ಬೃಹತ್ ಒಪ್ಪಂದ ಮಾಡಿಸಿದ್ದಕ್ಕೆ ಮಾಜಿ ಉದ್ಯೋಗಿಗೆ ನೀಡಬೇಕಿದ್ದ ಪೂರ್ಣ ಕಾರ್ಯಕ್ಷಮತೆ ಬೋನಸ್ ಪಾವತಿಸುವಂತೆ ಯುಕೆ ನ್ಯಾಯಾಲಯವು ವಿಪ್ರೋಗೆ ಆದೇಶಿಸಿದೆ. ಬೋನಸ್‌ಗೆ ಮಿತಿ ಹೇರುವ ಕಂಪನಿಯ ಪ್ರಯತ್ನವನ್ನು ತಿರಸ್ಕರಿಸಿದ್ದು, ಇದರಿಂದಾಗಿ ವಿಪ್ರೋ ಹೆಚ್ಚುವರಿಯಾಗಿ ಸುಮಾರು ₹4.58 ಕೋಟಿ ಪಾವತಿಸಬೇಕಾಗಿದೆ.
ಬೆಂಗಳೂರು (ಜೂ.13): ಬೃಹತ್ ಒಪ್ಪಂದವೊಂದನ್ನು ಮಾಡಿಸಿಕೊಟ್ಟಿದ್ದಕ್ಕಾಗಿ ತನ್ನ ಮಾಜಿ ಸೇಲ್ಸ್ ಎಕ್ಸಿಕ್ಯೂಟಿವ್‌ಗೆ ನೀಡಬೇಕಿದ್ದ ಸಂಪೂರ್ಣ ಕಾರ್ಯಕ್ಷಮತೆ ಬೋನಸ್ (Performance Bonus) ಮೊತ್ತವನ್ನು ಪಾವತಿಸುವಂತೆ ಯುಕೆ ಉದ್ಯೋಗ ಮೇಲ್ಮನವಿ ನ್ಯಾಯಾಧೀಕರಣವು (EAT) ವಿಪ್ರೋ ಕಂಪನಿಗೆ ಆದೇಶಿಸಿದೆ. ಬೋನಸ್ ಮೊತ್ತಕ್ಕೆ $150,000 (ಸುಮಾರು ₹1.25 ಕೋಟಿ) ಮಿತಿ ಹೇರಲು ವಿಪ್ರೋ ಮಾಡಿದ್ದ ಪ್ರಯತ್ನವನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದಾಗಿ ವಿಪ್ರೋ ಈಗ ಹೆಚ್ಚುವರಿಯಾಗಿ ಸುಮಾರು $547,000 (ಅಂದರೆ ಸುಮಾರು £400,000/ಪ್ರಸ್ತುತ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹4.58 ಕೋಟಿ) ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಮಾಜಿ ವಿಪ್ರೋ ಉದ್ಯೋಗಿ ಪಿ. ಚಂದ್ರಶೇಖರಪ್ಪ ಅವರು ಯುಕೆ ಮೂಲದ ಪ್ರಮುಖ ರಿಟೇಲರ್ 'ಜಾನ್ ಲೆವಿಸ್ ಪಾರ್ಟ್‌ನರ್‌ಶಿಪ್' (JLP) ಜೊತೆ ಕಂಪನಿಗೆ ಒಪ್ಪಂದ ಮಾಡಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಿಯಮದ ಪ್ರಕಾರ, ಈ ಒಪ್ಪಂದದ ಮೊದಲ ವರ್ಷದ ಆದಾಯದ ಶೇ. 1 ರಷ್ಟು ಮೊತ್ತವನ್ನು ಬೋನಸ್ ಆಗಿ ಪಡೆಯಲು ಅವರು ಅರ್ಹರಾಗಿದ್ದಾರೆ ಎಂದು ನ್ಯಾಯಾಧೀಕರಣ ತಿಳಿಸಿದೆ. ಈ ಹಿಂದೆ ವಿಪ್ರೋ ಪರವಾಗಿ ತೀರ್ಪು ನೀಡಿದ್ದ ಉದ್ಯೋಗ ನ್ಯಾಯಾಲಯದ ನಿರ್ಧಾರವನ್ನು ಈ ಮೇಲ್ಮನವಿ ನ್ಯಾಯಾಲಯವು ಈಗ ರದ್ದುಗೊಳಿಸಿದೆ.
