ಭಾರತೀಯ ಮೂಲದ ನೀಲ್‌ ಮೋಹನ್‌ ಯೂಟ್ಯೂಬ್‌ನ ಸಿಇಒ ಆಗಿ ನೇಮಕಗೊಂಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇವರು ಭಾರತದ ಯಾವ ನಗರದವರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ನೀಲ್ ಮೋಹನ್ ಬಾಲ್ಯದ ದಿನಗಳನ್ನು ಅಮೆರಿಕದಲ್ಲಿ ಕಳೆದಿದ್ದರೂ ಆ ಬಳಿಕದ ತಮ್ಮ ವಿದ್ಯಾಭ್ಯಾಸವನ್ನು ಲಖ್ನೋ ಸೇಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಹಾಗಾದ್ರೆ ಲಖ್ನೋಗೂ ನೀಲ್‌ ಮೋಹನ್‌ ಅವರಿಗೂ ಇರುವ ಸಂಬಂಧವೇನು? 

Business Desk:ಯೂಟ್ಯೂಬ್‌ನ ಸಿಇಒ ಆಗಿ ಭಾರತೀಯ ಮೂಲದ ಅಮೆರಿಕನ್‌ ನೀಲ್‌ ಮೋಹನ್‌ ನೇಮಕಗೊಂಡ ಬೆನ್ನಲ್ಲೇ ಅವರು ಹುಟ್ಟಿ ಬೆಳೆದ ಲಖ್ನೋ ನಗರದಲ್ಲಿ ಖುಷಿ ಮನೆ ಮಾಡಿದೆ. ಲಖ್ನೋದಲ್ಲಿ ಜನಿಸಿದ ನೀಲ್ ಮೋಹನ್, ಅಲ್ಲಿನ ರಿವರ್ ಬ್ಯಾಂಕ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ನೀಲ್ ಮೋಹನ್ ತಮ್ಮ ಬಾಲ್ಯವನ್ನು ಅಮೆರಿಕದ ಮಿಚಿಗನ್ ನಲ್ಲಿ ಕಳೆದಿದ್ದರು. ಮೋಹನ್ ಅವರ ತಂದೆ ಡಾ. ಆದಿತ್ಯ ಮೋಹನ್ ಹಾಗೂ ತಾಯಿ ಡಾ.ದೀಪಾ ಮೋಹನ್ ಇಬ್ಬರು ವೃತ್ತಿ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಿದ್ದರು. ಹೀಗಾಗಿ ಮೋಹನ್ ಬಾಲ್ಯದ ದಿನಗಳನ್ನು ಅಲ್ಲೇ ಕಳೆದರು. ಆದರೆ, 1985ರಲ್ಲಿ ಮೋಹನ್ ಕುಟುಂಬ ಭಾರತಕ್ಕೆ ಹಿಂತಿರುಗಿತ್ತು. ಅದರ ಮರುವರ್ಷ ಮೋಹನ್ ಸೇಂಟ್ ಫ್ರಾನ್ಸಿಸ್ ಕಾಲೇಜ್ ಸೇರಿದ್ದರು. ಅಲ್ಲಿ 7ನೇ ತರಗತಿಯಿಂದ 12ನೇ ತರಗತಿ ತನಕ ಮೋಹನ್ ವಿದ್ಯಾಭ್ಯಾಸ ನಡೆಸಿದರು. ಲಖ್ನೋದಲ್ಲಿ ನೆಲೆಸಿರುವ ಅವರ ಕಾಲೇಜು ಸ್ನೇಹಿತರು ಮೋಹನ್ ಅವರು ವಿದ್ಯಾರ್ಥಿ ಸೆಸೆಯಲ್ಲಿ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಆದರೆ, ಅತ್ಯಂತ ಜಾಣ ವಿದ್ಯಾರ್ಥಿಯಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ನೀಲ್ ಮೋಹನ್ ತರಗತಿಗೆ ಮೊದಲಿಗರಾಗಿದ್ದರು. ಅವರು ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ ಎನ್ನುವ ಸ್ನೇಹಿತರು, ಅವರು ಅತ್ಯಂತ ವಿಧೇಯ ವಿದ್ಯಾರ್ಥಿಯಾಗಿದ್ದರು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೆಯೇ ನೀಲ್ ಮೋಹನ್ ಅವರಿಗೆ ಕ್ರಿಕೆಟ್ ಆಟವೆಂದ್ರೆ ಅಚ್ಚುಮೆಚ್ಚಾಗಿತ್ತಂತೆ. 

'ನೀಲ್ ಮೋಹನ್ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಆದರೆ, ಅಮೆರಿಕದಿಂದ ಹಿಂತಿರುಗಿದ ಕಾರಣ ಅವರಿಗೆ ಹಿಂದಿ ಅಷ್ಟಾಗಿ ಬರುತ್ತಿರಲಿಲ್ಲ. ಆದರೆ, ಕೆಲವೇ ಸಮಯದಲ್ಲಿ ಅವರು ಹಿಂದಿ ಕಲಿತರು.ಅಲ್ಲದೆ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಿಂದಿಯಲ್ಲಿ ಅತ್ಯಧಿಕ ಅಂಕಗಳನ್ನು ಕೂಡ ಗಳಿಸಿದ್ದರು' ಎನ್ನುತ್ತಾರೆ ನೀಲ್ ಮೋಹನ್ ಸಹಪಾಠಿ ಶಂತನು ಕುಮಾರ್. 'ಕಡಿಮೆ ಮಾತನಾಡುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೊಂದು ಸಕ್ರಿಯನಾಗಿರದ ನನ್ನ ಸಹಪಾಠಿ ಈಗ ಅತೀದೊಡ್ಡ ಸಾಮಾಜಿಕ ಜಾಲತಾಣ ವೇದಿಕೆಯೊಂದರ ನೇತೃತ್ವ ವಹಿಸುತ್ತಿರೋದು ನಮಗೆ ಹೆಮ್ಮೆ ಹಾಗೂ ಖುಷಿ ನೀಡಿದೆ' ಎಂದು ಇನ್ನೊಬ್ಬ ಸಹಪಾಠಿ ಹರ್ಷ ವ್ಯಕ್ತಪಡಿಸಿದ್ದಾರೆ. 

