ಕಂಪನಿ ಗ್ರಾಹಕರ ಅನುಕೂಲ, ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕಾರ್‌ ತಯಾರಿಸಿರುತ್ತದೆ. ಅದನ್ನು ಆಲ್ಟರ್‌ ಮಾಡುವಾಗ ಅದರದ್ದೇ ನಿಯಮಗಳಿವೆ. ನೀವು ಸನ್‌ ರೂಫ್‌ ಹಾಕಿದ್ರೆ ವಾರಂಟಿ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ಮಾಹಿತಿ

ಕಾರುಗಳನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಮಾಡಿಫೈ ಮಾಡಿಸುವ ಟ್ರೆಂಡ್ ಇತ್ತೀಚಿಗೆ ಹೆಚ್ಚಾಗ್ತಿದೆ. ಕೆಲವರು ಹೊಸ ಲೈಟ್ ಹಾಕಿಸ್ತಾರೆ, ಇನ್ನು ಕೆಲವರು ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಮ್, ಅಲಾಯ್ ವೀಲ್ ಅಥವಾ ಸನ್ರೂಫ್ ಅಳವಡಿಸ್ತಾರೆ. ಕಂಪನಿ ಸನ್ರೂಫ್ ನೀಡಿಲ್ಲ ಅಂದ್ರೆ ಕೆಲ ಮಾಲಿಕರು ಆಫ್ಟರ್ಮಾರ್ಕೆಟ್ ಸನ್ರೂಫ್ ಹಾಕಿಸಿಕೊಳ್ತಾರೆ. ಆದ್ರೆ ಇದ್ರಿಂದ ಕಾರಿನ ಲುಕ್ ಮಾತ್ರವಲ್ಲ, ವಾರಂಟಿ ಮೇಲೂ ಪರಿಣಾಮ ಬೀರುತ್ತೆ ಅನ್ನೋದು ಅನೇಕರಿಗೆ ತಿಳಿದಿಲ್ಲ.

ಆಫ್ಟರ್ಮಾರ್ಕೆಟ್ ಸನ್ರೂಫ್ ಅಳವಡಿಸಲು ಸಾಮಾನ್ಯವಾಗಿ ಕಾರಿನ ಮೇಲ್ಛಾವಣಿಯನ್ನು ಕತ್ತರಿಸಬೇಕಾಗುತ್ತದೆ. ಹೀಗಾಗಿ ಇದು ಸಾಮಾನ್ಯವಾಗಿ ಅಳವಡಿಸಬಹುದಾದ ಪ್ಲಗ್ ಆ್ಯಂಡ್ ಪ್ಲೇ ಆಕ್ಸೆಸರಿಯಂತಲ್ಲ. ಕಾರಿನ ಬಾಡಿಯಲ್ಲಿ ಕಟಿಂಗ್, ಡ್ರಿಲ್ಲಿಂಗ್, ವೆಲ್ಡಿಂಗ್ ಅಥವಾ ಇತರ ರಚನಾತ್ಮಕ ಬದಲಾವಣೆಗಳನ್ನು ಮಾಡುವುದರಿಂದ ವಾರಂಟಿಗೆ ಸಮಸ್ಯೆಯಾಗಬಹುದು.

ವಾರಂಟಿ ರದ್ದಾಗುತ್ತಾ?

