Asianet Suvarna News Asianet Suvarna News

ಮಾರುತಿಯಿಂದ ಮತ್ತೆ ಡೀಸೆಲ್ ಎಂಜಿನ್ ಕಾರು ಉತ್ಪಾದನೆ?

ಭಾರತದ ಜನಪ್ರಿಯ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಈ ವರ್ಷದ ಏಪ್ರಿಲ್‌ನಿಂದ ಡೀಸೆಲ್ ಎಂಜಿನ್ ಆಧರಿತ ಕಾರುಗಳ ಉತ್ಪಾದನೆಯಿಂದ ಹಿಂದೆ ಸರಿದಿತ್ತು. ಆದರೆ, ಉದ್ಯಮದ ಮೂಲಗಳ ಪ್ರಕಾರ ಕಂಪನಿ, ಬಹುಉದ್ದೇಶಿತ ವಾಹನಗಳು ಮತ್ತು ಎಸ್‌ಯುವಿಗಳಿಗೆ ಡೀಸೆಲ್ ಎಂಜಿನ್‌ಗಳನ್ನು ಉತ್ಪಾದಿಸಲು ಮುಂದಾಗಿದೆ. ಹಾಗಾಗಿ, ಕಂಪನಿ ಮತ್ತೆ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಗೆ ಮುಂದಾಗುತ್ತಿದೆ.
 

Is Maruti Suzuki reentering to diesel segment cars
Author
Bengaluru, First Published Dec 22, 2020, 3:14 PM IST

ಭಾರತದ ಬಹುದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಡಿಸೇಲ್ ಎಂಜಿನ್ ಕಾರುಗಳನ್ನು ಉತ್ಪಾದಿಸುವುದಿಲ್ಲ ಎಂದು ಹೇಳಿತ್ತು. ಆದರೆ, ಮುಂದಿನ ವರ್ಷದಿಂದ ಮತ್ತೆ ಕಂಪನಿ ಡಿಸೇಲ್ ಎಂಜಿನ್ ಆಧರಿತ ಕಾರುಗಳ ಉತ್ಪಾದನೆ ಮುಂದಾಗಿದೆ ಎಂದು ಆಟೋಮೊಬೈಲ್ ಉದ್ಯಮದ ಮೂಲಗಳು ತಿಳಿಸಿವೆ ಎಂದು ಬಹು ಮಾಧ್ಯಮಗಳು ವರದಿ ಮಾಡಿವೆ.

ವಿಶೇಷವಾಗಿ ಎಸ್‌ಯುವಿ ಮತ್ತು ಬಹುಉದ್ದೇಶಿತ ವಾಹನಗಳ ವಿಭಾಗದಲ್ಲಿ ಡೀಸೆಲ್ ಎಂಜಿನ್ ವಾಹನಗಳನ್ನು ಉತ್ಪಾದಿಸಲು ಕಂಪನಿ ಮುಂದಾಗಿದೆ.  ಬಿಎಸ್ 6 ಕಟ್ಟುನಿಟ್ಟಿನ ನಿಯಮಗಳು ಈ ವರ್ಷದ ಏಪ್ರಿಲ್‌ನಲ್ಲಿ ಜಾರಿಯಾದ ಬಳಿಕ ಕಂಪನಿ ತನ್ನ ಪಟ್ಟಿಯಿಂದ ಡೀಸೆಲ್‌ ಎಂಜಿನ್‌ ಕಾರುಗಳ ಉತ್ಪಾದನೆಯನ್ನು ಕೈ ಬಿಟ್ಟಿತ್ತು. ಆದರೆ, ಮೂಲಗಳ ಪ್ರಕಾರ, ಮುಂದಿನ ವರ್ಷದ ಹಬ್ಬದ ಸೀಸನ್ ಹೊತ್ತಿಗೆ ಬಿಎಸ್-6 ಡೀಸೆಲ್ ಎಂಜಿನ್‌ ಕಾರುಗಳ ಉತ್ಪಾದನೆ ಅನುಕೂಲವಾಗುವಂತೆ ತನ್ನ ಮಾನೇಸರ್  ಕಾರು ಉತ್ಪಾದನಾ ಘಟಕವನ್ನು ಮೇಲ್ದರ್ಜೇಗೇರಿಸುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಹೊಸ ವರ್ಷದಲ್ಲಿ 7 ಸೀಟರ್ ಎಂಜಿ ಹೆಕ್ಟರ್ ಪ್ಲಸ್ ಬಿಡುಗಡೆ

ದೇಶೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ವಿಟಾರಾ ಬ್ರೆಜಾ ಮತ್ತು ಎರ್ಟಿಗಾ ಎಸ್‌ಯುವಿಗಳಲ್ಲಿ ಈ ಡೀಸೆಲ್ ಎಂಜಿನ್‌ಗಳನ್ನು ಬಳಸಲು ಕಂಪನಿ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಮತ್ತೆ ಡೀಸೆಲ್ ಎಂಜಿನ್ ಕಾರು ಉತ್ಪಾದನೆ ಮುಂದಾಗಿರುವುದಕ್ಕೆ ಕಂಪನಿ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ ಎನ್ನಲಾಗುತ್ತಿದೆ.

Is Maruti Suzuki reentering to diesel segment cars

ಈ ಹಿಂದೆ 1500 ಸಿಸಿ ಎಂಜಿನ್‌ಗಳನ್ನು ಉತ್ಪಾದಿಸಲು ಬಳಸುತ್ತಿದ್ದ ಮಾನೇಸರ್ ಘಟಕವನ್ನು ಮತ್ತೆ ಅದೇ ಕಾರ್ಯಕ್ಕೆ ಬಳಸಿಕೊಳ್ಳಲು ಅಭಿವೃದ್ಧಿಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಡೀಸೆಲ್ ಸೆಗ್ಮೆಂಟ್‌ನಿಂದ ಹೊರ ಹೋಗುವ ಮುಂಚೆ ಮಾರುತಿ ಸುಜುಕಿ ಇಂಡಿಯಾ ಕಂಪನಿ ಮಧ್ಯಮಗಾತ್ರದ ಸೆಡಾನ್ ಸಿಯಾಜ್ ಮತ್ತು ಎರ್ಟಿಗಾ ಕಾರುಗಳಿಗೆ ಈ ಪವರ್‌ಟ್ರೇನ್ ಎಂಜಿನ್‌ಗಳನ್ನು ಬಳಸುತ್ತಿತ್ತು.  ಇಷ್ಟು ಮಾತ್ರವಲ್ಲದೇ ಆ ಸಮಯದಲ್ಲಿ ವಿಟರಾ ಬ್ರೆಜಾ, ಡಿಜೈರ್, ಸ್ವಿಫ್ಟ್, ಎಸ್ ಕ್ರಾಸ್ ಮತ್ತು ಬಲೆನೋಗಳಿಗೂ ಈ ಎಂಜಿನ್‌ಗಳ್ನು ಬಳಸಲಾಗುತ್ತಿತ್ತು.

ಮಾರುತಿ ಸುಜುಕಿ ಇಂಡಿಯಾ ಚೇರ್ಮನ್ ಆರ್ ಸಿ ಭಾರ್ಗವ್ ಅವರು ಕಳೆದ 2019ರ ಏಪ್ರಿಲ್ 26ರಂದು ಘೋಷಣೆ ಮಾಡಿ, 2020 ಏಪ್ರಿಲ್ 1ರಿಂದ ಎಲ್ಲ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ತನ್ನ ಪಟ್ಟಿಯಿಂದ ಹಂತಹಂತವಾಗಿ ಕೈ ಬಿಡುವುದಾಗಿ ಘೋಷಿಸಿದ್ದರು. ಬಿಎಸ್ 6 ನಿಯಮಗಳಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಡೀಸೆಲ್ ಎಂಜಿನ್‌ಗಳನ್ನು ಬಳಸಿದರೆ ಚಿಕ್ಕ ಕಾರುಗಳ ಬೆಲೆಯ ಮೇಲೆ ಪರಿಣಾಮ ಬೀರುವುದರಿಂದ ಅದರಿಂದ ಹೊರ ಬರಲಾಗುತ್ತಿದೆ ಎಂಬುದು ಅವರು ನೀಡಿರುವ ಕಾರಣವಾಗಿತ್ತು.

