FIVA Award: ಹಲವು ದೇಶಗಳ ಕಾರುಗಳನ್ನು ಹಿಂದಿಕ್ಕಿ ಜಾಗತಿಕ ಮಟ್ಟದ ಪ್ರಶಸ್ತಿ ಪಡೆದ ಮಾರುತಿ 800!
Maruti 800 wins FIVA Award: ಒಂದು ಕಾಲದಲ್ಲಿ ಭಾರತದ ಕಾರು ಕ್ರಾಂತಿಯನ್ನೇ ಆರಂಭಿಸಿದ ಮಾರುತಿ 800 ಕಾರು ಇಂದು ಜಾಗತಿಕ ಮಟ್ಟದ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಇಂಥ ಮನ್ನಣೆ ಪಡೆದ ಭಾರತದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾರುತಿ 800 ಗೆ ವಿಶ್ವ ವಾಹನ ಪರಂಪರೆ ಪ್ರಶಸ್ತಿ
ಎಂಬತ್ತರ ದಶಕದಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರದ ಇತಿಹಾಸವನ್ನೇ ಬದಲಿಸುವ ಮೂಲಕ ಕಾರು ಕ್ರಾಂತಿಯನ್ನ ಆರಂಭಿಸಿದ ಮಾರುತಿ 800 ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಅಪರೂಪದ ಮನ್ನಣೆ ಪಡೆದುಕೊಂಡಿದೆ.
ಹೌದು, ಒಂದು ಕಾಲದಲ್ಲಿ ಸಾಮಾನ್ಯ ಮನುಷ್ಯ ಕಾರು ಖರೀದಿಸುವ ಬಗ್ಗೆ ಯೋಚಿಸುವಾಗ ಮೊದಲು ಮನಸಿಗೆ ಬರುತ್ತಿದ್ದು ಮಾರುತಿ 800 ಕಾರ್. ಪ್ರತಿಯೊಬ್ಬ ಭಾರತೀಯನಿಗೂ ಇಂಥ ಕಾರನ್ನು ಖರೀದಿಸಬೇಕು ಎಂಬ ಕನಸು ಇಟ್ಟುಕೊಳ್ಳುತ್ತಿದ್ದರು. ಅಂತಹ ಕಾರು ಕ್ರಾಂತಿ ಆರಂಭಿಸಿದ ಮಾರುತಿ 800 ಕಾರು ಇಂದು 'ಫೆಡರೇಶನ್ ಇಂಟರ್ನ್ಯಾಷನಲ್ ಡೆಸ್ ವೆಹಿಕಲ್ ಅಂಟಿಕ್ಸ್'(FIVA) ವಿಶ್ವ ವಾಹನ ಪರಂಪರೆ ಪ್ರಶಸ್ತಿ ಪಡೆದುಕೊಂಡಿದೆ.
ಸಾಮಾನ್ಯ ಭಾರತೀಯನ ಬದುಕು ಬದಲಿಸಿದ್ದ ಕಾರು
ಈ ಗೌರವವನ್ನು ಪಡೆದ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಕಾರು ಇದು. ಈ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಐತಿಹಾಸಿಕ ವಾಹನಗಳ ಒಕ್ಕೂಟವಾದ FIVA ನೀಡುತ್ತಿದೆ. ಜನರ ಪ್ರಯಾಣ, ಸಾರಿಗೆ ವ್ಯವಸ್ಥೆ ಮೇಲೆ ದೀರ್ಘಕಾಲದವರೆಗೂ ಪರಿಣಾಮ ಬೀರಿದ ಕಾರುಗಳಿಗೆ ಈ ಪ್ರಶಸ್ತಿ ನೀಡುತ್ತಿದೆ.
