ಯುವಕನೊಬ್ಬ ಹೊಸ ಕಾರು ಖರೀದಿಸಿ, ತನ್ನ ಪ್ರೇಯಸಿಯ ಕಾಲಿಗೆ ಕೆಂಪು ಬಣ್ಣ ಹಚ್ಚಿ ಕಾರಿನ ಬಾನೆಟ್ ಮೇಲೆ ಹೆಜ್ಜೆ ಗುರುತು ಮೂಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೃತ್ಯವನ್ನು ಆಯುಧ ಪೂಜೆಗೆ ದೇವರಂತೆ ಪೂಜಿಸುವ ಕಾರು ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದು, ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.
ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ವ್ಯೂವ್ಸ್ (Views), ಲೈಕ್ಸ್‌ಗಳಿಗಾಗಿ ಜನರು ಎಂತಹ ವಿಚಿತ್ರ ಕೆಲಸಗಳನ್ನು ಮಾಡಲೂ ಹೇಸುವುದಿಲ್ಲ. ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗರು ಮಾಡುವ ಹುಚ್ಚಾಟಗಳಂತೂ ಕೆಲವೊಮ್ಮೆ ಎಲ್ಲೆ ಮೀರಿಬಿಡುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕಿಡಿಹೊತ್ತಿಸಿದೆ!
ಆಗಿದ್ದೇನು?
ಹೊಸ ಕಾರೊಂದನ್ನು ಖರೀದಿ ಮಾಡಿದ ವ್ಯಕ್ತಿ ತನ್ನ ಪ್ರೇಯಸಿಯನ್ನು ಎತ್ತಿಕೊಂಡು ಆಕೆಯ ಕಾಲಿಗೆ ಕೆಂಪು ಬಣ್ಣವನ್ನು ಹಚ್ಚಿ ಕಾಲಿನ ಹೆಜ್ಜೆ ಗುರುತನ್ನು ಕಾರು ಇಂಜಿನ್‌ನ ಬಾನೆಟ್ (Engine Hood) ಮೇಲೆ ಇಡಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ದೃಶ್ಯವನ್ನು ಮಾನವ ಹಕ್ಕುಗಳ ಹೋರಾಟಗಾರ ಸ್ಯಾಮ್ ಸಿಫ್ (Sam Siff) ಎಂಬುವವರು ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಇದು ಅತ್ಯಂತ ದಯನೀಯ! ಆಕೆಯನ್ನು ಇಂಪ್ರೆಸ್ ಮಾಡಲು ಇಂಜಿನ್ ಬಾನೆಟ್ ಮೇಲೆ ಕಾಲಿಡಿಸುವುದಾ? ನಿಜವಾದ ಯಾವುದೇ ಕಾರ್ ಪ್ರೇಮಿ (Car Lover) ಇಂತಹ ಕೃತ್ಯವನ್ನು ಮೆಚ್ಚುವುದಿಲ್ಲ. ಈ ಡ್ರಾಮಾ ಮಾಡಲು ಆತ ಕಾರಿನ ಬಾಗಿಲು ಬಳಸಬಹುದಿತ್ತು, ಆದರೆ ಇಂಜಿನ್ ಇರುವಂತಹ ಬಾನೆಟ್‌ಗೆ ಅಗೌರವ ತೋರಿದ್ದಾರೆ. ಇದು ಯಾವುದೇ ಸ್ವಾಭಿಮಾನವಿಲ್ಲದ ನಾಚಿಕೆಗೇಡು ಕೃತ್ಯ. ಕಾರಿನ ಬಗ್ಗೆ ಗೌರವವೂ ಇಲ್ಲ, ತನ್ನ ಬಗ್ಗೆ ತನಗೇ ಗೌರವವಿಲ್ಲದ ವರ್ತನೆ' ಎಂದು ಸ್ಯಾಮ್ ಸಿಫ್ ತೀವ್ರವಾಗಿ ಖಂಡಿಸಿದ್ದಾರೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ: ಪರ-ವಿರೋಧದ ದೊಡ್ಡ ಚರ್ಚೆ!
