ಕಿಯಾ ಮೋಟಾರ್ಸ್ ತನ್ನ ಜನಪ್ರಿಯ ಕಾರುಗಳಾದ ಸೆಲ್ಟೋಸ್, ಕ್ಯಾರೆನ್ಸ್ ಕ್ಲಾವಿಸ್ ಮತ್ತು ಸೋನೆಟ್ ಮಾದರಿಗಳ ಹಲವು ವೇರಿಯಂಟ್‌ಗಳನ್ನು ಸ್ಥಗಿತಗೊಳಿಸಿದೆ. ಐಎಂಟಿ ಗೇರ್‌ಬಾಕ್ಸ್ ಮತ್ತು ಕೆಲವು ಬೇಸ್ ವೇರಿಯಂಟ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ.

ಬೆಂಗಳೂರು (ನ.20): ಭಾರತೀಯ ಮಾರುಕಟ್ಟೆಯಲ್ಲಿ ಬಲಿಷ್ಠವಾಗಿ ಬೆಳೆಯುತ್ತಿರುವ ಮತ್ತು ದೇಶದ ಟಾಪ್-5 ಕಾರು ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಿಯಾ ಮೋಟಾರ್ಸ್ (KIA Motors), ತನ್ನ ಕಾರುಗಳ ವೇರಿಯಂಟ್‌ಗಳಲ್ಲಿ (Variants) ಮಹತ್ವದ ಬದಲಾವಣೆಗಳನ್ನು ಮಾಡಿದೆ. ಕಂಪನಿಯು ತನ್ನ ಜನಪ್ರಿಯ ಕಾರುಗಳಾದ ಸೆಲ್ಟೋಸ್ (Seltos), ಕ್ಯಾರೆನ್ಸ್ ಕ್ಲಾವಿಸ್ (Carens Clavis) ಮತ್ತು ಸೋನೆಟ್ (Sonet) ಮಾದರಿಗಳ ಹಲವು ವೇರಿಯಂಟ್‌ಗಳನ್ನು ಸ್ಥಗಿತಗೊಳಿಸಿದೆ.

ಸೋನೆಟ್, ಸಿರೋಸ್ (Syros), ಕ್ಯಾರೆನ್ಸ್ ಕ್ಲಾವಿಸ್, ಸೆಲ್ಟೋಸ್ ಸೇರಿದಂತೆ ಹಲವು ಮಾಸ್-ಮಾರ್ಕೆಟ್ ಕಾರುಗಳನ್ನು ಹೊಂದಿರುವ ಕಿಯಾ, ಈ ವೇರಿಯಂಟ್‌ಗಳನ್ನು ಸ್ಥಗಿತಗೊಳಿಸಲು ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಕಾರುಗಳ ಮಾದರಿಗಳಲ್ಲಿ ಆಗಿರುವ ಈ ಬದಲಾವಣೆಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗಮನಿಸಬಹುದಾಗಿದೆ. ಗ್ರಾಹಕರಿಗೆ ಕಾರು ಆಯ್ಕೆ ಮಾಡುವ ನಿರ್ಧಾರವನ್ನು ಸುಲಭಗೊಳಿಸಲು ಅಥವಾ ಕಡಿಮೆ ಬೇಡಿಕೆಯಿರುವ (Low demand) ವೇರಿಯಂಟ್‌ಗಳನ್ನು ತೆಗೆದುಹಾಕಿ ಲೈನ್‌ಅಪ್ ಅನ್ನು ಸರಳಗೊಳಿಸಲು ಕಂಪನಿ ಈ ನಿರ್ಧಾರ ಕೈಗೊಂಡಿದೆ ಎಂದು ಅಂದಾಜಿಸಲಾಗಿದೆ.

ಕಿಯಾ ಸೆಲ್ಟೋಸ್ (Kia Seltos) ವೇರಿಯಂಟ್‌ಗಳಲ್ಲಿ ಏನೆಲ್ಲಾ ಬದಲಾವಣೆ?

