ವಿಂಬಲ್ಡನ್ ಟೂರ್ನಿಯು ಶ್ರೀಮಂತರ ಐಷಾರಾಮಿ ಮನೋರಂಜನೆಯಾಗಿ ಮಾರ್ಪಟ್ಟಿದ್ದು, ಇಲ್ಲಿನ ವಿಐಪಿ ಸೀಟುಗಳನ್ನು ಖಾತರಿಪಡಿಸುವ 'ಡಿಬೆಂಚರ್'ಗಳು ಕೋಟ್ಯಂತರ ರೂಪಾಯಿಗೆ ಮಾರಾಟವಾಗುತ್ತಿವೆ. ಈ ದುಬಾರಿ ಟಿಕೆಟ್‌ಗಳು ಹೂಡಿಕೆದಾರರಿಗೆ ಹೇಗೆ ಲಾಭ ತಂದುಕೊಡುತ್ತವೆ ಅನ್ನೋದರ ವಿವರ ಇಲ್ಲಿದೆ.
ಲಂಡನ್ (ಜೂ.25): ಜಗತ್ತಿನ ಅತ್ಯಂತ ಪ್ರತಿಷ್ಠಿತ ಟೆನ್ನಿಸ್ ಟೂರ್ನಿ ಎನಿಸಿಕೊಂಡಿರುವ 'ವಿಂಬಲ್ಡನ್' (Wimbledon) ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಬದಲಿಗೆ ಅದೀಗ ಶ್ರೀಮಂತರ ಐಷಾರಾಮಿ ಮನೋರಂಜನೆ ಹಾಗೂ ಹೂಡಿಕೆದಾರರ ಪಾಲಿಗೆ ಕೋಟಿ ಕೋಟಿ ಲಾಭ ತಂದುಕೊಡುವ ಬ್ರಹ್ಮಾಂಡ ಉದ್ಯಮವಾಗಿ ಮಾರ್ಪಟ್ಟಿದೆ. ವಿಂಬಲ್ಡನ್‌ನ ಅತ್ಯುತ್ತಮ ವಿಐಪಿ ಸೀಟುಗಳನ್ನು ಖಾತರಿಪಡಿಸುವ 'ವಿಂಬಲ್ಡನ್ ಡಿಬೆಂಚರ್ಸ್' (Wimbledon Debentures) ಎಂಬ ವಿಶೇಷ ಹಣಕಾಸು ಬಾಂಡ್‌ಗಳ ಬೆಲೆ ಈಗ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ.
ವಿಂಬಲ್ಡನ್ ಟೂರ್ನಿಯ ಅಧಿಕೃತ ಬ್ರೋಕರ್ ಸಂಸ್ಥೆಯಾದ 'ಡೌಗೇಟ್ ಕ್ಯಾಪಿಟಲ್' (Dowgate Capital) ನೀಡಿರುವ ಮಾಹಿತಿಯ ಪ್ರಕಾರ, 2026 ರಿಂದ ಮುಂದಿನ ಐದು ವರ್ಷಗಳ ಕಾಲ ಸೆಂಟರ್ ಕೋರ್ಟ್‌ನಲ್ಲಿ (Centre Court) ವಿಐಪಿ ಸೀಟನ್ನು ಖಾತರಿಪಡಿಸುವ ಈ ಡಿಬೆಂಚರ್‌ಗಳು ಕಳೆದ ಏಪ್ರಿಲ್‌ನಲ್ಲಿ ಬರೋಬ್ಬರಿ £3,80,000 (ಸುಮಾರು $5,10,000 ಅಥವಾ 4.25 ಕೋಟಿ ರೂಪಾಯಿ) ಗೆ ಮಾರಾಟವಾಗಿವೆ!
ಎರಡೇ ವರ್ಷದಲ್ಲಿ ಮೂರು ಪಟ್ಟು ಬೆಲೆ ಏರಿಕೆ!
