ಈಗ ಜಗತ್ತನ್ನೇ ಕಾಡುತ್ತಿರುವ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡಿರುವ, ಲಕ್ಷಾಂತರ ಮಂದಿಗೆ ಸೋಂಕು ತಗುಲಿ ಕಾಡುತ್ತಿರುವ, ಇನ್ನಷ್ಟು ಮಂದಿಗೆ ಎಲ್ಲಿ ತಗುಲಿಹಾಕಿಕೊಳ್ಳುತ್ತೋ ಎಂಬ ಭಯವನ್ನು ಹುಟ್ಟುಹಾಕಿರುವ ಕೊರೋನಾ ಇನ್ನೂ ಹೇಗೆ ಬಂತು? ಯಾರಿಂದ ಬಂತು ಎಂಬುದು ಗೊತ್ತಾಗಿಲ್ಲ. ಆದರೆ, ಅದರ ಪರಿಣಾಮ ಮಾತ್ರ ಸಾಕಷ್ಟು ಇತಿಹಾಸವನ್ನು (ಹಿಸ್ಟರಿ) ಹುಟ್ಟುಹಾಕಿದೆ. ಇದು ಜಗತ್ತಿನ ಅತಿ ಅವಶ್ಯಕದಲ್ಲಿ ಒಂದೆನಿಸಿಕೊಂಡ ಕಾರು ವಹಿವಾಟನ್ನೂ ಬಿಟ್ಟಿಲ್ಲ. ಆದರೆ, ಕಾರು ಉತ್ಪಾದನಾ ಕಂಪನಿಗಳು ಪುನಃ ಪುಟಿದೇಳುವ ಆತ್ಮವಿಶ್ವಾಸದಲ್ಲಿವೆ.

ಲಾಕ್‌ಡೌನ್ ಈಗ ಮೂರನೇ ವಿಸ್ತರಣೆಯನ್ನು ಕಂಡಿದ್ದು, ಮೇ 17ರವರೆಗೆ ಮುಂದುವರಿಯಲಿದೆ. ಮುಂದಿನ ಪರಿಸ್ಥಿತಿಯನ್ನು ನೋಡಿಕೊಂಡು ಮತ್ತೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಹೀಗಾಗಿ ಈ ಮೇ ತಿಂಗಳೂ ಸಹ ವಹಿವಾಟು ಆಗಬಹುದು ಇಲ್ಲವೇ ಆಗದೇ ಹಿಂದಿನ ಏಪ್ರಿಲ್‌ನಂತೆ ಶೂನ್ಯ ಸಾಧನೆಯನ್ನೂ ಮಾಡಬಹುದು. ಆದರೆ, ಒಂದು ಬಾರಿ ಲಾಕ್‌ಡೌನ್ ಮುಗಿದು ಜನಜೀವನ ಸಹಜವಾಗಿ ಸಂಚರಿಸಬಹುದು ಎಂದು ಆದೇಶವಾದರೆ, ಜನ ಸಾರ್ವಜನಿಕ ಸಂಚಾರ ವ್ಯವಸ್ಥೆಗಿಂತ ಸ್ವಂತ ವಾಹನಗಳತ್ತ ಹೆಚ್ಚು ಒಲವು ತೋರುತ್ತಾರೆಂಬುದು ಈಗ ಕಾರು ಉತ್ಪಾದನಾ ಕಂಪನಿಗಳು ಹಾಗೂ ವಿಶ್ಲೇಷಕರ ವಾದ.

ಇದನ್ನೂ ಓದಿ: ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು!

ಕಾರಣ ಪಬ್ಲಿಕ್ ಟ್ರಾನ್ಸ್‌ಪೋರ್ಟೇಶನ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸ್ವಲ್ಪ ಕಷ್ಟವೇ. ಹೇಗೂ ಈ ಕೊರೋನಾ ವೈರಾಣು ಇನ್ನೂ ಒಂದು ವರ್ಷ ಮುಂದುವರಿಯಲಿದೆ ಎಂದೇ ಅಂದಾಜಿಸಲಾಗಿರುವುದರಿಂದ ಜನ ಸಣ್ಣ ಕಾರಾದರೂ ಸರಿಯೇ, ಅದರಲ್ಲಿ ಸಂಚರಿಸುವುದೇ ಬೆಸ್ಟ್ ಎಂಬ ತೀರ್ಮಾನಕ್ಕೆ ಬರಲಿದ್ದಾರೆ. ಹೀಗಾಗಿ ಕಾರು ಕೊಳ್ಳುವಿಕೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