ವಿಶ್ವ ಆರ್ಥಿಕ ಪ್ರಗತಿಯಲ್ಲಿ ಭಾರತದ ಪಾಲು ಶೇ. 15: ಐಎಂಎಫ್‌ ಮೆಚ್ಚುಗೆ; ಕೇಂದ್ರ ಬಜೆಟ್‌ಗೂ ಶ್ಲಾಘನೆ

1991ರಲ್ಲಿ ಸೇಂಟ್ ಫ್ರಾನ್ಸಿಸ್ ಕಾಲೇಜ್ ನಿಂದ ಉತ್ತೀರ್ಣಗೊಂಡ ಬಳಿಕ ನೀಲ್ ಮೋಹನ್ 1992ರಲ್ಲಿ ಸ್ಟ್ಯಾನ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿ ವಿಜ್ಞಾನ ವಿಭಾಗದಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದರು. ಇನ್ನು ಮೋಹನ್ ಎನ್ ಟಿಎಸ್ ಇ ಸ್ಕಾಲರ್ ಆಗಿದ್ದರು ಕೂಡ.

ಶೀಘ್ರದಲ್ಲೇ ಮತ್ತಷ್ಟು ಉದ್ಯೋಗಿಗಳ ವಜಾಕ್ಕೆ ಫೇಸ್ಬುಕ್ ಮೆಟಾ ಚಿಂತನೆ...!

ನೀಲ್ ಮೋಹನ್ ಗ್ಲೋರಿಫೈಡ್ ಟೆಕ್ನಿಕಲ್ ಸರ್ಪೋರ್ಟ್ ನಲ್ಲಿ ತಿಂಗಳಿಗೆ 2.15ಲಕ್ಷ ರೂ. ವೇತನದೊಂದಿಗೆ ವೃತ್ತಿಜೀವನ ಆರಂಭಿಸಿದರು. ಆಕ್ಸೆಂಜರ್ ನಲ್ಲಿ ( Accenture) ಕೂಡ ಅವರು ಸೀನಿಯರ್ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಡಬಲ್ ಕ್ಲಿಕ್ ಇಂಕ್ ಎಂಬ ಹೆಸರಿನ ಕಂಪನಿಯಲ್ಲಿ ಕಾರ್ಯನಿರ್ವಹಿಸಿದರು. ಈ ಸಂಸ್ಥೆಯಲ್ಲಿ ಅವರ ವೃತ್ತಿಜೀವನ ಸಾಕಷ್ಟು ಬೆಳವಣಿಗೆ ದಾಖಲಿಸಿತು. ಕೇವಲ ಮೂರು ವರ್ಷ ಐದು ತಿಂಗಳಲ್ಲಿ ಗ್ಲೋಬಲ್ ಕ್ಲೆಂಟ್ ಸರ್ವೀಸ್ ನಲ್ಲಿ ಅವರು ನಿರ್ದೇಶಕರಾಗಿ ನೇಮಕಗೊಂಡರು. ಆ ಬಳಿಕ 2008ರಲ್ಲಿ ಗೂಗಲ್ ಸಂಸ್ಥೆ ಗ್ಲೋಬಲ್ ಕ್ಲೆಂಟ್ ಸರ್ವೀಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. ಹೀಗಾಗಿ ಹಿರಿಯ ಉಪಾಧ್ಯಕ್ಷರಾಗಿ ಗೂಗಲ್ ಸೇರಿದರು. ಅಲ್ಲಿ ಡಿಸ್ ಪ್ಲೇ ಹಾಗೂ ವಿಡಿಯೋ ಜಾಹೀರಾತುಗಳನ್ನು ನಿರ್ವಹಿಸುತ್ತಿದ್ದರು. 2015ರಲ್ಲಿ ಮೋಹನ್ ಯೂಟ್ಯೂಬ್ ಮುಖ್ಯ ಉತ್ಪನ್ನ ಅಧಿಕಾರಿಯಾಗಿ ನೇಮಕಗೊಂಡರು. ಆ ಬಳಿಕ ಅವರನ್ನು ಯೂಟ್ಯೂಬ್ ಮುಂದಿನ ಸಿಇಒ ಎಂದೇ ಬಿಂಬಿಸುತ್ತ ಬರಲಾಗಿತ್ತು. ಇನ್ನು 2013ರಲ್ಲಿ ಮೋಹನ್ ಅವರಿಗೆ ಯೂಟ್ಯೂಬ್ 544 ಕೋಟಿ ರೂ. ಬೋನಸ್ ನೀಡಿತ್ತು.