ದಶಕಗಳ ಕಾಲ ಜನರ ಮನ ಗೆದ್ದು ಆಳಿದ್ದ ಕಪ್ಪು-ಹಳದಿ ವರ್ಣದ ಸುಂದರಿ ಪ್ರೀಮಿಯರ್ ಪದ್ಮಿನಿಯ ಆಯಸ್ಸು ಕೊನೆಗೂ ಮುಗಿಯುತ್ತಾ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳೇ ಆಕೆಯ ಯುಗಾಂತ್ಯ ಆಗಬೇಕು. ಈಗ ಲಾಕ್‌ಡೌನ್ ಬಂದಿರುವ ಕಾರಣ ಇನ್ನೇನಾದರೂ ಆಯಸ್ಸು ಸ್ವಲ್ಪ ದಿನಗಳೋ, ತಿಂಗಳಿನ ಮಟ್ಟಿಗೆ ಇರಬಹುದೇನೋ..!????

ಹೌದು. ಪ್ರತಿಯೊಂದು ಔಷಧಕ್ಕೂ ಎಕ್ಸ್‌ಪೈರಿ ಡೇಟ್ ಎಂಬುದು ಇರುವಂತೆ ಯಾವುದೇ ವಸ್ತುವಾದರೂ ಅದಕ್ಕೊಂದು ಕೊನೆ ಅಂತ ಇರಲೇಬೇಕು. ಈಗಾಗಲೇ ವೆಂಟಿಲೇಟರ್‌ನಲ್ಲಿಯೇ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪದ್ಮಿನಿಯ ಆಯಸ್ಸೂ ಮುಗಿದಿದೆ. 

ಇದನ್ನು ಓದಿ: ಸೋಷಿಯಲ್ ಡಿಸ್ಟೆನ್ಸಿಂಗ್‌ನಿಂದ ಹೆಚ್ಚಾಗಲಿದೆಯೇ ಕಾರು ಖರೀದಿ?

ಈಗ ಇಲ್ಲಿ ಹೇಳುತ್ತಿರುವ ಪದ್ಮಿನಿ ಬೇರೆ ಯಾರೂ ಅಲ್ಲ. 1970-1990ರ ದಶಕದಲ್ಲಿ ಕನ್ನಡ, ಹಿಂದಿ, ತಮಿಳು ಚಿತ್ರರಂಗಗಳಲ್ಲಿ ಮಿಂಚಿದ್ದ ಕಾರು (ಟ್ಯಾಕ್ಸಿ). ಹೆಸರಾಂತ ಫಿಯಟ್ ಸಹಯೋಗದಲ್ಲಿ ಪ್ರೀಮಿಯರ್ ಆಟೋಮೊಬೈಲ್ ಲಿಮಿಟೆಟ್ (PAL) ಈ ಕಾರನ್ನು ಹೊರತಂದಿತ್ತು. ಲಕ್ಷ್ಮೀ ದೇವಿಯ ಸಂಕೇತವೂ ಆಗಿರುವ ಹೆಸರು ಪದ್ಮನಿ, ಅಲ್ಲದೆ, 14ನೇ ಶತಮಾನದ ರಜಪೂತ ರಾಜಕುಮಾರಿಯಾಗಿದ್ದ ಪದ್ಮಿನಿ ಹೆಸರನ್ನು ಇದಕ್ಕೆ ಇಡಲಾಗಿದೆ ಎಂದೂ ಹೇಳಲಾಗುತ್ತದೆ. 

1964ರಲ್ಲಿ ಫಿಯಟ್ ಕಂಪನಿಯು ಫಿಯಟ್ 1100 ಎನ್ನುವ ಕಾರನ್ನು ಪರಿಚಯಿಸಿತ್ತು. ಬಳಿಕ ಇದನ್ನೇ 1973-74ರಲ್ಲಿ ಅಲ್ಪ ಬದಲಾವಣೆಯೊಂದಿಗೆ ಇದನ್ನು ಮರುನಾಮಕರಣ ಮಾಡಿ ಪ್ರೀಮಿಯರ್ ಪದ್ಮಿನಿ ಎಂಬ ಹೆಸರಿನಲ್ಲಿ ರಸ್ತೆಗಿಳಿಸಲಾಯಿತು.

