ಶಶಿಕರ ಪಾತೂರು

ಮೊದಲನೆಯದಾಗಿ ಮಿರ್ಚಿ ಅವಾರ್ಡ್ ಪಡೆದು ದಾಖಲೆ ಮಾಡಿರುವುದಕ್ಕೆ ನಿಮಗೆ ಅಭಿನಂದನೆಗಳು.

ವಂದನೆಗಳು. ಹೌದು, ಇತ್ತೀಚೆಗಷ್ಟೇ `ಮಿರ್ಚಿ ಅವಾರ್ಡ್' ಪಡೆದುಕೊಂಡೆ. ಅದು `ಅಮರ್' ಚಿತ್ರಕ್ಕಾಗಿ ಬರೆದಂಥ `ಮರೆತು ಹೋಯಿತೆ' ಹಾಡಿನ ಸಾಹಿತ್ಯಕ್ಕಾಗಿ ಈ ಪ್ರಶಸ್ತಿ ಸಂದಾಯವಾಗಿದೆ. ಆದರೆ ನನ್ನ ಪಾಲಿನ ದಾಖಲೆ ಏನು ಅಂದರೆ, ದಶಕದಿಂದ ವಿತರಿಸಲಾಗುತ್ತಿರುವ ಮಿರ್ಚಿ ಮ್ಯೂಸಿಕ್ ಪ್ರಶಸ್ತಿಯಲ್ಲಿ, ಪ್ರತಿ ಎರಡು ವರ್ಷಗಳಿಗೊಮ್ಮೆ ನನಗೆ ಪ್ರಶಸ್ತಿಗಳು ದೊರಕಿವೆ. ಮೊದಲ ಬಾರಿ `ಆಪ್ತರಕ್ಷಕ' ಚಿತ್ರದ ಗರನೆ ಗರಗರನೆ.. ಹಾಡಿಗೆ ಲಭಿಸಿತ್ತು. ಎರಡನೇ ಬಾರಿ `ಸಂಜು ವೆಡ್ಸ್ ಗೀತ' ಸಿನಿಮಾದ `ಗಗನವೇ ಬಾಗಿ' ಹಾಡು ಪ್ರಶಸ್ತಿ ಪಡೆದಿತ್ತು. ಮೂರನೇ ಬಾರಿ ಅವಾರ್ಡ್ ದೊರಕಿದ್ದು ಬುಲ್ ಬುಲ್ ಚಿತ್ರದ `ಜಗದಲ್ಲಿರೊ ಹುಚ್ಚರಲಿ' ಗೀತೆಗೆ. ಆಮೇಲೆ ನಾಲ್ಕನೇ ಬಾರಿ `ಲವ್ ಯು ಆಲಿಯಾ' ಚಿತ್ರದ `ಸಂಜೆ ವೇಳೆಯಲ್ಲಿ' ಹಾಡಿಗೆ ಮಿರ್ಚಿ ಅವಾರ್ಡ್ ಪಡೆದುಕೊಂಡಿದ್ದೆ. ಕೇವಲ ಮ್ಯೂಸಿಕ್‌ಗೆ ಮಾತ್ರ ಮೀಸಲಾದ ಅತ್ಯಂತ ದೊಡ್ಡ, ಪ್ರತಿಷ್ಠಿತ ಪ್ರಶಸ್ತಿ ಇದೊಂದೇ. ಅವರ ಆಯ್ಕೆಯ ಪ್ರಕ್ರಿಯೆ ಕೂಡ ಇತರೆಲ್ಲ ಪ್ರಶಸ್ತಿಗಳಿಗಿಂತ ಯೋಜನಾ ಬದ್ಧ ಮತ್ತು ಗುಣಮಟ್ಟದ್ದಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸಿನಿಸಂಗೀತೋದ್ಯಮ ಬಳಗ ಒಂದು ದಿನ ಖುಷಿಯಾಗಿ ಒಂದಾಗಿ ಪಯಣಿಸಿ ಮನರಂಜನಾತ್ಮಕವಾಗಿ ಭಾಗಿಯಾಗುವುದು ದೊಡ್ಡ ಅವಕಾಶ. ಈ ಎಲ್ಲ ಕಾರಣಗಳಿಂದ ನಿಜಕ್ಕೂ ಖುಷಿಯಾಗಿದೆ.

ಬಾಲಿವುಡ್ ಸಿನಿಮಾ ನಿರ್ದೇಶಿಸುತ್ತಾರೆ ಅರುಣ್ ಸಾಗರ್

ಹಾಗಾದರೆ ಈ ವರ್ಷ ನಿಮಗೆ ಉತ್ತಮವಾಗಿದೆ ಎನ್ನಬಹುದು?