ಒಂದೇ ಒಂದು ಕಾರು ಸೇಲ್ ಆಗಿಲ್ಲ
ಈಗಾಗಲೇ ಉತ್ಪಾದನೆಯಾಗಿ ಮಾರಾಟಕ್ಕಾಗಿ ಡೀಲರ್‌ಗಳಿಗೆ ಕಾರನ್ನು ತಲುಪಿಸಬೇಕು ಎಂದು ಸಿದ್ಧತೆ ಮಾಡಿಕೊಂಡಿದ್ದ ಭಾರತದ ಟಾಪ್ ಕಾರು ಉತ್ಪಾದಕ ಕಂಪನಿಗಳಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಒಂದೇ ಒಂದು ಕಾರನ್ನು ತಲುಪಿಸಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಆಗಲೇ ಶೋರೂಂಗಳಲ್ಲಿ ಕಾರುಗಳಿದ್ದರೂ ಕೊಳ್ಳಲು ಯಾರೂ ಬರುತ್ತಿಲ್ಲ ಮತ್ತು ಅಂಗಡಿಗಳನ್ನು ಶೋರೂಂಗಳನ್ನು ತೆರೆಯಲು ಅವಕಾಶವಿಲ್ಲ. 

ಏನಾಗಿವೆ ಕಾರು ಕಂಪನಿಗಳ ಸ್ಥಿತಿ?
ಮಾರುತಿ ಸುಜುಕಿ ಇಂಡಿಯಾ ಲಿ. ಒಮ್ಮೆ ಉತ್ಪಾದನೆ ಮಾಡಿತೆಂದರೆ ಆ ತಿಂಗಳು ಅದರ ಉತ್ಪಾದನೆಯ ಅರ್ಧದಷ್ಟು ಕಾರುಗಳು ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿದ್ದವು. ಅಷ್ಟರ ಮಟ್ಟಿಗೆ ಅದರ ಮಾರ್ಕೆಟಿಂಗ್ ಹಾಗೂ ಖರೀದಿ ಇತ್ತು. 

ಇದನ್ನೂ ಓದಿ: ಲಾಕ್‌ಡೌನ್ ಸಂಕಷ್ಟ; ಗ್ರಾಹಕರಿಗೆ ವಾರಂಟಿ ವಿಸ್ತರಣೆ ಸೇರಿ ಹಲವು ಸೌಲಭ್ಯ ಘೋಷಿಸಿದ ಟಾಟಾ ಮೋಟಾರ್ಸ್!

ದೇಶದ ಅತಿದೊಡ್ಡ ಎಸ್‌ಯುವಿ ಕಾರು ಉತ್ಪಾದಕ ಕಂಪನಿಗಳಲ್ಲೊಂದಾದ ಮಹೀಂದ್ರ ಆಂಡ್ ಮಹೀಂದ್ರ ಲಿ. ದೇಶೀ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಯಾವುದೇ ಒಂದು ಕಾರನ್ನೂ ಮಾರಾಟ ಮಾಡಲು ಶಕ್ತವಾಗಿಲ್ಲ ಎಂಬ ಅಂಶವನ್ನು ಸ್ವತಃ ಕಂಪನಿ ಹೇಳಿಕೊಂಡಿದೆ. ಇನ್ನು ಮತ್ತೊಂದು ಪ್ರಮುಖ ಕಾರು ಕಂಪನಿಯಾದ ಹುಂಡೈ ಮೋಟಾರ್ಸ್ ಇಂಡಿಯಾ ಲಿ. ಗೂ ಸಹ ಏಪ್ರಿಲ್ ತಿಂಗಳಲ್ಲಿ ಕಾರನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. 

ಮಾರುತಿ ಲೆಕ್ಕಾಚಾರ ಉಲ್ಟಾ
ಗಮನಾರ್ಹ ಅಂಶವೆಂದರೆ ಮಾರುತಿ ಕಂಪನಿಯು ಲಾಕ್‌ಡೌನ್ ಆಗುವ ತಿಂಗಳಾದ ಹಾಗೂ ಹಣಕಾಸು ವರ್ಷದ ಅಂತ್ಯವಾದ ಮಾರ್ಚ್‌ನಲ್ಲಿ ಬರೋಬ್ಬರಿ 1,20,000ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಆದರೆ, ಲಾಕ್‌ಡೌನ್ ಬಂದು ಎಲ್ಲ ಅಂದಾಜುಗಳನ್ನು ತಲೆಕೆಳಗು ಮಾಡಿದೆ. 

