ಕಾರು ಎಲ್ಲೋ ಗುದ್ದಿಕೊಂಡೋ, ಯಾರೋ ಗುದ್ದಿಯೋ ಇಲ್ಲವೇ ಏನಾದರೊಂದು ರೀತಿಯಲ್ಲಿ ಡ್ಯಾಮೇಜ್ ಆಗಿದ್ದರೆ ನಾವೇನು ಮಾಡುತ್ತೇವೆ? ಆ ಕಾರು ಚಲಾಯಿಸುವ ಸ್ಥಿತಿಯಲ್ಲಿದ್ದರೆ ತೆಗೆದುಕೊಂಡು ಶೋರೂಂಗೆ ಇಲ್ಲವೇ ಗ್ಯಾರೇಜ್‌ಗೆ ಒಯ್ದು ಅವರ ಬಳಿ ಎಷ್ಟು ಖರ್ಚಾಗುತ್ತೆ ಎಂದೆಲ್ಲ ವಿಚಾರಿಸಿ, ಸ್ವಲ್ಪ ಜಾಸ್ತಿಯಾದರೆ ಚೌಕಾಸಿ ಮಾಡಿ ಒಂದು ಬೆಲೆಗೆ ಫಿಕ್ಸ್ ಮಾಡಿಸಿ, ಇನ್ಶೂರೆನ್ಸ್‌ನವನ ಜೊತೆ ಒಂದು ಮಾತುಕತೆ ನಡೆಸಿ, ಅವನನ್ನೂ ಒಪ್ಪಿಸಿ… ಹೀಗೇ ಮುಂದುವರಿಯುತ್ತದೆ. ಕೊನೆಗೆ ಇದಾವುದೂ ವರ್ಕೌಟ್ ಆಗದಿದ್ದರೆ, ಇಲ್ಲವೇ ಅಷ್ಟೊಂದು ಕಾಸು ಇಲ್ಲದಿದ್ದರೆ ವಾಪಸ್ ಮನೆಗೆ ಬರುತ್ತೇವೆ. ಇಷ್ಟುದ್ದದ ಉಸಿರುಗಟ್ಟುವ ಪ್ರೊಸೀಜರ್‌ಗೆ ಈಗ ಬ್ರೇಕ್ ಹಾಕುವ ಸಮಯ.

ಕಾರಿನ ಡ್ಯಾಮೇಜ್ ಆಗಿರುವ ಭಾಗದ ಫೋಟೋ ತೆಗೆಯಿರಿ, ಈ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದರೆ ಸಾಕು. ಅಲ್ಲಿಂದ ಅದಕ್ಕೆ ತಗಲುವ ವೆಚ್ಚ ಹಾಗೂ ಎಷ್ಟು ದಿನದಲ್ಲಿ ರಿಪೇರಿ ಮಾಡಿಕೊಡಲಾಗುವುದು ಎಂಬ ನಿಖರ ಮಾಹಿತಿ ದೊರೆಯುತ್ತದೆ. ಇದರಿಂದ ನಿಮಗೆ ಶೋರೂಂಗೆ ಮೊದಲೇ ಕಾರು ತೆಗೆದುಕೊಂಡು ಹೋಗುವ ಪ್ರಮೇಯ ತಪ್ಪುವುದಲ್ಲದೆ, ಎಷ್ಟು ವೆಚ್ಚವಾಗುತ್ತದೆ? ವಿಮೆ ಏಜೆಂಟ್ ಬಳಿ ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಸೇರಿದಂತೆ ಅದನ್ನು ಸರಿ ಮಾಡಿಸಬೇಕಾ? ಇಲ್ಲವೇ ಸದ್ಯಕ್ಕೆ ಉಸಾಬರಿ ಬೇಡ ಅಂತ ಹಾಗೆಯೇ ಇಡಬೇಕಾ ಎನ್ನುವ ಗೊಂದಲಕ್ಕೂ ತೆರೆಬೀಳಲಿದೆ.

ಇದನ್ನೂ ಓದಿ: ಎಚ್ಚರ ತಪ್ಪಿದ್ರೆ ಹುಷಾರ್, ಸ್ವಲ್ಪ ಯಾಮಾರಿದ್ರೂ ಕೀ-ಲೆಸ್ ಹೋಗಿ ಕಾರ್ ಲೆಸ್ ಆಗ್ತೀರಾ!

ಮಜ್ಡಾ (Mazda) ಎಂಬ ಕಂಪನಿ ಈಗ ಇಂಥದ್ದೊಂದು ಸಮಸ್ಯೆಗೆ ತಿಲಾಂಜಲಿ ಹೇಳಲು ಹೊರಟಿದೆ. ಅದೂ ಈ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಂಥ ಉಪಯುಕ್ತ ಸೇವೆಯ ದಾರಿಯನ್ನು ಕಂಡುಕೊಂಡಿರುವುದು ಈಗ ಸೋಷಿಯಲ್ ಮೀಡಿಯಾ ಸೇರಿ ಹಲವು ಕಡೆ ಪ್ರಶಂಸೆಗೆ ಪಾತ್ರವಾಗಿದೆ. 