ಆಫ್ಟರ್ಮಾರ್ಕೆಟ್ ಸನ್ರೂಫ್ ಅಳವಡಿಸಿದಾಗ, ಆ ಬದಲಾವಣೆಯಿಂದ ಯಾವ ಭಾಗದ ವಾರಂಟಿಗೆ ಸಮಸ್ಯೆಯಾಗಬಹುದು ಎನ್ನುವುದು ಮುಖ್ಯವಾಗುತ್ತದೆ. ಸನ್ರೂಫ್ ಅಳವಡಿಸುವ ಸಂದರ್ಭದಲ್ಲಿ ಕಾರಿನ ಮೇಲ್ಛಾವಣಿಯನ್ನು ಕತ್ತರಿಸಿದರೆ, ನಂತರ ಆ ಜಾಗದಿಂದ ನೀರು ಸೋರಿಕೆಯಾಗಬಹುದು. ಮೇಲ್ಛಾವಣಿಯಲ್ಲಿ ತುಕ್ಕು ಹಿಡಿಯಬಹುದು ಅಥವಾ ಕಾರಿನ ಬಾಡಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಆ ಹಾನಿಯನ್ನು ವಾರಂಟಿಯಡಿ ಸರಿಪಡಿಸಲು ಕಂಪನಿ ನಿರಾಕರಿಸುವ ಸಾಧ್ಯತೆ ಇದೆ. ಆದರೆ ಇದರಿಂದ ಎಂಜಿನ್ ಅಥವಾ ಈ ಮಾಡಿಫಿಕೇಶನ್ಗೆ ಯಾವುದೇ ಸಂಬಂಧವಿಲ್ಲದ ಇತರ ಭಾಗಗಳ ವಾರಂಟಿಯೂ ಸ್ವಯಂಚಾಲಿತವಾಗಿ ರದ್ದಾಗುತ್ತದೆ ಎಂದರ್ಥವಲ್ಲ.

ರೂಫ್ ಕಟಿಂಗ್ ದೊಡ್ಡ ಸಮಸ್ಯೆಯಾಗಬಹುದು

ಕಾರಿನ ಬಾಡಿ ಮತ್ತು ಮೇಲ್ಛಾವಣಿಯನ್ನು ಕಾರ್ಖಾನೆಯಲ್ಲೇ ನಿರ್ದಿಷ್ಟ ರಚನಾತ್ಮಕ ವಿನ್ಯಾಸಕ್ಕೆ ಅನುಗುಣವಾಗಿ ತಯಾರಿಸಲಾಗುತ್ತದೆ. ಆಫ್ಟರ್ಮಾರ್ಕೆಟ್ ಸನ್ರೂಫ್ ಅಳವಡಿಸಲು ಕಟಿಂಗ್ ಮಾಡಿದಾಗ, ಕಾರಿನ ಮೂಲ ರಚನೆಯಲ್ಲಿ ಬದಲಾವಣೆಯಾಗುತ್ತದೆ. ಇದರ ಜೊತೆಗೆ ಸನ್ರೂಫ್ ಅಳವಡಿಸುವಾಗ ಸೀಲಿಂಗ್ ಮತ್ತು ನೀರು ಹೊರಹೋಗುವ ಡ್ರೈನೇಜ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಫಿಟ್ಟಿಂಗ್ ಸರಿಯಾಗಿ ನಡೆಯದಿದ್ದರೆ ಮಳೆನೀರು ಕಾರಿನ ಒಳಗೆ ನುಗ್ಗುವ ಅಪಾಯವಿದೆ. ದೀರ್ಘಕಾಲದವರೆಗೆ ತೇವಾಂಶ ಉಳಿದರೆ ಕಾರಿನ ಒಳಭಾಗದಲ್ಲಿರುವ ಎಲೆಕ್ಟ್ರಿಕಲ್ ಕಂಪೋನೆಂಟ್ಗಳಿಗೂ ಹಾನಿಯಾಗಬಹುದು.