ಮೇ ತಿಂಗಳಲ್ಲೂ ಇದೇ ಪರಿಸ್ಥಿತಿ?
ಈಗ ಲಾಕ್‌ಡೌನ್ ಮೇ 17ರವರೆಗೆ ವಿಸ್ತರಣೆಯಾಗಿದೆ. ಆದರೆ, ಕೈಗಾರಿಕೆಗಳಿಗೆ ಷರತ್ತುಬದ್ಧ ಅನುಮತಿಯನ್ನು ಕೊಡಲಾಗಿದೆ. ಇಲ್ಲಿ ಕಾರ್ಮಿಕರು/ನೌಕರರನ್ನು ಶೇಕಡಾವಾರು ಆಧಾರದ ಮೇಲೆ ಕರೆಸಿಕೊಳ್ಳುವ ಬಗ್ಗೆ ನಿಯಮವನ್ನು ರೂಪಿಸಿರುವುದರಿಂದ ಅಲ್ಪ ನೌಕರರಿಂದ ಉತ್ಪನ್ನ ತಯಾರಿಕೆ ಸಾಧ್ಯವಾಗುತ್ತದೆಯೇ ಎಂಬುದೂ ಸಹ ಕಾರು ಉತ್ಪಾದಕ ಕಂಪನಿಗಳ ಪ್ರಶ್ನೆಯಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮೇ ತಿಂಗಳಿನಲ್ಲೂ ಕಾರುಗಳ ಉತ್ಪನ್ನ ಹಾಗೂ ಮಾರಾಟಗಳ ಪರಿಸ್ಥಿತಿ ಯಾವ ರೀತಿಯಾಗಲಿದೆ ಎಂಬುದು ತಿಳಿಯದಾಗಿದೆ ಎನ್ನುವುದು ಕಂಪನಿಗಳ ಅಂಬೋಣ. 

ಇದನ್ನೂ ಓದಿ: ಲಾಕ್‌ಡೌನ್ ಮುಗಿದರೆ ವಿಮಾನಯಾನದಲ್ಲೂ ಸೋಷಿಯಲ್ ಡಿಸ್ಟೆನ್ಸ್; ಇಲ್ಲಿದೆ ಸೂತ್ರ!

ಸ್ಥಳೀಯ ಮಾರುಕಟ್ಟೆಗೆ ಭಾರಿ ಪೆಟ್ಟು
ಒಟ್ಟಾರೆಯಾಗಿ ಸ್ಥಳೀಯ ಕಾರು ಉತ್ಪಾದಕರಿಗೆ ಲಾಕ್‌ಡೌನ್ ಭಾರಿ ಪೆಟ್ಟುಕೊಟ್ಟಿದೆ. ಪ್ರತಿ ಮಾರ್ಚ್‌ನೊಳಗೆ ಎಸ್‌ಯುವಿ ಮತ್ತು ವ್ಯಾನ್‌ಗಳು ಸೇರಿದಂತೆ ಪ್ರತಿ ತಿಂಗಳಿಗೆ ಸರಾಸರಿ 2.8 ಮಿಲಿಯನ್ ಕಾರುಗಳನ್ನು ಮಾರಾಟ ಮಾರುತ್ತಿದ್ದವು. ಆದರೆ, ಈಗ ಪುನಃ ತನ್ನ ಸಾಮ್ರಾಜ್ಯವನ್ನು ಕಟ್ಟಿಕೊಳ್ಳಬೇಕಿದೆ. ಇಲ್ಲಿ ಬಹುಮುಖ್ಯವಾಗಿ ಮಾರಾಟ ಮಾಡಲು ಕಂಪನಿಗಳು ಸಿದ್ಧವಿದ್ದರೂ ಕೊಳ್ಳಲು ಗ್ರಾಹಕರು ಶಕ್ತರಿರಬೇಕು ಎಂಬುದು ಅಷ್ಟೇ ಸತ್ಯ.