ದುಬೈನಲ್ಲಿ ನಡೆಯುತ್ತಿರುವ ವಿಶ್ವ ಸರಕಾರಿ ಶೃಂಗಸಭೆಯಲ್ಲಿ ಅಮೆರಿಕದ ಹೂಡಿಕೆದಾರ, ಉದ್ಯಮಿ ರೇ ಡೇಲಿಯೋ ಹೇಳಿಕೆಯೊಂದು ವಿಶ್ವಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆರ್ಥಿಕ ತಜ್ಞ ಎಂದೇ ಕರೆಯಿಸಿಕೊಳ್ಳುವ ರೇ ಡೇಲಿಯೋ ಹೇಳಿದ ಮಾತುಗಳು ಅಷ್ಟು ಪರ್ಫೆಕ್ಟ್. ಇದೀಗ ಸಮ್ಮಿಟ್‌ನಲ್ಲಿ ಭಾರತದ ಆರ್ಥಿಕತೆ ಕುರಿತು ಆಡಿದ ಮಾತುಗಳು ವಿಶ್ವದ ಕಣ್ಣುತರೆಸಿದೆ.
ದುಬೈ(ಫೆ.16): ಕೆಲವೇ ವರ್ಷದಲ್ಲಿ ಭಾರತ ಅತೀದೊಡ್ಡ ಆರ್ಥಿಕ ಪ್ರಗತಿ ಹೊಂದಿದ ರಾಷ್ಟ್ರವಾಗಲಿದೆ. ಭಾರತದ ಈ ಸಾಧನೆಯಿಂದ ವಿಶ್ವದ ಇತರ ದೇಶಗಳಲ್ಲಿ ಅತೀ ದೊಡ್ಡ ಪರಿವರ್ತನೆ ಕಾಣಲಿದೆ ಎಂದು ಅಮೆರಿಕದ ಬಿಲಿಯನೇರ್ ಹೂಡಿಕೆದಾರ ರೇ ಡೇಲಿಯೋ ಹೇಳಿದ್ದಾರೆ. ಈ ಮಾತು ವಿಶ್ವದಲ್ಲೇ ಸಂಚಲನ ಮೂಡಿಸಿದೆ. ದುಬೈನಲ್ಲಿ ನಡೆಯುತ್ತಿರುವ ಜಾಗತಿಕ ಸರಕಾರಿ ಶೃಂಗಸಭೆಯಲ್ಲಿ ಮಾತನಾಡಿದ ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್ ಸಂಸ್ಥಾಪಕ ಡೇಲಿಯೋ, ಭಾರತದ ಬೆಳವಣಿಗೆ ದರ ಹಾಗೂ ವಿಶ್ವದಲ್ಲಿ ಬೀರುತ್ತಿರುವ ಪ್ರಭಾವಕ್ಕೆ ಶಹಬ್ಬಾಸ್ ನೀಡಿದ್ದಾರೆ. ಯುಎಇ ಕ್ಯಾಬಿನೆಟ್ ಅಫೈರ್ಸ್ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ಲಾ ಎಐ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಡೇಲಿಯೋ ಮಹತ್ವದ ಹೇಳಿಕೆ ನೀಡಿದ್ದಾರೆ.
ಕಳೆದ 10 ವರ್ಷದ ಮಾಹಿತಿ, ಅಂಕಿ ಅಂಶ, ಬೆಳವಣಿಗೆ ದರ, ದೇಶ ಸಾಗುತ್ತಿರುವ ವೇಗ ಎಲ್ಲವನ್ನೂ ಪರಿಶೀಲನೆ ಮಾಡಿ ನಾನು ಹೇಳುತ್ತಿದ್ದೇನೆ. ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಭಾರತ ಅತೀ ವೇಗದ ಹಾಗೂ ಅತೀ ದೊಡ್ಡ ಆರ್ಥಿಕ ಬೆಳವಣಿಗೆ ದರ ಹೊಂದಿದ ರಾಷ್ಟ್ರವಾಗಲಿದೆ. ಅಮೆರಿಕ, ಚೀನಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಅಧಿಕಾರ ಹಿತಾಸಕ್ತಿಗಳು ಹೆಚ್ಚಾಗಿದೆ. ಇತರ ದೇಶದ ಮೇಲೆ ಪ್ರಭಾವ ಬಳಸುವ ಪ್ರಯತ್ನ ಮಾಡುತ್ತಿದೆ. ಯಾರು ಯುದ್ಧದಿಂದ ದೂರ ಉಳಿಯುತ್ತಾರೋ ಅವರು ಹೆಚ್ಚಿನ ಲಾಭ ಪಡೆಯಲಿದೆ. ಭಾರತ ಕಳೆದ ಕೆಲ ವರ್ಷಗಳಲ್ಲಿ ಎಲ್ಲಾ ಅವಕಾಶವನ್ನು ಬಳಸಿಕೊಳ್ಳುತ್ತಿದೆ. ನೀತಿ ನಿಯಮದಲ್ಲಿ ಸ್ವತಂತ್ರ ನಿರ್ಧಾರಗಳನ್ನು ತೆಗುದುಕೊಳ್ಳುತ್ತಿದೆ. ಇದೀಗ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಡೇಲಿಯೋ ಹೇಳಿದ್ದಾರೆ.