ವಾರಂಟಿ ಪಾಲಿಸಿ ಗಮನಿಸಿ

ಪ್ರತಿಯೊಂದು ಕಾರು ತಯಾರಕ ಕಂಪನಿಯ ವಾರಂಟಿ ನಿಯಮಗಳು ವಿಭಿನ್ನವಾಗಿರುತ್ತವೆ. ಕೆಲವು ಕಂಪನಿಗಳು ಕಾರಿನ ಮೂಲ ವಿನ್ಯಾಸ ಅಥವಾ ಸ್ಟ್ಯಾಂಡರ್ಡ್ ಫಿಟ್ಟಿಂಗ್ನಲ್ಲಿ ಬದಲಾವಣೆ ಮಾಡಿದರೆ ವಾರಂಟಿಯಲ್ಲಿ ಬದಲಾವಣೆ ಮಾಡುತ್ತದೆ. ಇನ್ನು ಕೆಲವು ಕಂಪನಿಗಳ ವಾರಂಟಿ ಪಾಲಿಸಿಯಲ್ಲಿ ಮಾಡಿಫಿಕೇಶನ್, ಅನಧಿಕೃತ ಬದಲಾವಣೆಗಳು, ಟ್ಯಾಂಪರಿಂಗ್ ಅಥವಾ ಸರಿಯಾದ ರೀತಿಯಲ್ಲಿ ಮಾಡದ ರಿಪೇರಿಯಿಂದ ಉಂಟಾಗುವ ಹಾನಿಯನ್ನು ವಾರಂಟಿಯ ವ್ಯಾಪ್ತಿಯಲ್ಲಿಡಲಾಗುತ್ತದೆ. ಹೀಗಾಗಿ ಆಫ್ಟರ್ಮಾರ್ಕೆಟ್ ಸನ್ರೂಫ್ ಅಳವಡಿಸಿದ ತಕ್ಷಣ ಇಡೀ ಕಾರಿನ ವಾರಂಟಿ ರದ್ದಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸನ್ರೂಫ್ಗೆ ಸಂಬಂಧಿಸಿದ ಅಥವಾ ಅದರಿಂದ ಉಂಟಾಗುವ ಹಾನಿಗೆ ವಾರಂಟಿ ಕ್ಲೇಮ್ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ.

ಹೊಸ ಕಾರಿನಲ್ಲಿ ಇಂತಹ ಬದಲಾವಣೆ ಮಾಡಿಸಿಕೊಳ್ಳಲು ಯೋಚಿಸುತ್ತಿದ್ದರೆ, ಮೊದಲು ನಿಮ್ಮ ಕಾರಿನ ಅಧಿಕೃತ ಡೀಲರ್ನಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆಯುವುದು ಸುರಕ್ಷಿತ ಕ್ರಮವಾಗಿದೆ. ಆಕ್ಸೆಸರೀಸ್ ಅಂಗಡಿಯವರು ವಾರಂಟಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ ಮಾತ್ರಕ್ಕೆ ಅದನ್ನು ನಂಬಬೇಡಿ. ಕಂಪನಿಯ ಲಿಖಿತ ಅನುಮತಿ, ಆಕ್ಸೆಸರಿಯ ಅನುಮೋದನೆ ಮತ್ತು ಫಿಟ್ಟಿಂಗ್ಗೆ ಸಂಬಂಧಿಸಿದ ಷರತ್ತುಗಳಿದ್ದರೆ ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಇನ್ಶೂರೆನ್ಸ್ ಮೇಲೂ ಪರಿಣಾಮ

ಸನ್ರೂಫ್ ಅಳವಡಿಸುವುದರಿಂದ ವಾರಂಟಿ ಮಾತ್ರವಲ್ಲ, ಕಾರಿನ ಇನ್ಶೂರೆನ್ಸ್ ಮೇಲೂ ಪರಿಣಾಮ ಉಂಟಾಗಬಹುದು. ಕಾರಿನಲ್ಲಿ ದೊಡ್ಡ ಪ್ರಮಾಣದ ರಚನಾತ್ಮಕ ಬದಲಾವಣೆಗಳನ್ನು ಮಾಡಿದಾಗ, ಅದರ ಬಗ್ಗೆ ವಿಮಾ ಕಂಪನಿಗೆ ಮಾಹಿತಿ ನೀಡಬೇಕಾಗಬಹುದು.