ಮಾರುತಿ ಸುಜುಕಿ ಕಂಪನಿ ಹೇಳುವ ಪ್ರಕಾರ, ಮಾರುತಿ 800 ಕೇವಲ ಒಂದು ಕಾರು ಅಲ್ಲ. ಇದು ಸಾಮಾನ್ಯ ಜನರಿಗೆ ವೈಯಕ್ತಿಕ ಸಾರಿಗೆ ವ್ಯವಸ್ಥೆಯನ್ನ ಕಲ್ಪಿಸಿಕೊಟ್ಟ ಕಾರು ಆಗಿದೆ. ಅಲ್ಲಿವರೆಗೆ ಭಾರತೀಯರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಅವಲಂಭಿಸಿದ್ದರು. ಆದರೆ ಮಾರುತಿ 800 ಬಂದ ಬಳಿಕ. ದೇಶದಲ್ಲಿ ಜನರು ಪ್ರತಿದಿನ ಪ್ರಯಾಣಿಸುವ ವಿಧಾನ ಬದಲಾಯಿಸಿತು. ಭಾರತೀಯರ ವೈಯಕ್ತಿಕ ಸಾರಿಗೆ ವ್ಯವಸ್ಥೆಗೆ ಈ ಕಾರು ಅನುಕೂಲ ಕಲ್ಪಿಸಿದಷ್ಟು ಬೇರೆ ಯಾವ ಕಾರು ಇಲ್ಲ. ಹೀಗಾಗಿ ಇದರ ಪ್ರಭಾವದಿಂದಾಗಿಯೇ ಇಂದು ಮಾರುತಿ 800 ಗೆ ಈ ಪ್ರಶಸ್ತಿ ಪಡೆಯುವ ಮೂಲಕ ಆ ಪ್ರಶಸ್ತಿಯ ಮೌಲ್ಯವು ಹೆಚ್ಚಿದೆ.
ಮಾರುತಿ 800: ಶ್ರೀಸಾಮಾನ್ಯನ ಕಾರು
ಎಂಬತ್ತ ದಶಕದಲ್ಲಿ ಅನೇಕ ಮಧ್ಯಮ ವರ್ಗದ ಕುಟುಂಬಗಳಿಗೆ ಕಾರು ಹೊಂದುವುದು ದೊಡ್ಡ ಕನಸು. ಒಂದು ಹೊಸ ಮನೆ, ಮನೆ ಮುಂದೆ ಕಾರು ಹೊಂದುವ ಬಗ್ಗೆ ಕನಸು ಕಾಣುತ್ತಿದ್ದರು. ಆ ಕಾಲಕ್ಕೆ ಅವೆಲ್ಲವೂ ಸಿನಿಮಾದಲ್ಲೇ ನೋಡುತ್ತಿದ್ದೇವೆ. ಆದರೆ ಅದೇ ಸಮಯಕ್ಕೆ ಭಾರತದ ಮಾರುಕಟ್ಟೆಗೆ ಮಾರುತಿ 800 ಕಾರು ಬಂತು ನೋಡಿ ಆಮೇಲೆ ಆಗಿದ್ದೆಲ್ಲ ಕಾರು ಕ್ರಾಂತಿಯೇ. ಮಾರುತಿ ಕಾರು ಬಂದ ನಂತರ ಅನೇಕ ಜನರ ಮನೆಮುಂದೆ ತಂದು ನಿಲ್ಲಿಸುವ ಕನಸು ನನಸಾಗಿಸಿತು. ತುಂಬಾ ದುಬಾರಿ ಬೆಲೆಯೂ ಆಗಿಲಿರಲಿಲ್ಲ. ಇದು ಆ ಕಾಲಕ್ಕೆ ಶ್ರೀಸಾಮಾನ್ಯನ ಕಾರು ಆಗಿದ್ದರಿಂದಲೇ ಮಾರುತಿ 800 ಭಾರತೀಯ ಕಾರುಗಳ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ.
