ಈ ರೆಕ್ಕೆ-ಪುಕ್ಕಗಳಿಲ್ಲದ ಕೊರೋನಾ ಹಾರಾಟದಿಂದ ರೆಕ್ಕೆ ಇದ್ದರೂ ಹಾರಲಾಗದೆ ವಿಮಾನಗಳು ನಿಷ್ಕ್ರಿಯ ಸ್ಥಿತಿಯನ್ನು ತಲುಪಿವೆ. ಇದು ವಿಮಾನಯಾನ ಸಂಸ್ಥೆಗಳನ್ನು ಸಂಕಷ್ಟಕ್ಕೆ ದೂಡಿದೆ. ಲಾಕ್‌ಡೌನ್ ಮುಗಿದ ಮೇಲೆ ಏನು ಎಂಬುದು ಪ್ರಶ್ನೆಯಾಗಿದೆ. ಬಹುಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದು ವಿಮಾನಗಳಲ್ಲೇ ವರ್ಕೌಟ್ ಆಗುತ್ತದೆಯೇ? ಇದಕ್ಕೇನು ಪರಿಹಾರ ಎಂಬುದೇ ಈಗಿರುವ ಸಮಸ್ಯೆ. ಈಗ ಅದಕ್ಕೊಂದು ಉತ್ತರ ಸಿಕ್ಕಿದೆ. ಆದರೆ, ಅನುಷ್ಠಾನಕ್ಕೆ ಒಪ್ಪಿಗೆ ಬೇಕಿದೆ.

ಈಗ ಏ.3ರವರೆಗೆ ಲಾಕ್‌ಡೌನ್ ಇದೆ. ಹಾಗಾದರೆ ಆಗಲಾದರೂ ಈ ದಿಗ್ಬಂಧನ ಮುಗಿಯಲಿದೆಯೇ? ಮುಗಿದರೂ ವಿಮಾನ ಹಾರಾಟಕ್ಕೆ ಅನುಮತಿ ಸಿಗಲಿದೆಯೇ? ಗೊತ್ತಿಲ್ಲ. ಒಂದು ವೇಳೆ ಅನುಮತಿ ಕೊಟ್ಟರೂ ಷರತ್ತುಗಳು ಅನ್ವಯ ಆಗುತ್ತವೆ. ಮುಖ್ಯವಾಗಿ ಸೋಷಿಯಲ್ ಡಿಸ್ಟೆನ್ಸ್ (ಸಾಮಾಜಿಕ ಅಂತರ) ಕಾಯ್ದುಕೊಳ್ಳುವುದು ಹೇಗೆ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈಗ ಇದಕ್ಕೆ ಪರಿಹಾರದ ರೂಪುರೇಷೆಯೊಂದು ಸಿದ್ಧಗೊಂಡಿದೆ. ಪ್ರೊಟೆಕ್ಟೀವ್ ಗ್ಲಾಸ್ ಶೀಲ್ಡ್ ಬಳಸಿ ಅಲ್ಪಮಟ್ಟಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದಾಗಿದೆ. ಆದರೆ, ಇದಕ್ಕೆ ಒಪ್ಪಿಗೆ ದೊರೆಯಬೇಕಷ್ಟೇ. 

ಇದನ್ನೂ ಓದಿ: CVT ಎಂಬ ಅಟೋಮ್ಯಾಟಿಕ್ ಲೋಕದಲ್ಲಿ ಬೆಸ್ಟ್ ರೈಡಿಂಗ್ ಮಾಡಿ!

ಪೇಟೆಂಟ್ ಆಗಿದೆ
ಪ್ರೊಟೆಕ್ಟೀವ್ ಗ್ಲಾಸ್ ಶೀಲ್ಡ್ ಮಾದರಿ ಹೇಗಿರಬೇಕು, ಹೇಗಿರುತ್ತದೆ ಎಂದು ಈಗಾಗಲೇ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಗ್ಲಾಸೇಫ್ (Glassafe) ಎಂದು ಹೆಸರಿಡಲಾಗಿದೆ. ಇಟಲಿ ಮೂಲದ ಏವಿಯೋಇಂಟೀರಿಯರ್ಸ್ ಕಂಪನಿ ಈ ನೂತನ ವಿನ್ಯಾಸದ ಪೇಟೆಂಟ್ ಪಡೆದುಕೊಂಡಿದ್ದು, ಅನುಮತಿಗಾಗಿ ಕಾಯುತ್ತಿದೆ. 

ಡಿಸ್ಟೆನ್ಸ್ ಸ್ವಲ್ಪ ಕಷ್ಟಾನೆ..!
ಹೌದು. ವಿಮಾನಯಾನ ಎಂದರೆ ಮೊದಲೇ ದುಬಾರಿ. ಆದರೂ ಇಲ್ಲಿ ಪೈಪೋಟಿ ಇರುವ ಕಾರಣ ಕೆಲವೊಂದು ಆಫರ್‌ಗಳನ್ನು ನೀಡುವ ಮೂಲಕ ರಿಯಾಯಿತಿಗಳನ್ನು ನೀಡಲಾಗುತ್ತಿರುತ್ತದೆ. ಆದರೆ, ಈಗ ಸೋಷಿಯಲ್ ಡಿಸ್ಟೆನ್ಸ್ ಹೆಸರಲ್ಲಿ ಪಕ್ಕದ ಆಸನಗಳನ್ನು ಖಾಲಿ ಬಿಟ್ಟು ಶೇ. 40ರಷ್ಟೋ ಇಲ್ಲವೇ ಶೇ. 50ರಷ್ಟೋ ಖಾಲಿ ಬಿಟ್ಟು ವಿಮಾನ ಓಡಿಸಿದರೆ ಲಾಭ ಇರಲಿ ಅದರ ಇಂಧನ ಖರ್ಚೂ ಹುಟ್ಟುವುದಿಲ್ಲ. ಹೀಗಾಗಿ ಇದಕ್ಕೆ ಬೇರೆಯದ್ದೇ ಉಪಾಯವನ್ನು ಕಂಡುಹಿಡಿಯಬೇಕಿತ್ತು. ಈಗ ಅದರ ಸರದಿ ಬಂದಿದೆ. 

