ಎಂಜಿ ಮೋಟಾರ್ ತನ್ನ ಹೊಸ ಫುಲ್-ಸೈಜ್ ಎಸ್‌ಯುವಿ 'ಮೆಜೆಸ್ಟರ್' ಅನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಕಂಪನಿಯು ವಿಶೇಷ '5-5-5' ಮಾಲೀಕತ್ವದ ಪ್ರೋಗ್ರಾಂ ಅನ್ನು ಘೋಷಿಸಿದ್ದು, ಇದು 5 ವರ್ಷಗಳ ವಾರಂಟಿ, ರೋಡ್‌ಸೈಡ್ ಅಸಿಸ್ಟೆನ್ಸ್ ಮತ್ತು ಉಚಿತ ಸರ್ವಿಸ್ ಲೇಬರ್ ಚಾರ್ಜ್‌ಗಳನ್ನು ಒಳಗೊಂಡಿದೆ. 

ನವದೆಹಲಿ (ಮಾ.10): ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಫುಲ್-ಸೈಜ್ ಎಸ್‌ಯುವಿ (SUV) ವಿಭಾಗದಲ್ಲಿ ಭಾರಿ ಸಂಚಲನ ಸೃಷ್ಟಿಸಲು ಎಂಜಿ ಮೋಟಾರ್ ಸಜ್ಜಾಗಿದೆ. ತನ್ನ ಬಹುನಿರೀಕ್ಷಿತ 'ಮೆಜೆಸ್ಟರ್' (MG Majestor) ಮಾದರಿಯ ಬೆಲೆ ಘೋಷಣೆಗೂ ಮುನ್ನವೇ ಕಂಪನಿಯು ಗ್ರಾಹಕರಿಗಾಗಿ ವಿಶೇಷ '5-5-5' ಮಾಲೀಕತ್ವದ ಪ್ರೋಗ್ರಾಂ ಅನ್ನು ಘೋಷಿಸಿದೆ. ದೇಶದ ಮೊದಲ 'ಡಿ ಪ್ಲಸ್' (D+) ಸೆಗ್ಮೆಂಟ್ ಎಸ್‌ಯುವಿ ಎಂದು ಕರೆಸಿಕೊಳ್ಳುತ್ತಿರುವ ಎಂಜಿ ಮೆಜೆಸ್ಟರ್ ಅನ್ನು ಕೇವಲ ₹41,000 ಟೋಕನ್ ಮೊತ್ತ ನೀಡಿ ಮುಂಗಡವಾಗಿ ಕಾಯ್ದಿರಿಸಬಹುದು. ಈ ಕಾರಿನ ವಿತರಣೆಯು ಮೇ 2026 ರಿಂದ ಪ್ರಾರಂಭವಾಗಲಿದೆ.

ಗ್ರಾಹಕರಿಗೆ ನಿಶ್ಚಿಂತೆಯ '5-5-5' ಪ್ಯಾಕೇಜ್!

ವಾಹನ ಖರೀದಿಸಿದ ನಂತರದ ನಿರ್ವಹಣಾ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಪ್ಯಾಕೇಜ್ ಅಡಿಯಲ್ಲಿ ಕಂಪನಿಯು ಈ ಕೆಳಗಿನ ಸೌಲಭ್ಯಗಳನ್ನು ನೀಡುತ್ತಿದೆ. 5 ವರ್ಷಗಳ ಅನ್‌ಲಿಮಿಟೆಡ್ ವಾರಂಟಿ ಈ ಕಾರ್‌ನೊಂದಿಗೆ ಸಿಗಲಿದೆ. ಅಂದರೆ, ಕಿಲೋಮೀಟರ್ ಮಿತಿಯಿಲ್ಲದೆ 5 ವರ್ಷಗಳವರೆಗೆ ವಾರಂಟಿ ಸಿಗಲಿದೆ. 5 ವರ್ಷಗಳ ರೋಡ್‌ಸೈಡ್ ಅಸಿಸ್ಟೆನ್ಸ್ ಅಂದರೆ ದೇಶದ ಯಾವುದೇ ಮೂಲೆಯಲ್ಲಿ ವಾಹನ ಕೈಕೊಟ್ಟರೂ 5 ವರ್ಷಗಳ ಕಾಲ ಉಚಿತ ಸಹಾಯ ಲಭ್ಯವಾಗಲಿದೆ. ಮೊದಲ ಐದು ಸರ್ವಿಸ್‌ಗಳಿಗೆ ಯಾವುದೇ ಲೇಬರ್ ಚಾರ್ಜ್‌ (Labor Charges) ನೀಡುವಂತಿಲ್ಲ ಎಂದು ಕಂಪನಿ ತಿಳಿಸಿದೆ.

ದೈತ್ಯ ನೋಟ ಮತ್ತು ಹೈಟೆಕ್ ಫೀಚರ್ಸ್‌

ಎಂಜಿ ಮೆಜೆಸ್ಟರ್ ಭಾರತದ ಅತ್ಯಂತ ಉದ್ದವಾದ ಮತ್ತು ಅಗಲವಾದ ಎಸ್‌ಯುವಿಗಳಲ್ಲಿ ಒಂದಾಗಿದೆ. ಮ್ಯಾಟ್ರಿಕ್ಸ್ ಗ್ರಿಲ್, ಪಿಯಾನೋ ಬ್ಲಾಕ್ ಫಿನಿಶ್, ವರ್ಟಿಕಲ್ ಎಲ್ಇಡಿ ಡಿಆರ್‌ಎಲ್ (DRL), ಮತ್ತು 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳ ವಿನ್ಯಾಸ ಹೊಂದಿದೆ. 12.3-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಚಾರ್ಜರ್, ಮಸಾಜ್ ಮತ್ತು ವೆಂಟಿಲೇಶನ್ ಸೌಲಭ್ಯವಿರುವ ಸೀಟುಗಳು, ಪನೋರಮಿಕ್ ಸನ್‌ರೂಫ್ ಮತ್ತು 12-ಸ್ಪೀಕರ್ ಜಿಬಿಎಲ್ (JBL) ಸೌಂಡ್ ಸಿಸ್ಟಮ್‌ ಇದೆ. 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಎಚ್‌ಡಿ ಕ್ಯಾಮೆರಾ ಮತ್ತು ಲೆವೆಲ್ 2 ಎಡಿಎಎಸ್ (ADAS) ತಂತ್ರಜ್ಞಾನ ಅಳವಡಿಸಲಾಗಿದೆ.

ಪವರ್‌ಫುಲ್ ಎಂಜಿನ್ ಸಾಮರ್ಥ್ಯ

2.0-ಲೀಟರ್ ಟ್ವಿನ್-ಟರ್ಬೋ ಡೀಸೆಲ್ ಎಂಜಿನ್ ಕಾರ್‌ಗೆ ಇದ್ದು, 215 PS ಶಕ್ತಿ ಮತ್ತು 478 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಕೂಡ ಇದೆ. ಇದು 2WD ಮತ್ತು 4WD ಆಯ್ಕೆಗಳಲ್ಲಿ ಲಭ್ಯವಿದ್ದು, 219 mm ಗ್ರೌಂಡ್ ಕ್ಲಿಯರೆನ್ಸ್ ಮತ್ತು 810 mm ಆಳದ ನೀರಿನಲ್ಲಿ ಚಲಿಸುವ (Water Wading) ಸಾಮರ್ಥ್ಯ ಹೊಂದಿದೆ.