ಬದುಕು ಎಂದರೇನೇ ಸಿಹಿ ಕಹಿಗಳ ಸಮ್ಮಿಲನ. ಈಗ ಈ ವರ್ಷ ಪ್ರಶಸ್ತಿ ದೊರಕಿದರೂ, ಅದು ಕಳೆದ ವರ್ಷ ತೆರೆಕಂಡಂಥ ಚಿತ್ರಕ್ಕೆ. ನನ್ನ ನಿರ್ದೇಶನದ `ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ಒಳ್ಳೆಯ ಸಿನಿಮಾ ಎನ್ನುವ ಹೆಸರು ಸಿಕ್ಕಿತು. ಎಂಬತ್ತು ದಿನಗಳ ಕಾಲ ಪ್ರದರ್ಶನ ಆಯಿತು. ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಆಗಿದೆ. 99, ಅಮರ್, `ಎಲ್ಲಿದ್ದೆ ಇಲ್ಲಿ ತನಕ' ಹೀಗೆ ಸುಮಾರು ಐದಾರು ಒಳ್ಳೆಯ ಚಿತ್ರಗಳಿಗೆ ಎಲ್ಲ ಹಾಡುಗಳನ್ನು ಬರೆಯುವ ಅವಕಾಶ ದೊರೆಯಿತು. ಇದರ ನಡುವೆ ತಂದೆಯನ್ನು, ಎಳೆಯ ವಯಸ್ಸಿನ ಬಾವನನ್ನು ಕಳೆದುಕೊಂಡೆ. ಆದರೆ ಬದುಕಿನ ಸ್ಪರ್ಧೆಯಲ್ಲಿ ನನ್ನ ಪಯಣ ಸಾಗುತ್ತಲೇ ಇದೆ. ಮತ್ತೆ ಚಿತ್ರ ಮಾಡಬೇಕಿದೆ. ಒಳ್ಳೆಯ ಸಿನಿಮಾ ಮಾಡುವುದೇ ಮುಂದಿನ ಯೋಜನೆ. ನಿರ್ಮಾಪಕರು ಕೂಡ ತಯಾರಾಗಿದ್ದಾರೆ. ಕತೆಯೂ ರೆಡಿ ಇದೆ. ಸದ್ಯದಲ್ಲೇ ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡುತ್ತೇನೆ. 

ನೀವೇಕೆ ದರ್ಶನ್ ಅವರ ಸಿನಿಮಾ ನಿರ್ದೇಶಿಸಬಾರದು?

ಖಂಡಿತವಾಗಿ ಮಾಡಬಹುದು. ಆದರೆ ಅವರಿಗೆ ಇರುವ ಕ್ಯೂನಲ್ಲಿ ಸದ್ಯಕ್ಕಂತೂ ಚಿತ್ರ ಮಾಡುವ ಹಾಗೆ ಇಲ್ಲ! ಮಾತ್ರವಲ್ಲ, ಸದ್ಯಕ್ಕೆ ದರ್ಶನ್ ಸರ್ ಕೂಡ ಐತಿಹಾಸಿಕ, ಪೌರಾಣಿಕ ಪಾತ್ರಗಳತ್ತ ಒಲವು ತೋರಿಸುತ್ತಿದ್ದಾರೆ. ಆದರೆ ನನ್ನ ಕಲ್ಪನೆಯಲ್ಲಿನ ಅವರ ಪಾತ್ರವೇ ಬೇರೆ! ಅವರು ಹಾಸ್ಯವನ್ನು ಚೆನ್ನಾಗಿ ನಿಭಾಯಿಸಬಲ್ಲರು. ಅದನ್ನು ಅವರು ಈಗಾಗಲೇ ನಮ್ಮದೇ ಚಿತ್ರವಾದ `ಬುಲ್ ಬುಲ್'ನಲ್ಲೇ ಸಾಬೀತು ಮಾಡಿದ್ದಾರೆ. ಅದೇ ರೀತಿ `ದತ್ತ', `ಜಗ್ಗುದಾದ' ಕೂಡ ಅದಕ್ಕೆ ಉದಾಹರಣೆಗಳು. ಅವರ ಹಾಸ್ಯಕ್ಕೆ ಕೂಡ ಅಪಾರ ಅಭಿಮಾನಿಗಳಿದ್ದಾರೆ. ದರ್ಶನ್ ಸರ್  ಅವರಿಗಿರುವ ಒಬ್ಬ ಸ್ಟಾರ್ ನಾಯಕನ ಇಮೇಜನ್ನು ಉಳಿಸಿಕೊಂಡೇ,  ಅವರ ಅದ್ಭುತವಾದ ಕಾಮಿಡಿ ಟೈಮಿಂಗ್ ಬಳಸಿಕೊಂಡು ಒಂದು ಚಿತ್ರವನ್ನು ಮಾಡಬೇಕು ಅಂತ ಇದೆ. ಅದನ್ನು ಕನ್ನಡದ ಪ್ರೇಕ್ಷಕರು ಖಂಡಿತವಾಗಿ ಸ್ವೀಕರಿಸುತ್ತಾರೆ ಎನ್ನುವ ಭರವಸೆಯೂ ಇದೆ.