ಹಲವು ದೇಶಗಳ ಕಾರುಗಳನ್ನು ಹಿಂದಿಕ್ಕಿದ ಮಾರುತಿ 800
ಈ ಪ್ರತಿಷ್ಠಿತ ಪ್ರಶಸ್ತಿಗೆ ಪ್ರಪಂಚದಾದ್ಯಂತ 21 ಐತಿಹಾಸಿಕ, ಸಾಂಸ್ಕೃತಿಕ ಮಹತ್ವವಿದ್ದ 21 ಕಾರುಗಳು ಸ್ಪರ್ಧಿಸಿದ್ದವು. ಈ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್, ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾ, ಸ್ಲೋವೇನಿಯಾ ಸೇರಿದಂತೆ ಅನೇಕ ದೇಶಗಳ ಕಾರುಗಳು, ಇತರೆ ವಾಹನಗಳು ಸ್ಪರ್ಧೆಯಲ್ಲಿದ್ದವು. ಆದರೆ ಅವೆಲ್ಲವುಗಳನ್ನೂ ಮೀರಿಸಿ ಮಾರುತಿ 800 ಈ ಗೌರವಕ್ಕೆ ಪಾತ್ರವಾಗಿದೆ ಎಂದರೆ ಭಾರತೀಯರಾಗಿ ಹೆಮ್ಮೆ ಎನಿಸದೆ ಇರದು.
FIVA ಪ್ರಶಸ್ತಿಗೆ ಪಾತ್ರವಾದ ಭಾರತದ ಏಕೈಕ ಕಾರು ಮಾರುತಿ 800
FIVA ಪ್ರಶಸ್ತಿ ಪಡೆದ ಭಾರತದ ಮೊದಲ ಮತ್ತು ಏಕೈಕ ಕಾರು ಎಂಬ ಹೆಗ್ಗಳಿಕೆಗೆ ಮಾರುತಿ 800 ಪಾತ್ರವಾಗಿದೆ. ಈ ಪ್ರಶಸ್ತಿಯು ದೇಶದ ವೈಯಕ್ತಿಕ ಸಾರಿಗೆ ಕ್ಷೇತ್ರದ ಮೇಲೆ ಗಮನಾರ್ಹ ಪ್ರಭಾವ ಬೀರಿದ ಪ್ರಭಾವಕ್ಕೆ ಸಿಕ್ಕ ಅಂತಾರಾಷ್ಟ್ರೀಯ ಮನ್ನಣೆಯಾಗಿದೆ.
ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ವಿಶೇಷ ಸ್ಥಾನ
ನಿಮ್ಮ ಹಿರಿಯರು ಆ ಕಾಲಕ್ಕೆ ಮಾರುತಿ 800 ಹೊಂದಿದ್ದರೆ ಅವರ ಪ್ರತಿಷ್ಠೆ ಸಮಾಜದಲ್ಲಿ ಅಷ್ಟರ ಮಟ್ಟಿಗೆ ಹೆಚ್ಚಿರುತ್ತಿತ್ತು. ಈಗಲೂ ಅನೇಕ ಹಿರಿಯರಿಗೆ ಮಾರುತಿ 800 ಕಾರು ಎಲ್ಲಾದರೂ ನೋಡಿದಾಗ ಹಳೆಯ ನೆನಪುಗಳು ಕಣ್ಮುಂದೆ ಹಾದುಹೋಗುತ್ತವೆ. ಅಂದಿನ ಪ್ರಯಾಣದ ನೆನಪುಗಳು ಮತ್ತೆ ಮತ್ತೆ ಕಣ್ಮುಂದೆ ಸುಳಿಯುತ್ತವೆ. ಹಿಂದಿನ ತಲೆಮಾರುಗಳಿಮದ ಭಾರತೀಯ ರಸ್ತೆಗಳಲ್ಲಿ ಕಂಡುಬರುತ್ತಿದ್ದ ಈ ಕಾರು ಇಂದು ಜಾಗತಿಕ ಮಟ್ಟದ ವಿಶೇಷ ಮನ್ನಣೆಗೆ ಪಾತ್ರವಾಗಿದೆ.