ಗಂಟೆಗೆ 125 ಕಿ.ಮೀ. ಸಾಮರ್ಥ್ಯ
ತಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟ ಪದ್ಮಿನಿ, ರಸ್ತೆಗಿಳಿಯುತ್ತಿದ್ದಂತೆ ತನ್ನ ವರಸೆ ತೋರಿಸಲಾರಂಭಿಸಿತು. ಆಗ 1089 ಸಿಸಿ ಫೋರ್ ಸಿಲಿಂಡರ್ ಎಂಜಿನ್ ಹೊಂದಿದ್ದ ಇದು 71 ಎನ್‌ಎಂ ಟಾರ್ಕ್ (42 ಅಶ್ವಶಕ್ತಿ) ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿತ್ತು. ಇದರಿಂದಲೇ ಗಂಟೆಗೆ 125 ಕಿ.ಮೀ. ವೇಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿತ್ತು. 

ಎಸಿ, ಬಣ್ಣದ ಗ್ಲಾಸುಗಳು
70ರ ದಶಕದಲ್ಲೇ ಎಸಿ, ಟಿಂಟೆಡ್ ಗ್ಲಾಸ್ ಗಳನ್ನು ಹೊಂದಿದ್ದ ಪ್ರೀಮಿಯರ್ ಪದ್ಮಿನಿಯನ್ನು ಕಂಡರೆ ಬಾಲಿವುಡ್ ನಟ-ನಟಿಯರು ಸೇರಿದಂತೆ ಯುವಸಮೂಹಕ್ಕೆ ಬಹಳ ಕ್ರೇಜ್ ಇತ್ತು. ಅಲ್ಲದೆ, ಐಷಾರಾಮಿತನಕ್ಕೂ ಏನು ಕಡಿಮೆ ಇರಲಿಲ್ಲ. 1996ರಲ್ಲಿ ಮೊದಲ ಬಾರಿಗೆ ಡೀಸೆಲ್ ವಾಹನವನ್ನೂ ಪರಿಚಯಿಸಲಾಯಿತು. ಅಲ್ಲಿಯವರೆಗೂ ಪೆಟ್ರೋಲ್ ವಾಹನವಷ್ಟೇ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಮೇಂಟೇನೆನ್ಸ್ (ಡೀಸೆಲ್ ಹಿನ್ನೆಲೆ ಕಡಿಮೆ ಖರ್ಚು) ದೃಷ್ಟಿಯಿಂದ ಇದಕ್ಕೂ ಭಾರಿ ಬೇಡಿಕೆ ಬಂದಿತ್ತು. 

ಇದನ್ನು ಓದಿ: ಲಾಕ್‌ಡೌನ್ ಮುಗಿದರೆ ವಿಮಾನಯಾನದಲ್ಲೂ ಸೋಷಿಯಲ್ ಡಿಸ್ಟೆನ್ಸ್; ಇಲ್ಲಿದೆ ಸೂತ್ರ!

ಬ್ರೇಕ್ ಹಾಕಿದ ಮಾರುತಿ 
1970ರಿಂದ ಸರಿಸುಮಾರು 20 ವರ್ಷಗಳ ಕಾಲ ಯಾರೂ ಹತ್ತಿರಕ್ಕೆ ಬರದಷ್ಟು ಗತ್ತನ್ನು ಮೇಂಟೇನ್ ಮಾಡಿಕೊಂಡಿದ್ದ ಪದ್ಮನಿಗೆ ನಿಜವಾಗಿಯೂ ಎದುರಾಳಿಯಾಗಿ ಬಂದಿದ್ದು, ಮಾರುತಿ 800 ಎಂದೇ ಹೇಳಬಹುದು. 1980ರ ದಶಕದಲ್ಲಿ ರಸ್ತೆಗಳಿದ ಮಾರುತಿ ನೋಡಲು ಸಣ್ಣಗೆ ಹಾಗೂ ಆಕರ್ಷಕವಾಗಿತ್ತು. ಅಲ್ಲದೆ, ಅಗ್ಗದ ಬೆಲೆಯಲ್ಲೂ ಲಭ್ಯವಾಗುತ್ತಿದ್ದ ಹಿನ್ನೆಲೆ ಗ್ರಾಹಕರಿಗೆ ಪದ್ಮನಿ ಮೇಲಿನ ವ್ಯಾಮೋಹ ನಿಧಾನಕ್ಕೆ ಕಡಿಮೆಯಾಗುತ್ತಾ ಬಂದಿತು. ಅಲ್ಲದೆ, 1991ರ ಬಳಿಕ ಭಾರತದಲ್ಲಿ ಆರ್ಥಿಕ ಉದಾರೀಕರಣ ಆದ ಮೇಲಂತೂ ಹೆಸರಾಂತ ವಿದೇಶೀ ಕಾರು ಉತ್ಪಾದಕ ಕಂಪನಿಗಳು ಭಾರತದ ಮಾರುಕಟ್ಟೆ ಪ್ರವೇಶಿಸಿ ದೇಶೀಯ ಮಾರುಕಟ್ಟೆಗೆ ಭಾರಿ ಪೆಟ್ಟು ಕೊಟ್ಟಿತು. ಪದ್ಮನಿ ಸಹ ಆ ಸಮಯದ ಒಂದು ಫಲಾನುಭವಿ. 