ಗ್ರೇಟರ್ ನೋಯ್ಡಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಲಿದೆಯಾ ಹೋಂಡಾ?

ಒಂದು ವೇಳೆ, ಬಿಎಸ್-6 ನಿಯಮಗಳ ಆಧರಿತ ಡೀಸೆಲ್ ಎಂಜಿನ್ ಕಾರುಗಳಿಗೆ ಬೇಡಿಕೆ ಬಂದರೆ, ಅಂಥ ಬೇಡಿಕೆಯನ್ನು ಪೂರೈಸಲು ಕಂಪನಿ ಮುಂದಾಗಲಿದೆ ಎಂಬುದು ಅವರು ಆಗ ಹೇಳಿದ ಮಾತುಗಳಾಗಿದ್ದವು.

ಬಿಎಸ್-6ಕ್ಕೆ ಗ್ರಾಹಕರು ಹೇಗೆ ಪ್ರತಿಕ್ರಿಯಿಸುತ್ತಾರೆಂಬುದರ ಮೇಲೆ ಎಲ್ಲವೂ ನಿಂತಿದೆ. ಒಂದು ವೇಳೆ, ಬಿಎಸ್ 6 ಡೀಸೆಲ್ ಕಾರುಗಳಿಗೆ ಮಾರುಕಟ್ಟೆ ಇದೆ ಎಂದಾದರೆ ಅಂಥ ಕಾರುಗಳನ್ನು ನಿರ್ದಿಷ್ಟ ಅವಧಿಯಲ್ಲಿ ಮತ್ತೆ ಸಿದ್ಧಪಡಿಸಲಿದ್ದೇವೆ ಅಂದು ಅವರು ಹೇಳಿದ್ದರು.

ಈ ಹಿಂದೆಯೂ ಅನೇಕ ಕಾರು ತಯಾರಿಕಾ ಕಂಪನಿಗಳು ಡೀಸೆಲ್ ಎಂಜಿನ್‌ಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದವು.  ಟಾಟಾ ಮೋಟಾರ್ಸ್, ಟೋಯೊಟಾ ಕಿರ್ಲೋಸ್ಕರ್ ಮೋಟಾರ್, ಚಿಕ್ಕ ಸಾಮರ್ಥ್ಯದ ಡೀಸೆಲ್ ಎಂಜಿನ್‌ಗಳನ್ನು ಕೈ ಬಿಟ್ಟು, ಬೃಹತ್ ಪವರ್‌ಟ್ರೇನ್ ಕಾರುಗಳು ಮತ್ತು ಬಹು ಉದ್ದೇಶಿತ ವಾಹನಗಳು, ಎಸ್‌ಯುವಿಗಳಿಗೆ ಡೀಸೆಲ್ ಎಂಜಿನ್‌ಗಳನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿದ್ದವು.

ಎಂಟ್ರಿ ಲೇವಲ್ ಕಾರುಗಳಿಗೆ ಡೀಸೆಲ್ ಎಂಜಿನ್‌ಗಳನ್ನು ಅಳವಡಿಸಿದರೆ ಅಂಥ ಕಾರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ಕಂಪನಿಗಳು ಎಂಟ್ರಿ ಲೇವಲ್ ಕಾರುಗಳಿಗೆ ಡೀಸೆಲ್ ಎಂಜಿನ್ ಬಳಸುವುದನ್ನು ನಿಲ್ಲಿಸಿವೆ ಎಂದು ಹೇಳಬಹುದು.

ವರ್ಷಾಂತ್ಯದ ಆಫರ್‌: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!

Follow Us:
Download App:
  • android
  • ios