ಮಾರುತಿ ಸುಜುಕಿ ಕಾರು ಸಂಸ್ಥೆ ಮಹತ್ವದ ನಿರ್ಧಾರ ಘೋಷಿಸಿದೆ. ಆಯ್ದ ಕಾರುಗಳ ವಿಚಾರದಲ್ಲಿ ಮಾರುತಿ ಸುಜುಕಿ ತೆಗೆದುಕೊಂಡ ನಿರ್ಧಾರವೇನು ? ನವೆಂಬರ್ 22ರಿಂದಲೇ ಹೊಸ ನೀತಿ ಜಾರಿಯಾಗಿದೆ.
ನವದೆಹಲಿ (ನ.22) ಭಾರತದಲ್ಲಿ ಮಾರುತಿ ಸುಜುಕಿ ಗರಿಷ್ಠ ಮಾರುಕಟ್ಟೆ ಹೊಂದಿದೆ. ಸಣ್ಣ ಕಾರು, ಹ್ಯಾಚ್ಬ್ಯಾಕ್, ಎಸ್ಯುವಿ ಸೇರಿದಂತೆ ಹಲವು ಮಾದರಿಯಲ್ಲಿ ಗ್ರಾಹಕರಿಗೆ ಕಾರು ನೀಡುತ್ತಿದೆ. ಇದೀಗ ಮಾರುತಿ ಸುಜುಕಿ ಮಹತ್ವದ ನಿರ್ಧಾರ ಘೋಷಿಸಿದೆ. ನವೆಂಬರ್ 22ರಿಂದ ಜಾರಿಯಾಗುವಂತೆ ಆಯ್ದ ಕಾರುಗಳ ಬೆಲೆ ಏರಿಕೆ ಮಾಡಿದೆ. 0.31% ರಷ್ಟು ಬೆಲೆ ಏರಿಕೆ ಮಾಡಲಾಗಿದೆ. ಉತ್ಪಾದನಾ ವೆಚ್ಚ, ಕಚ್ಚಾ ವಸ್ತುಗಳ ಬೆಲೆ ಏರೆಕೆಯಿಂದ ಕಾರುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಮಾರುತಿ ಕಾರಿನ ಕೆಲ ಕಾರುಗಳ ಬೆಲೆ ಇಂದಿನಿಂದ ಏರಿಕೆಯಾಗುತ್ತಿದೆ ಎಂದು ಕಂಪನಿ ಹೇಳಿದೆ.
ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಹೊರೆ
ಜೂನ್ ತಿಂಗಳಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಮಾಡಿತ್ತು. ಇದೀಗ ಐದೇ ತಿಂಗಳಿಗೆ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ. ಹೊಸ ಕಾರು ಖರೀದಿಸಲು ಪ್ಲಾನ್ ಮಾಡುತ್ತಿರುವ ಗ್ರಾಹಕರಿಗೆ ಹೊರೆಯಾಗಲಿದೆ. ಹೊಸ ವರ್ಷ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಭಾರತದಲ್ಲಿ ಕಾರು ಮಾರಾಟ ಹೆಚ್ಚಾಗಲಿದೆ. ಆದರೆ ಈ ಬಾರಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲಿದೆ.
ಷೇರು ವಿನಿಮಯ ಕೇಂದ್ರಕ್ಕೆ ಮಾರುತಿ ಸುಜುಕಿ ತನ್ನ ಬೆಲೆ ಏರಿಕೆ ಕುರಿತು ಮಾಹಿತಿ ಸಲ್ಲಿಸಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಕಾರ್ಯಾಚರಣೆಗಳ ವೆಚ್ಚದ ಒತ್ತಡ ಸರಿದೂಗಿಸಲು ಆಯ್ದ ಮಾದರಿಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಎಕ್ಸ್ಚೇಂಜ್ ಫಿಲ್ಲಿಂಗ್ಗೆ ನೀಡಿದ ಮಾಹಿತಿಯಲ್ಲಿ ಹೇಳಿದೆ.
4ನೇ ಬಾರಿಗೆ ಬೆಲೆ ಏರಿಕೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರುತಿ ಸುಜುಕಿ ನಾಲ್ಕನೇ ಬಾರಿಗೆ ಬೆಲೆ ಏರಿಕೆ ಮಾಡುತ್ತಿದೆ. ಮೊದಲ 6 ತಿಂಗಳಲ್ಲಿ ಮೂರು ಬಾರಿ ಬೆಲೆ ಏರಿಕೆ ಮಾಡಿತ್ತು. ಇದೀಗ ನಾಲ್ಕನೇ ಬಾರಿಗೆ ಏರಿಕೆ ಮಾಡಿದೆ. ಈ ಮೂಲಕ ಒಟ್ಟಾರೆ ಶೇಕಡಾ 1ಕ್ಕಿಂತ ಹೆಚ್ಚೇ ದರ ಏರಿಕೆ ಮಾಡಿದೆ.
ಜೂನ್ ತಿಂಗಳಲ್ಲಿ ಕಾರುಗಳ ಮಾಡೆಲ್ ಅನುಸಾರಿ 30 ಸಾವಿರ ರೂಪಾಯಿ ವರೆಗೆ ಬೆಲೆ ಏರಿಕೆ ಮಾಡಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಹಣದುಬ್ಬರ, ಉತ್ಪಾದನಾ ವೆಚ್ಚ ಸೇರಿದಂತೆ ಪ್ರಮುಖ ಕಾರಣಗಳಿಂದ ಮತ್ತೆ 30 ಸಾವಿರ ರೂಪಾಯಿ ವರೆಗೆ ಬೆಲೆ ಏರಿಕೆ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ 20,000 ರೂಪಾಯಿವರೆಗೆ ಬೆಲೆ ಏರಿಕೆ ಮಾಡಿತ್ತು. ನವೆಂಬರ್ ತಿಂಗಳಲ್ಲಿ ಇದೀಗ ಶೇಕಡಾ 0.31ರಷ್ಟು ಬೆಲೆ ಏರಿಕೆ ಮಾಡಿದೆ.
