ಏನಿದು ವಿವಾದ?
ಜಾನ್ ಲೆವಿಸ್ ಒಪ್ಪಂದದಿಂದ ಬಂದ ಮೊದಲ ವರ್ಷದ ಆದಾಯದ ಶೇ. 1 ರಷ್ಟು ಭಾಗ ಎಂದರೆ £516,082 (ಪ್ರಸ್ತುತ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹5.85 ಕೋಟಿ ಅಥವಾ ಸರಿಸುಮಾರು $697,000) ಆಗುತ್ತದೆ. ಆದರೆ ವಿಪ್ರೋ ಕಂಪನಿಯು ಬೋನಸ್‌ಗೆ ಗರಿಷ್ಠ ಮಿತಿ ಹೇರಿ ಚಂದ್ರಶೇಖರಪ್ಪ ಅವರಿಗೆ ಕೇವಲ $150,000 (ಸುಮಾರು ₹1.25 ಕೋಟಿ) ಮಾತ್ರ ಪಾವತಿಸಿತ್ತು. ಹೀಗಾಗಿ ಇನ್ನುಳಿದ ಸುಮಾರು $547,000 (ಸುಮಾರು ₹4.58 ಕೋಟಿ) ಬಾಕಿ ಮೊತ್ತಕ್ಕಾಗಿ ಈ ಕಾನೂನು ಹೋರಾಟ ನಡೆದಿತ್ತು.
ಹೊಸ ಉದ್ಯಮ ಮತ್ತು ಗ್ರಾಹಕರನ್ನು ಸೆಳೆಯುವ ಉದ್ಯೋಗಿಗಳಿಗೆ ಬಹುಮಾನ ನೀಡಲು ವಿಪ್ರೋ ಕಂಪನಿಯು ಮಾರ್ಚ್ 2020 ರಲ್ಲಿ "ಕಿಟ್ಟಿ ಬೋನಸ್" (Kitty Bonus) ಎಂಬ ಯೋಜನೆಯನ್ನು ಪರಿಚಯಿಸಿತ್ತು. ಇದರ ಅಡಿಯಲ್ಲಿ, ಹೊಸ ಗ್ರಾಹಕರಿಂದ ಮೊದಲ ವರ್ಷ ಬರುವ ಆದಾಯದ ಶೇ. 1 ರಷ್ಟು ಮೊತ್ತವನ್ನು ಸೆಕ್ಟರ್ ಮುಖ್ಯಸ್ಥರ ಅನುಮೋದನೆಗೆ ಒಳಪಟ್ಟು ಸೇಲ್ಸ್ ಸಿಬ್ಬಂದಿಗೆ ನೀಡಲಾಗುತ್ತಿತ್ತು. ಈ ಯೋಜನೆಯನ್ನು ಉದ್ಯೋಗಿಗಳಿಗೆ ಪ್ರಸ್ತುತಪಡಿಸಿದಾಗ ಯಾವುದೇ ಗರಿಷ್ಠ ಮಿತಿಯ (Cap) ಬಗ್ಗೆ ಉಲ್ಲೇಖಿಸಿರಲಿಲ್ಲ.
ವಿಪ್ರೋದ ಕ್ಲೌಡ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸರ್ವಿಸಸ್ ವಿಭಾಗದಲ್ಲಿದ್ದ ಚಂದ್ರಶೇಖರಪ್ಪ ಅವರು ಜೂನ್ 2020 ರಲ್ಲಿ ಈ ಡೀಲ್ ಮುಗಿಸಿದ್ದರು. ಅವರ ಮ್ಯಾನೇಜರ್ ಶಿಫಾರಸಿನ ಮೇರೆಗೆ, ಅಂದಿನ ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಗ್ಲೋಬಲ್ ಹೆಡ್ ಕಿರಣ್ ದೇಸಾಯಿ ಅವರು ಪೂರ್ಣ ಶೇ. 1 ರಷ್ಟು ಬೋನಸ್ ನೀಡಲು ಅನುಮೋದನೆ ನೀಡಿದ್ದರು.
