ಮಾರುತಿ ಇಗ್ನಿಸ್ ಕಾರು ಎಲೆಕ್ಟ್ರಿಕ್ ರೂಪದಲ್ಲ ಬಿಡುಗಡೆಯಾಗಿದೆ. ವಿಶೇಷ ಅಂದರೆ ಕೇವಲ 25 ನಿಮಿಷದಲ್ಲಿ ಚಾರ್ಜ್ ಆಗಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 310 ಕಿಲೋಮೀಟರ್ ಮೈಲೇಜ್ ನೀಡಲಿದೆ. ಏನಿದರ ವಿಶೇಷತೆ?
ನವದೆಹಲಿ (ನ.27) ಭಾರತದಲ್ಲಿ ಮಾರುತಿ ಸುಜುಕಿ ಭಾರಿ ಬೇಡಿಕೆಯ ಕಾರು. ಈ ಪೈಕಿ ಸಣ್ಣ ಕಾರುಗಳು ಅತೀ ಹೆಚ್ಚಿನ ಮಾರುಕಟ್ಟೆ ಹೊಂದಿದೆ. ಸಣ್ಣ ಕಾರು ಆದರೆ ಹೆಚ್ಚಿನ ಸ್ಥಳವಕಾಶ, ಪವರ್ಫುಲ್ ಎಂಜಿನ್ ಮೂಲಕ ಗಮನಸೆಳೆದ ಇಗ್ನಿಸ್ ಕಾರು ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಬರುತ್ತಿದೆ. 26kWh ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಹೊಂದಿರುವ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 310 ಕಿಲೋಮೀಟರ್ ಮೈಲೇಜ್ ನೀಡಲಿದೆ. ಎಲ್ಲಕ್ಕಿಂತ ವಿಶೇಷ ಅಂದರೆ ಚಾರ್ಜಿಂಗ್, ಕೇವಲ 25 ನಿಮಿಷದಲ್ಲಿ ಶೇಕಡಾ 80ರಷ್ಟು ಚಾರ್ಜ್ ಆಗಲಿದೆ.
ಹಲವು ವಿಶೇಷತೆ ಒಂದೇ ಕಾಂಪಾಕ್ಟ್
ಇಗ್ನಿಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಂಡಿದೆ. 2027ರ ಬೇಸಿಗೆಯಲ್ಲಿ ಇಗ್ನಿಸ್ ಎಲೆಕ್ಟ್ರಿಕ್ ಕಾರು ಯೂರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನ ವಿಶೇಷ ಅಂದರೆ ಮೋಟಾರ್, ಇನ್ವರ್ಟರ್ ಹಾಗೂ ರಿಡಕ್ಷನ್ ಗೇರ್ ಒಂದೇ ಕ್ಯಾಂಪ್ಟಕ್ ಘಟಕದಲ್ಲಿ ನೀಡಲಾಗಿದೆ. 90hp ಮತ್ತು ಟಾರ್ಕ್ 133Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಟು-ವೀಲ್-ಡ್ರೈವ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಕಾರಿನ ಅಧಿಕೃತ ಮೈಲೇಜ್ ಬಹಿರಂಗವಾಗಿಲ್ಲ. ಆದರೆ 26kWh ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಸಾಮರ್ಥ್ಯದ ಪ್ರಕಾರ 310 ಕಿಲೋಮೀಟರ್ ಮೈಲೇಜ್ ನೀಡುವ ಸಾಧ್ಯತೆ ಇದೆ.
ಹಾರ್ಟೆಕ್ಟ್-ಇ' (HEARTECT-e) ಪ್ಲಾಟ್ಫಾರ್ಮ್ ಅಡಿಯಲ್ಲಿ ಈ ಕಾರು ಅಭಿವೃದ್ಧಿ ಪಡಿಸಲಾಗಿದೆ. ಇಗ್ನಿಸ್ ಇವಿ 3,570mm ಉದ್ದ, 1,565mm ಅಗಲ ಮತ್ತು 1,635mm ಎತ್ತರ ಹೊಂದಿದ್ದು, 2,460mm ವೀಲ್ಬೇಸ್ ಮತ್ತು 150mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಕಾರಿನಲ್ಲಿ 4 ಮಂದಿ ಪ್ರಯಾಣಕ್ಕೆ ಸೀಟುಗಳಿವೆ. ಕಾರಿನ ಸಸ್ಪೆನ್ಷನ್, ರೀಜೆನರೇಟಿವ್-ಹೈಡ್ರಾಲಿಕ್ ಬ್ರೇಕಿಂಗ್ ವ್ಯವಸ್ಥೆ, ಎಲೆಕ್ಟ್ರಿಕ್ ಬ್ರೇಕ್ ಬೂಸ್ಟರ್ ಹಾಗೂ ಈಸಿ ಆಪರೇಶನ್ ಪೆಡಲ್ ನೀಡಲಾಗಿದೆ. ಇದರಿಂದ ಸುಲಭ ಡ್ರೈವಿಂಗ್ ಜೊತೆಗೆ ಆರಾಮದಾಯಕ ಪ್ರಯಾಣ ಸಿಗಲಿದೆ.
ಸುಜುಕಿ ಕಾರಿನ ವಿಶೇಷತೆಗಳಲ್ಲಿ ಕಡಿಮೆ ನಿರ್ವಹಣೆ ವೆಚ್ಚ ಹಾಗೂ ಕೈಗೆಟುಕುವ ಬೆಲೆ. ಇದೀಗ ಇಗ್ನಿಸ್ ಇವಿ ಕಾರು ಕೂಡ ಇದೇ ಪ್ಲಾಟ್ಫಾರ್ಮ್ನಲ್ಲಿ ಇರಲಿದೆ. ಆದರೆ ಸುಜುಕಿ ಅಧಿಕೃತವಾಗಿ ಬೆಲೆ ಕುರಿತು ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ.ಆಕರ್ಷಕ ವಿನ್ಯಾಸದಲ್ಲಿ ಸುಜುಕಿ ಇಗ್ನಿಸ್ ಕಾರು ಅನಾವರಣ ಮಾಡಲಾಗಿದೆ. ಹೊಸ ವಿನ್ಯಾಸದ ಇಂಟೀಯರ್ ಕಾರಿನ ಆಕರ್ಷಣೆ ಹೆಚ್ಚಿಸಿದೆ.
ಭಾರತದಲ್ಲಿ ಇಗ್ನಿಸ್ ಇವಿ ಯಾವಾಗ
ಯೂರೋಪ್ ಮಾರುಕಟ್ಟೆಯಲ್ಲಿ 2027ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಭಾರತದಲ್ಲಿ ಇಗ್ನಿಸ್ ಬಿಡುಗಡೆ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಇತ್ತ ಭಾರತದಲ್ಲಿ ಪೆಟ್ರೋಲ್ ಮಾದರಿ ಇಗ್ನಿಸ್ ಕಾರು ಮಾರುತಿ ಸುಜುಕಿ ವೆಬ್ಸೈಟ್ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಯೂರೋಪ್ ಬಿಡುಗಡೆ ಬೆನ್ನಲ್ಲೇ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಇದೆ.