ಇಂಗ್ಲೆಂಡ್‌ನಲ್ಲಿದೆ ಸೇವೆ
ಅಂದಹಾಗೆ ಇದು ಇಂಗ್ಲೆಂಡ್‌ನಲ್ಲಿ ಆರಂಭವಾಗಿರುವ ಸೇವೆಯಾಗಿದೆ. ಮಜ್ಡಾ ಇಂಥದ್ದೊಂದು ವಿನೂತನ ಪ್ರಯತ್ನಕ್ಕೆ ಕೈಹಾಕುವ ಮೂಲಕ ಸಾಧ್ಯವಾದಷ್ಟು ಮಾನವನ ಸಂಪರ್ಕವನ್ನು ತಪ್ಪಿಸಲಿದೆ. ಆದರೆ, ಸಂಪೂರ್ಣವಾಗಿ ಸಂಪರ್ಕರಹಿತ ಆಗಿಲ್ಲ. ಸರ್ವಿಸ್ ಶುಲ್ಕವನ್ನು ಇಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಗ್ರಾಹಕರು ತಮ್ಮ ಡ್ಯಾಮೇಜ್ ಕಾರಿನ ಫೋಟೋವನ್ನು ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿದರೆ ಸಾಕು. ಬಳಿಕ ಕಂಪನಿಯ ಟೆಕ್ನೀಷಿಯನ್ ಡ್ಯಾಮೇಜ್ ಅನ್ನು ಗಮನಿಸಿ ಅವುಗಳಿಗೆ ತಗುಲುವ ದರ ಹಾಗೂ ಎಷ್ಟು ದಿನದಲ್ಲಿ ರಿಪೇರಿ ಮಾಡಿಕೊಡಲಾಗುತ್ತದೆ ಎಂಬ ಎರಡೂ ಮಾಹಿತಿಯನ್ನು ಕೊಡಲಾಗುತ್ತದೆ. ಇನ್ನು ಮುಂದಿನ ನಿರ್ಧಾರ ಗ್ರಾಹಕನಿಗೆ ಬಿಟ್ಟಿದ್ದಾಗಿದೆ.

ಇದನ್ನೂ ಓದಿ: CVT ಎಂಬ ಅಟೋಮ್ಯಾಟಿಕ್ ಲೋಕದಲ್ಲಿ ಬೆಸ್ಟ್ ರೈಡಿಂಗ್ ಮಾಡಿ!

ಸಮಯಕ್ಕೆ ಸಿಕ್ಕಿತು ಬೆಲೆ
ಇಂಥದ್ದೊಂದು ಡಿಜಿಟಲ್ ಸೇವೆಯಿಂದ ಸಮಯಕ್ಕೆ ನಿಜವಾಗಿಯೂ ಬೆಲೆ ಸಿಕ್ಕಂತಾಗಿದೆ. ಇಲ್ಲವಾದರೆ ಕಾರು ತೆಗೆದುಕೊಂಡು ಗ್ಯಾರೇಜ್ ಗೆ ಹೋಗುವ, ಅಲ್ಲಿ ಸಮಸ್ಯೆಯನ್ನು ವಿವರಿಸಿ, ಕೊನೆಗೆ ಅಲ್ಲಿಂದ ಕೊಟೇಶನ್ ಪಡೆದು ಅದನ್ನು ವಿಮೆ ಏಜೆಂಟ್‌ಗೆ ತಿಳಿಸುವುದು, ಹೀಗೆ ಎಲ್ಲವೂ ಈಗ ಕುಳಿತಲ್ಲೇ ಆಗಿಬಿಡುತ್ತದೆ. ಸಮಸ್ಯೆಗೂ ಪರಿಹಾರ ಸಿಕ್ಕಿಬಿಡುತ್ತದೆ. 

ಭಾರತದಲ್ಲಿ ಇದು ಇಂಪ್ಲಿಮೆಂಟ್ ಆಗತ್ತಾ?
ಭಾರತದಲ್ಲಿ ಈ ನೂತನ ವ್ಯವಸ್ಥೆ ಕಾರ್ಯಗತಗೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಏಕೆ ಆಗಲ್ಲ, ಆದರೆ ಕಂಪನಿಗಳು ಮನಸ್ಸು ಮಾಡಬೇಕಷ್ಟೇ. ಇಲ್ಲವೇ ಯಾವುದಾದರೂ ಸ್ಟಾರ್ಟ್‌ಅಪ್‌ಗಳು ಪ್ರಾರಂಭಿಸಬೇಕು. ಒಂದು ವೇಳೆ ನಮ್ಮಲ್ಲಿ ಈ ಸೇವೆ ಪ್ರಾರಂಭವಾದರೆ ಖಂಡಿತಾ ಯಶಸ್ಸು ಸಿಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಅಟೋ ತಜ್ಞರು. ಹುಂಡೈ, ಟಾಟಾ ಸೇರಿ ಮತ್ತಿತರ ಕಂಪನಿಗಳು ಹೊಸ ಖರೀದಿದಾರರಿಗೆ ಕೆಲವು ಹೋಂ ಡೆಲವರಿ ಸರ್ವಿಸ್‌ಗಳನ್ನು ನೀಡುತ್ತಿದೆ. ಇಂಥವರಿಗೆ ಇದೊಂದು ಸೇವೆ ನೀಡುವುದು ದೊಡ್ಡದೇನಲ್ಲ. ಮತ್ತು ದರ ನಿಗದಿಯಲ್ಲಿ ನಿಖರತೆ ಹಾಗೂ ಪಾರದರ್ಶಕತೆ ಕಾಯ್ದುಕೊಂಡರೆ ಗ್ರಾಹಕಸ್ನೇಹಿಯೂ ಆಗಲಿದೆ. ಏನಂತೀರಾ..?

ಇದನ್ನೂ ಓದಿ: ಕೊರೋನಾ ಜ್ವರ ಗುರುತಿಸೋ ಕಾರು ಬರುತ್ತೆ!