೆ. ಚಿತ್ರ ದೊಡ್ಡ ಮಟ್ಟದಲ್ಲೇ ತೆರೆಕಂಡಿತು. ಆದರೆ ಸಿನಿಮಾ ನೋಡಿದವರಿಗೆ ಅದರಲ್ಲಿ 25 ತೆಲುಗು ಸಿನಿಮಾಗಳ ಛಾಯೆ ಕಾಣಿಸುತ್ತಿತ್ತು. ವಿಪರ್ಯಾಸ ಏನೆಂದರೆ ನಮ್ಮ ಶ್ರೇಷ್ಠ ಸ್ಟಾರ್ ನಟರೊಬ್ಬರು ಆ ನಿರ್ದೇಶಕರಿಗೆ ತಮ್ಮ ಮುಂದಿನ ಚಿತ್ರ ನಿರ್ದೇಶಿಸುವಂತೆ ಕಾಲ್‌ಷೀಟ್‌ ನೀಡಿದ್ದಾರೆ!

ನಿಮ್ಮ ಪ್ರಕಾರ ಬಾಲಿವುಡ್‌ನಲ್ಲಿ ಮಾತ್ರ ನೈಜತೆಗೆ ಅವಕಾಶವೇ?

ಬಾಲಿವುಡ್‌ ಮಾತ್ರ ಎಂದು ನಾನು ಹೇಳುತ್ತಿಲ್ಲ. ನಮ್ಮಲ್ಲಿಯೂ ಇದೆ. ಆದರೆ ಅಂಥ ಚಿತ್ರಗಳ ತಯಾರಿಕೆಗೆ ಅವಕಾಶ, ಪ್ರೋತ್ಸಾಹ, ಪ್ರಯತ್ನಗಳು ತೀರ ಕಡಿಮೆ ಎಂದೇ ಹೇಳಬಹುದು. ಪಕ್ಕದ ಮಲಯಾಳಂ ಚಿತ್ರಗಳಲ್ಲಿ ಗ್ರಾಮೀಣ ಸೊಗಡನ್ನು ಪಸರಿಸುವ ಸ್ಟಾರ್ ನಾಯಕರಿದ್ದಾರೆ. ಮೋಹನ್ ಲಾಲ್ ನಟನೆ ಕಂಡರೆ ನಮಗೆ ಅಚ್ಚರಿ ಮೂಡುತ್ತದೆ. ಅವರು ತಾವು ಇರುವ ಜಾಗದಲ್ಲಿನ ಪ್ರಾಪರ್ಟಿಗಳನ್ನು ಬಳಸಿಕೊಳ್ಳುವುದು, ಇಳಿಬಿದ್ದ ಶರ್ಟ್‌ನ ತೋಳುಗಳನ್ನು ಮಡಚುವುದು, ಪಂಚೆ ಎತ್ತಿ ಕಟ್ಟುವುದು ಅಥವಾ ಅದರ ಚುಂಗಿನಲ್ಲಿ ಮುಖ ಒರೆಸುವುದು ಇವೆಲ್ಲವನ್ನು ಮಾತನಾಡುತ್ತಲೇ ಮಾಡುವ  ರೀತಿ ಅದ್ಭುತ. ನಮಗೆ ಇಂಥ ನಟಬೇಕು ಎಂದು ಹೇಳುವುದಿಲ್ಲ. ಆದರೆ ನೈಜ ನಟನೆ ಹೊರೆತೆಗೆಯುವ ನಿರ್ದೇಶಕರು ಬೇಕು. ಸ್ಟಾರ್‌ಗಳಿಂದಲೂ ಸಹಜತೆಗೆ ಒತ್ತು ನೀಡುವ ಅಭಿನಯ ತೆಗೆಸಬಲ್ಲ ನಾಗಾಭರಣರಂಥ ನಿರ್ದೇಶಕರು ಯುವ ಸಮೂಹದಲ್ಲಿ ಎಲ್ಲಿದ್ದಾರೆ?

ಮಗಳು ರಾಜ್ಯದಲ್ಲಿ, ನೀವು ಅಂತಾರಾಜ್ಯ ಮಟ್ಟದಲ್ಲಿ ಮತ್ತು ಮಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದೀರಿ?!

ಮಗಳು ಅದಿತಿ ಶ್ರೇಷ್ಠ ಗಾಯಕಿಯಾಗಿ ಚಂದನವನ ಕ್ರಿಟಿಕ್ಸ್ ಅವಾರ್ಡ್, ಮಿರ್ಚಿ ಮ್ಯೂಸಿಕ್ ಅವಾರ್ಡ್ ಪಡೆದುಕೊಂಡು ಹೆಮ್ಮೆ ತಂದುಕೊಟ್ಟಿದ್ದಾಳೆ. ಮಗ ಸೂರ್ಯ ಸಾಗರ್ ಥಾಯ್ಲ್ಯಾಂಡ್‌ನಲ್ಲಿ ನಡೆದ ಮುಐಥಾಯ್‌ ಫೈಟಿಂಗ್‌ ಸ್ಪರ್ಧೆಯಲ್ಲಿ ವಿಜೇತನಾಗಿ ಗುರುತಿಸಿಕೊಂಡಿದ್ದಾನೆ. ಅದು ಖುಷಿಯಾಗಿದೆ. ನನ್ನದು ಪ್ರಯತ್ನ ನಡೆದಿದೆ ಅಷ್ಟೇ. ಇದು ಬಾಲಿವುಡ್‌ ಸಿನಿಮಾ ಮಾಡಬೇಕು ಶುರು ಮಾಡಿದ ಪ್ರಯತ್ನವಲ್ಲ. ಆದರೆ ಮಲ್ಲಕಂಬದ ಮೂಲ ಹುಡುಕಿ ಹೊರಟಾಗ ಮಹಾರಾಷ್ಟ್ರದಲ್ಲಿದೆ ಎಂದು ತಿಳಿಯಿತು. ಹಾಗೆ ಚಿತ್ರ ಹಿಂದಿಗೆ ಸೂಕ್ತವೆನಿಸಲು ಹಲವು ಕಾರಣಗಳಿವೆ ಅನಿಸಿತು. ಸೋಲಾಪುರ, ಕೋಲಾಪುರಗಳಿಗೆ ಭೇಟಿ ನೀಡಿ ಗ್ರೌಂಡ್ ವರ್ಕ್‌ ಮಾಡಿದ್ದೇನೆ.  ಚಿತ್ರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವುದೋ ಇಲ್ಲವೋ ಎನ್ನುವುದು ಕೆಲಸ ಪೂರ್ತಿಯಾದ ಮೇಲೆ ನಮಗೇ ತಿಳಿಯುತ್ತದೆ.

Latest Videos
Follow Us:
Download App:
  • android
  • ios