ಕಿಯಾ ಸೆಲ್ಟೋಸ್‌ನಲ್ಲಿ ಐಎಂಟಿ (iMT) ಗೇರ್‌ಬಾಕ್ಸ್‌ನೊಂದಿಗೆ ಬರುತ್ತಿದ್ದ 1.5 ಲೀಟರ್ ಟರ್ಬೊ ಪೆಟ್ರೋಲ್ ವೇರಿಯಂಟ್‌ಗಳನ್ನು ಕಂಪನಿ ಸ್ಥಗಿತಗೊಳಿಸಿದೆ. ಇದರ ಅಡಿಯಲ್ಲಿ ಬರುತ್ತಿದ್ದ HTE (O), HTK ಮತ್ತು HTK (O) ಎಂಬ ಮೂರೂ ವೇರಿಯಂಟ್‌ಗಳನ್ನು ನಿಲ್ಲಿಸಲಾಗಿದೆ. ಈ iMT ಗೇರ್‌ಬಾಕ್ಸ್ ಆಯ್ಕೆಯನ್ನು ತೆಗೆದುಹಾಕಿದ ನಂತರ, ಸೆಲ್ಟೋಸ್‌ನಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಕೇವಲ 7-ಸ್ಪೀಡ್ DCT ಗೇರ್‌ಬಾಕ್ಸ್ ಮಾತ್ರ ಸಿಗಲಿದೆ. ಇದಲ್ಲದೆ, ADAS ಸುರಕ್ಷತಾ ವೈಶಿಷ್ಟ್ಯವಿಲ್ಲದೆ ಬರುತ್ತಿದ್ದ ಸ್ಟ್ಯಾಂಡರ್ಡ್ X-Line (ಎಕ್ಸ್-ಲೈನ್) ವೇರಿಯಂಟ್ ಅನ್ನೂ ಕಿಯಾ ಸ್ಥಗಿತಗೊಳಿಸಿದೆ.

ಕ್ಯಾರೆನ್ಸ್ ಕ್ಲಾವಿಸ್ (Carens Clavis) ಯಾವ ವೇರಿಯಂಟ್‌ಗಳು ಬಂದ್ ಆಗಿವೆ?

ಸೆಲ್ಟೋಸ್‌ನಂತೆ ಕ್ಲಾವಿಸ್‌ನ ಇಡೀ ಟರ್ಬೊ ಶ್ರೇಣಿಯಿಂದ iMT ಗೇರ್‌ಬಾಕ್ಸ್ ಅನ್ನು ತೆಗೆದುಹಾಕಲಾಗಿಲ್ಲ. ಕಂಪನಿಯು ಕ್ಯಾರೆನ್ಸ್ ಕ್ಲಾವಿಸ್‌ನ 1.5 ಲೀಟರ್ ಟರ್ಬೊ ಪೆಟ್ರೋಲ್ HTX iMT ವೇರಿಯಂಟ್ ಅನ್ನು ಮಾತ್ರ ನಿಲ್ಲಿಸಿದೆ. ಇನ್ಮುಂದೆ ಈ ಕಾರಿನ HTX Plus (HTX+) ವೇರಿಯಂಟ್‌ನಲ್ಲಿ ಮಾತ್ರ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ iMT ಗೇರ್‌ಬಾಕ್ಸ್ ಲಭ್ಯವಿರಲಿದೆ. ಕಂಪನಿಯು ಡೀಸೆಲ್ ಮಾದರಿಯ ಬೇಸ್ ವೇರಿಯಂಟ್ ಅನ್ನೂ ಸ್ಥಗಿತಗೊಳಿಸಿದ್ದು, ಇನ್ಮುಂದೆ ಈ ಕಾರು ಡೀಸೆಲ್‌ನಲ್ಲಿ HTE (O) ವೇರಿಯಂಟ್‌ನಿಂದ ಆರಂಭವಾಗಲಿದೆ. ಇದಲ್ಲದೆ, 1.5 ಲೀಟರ್ ಟರ್ಬೊ ಪೆಟ್ರೋಲ್ DCT ಜೊತೆಗೆ ಬರುತ್ತಿದ್ದ HTX (O) ವೇರಿಯಂಟ್ ಅನ್ನೂ ಕಂಪನಿ ನಿಲ್ಲಿಸಿದೆ. ಇದು ADAS ವೈಶಿಷ್ಟ್ಯದೊಂದಿಗೆ ಬರುತ್ತಿದ್ದ ಕ್ಯಾರೆನ್ಸ್‌ನ ಅತ್ಯಂತ ಅಗ್ಗದ (Cheapest) ವೇರಿಯಂಟ್ ಆಗಿತ್ತು.

ಕಿಯಾ ಸೋನೆಟ್ (Kia Sonet) ವೇರಿಯಂಟ್‌ಗಳಲ್ಲೂ ಕಡಿತ

ಸೋನೆಟ್ ಕಾರಿನಲ್ಲೂ ಕಂಪನಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತಿದ್ದ HTK Plus (HTK+) ಮತ್ತು HTX iMT ವೇರಿಯಂಟ್‌ಗಳನ್ನು ಕಂಪನಿ ಸ್ಥಗಿತಗೊಳಿಸಿದೆ. ಅಂದರೆ, ಇನ್ಮುಂದೆ ಗ್ರಾಹಕರಿಗೆ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ iMT ಗೇರ್‌ಬಾಕ್ಸ್ ಕೇವಲ HTK (O) ಮತ್ತು HTK Plus (O) ವೇರಿಯಂಟ್‌ಗಳಲ್ಲಿ ಮಾತ್ರ ಲಭ್ಯವಿರಲಿದೆ.