ಗೊತ್ತಿರುವುದನ್ನು ಜಗತ್ತಿಗೆ ಬಿಚ್ಚಿಡುವುದರಲ್ಲಿ ತಪ್ಪೇನಿದೆ?

ನಿಮ್ಮ  ಕನ್ನಡ ಪರ ಸಂಘಟನೆಯಾದ `ಕಂಕಣ'ದ ಬಗ್ಗೆ ಹೇಳಿ

`ಕಂಕಣ'ವನ್ನು ಆರಂಭಿಸಿ ಐದು ವರ್ಷಗಳಾಗಿವೆ. ಕನ್ನಡಿಗರೇ ಕನ್ನಡವನ್ನು ಮರೆಯುವಂಥ ಸಂದರ್ಭದಲ್ಲಿ ಎಚ್ಚರಿಸಲಿಕ್ಕಾಗಿ ಈ ಸಂಘಟನೆ ಮಾಡಿಕೊಂಡಿದ್ದೇವೆ. ಉದಾಹರಣೆಗೆ ನನ್ನನ್ನು ಸೇರಿದಂತೆ ಬಹಳ ಮಂದಿ ಮಾಲ್, ಏರ್‌ಪೋರ್ಟ್‌, ಫೈವ್ ಸ್ಟಾರ್‌ ಹೋಟೆಲ್‌ ಮತ್ತಿತರ ಶ್ರೀಮಂತಿಕೆ ತುಂಬಿದ ಜಾಗಗಳಿಗೆ ಹೋದಾಗ ಕನ್ನಡವನ್ನು ಮರೆತು ಹಿಂದಿ, ಇಂಗ್ಲಿಷ್ ಸೇರಿಸಿ ಮಾತನಾಡಲು ಶುರು ಮಾಡುತ್ತೇವೆ. ಆದರೆ ಅದು ಸರಿಯಲ್ಲ ಎಂದು ಸೂಚಿಸಲು `ಕನ್ನಡವನ್ನೇ ಮಾತನಾಡಿ' ಎನ್ನುವಂಥ ಫಲಕಗಳೊಂದಿಗೆ ಮಾಲ್ ಮೊದಲಾದವುಗಳೆದುರು ನಿಲ್ಲುತ್ತೇವೆ. ನಮಗೊಂದು ಸಮವಸ್ತ್ರ ಇದೆ. ಹಾಗೆ ಸಾಲಾಗಿ ನಿಂತ ನಾವು ಯಾರ ಮೇಲೆ ಯಾರಲ್ಲಿಯೂ ಒತ್ತಡ ಹೇರದಿದ್ದರೂ ಒಂದು ಎಚ್ಚರಿಕೆಯನ್ನು ರವಾನಿಸಿರುತ್ತೇವೆ. ಅದು ಸಾಬೀತಾಗಿದೆ ಕೂಡ. ಅದೇ ರೀತಿ ಕನ್ನಡ ಮಾತನಾಡದವರ ಅಂಗಡಿಗಳಿಗೆ ಪದೇ ಪದೆ ಹೋಗಿ ಕನ್ನಡ ಮಾತನಾಡುವ ಮೂಲಕ ಅವರು ಒಂದಷ್ಟಾದರೂ ಕನ್ನಡ ಬಳಕೆ ಮಾಡಲು ಆರಂಭಿಸಿರುವುದನ್ನು ಕಂಡಿದ್ದೇವೆ. ಇದು ತಕ್ಷಣದ ಬದಲಾವಣೆ ಏನೂ ಅಲ್ಲ. ಐದು ವರ್ಷಗಳಿಂದ ನಡೆಸಲಾಗಿರುವ ಪ್ರಯತ್ನಕ್ಕೆ ದೊರಕಿರುವ ಫಲ. ಅಂದಹಾಗೆ ನಾವು ನಮ್ಮ ಸದಸ್ಯರಾಗುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ. ಬರುವವರು ಎಷ್ಟರ ಮಟ್ಟಿಗೆ ಕನ್ನಡ ಪರ ಆಸಕ್ತಿಯುಳ್ಳವರು ಎನ್ನುವುದನ್ನು ಅರ್ಥಮಾಡಿಕೊಂಡ ಮೇಲೆ ಅವರಿಗೆ ಸದಸ್ಯತ್ವ ನೀಡುತ್ತೇವೆ.