ಇದನ್ನೂ ಓದಿ: ಎಚ್ಚರ ತಪ್ಪಿದ್ರೆ ಹುಷಾರ್, ಸ್ವಲ್ಪ ಯಾಮಾರಿದ್ರೂ ಕೀ-ಲೆಸ್ ಹೋಗಿ ಕಾರ್ ಲೆಸ್ ಆಗ್ತೀರಾ!

ಹೇಗಿರಲಿದೆ ವಿನ್ಯಾಸ?
ಇದು ಮೂರೂ ಇಲ್ಲವೇ ಎರಡು (ಅಲ್ಲಿರುವ ಆಸನ ವ್ಯವಸ್ಥೆಗಳಿಗೆ ತಕ್ಕಂತೆ) ಇದು ಪ್ರತಿ ಆಸನದ ಮೇಲ್ಭಾಗ ಹಾಗೂ ಆಸನದ ಪಕ್ಕದ ಭಾಗದಲ್ಲಿ ಅಲ್ಪ ಎತ್ತರಕ್ಕೆ ಇರುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ಪಕ್ಕದ ಆಸನದಲ್ಲಿರುವ ವ್ಯಕ್ತಿಯ ನೇರ ಸಂಪರ್ಕ ಸಾಧ್ಯವಾಗುವುದಿಲ್ಲ. ಜೊತೆಗೆ, ಅವರ ಉಸಿರಾಟ ಇಲ್ಲವೇ ಸೀನುವಿಕೆ, ಕೆಮ್ಮುವಿಕೆಯಿಂದ ಹೊರಬರುವ ವೈರಾಣು ತಕ್ಷಣಕ್ಕೆ ಸೋಕುವುದಿಲ್ಲ. ಇದರಿಂದ ತಕ್ಷಣ ರೋಗ ಹರಡುವಿಕೆಯನ್ನು ತಪ್ಪಿಸಬಹುದಾಗಿದೆ. 

ಮತ್ತಿಲ್ಲಿ ಪ್ರಯಾಣಿಕರು ಆಸನದಲ್ಲಿ ಆರಾಮಾಗಿ ಕುಳಿತುಕೊಳ್ಳಲು ಅನುಕೂಲವಾಗುವಂತೆಯೇ ವಿನ್ಯಾಸ ಮಾಡಲಾಗಿದೆ. ಅಂದರೆ ಸೀಟ್ ಪಾಕೆಟ್, ಐಎಫ್ಇ ಮತ್ತು ಟ್ರೇ ಟೇಬಲ್‌ಗಳನ್ನು ಬಳಸಲು ಇಲ್ಲಿ ಅವಕಾಶ ಇದೆ. ಹೀಗಾಗಿ ಈಗ ಕಂಪನಿಯು ಆಯಾ ವಿಮಾನಯಾನ ಸಂಸ್ಥೆಗಳ ಅನುಕೂಲ ಹಾಗೂ ಬೇಡಿಕೆಗೆ ತಕ್ಕಂತೆ ವಿನ್ಯಾಸ ಮಾಡಿಕೊಡಲು ಸಿದ್ಧವಾಗಿದೆ.

ಇದನ್ನೂ ಓದಿ: ಫೋಟೋ ನೋಡಿ ಕಾರು ರಿಪೇರಿ, ಇದೊಂಥರ ಡಿಜಿಟಲ್ ಮಾರ್ಕೆಟಿಂಗ್!

ಸಿಗುತ್ತಾ ಒಪ್ಪಿಗೆ?
ಈಗ ವಿನ್ಯಾಸದಿಂದ ಹಿಡಿದು ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಏವಿಯೋಇಂಟೀರಿಯರ್ಸ್ ಕಂಪನಿಯ ಗ್ಲಾಸೇಫ್ ಉತ್ಪನ್ನವು ಈಗಿನ ಹಾಲಿ ಸಂದರ್ಭಕ್ಕೆ ಇಡಿ ವಿಶ್ವಕ್ಕೆ ಬಹಳವಾಗಿಯೇ ಅನುಕೂಲಕ್ಕೆ ಬರುತ್ತದೆ. ಆದರೆ, ಇದಕ್ಕೆ ಆಯಾ ಸರ್ಕಾರಗಳು ಒಪ್ಪಿಗೆ ಕೊಡಬೇಕಷ್ಟೇ. ಇನ್ನು ಒಪ್ಪಿಗೆ ಸಿಕ್ಕರೂ ಇದನ್ನು ವಿನ್ಯಾಸಗೊಳಿಸಿ ಅಳವಡಿಸಲು ಕನಿಷ್ಠ ಒಂದೆರಡು ತಿಂಗಳಾದರೂ ಬೇಕು. ಅಲ್ಲಿಯವರೆಗೆ ವಿಮಾನ ಹಾರಟಕ್ಕೆ ಅನುಮತಿ ಕೊಟ್ಟರೆ ಯಾವ ಷರತ್ತುಗಳು ಇರಲಿವೆ ಎಂಬುದು ಸದ್ಯದ ಕುತೂಹಲವಾಗಿದೆ.