ಆರ್ಥಿಕತೆ ನಿರ್ವಹಣೆಯಲ್ಲಿ ಭಾರತವೇ ಬೆಸ್ಟ್
ಡೇಲಿಯೋ ಹೇಳಿದ ಈ ಮಾತು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಎಚ್ಚರಿಕೆ ಕರೆಗಂಟೆ ಎಂದು ವಿದೇಶಿ ಮಾಧ್ಯಮಗಳು ಹೇಳಿವೆ. ಭಾರತದ ಜಾಗತಿಕ ಮಟ್ಟದಲ್ಲಿ ಉದಯಿಸುತ್ತಿರುವ ಸೂರ್ಯ ಎಂದು ಬಿಂಬಿಸಿದೆ. ಕೋವಿಡ್ ಸಂದರ್ಭದಲ್ಲೂ ಭಾರತದ ಆರ್ಥಿಕ ಬೆಳವಣಿಗೆ ದರ ಇತರ ದೇಶಗಳಿಂದ ಮುಂದಿತ್ತು. ಕೋವಿಡ್ ಬಳಿಕ ಭಾರತದ ಚೇತರಿಕೆ ಹಾದಿಯಲ್ಲಿ ಸಾಗುತ್ತಿದ್ದರೆ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತ ಪರಿಣಾಮಗಳು ಗೋಚರಿಸುತ್ತಿದೆ. ಇದರ ನಡುವೆ ಭಾರತದ ಆರ್ಥಿಕ ಬೆಳವಣಿಗೆ ದರ ಇತರ ದೇಶಗಳಿಗೆ ಅತ್ಯುತ್ತಮ ಪ್ರಭಾವ ಬೀರಲಿದೆ ಅನ್ನೋ ಡೇಲಿಯೋ ಹೇಳಿಕೆ ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ.
ಈ ಶತಮಾನ ಭಾರತಕ್ಕೆ ಸೇರಿದ್ದು: ವೆಂಚರ್ ಕ್ಯಾಪಿಟಲ್ ಜೀನಿಯಸ್ ಬ್ರೆಂಡನ್ ರೋಜರ್ಸ್ ಭವಿಷ್ಯ
ಡೇಲಿಯೋ ಹೊರತಂದಿರುವ ಪ್ರಿನ್ಸಿಪಲ್ ಆಫ್ ಡೀಲಿಂಗ್ ವಿಥ್ ದಿ ಚೇಜಿಂಗ್ ವರ್ಲ್ಡ್ ಆರ್ಡರ್ ಪುಸ್ತಕದಲ್ಲಿ ಕಳೆದ 500 ವರ್ಷದಲ್ಲಿ ಪ್ರಜ್ವಲಿಸಿದ ಹಾಗೂ ನಶಿಸಿಹೋಗುತ್ತಿರುವ ಸಾಮ್ರಾಜ್ಯದ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿ, ಎದುರಾಗುವ ಸನ್ನಿವೇಶ ಹಾಗೂ ಬದಲಾಗುತ್ತಿರುವ ಜಗತ್ತಿನಲ್ಲಿ ದೇಶ ಸಾಗುತ್ತಿರುವ ಹಾಗೂ ಬೆಳವಣಿಗೆ ದರಗಳ ಕುರಿತು ಡೇಲಿಯೋ ಈ ಪುಸ್ತಕದಲ್ಲಿ ಹೇಳಿದ್ದಾರೆ. ಯುದ್ಧದಿಂದ ದೂರವಿರುವ ದೇಶ ಅಂದರೆ ಸದಾ ಶಾಂತಿ ಬಯಸುತ್ತಾ, ಎಲ್ಲರೊಂದಿಗೆ ಅತ್ಯುತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗುವ ದೇಶ ಹೆಚ್ಚಿನ ಅಪಾಯಗಳಿಂದ ದೂರವಿರಲಿದೆ ಎಂದಿದೆ. ಭಾರತ ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ಜೊತೆ ತಕರಾರು ಹೊಂದಿದ್ದರೂ ಯುದ್ಧ ಭಾರತದ ಮೊದಲ ಆಯ್ಕೆಯಲ್ಲ. ಹೀಗಾಗಿ ಭಾರತ ತನ್ನ ಆರ್ಥಿಕತೆಯತ್ತ ಹೆಚ್ಚಿನ ಗಮನಕೇಂದ್ರೀರಿಸಿ ಮುನ್ನುಗ್ಗುತ್ತಿದೆ. ವಿಶ್ವದ 3ನೇ ಅತೀದೊಡ್ಡ ಆರ್ಥಿಕತೆಯಾಗಬೇಕು ಅನ್ನೋ ನಿಟ್ಟಿನಲ್ಲಿ ಸಾಗುತ್ತಿದೆ.