2024 ರ ಏಪ್ರಿಲ್‌ನಲ್ಲಿ ಈ ಡಿಬೆಂಚರ್‌ಗಳ ಮೂಲ ವಿತರಣಾ ಬೆಲೆ (Issue Price) ಕೇವಲ £1,16,000 (ಸುಮಾರು 1.30 ಕೋಟಿ ರೂಪಾಯಿ) ಇತ್ತು. ಆದರೆ ಕೇವಲ ಎರಡೇ ವರ್ಷಗಳಲ್ಲಿ ಇದರ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಮೌಲ್ಯ ದುಪ್ಪಟ್ಟಾಗಿದೆ.
ಇಟಲಿಯ ಜಾನಿಕ್ ಸಿನ್ನರ್ (Jannik Sinner) ಮತ್ತು ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ (Carlos Alcaraz) ನಡುವಿನ ಯುವ ಜಿದ್ದಾಜಿದ್ದಿ ಹಾಗೂ ಕ್ರೀಡಾಕೂಟಗಳನ್ನು ಶ್ರೀಮಂತರು ಐಷಾರಾಮಿ ಮನೋರಂಜನೆಯಾಗಿ ನೋಡುತ್ತಿರುವುದೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. "ಕಳೆದ 18 ತಿಂಗಳುಗಳಿಂದ ಜಾಗತಿಕವಾಗಿ ಈ ಡಿಬೆಂಚರ್ ಖರೀದಿಸಲು ಜನ ಮುಗಿಬೀಳುತ್ತಿದ್ದಾರೆ. ಭಾರತ ಮತ್ತು ಮಧ್ಯಪ್ರಾಚ್ಯ (Middle East) ದೇಶಗಳಲ್ಲಿಯೂ ಇದರ ಕ್ರೇಜ್ ಹೆಚ್ಚಾಗಿದ್ದು, ಅಮೆರಿಕದ ಕೋಟ್ಯಧಿಪತಿಗಳು ಇದರಲ್ಲಿ ಮುಂಚೂಣಿಯಲ್ಲಿದ್ದಾರೆ" ಎಂದು ಡೌಗೇಟ್‌ನ ಟ್ರೇಡಿಂಗ್ ಹೆಡ್ ಟಿಮ್ ವೆಬ್ ತಿಳಿಸಿದ್ದಾರೆ.
ಶ್ರೀಮಂತರಿಗೆ ಇದು ಚಿನ್ನದ ಮೊಟ್ಟೆ ಇಡುವ ಕೋಳಿ!
ವಿಂಬಲ್ಡನ್‌ನಲ್ಲಿ ಅಧಿಕೃತವಾಗಿ ಮರುಮಾರಾಟ ಮಾಡಬಹುದಾದ (Tradeable) ಏಕೈಕ ಟಿಕೆಟ್‌ಗಳೆಂದರೆ ಈ ಡಿಬೆಂಚರ್‌ಗಳು ಮಾತ್ರ. ಐದು ವರ್ಷಗಳ ಅವಧಿಗೆ 4.25 ಕೋಟಿ ರೂ. ನೀಡಿ ಖರೀದಿಸುವ ಮಾಲೀಕರು, ತಮಗೆ ಬೇಡದ ದಿನಗಳ ಪಂದ್ಯದ ಟಿಕೆಟ್‌ಗಳನ್ನು ಇತರರಿಗೆ ಲಕ್ಷಾಂತರ ರೂಪಾಯಿಗೆ ಮಾರಿಕೊಳ್ಳಬಹುದು. ಅಂದರೆ ಸರಾಸರಿ ಲೆಕ್ಕ ಹಾಕಿದರೂ ಪಂದ್ಯ ನಡೆಯುವ ಒಂದು ದಿನದ ಸೀಟಿಗೆ ಬರೋಬ್ಬರಿ 6 ಲಕ್ಷ ರೂಪಾಯಿಗೂ ಅಧಿಕ ಹಣ ಸಿಗುತ್ತದೆ. ಅತ್ಯಂತ ವಿಶೇಷವೆಂದರೆ, ಈ ಡಿಬೆಂಚರ್‌ಗಳನ್ನು ಕಾರ್ಪೊರೇಟ್ ಬಾಂಡ್ ರೂಪದಲ್ಲಿ ವಿನ್ಯಾಸಗೊಳಿಸಿರುವುದರಿಂದ, ಇದನ್ನು ಮಾರಾಟ ಮಾಡಿದಾಗ ಬರುವ ಲಾಭಕ್ಕೆ ಯಾವುದೇ ಬಂಡವಾಳ ಲಾಭ ತೆರಿಗೆ (Capital Gains Tax) ಅನ್ವಯಿಸುವುದಿಲ್ಲ!
