ರಾಜ್ಯಕ್ಕೆ ಬರಲಿದೆ ಪ್ರಥಮ ಲ್ಯಾಪ್‌ಟಾಪ್ ತಯಾರಿಕೆ ಘಟಕ: ಕನ್ನಡಿಗರಿಗೆ 3,000 ಉದ್ಯೋಗ ಸೃಷ್ಟಿ
ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯಿಂದ ರಾಜ್ಯದಲ್ಲಿ ಲ್ಯಾಪ್‌ಟಾಪ್ ತಯಾರಿಕಾ ಘಟಕವನ್ನು ನಿರ್ಮಿಸಲಾಗುತ್ತಿದ್ದು, 3,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬೆಂಗಳೂರು (ಜ.31): ರಾಜ್ಯದಲ್ಲಿ 1,500 ಕೋಟಿ ರೂ. ಹೂಡಿಕೆಯೊಂದಿಗೆ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ತನ್ನ ಲ್ಯಾಪ್-ಟಾಪ್ ಉತ್ಪಾದನಾ ಘಟಕವನ್ನು ಆರಂಭಿಸಲಿದೆ. ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಬುಧವಾರ ಇಲ್ಲಿ ಅಧಿಕೃತವಾಗಿ ಒಡಂಬಡಿಕೆಗೆ ಅಂಕಿತ ಹಾಕಿತು.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವಿಸ್ಟ್ರಾನ್ ಕಂಪನಿಯ ಅಧ್ಯಕ್ಷ ಅಲೆಕ್ ಲಾಯ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ನಂತರ ಸಚಿವ ಪಾಟೀಲ ಮಾತನಾಡಿ, 'ವಿಸ್ಟ್ರಾನ್ ಕಂಪನಿಯು ಈಗಾಗಲೇ ಕೋಲಾರದಲ್ಲಿ ತನ್ನ ಘಟಕವನ್ನು ಹೊಂದಿದೆ. ಆದರೆ, ಈ ಹೊಸ ಹೂಡಿಕೆಯ ಮೂಲಕ ರಾಜ್ಯದಲ್ಲಿ ಪ್ರಥಮ ಲ್ಯಾಪ್‌ಟಾಪ್ ತಯಾರಿಕಾ ಘಟಕವನ್ನು ಆರಂಭಿಸಲಿದ್ದಾರೆ. 2026ರ ಜನವರಿ ವೇಳೆಗೆ ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ. ಈ ಯೋಜನೆಯಿಂದ 3,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ಜಯದೇವ ಆಸ್ಪತ್ರೆ ಪ್ರಭಾರಿ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ನೇಮಕ: ಡಾ.ಸಿ.ಎನ್.ಮಂಜುನಾಥ್ ನಿರ್ಗಮನ
ವಿಸ್ಟ್ರಾನ್ ಕಂಪನಿಯ ಈ ಯೋಜನೆಗಾಗಿ 32 ಎಕರೆ ಜಮೀನನ್ನು ಬೆಂಗಳೂರಿನ ಸಮೀಪ ಕೇಳಿದ್ದು, ಒಂದು ವಾರದಲ್ಲಿ ಇದು ಅಂತಿಮವಾಗಲಿದೆ. ಇಲ್ಲಿ ತಯಾರಾಗುವ ಲ್ಯಾಪ್‌ಟಾಪ್ ಗಳ ಪೈಕಿ ಶೇ.50ರಷ್ಟು ಹೊರದೇಶಗಳಿಗೆ ರಫ್ತಾಗಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಮೌಲಿಕ ಕೊಡುಗೆ ಸಿಗಲಿದೆ. ಉದ್ದೇಶಿತ ಘಟಕವು ಸಂಪೂರ್ಣ ಆಟೋಮೇಶನ್ ಸೌಲಭ್ಯ ಹೊಂದಿರಲಿದೆ. ವಿಸ್ಟ್ರಾನ್ ಲ್ಯಾಪ್ಟಾಪ್ ತಯಾರಿಕಾ ಘಟಕವು ಸರ್ವರ್ ಗಳು, ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್), ವಿದ್ಯುತ್ ಚಾಲಿತ ವಾಹನಗಳ ವಲಯಕ್ಕೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಲಿದೆ. ಈ ವರ್ಷದ ಜುಲೈನಲ್ಲಿ ಘಟಕದ ಕಾಮಗಾರಿ ಆರಂಭವಾಗಲಿದ್ದು, ಈ ಘಟಕವು ರಾಜ್ಯ ಸರಕಾರದ 4.0 ಕೈಗಾರಿಕಾ ಕ್ರಾಂತಿಯ ಆಶಯಗಳಿಗೆ ಪೂರಕವಾಗಿರಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ಕೈಗಾರಿಕೆ ಮತ್ತು ಹೂಡಿಕೆಗಳ ಪರವಾಗಿದ್ದು, ಉದ್ಯಮಸ್ನೇಹಿ ನೀತಿಗಳನ್ನು ಹೊಂದಿದೆ. ಜೊತೆಗೆ ಕಾಲಕಾಲಕ್ಕೆ ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಜತೆಗೆ ರಾಜ್ಯದ ಉಳಿದ ಭಾಗಗಳಲ್ಲೂ ಆಧುನಿಕ ಉದ್ಯಮಗಳು ನೆಲೆಯೂರುವಂತೆ ಮಾಡಲು ಆದ್ಯತೆ ನೀಡಲಾಗಿದೆ ಎಂದರು.
ನಾಳೆಯಿಂದ FASTag ನಿಷ್ಕ್ರೀಯ ಆದೀತು ಎಚ್ಚರ, KYC ಪೂರ್ಣಗೊಳಿಸಲು ಇಂದೇ ಕೊನೆಯ ದಿನ!
ಈ ಒಪ್ಪಂದ ಕಾರ್ಯಕ್ರಮದಲ್ಲಿ ವಿಸ್ಟ್ರಾನ್ ಕಂಪನಿಯ ಹಿರಿಯ ನಿರ್ದೇಶಕ ಡೆನಿಸ್ ಹಂಗ್, ಜನರಲ್ ಮ್ಯಾನೇಜರ್ ರಾಚೆಲ್ ಲೂ, ಉನ್ನತಾಧಿಕಾರಿಗಳಾದ ಸಿ.ಸುಧೀರ್, ಪ್ರಿಯವ್ರತ ಪಾಂಡಾ, ಉದ್ಯಮಿ ಸಿ.ಎ.ಸುರೇಶ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.