ಜುಲೈ ಕೊನೆಯ “ಡೆಡ್”ಲೈನ್
ಪೈಪೋಟಿ ಎದುರಿಸಲಾಗದೇ ತತ್ತರಿಸಿದ್ದ ಪದ್ಮಿನಿಯನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ಪ್ರಯತ್ನವಾಗಿ ಎರಡು ನಿಸ್ಸಾನ್ ಎಂಜಿನ್ (ಪೆಟ್ರೋಲ್-ಡೀಸೆಲ್), ಫ್ಲೋರ್ ಮೌಂಟೆಡ್ ಗೇರ್ ಶಿಫ್ಟ್ ಮತ್ತು ಬಕೆಟ್ ಸೀಟುಗಳೊಂದಿಗೆ ಅಪ್ ಗ್ರೇಡ್ ಮಾಡಿ, ನೂತನ ರೂಪದಲ್ಲಿ ಹೊರತರಲಾಯಿತಾದರೂ ಬೇಡಿಕೆ ಕಡಿಮೆಯಾದ ಪರಿಣಾಮ 2000ನೇ ಇಸ್ವಿಯಲ್ಲಿ ಉತ್ಪಾದನೆಯನ್ನೇ ಸ್ಥಗಿತಗೊಳಿಸಲಾಯಿತು. ಈಗ ಮುಂಬೈನಲ್ಲಿ ಟ್ಯಾಕ್ಸಿ ಕ್ಯಾಬ್‌ಗಳಾಗಿ ಓಡಾಡುತ್ತಿರುವ ಪದ್ಮಿನಿಯ ನೋಂದಣಿಯ ಅವಧಿಯಲ್ಲದೆ, ಅದರ ವಿಸ್ತರಣಾ ಅವಧಿಯೂ ಮುಗಿದುಹೋಗಿದೆ.

ಇದನ್ನು ಓದಿ: ಫೋಟೋ ನೋಡಿ ಕಾರು ರಿಪೇರಿ, ಇದೊಂಥರ ಡಿಜಿಟಲ್ ಮಾರ್ಕೆಟಿಂಗ್!

ಅಲ್ಲದೆ, 2013ರಲ್ಲಿ ಮಾಲಿನ್ಯ ನಿಯಂತ್ರಣಕ್ಕೋಸ್ಕರ 20 ವರ್ಷಕ್ಕಿಂತ ಹಳೆಯ ವಾಹನಗಳನ್ನು ಸ್ಕ್ರ್ಯಾಪ್‌ಗೆ ಸೇರಿಸುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ನಿಟ್ಟಿನಲ್ಲಿ ಪದ್ಮಿನಿಗೆ ಹಲವು ಅವಕಾಶಗಳನ್ನು ಕೊಟ್ಟು ಕೊನೆಯದಾಗಿ 2020ರ ಜೂನ್‌ಗೆ ಅಂತಿಮ ಗಡುವು ನೀಡಲಾಗಿದೆ. ಕಾರಣ, ಮುಂಬೈನಲ್ಲಿ ಸುಮಾರು 3 ಸಾವಿರ ಟ್ಯಾಕ್ಸಿಗಳಿದ್ದವು, ಕೊನೆಗೆ ಅದು 50ಕ್ಕೆ ಬಂದಿಳಿದಿತ್ತು.  ಚಾಲಕರ ಹಾಗೂ ಮಾಲೀಕರ ಹಿತದೃಷ್ಟಿಯಿಂದ ಬೇಗ ಪರ್ಯಾಯ ವಾಹನಗಳು ಇಲ್ಲವೇ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸೂಚಿಸಿ ವಿಸ್ತರಣೆ ಮಾಡಲಾಗಿತ್ತು. ಆದರೆ, ಈಗ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಇನ್ನೂ ಅಲ್ಪ ಅವಧಿ ವಿಸ್ತರಣೆಯಾಗಲಿದೆಯೇ? ಅಥವಾ ಇಲ್ಲಿಗೇ ಯುಗಾಂತ್ಯವಾಗಲಿದೆಯೇ ಎಂಬುದೇ ಸದ್ಯದ ಕುತೂಹಲವಾಗಿದೆ.