ನಿಯಮ ಬದಲಿಸಿದ ಎಚ್‌ಆರ್ ಟೀಮ್
ಒಪ್ಪಂದ ಮುಗಿದ ನಂತರ ವಿಪ್ರೋದ ಎಚ್‌ಆರ್ (HR) ಮತ್ತು ಕಾಂಪೆನ್ಸೇಷನ್ ತಂಡಗಳು ಹೊಸ ನಿಯಮಗಳನ್ನು ತಂದು, ಉನ್ನತ ಮಟ್ಟದ ಅನುಮೋದನೆ ಕಡ್ಡಾಯ ಮತ್ತು $150,000 ಗರಿಷ್ಠ ಮಿತಿಯನ್ನು ಹೇರಿದವು. ಯೋಜನೆ ಘೋಷಿಸಿದ ನಂತರ ಇಂತಹ ನಿಯಮ ತರುತ್ತಿರುವುದಕ್ಕೆ ಕಂಪನಿಯ ಒಳಗಡೆಯೇ ಇಮೇಲ್ ಮೂಲಕ ಕಳವಳ ವ್ಯಕ್ತವಾಗಿತ್ತು ಎಂಬುದು ನ್ಯಾಯಾಲಯದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊದಲ ಹಂತದ ನ್ಯಾಯಾಲಯವು "ಬೋನಸ್ ಉದ್ಯೋಗಿಗೆ ಅಧಿಕೃತವಾಗಿ ತಲುಪುವವರೆಗೆ ಅದು ಕಂಪನಿಯ ವಿವೇಚನೆಗೆ ಒಳಪಟ್ಟಿರುತ್ತದೆ, ಹೀಗಾಗಿ ಮಿತಿ ಹೇರಬಹುದು" ಎಂಬ ವಿಪ್ರೋದ ವಾದವನ್ನು ಒಪ್ಪಿತ್ತು. ಆದರೆ ಮೇಲ್ಮನವಿ ನ್ಯಾಯಾಲಯವು ಇದನ್ನು ಒಪ್ಪದೇ, "ಒಮ್ಮೆ ಕಿರಣ್ ದೇಸಾಯಿ ಅವರು ಮೂಲ ನಿಯಮಗಳ ಪ್ರಕಾರ ಅನುಮೋದನೆ ನೀಡಿದ ಮೇಲೆ, ಉದ್ಯೋಗಿಗೆ ಕಾನೂನುಬದ್ಧವಾಗಿ ಆ ಪೂರ್ಣ ಮೊತ್ತ ಸಿಗಬೇಕು" ಎಂದು ತೀರ್ಪು ನೀಡಿದೆ.
ಜಡ್ಜ್ ಬ್ರೂಸ್ ಕಾರ್ ಕೆಸಿ ಅವರು, "ಒಮ್ಮೆ ನಿರ್ಧಾರ ತೆಗೆದುಕೊಂಡು ಅನುಮೋದನೆ ನೀಡಿದ ನಂತರ ವಿಪ್ರೋ ಕಂಪನಿಯು ನಿಯಮಗಳನ್ನು ಬದಲಾಯಿಸಲು (Move the goalposts) ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಬಾಕಿ ಇರುವ ಮೊತ್ತವನ್ನು ತಕ್ಷಣವೇ ಪಾವತಿಸಲು ಸೂಚಿಸಲಾಗಿದೆ. ಬೋನಸ್ ನೀಡಿದ ನಂತರ ನಿಯಮ ಬದಲಿಸುವ ಕಂಪನಿಗಳಿಗೆ ಈ ತೀರ್ಪು ದೊಡ್ಡ ಎಚ್ಚರಿಕೆಯ ಸಂದೇಶವಾಗಿದೆ. ಈ ವರದಿ ಪ್ರಕಟವಾಗುವವರೆಗೆ ವಿಪ್ರೋ ಕಂಪನಿಯು ಇಮೇಲ್ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