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ.
ಕಾರು ಪ್ರೇಮಿಗಳ ಆಕ್ರೋಶ: 'ಒಬ್ಬ ಒಳ್ಳೆಯ ಕಾರ್ ಲವರ್ಸ್ ಎಂದಿಗೂ ಕಾರಿನ ಮೇಲೆ ಕಾಲಿಡಲು ಬಿಡುವುದಿಲ್ಲ. ಬರೀ ಇನ್‌ಸ್ಟಾಗ್ರಾಮ್ ವ್ಯೂವ್ಸ್‌ಗಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಕಾ? ಇಂದಿನ ಪೀಳಿಗೆಯಲ್ಲಿ ಹುಡುಗಿಯರನ್ನು ಓಲೈಸಲು ಹುಡುಗರು ಇಂತಹ ಕೃತ್ಯಗಳನ್ನು ಎಸಗುತ್ತಾರೆ' ಎಂದು ಹಲವರು ಕಿಡಿಕಾರಿದ್ದಾರೆ.
ವೈಯಕ್ತಿಕ ಸ್ವಾತಂತ್ರ್ಯ: 'ಗಾಡಿ ಅವನದ್ದು, ಹುಡುಗಿ ಅವನವಳು, ಡ್ರಾಮಾ ಅವರದ್ದು... ನಡುವೆ ಇವರಿಗೇಕೆ ಉಸಾಬರಿ? ಆತನ ಕಾರನ್ನು ಆತ ಹೇಗೆ ಬೇಕಾದರೂ ಬಳಸಿಕೊಳ್ಳಲಿ, ಬೇರೆಯವರಿಗೆ ಏನು ನಷ್ಟ?' ಎಂದು ಕೆಲವರು ಯುವಕನ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸಂಸ್ಕೃತಿ ನೆನಪಿಸಿದ ಕೆಲವರು: 'ಭಾರತದಲ್ಲಿ ಹೆಣ್ಣುಮಕ್ಕಳನ್ನು ದೇವಿಯಂತೆ ಕಂಡು ಗೌರವಿಸುವ ಸಂಪ್ರದಾಯವಿದೆ. ಇದು ಆಕೆಯ ಮೇಲಿನ ಪ್ರೀತಿ ಇರಬಹುದು' ಎಂದು ಕಾರಿನ ಮೇಲೆ ಕಾಲಿಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ರೀಲ್ಸ್ ಹುಚ್ಚಿಗೆ ಟಾಂಗ್: 'ಕಾರಿನ ಎಂಜಿನ್ ಎನ್ನುವುದು ದೈವಿಕ ಸ್ವರೂಪ. ಅದನ್ನು ದೇವರ ಮುಂದೆ ಪೂಜಿಸುತ್ತೇವೆ. ಆದರೆ, ಇಲ್ಲಿ ಕೇವಲ ನಾಲ್ಕು ಲೈಕ್‌ಗಳಿಗಾಗಿ ಮನುಷ್ಯರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅನ್ನೋದಕ್ಕೆ ಈ ರೀಲ್ಸ್ ಸಾಕ್ಷಿ' ಎಂದು ಹಲವರು ವ್ಯಂಗ್ಯವಾಡಿದ್ದಾರೆ.
ಒಟ್ಟಿನಲ್ಲಿ, ಯುವತಿಯೊಬ್ಬಳು ಕಾರಿನ ಬಾನೆಟ್ ಮೇಲೆ ಕಾಲಿಟ್ಟ ಈ ಒಂದು ಘಟನೆ, ಪ್ರೀತಿ ಮತ್ತು ಕಾರ್ ಕ್ರೇಜ್ ನಡುವಿನ ದೊಡ್ಡ ಚರ್ಚೆಗೆ ಕಾರಣವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.