ಸಾಮಾನ್ಯ ಅಭಿಮಾನಿಗಳಿಗೆ ಕ್ಯೂ, ಶ್ರೀಮಂತರಿಗೆ ದುಡ್ಡಿನ ಪವರ್!
ಸಾಮಾನ್ಯ ಟೆನ್ನಿಸ್ ಅಭಿಮಾನಿಗಳು ಕೆಲವು ನೂರು ಪೌಂಡ್‌ಗಳ ಟಿಕೆಟ್‌ಗಾಗಿ ಅದೃಷ್ಟ ಪರೀಕ್ಷೆಯ ಲಾಟರಿ (Public Ballot) ನಂಬಿ ಕೂರಬೇಕು ಅಥವಾ ಇಡೀ ರಾತ್ರಿ ಲಂಡನ್ ಚಳಿಯಲ್ಲಿ ಕ್ಯೂ ನಿಲ್ಲಬೇಕು. ಆದರೆ ಶ್ರೀಮಂತರು ದುಡ್ಡು ಚೆಲ್ಲಿ ನೇರವಾಗಿ ಒಳಗೆ ಹೋಗಬಹುದು. ಸದ್ಯ ಮರುಮಾರಾಟ ಮಾರುಕಟ್ಟೆಯಲ್ಲಿ ನಂಬರ್ 1 ಕೋರ್ಟ್‌ನ ಕೇವಲ ಎರಡು ಸೀಟುಗಳ ಕನಿಷ್ಠ ದರವೇ ಬರೋಬ್ಬರಿ 2.65 ಲಕ್ಷ ರೂಪಾಯಿ (£2,390) ದಾಟಿದೆ. ಇನ್ನು ಸೆಂಟರ್ ಕೋರ್ಟ್‌ನಲ್ಲಿ ನಡೆಯಲಿರುವ ಪುರುಷರ ಫೈನಲ್ ಪಂದ್ಯದ ಕೇವಲ ಎರಡು ಸೀಟುಗಳ ಬೆಲೆ ಬರೋಬ್ಬರಿ 25 ಲಕ್ಷ ರೂಪಾಯಿಗಳಿಗೆ (£23,000) ಮಾರಾಟವಾಗುತ್ತಿದೆ!
ದುಡ್ಡಿದ್ದವರೆಲ್ಲಾ ಇದನ್ನು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಇಡೀ ಸೆಂಟರ್ ಕೋರ್ಟ್‌ನಲ್ಲಿ ಕೇವಲ 2,520 ಮತ್ತು ನಂಬರ್ 1 ಕೋರ್ಟ್‌ನಲ್ಲಿ 1,250 ಡಿಬೆಂಚರ್‌ಗಳು ಮಾತ್ರ ಲಭ್ಯವಿವೆ. ಹೊಸಬರಿಗಿಂತ ಹಳಬರಿಗೇ ಮೊದಲ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇದರ ಮೌಲ್ಯ ದಿನದಿಂದ ದಿನಕ್ಕೆ ಚಿನ್ನದಂತೆ ಏರುತ್ತಿದೆ.
ಸ್ಟಾರ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಮಣಿಕಟ್ಟಿನ ಗಾಯದ ಸಮಸ್ಯೆಯಿಂದ ಈ ಬಾರಿಯ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಮತ್ತು ಇರಾನ್ ಸಂಘರ್ಷದ ಕಾರಣದಿಂದಾಗಿ ಮರುಮಾರಾಟ ಮಾರುಕಟ್ಟೆ ಸದ್ಯ ಕೊಂಚ ತಣ್ಣಗಾಗಿದೆ. ಆದರೂ, ವಿಂಬಲ್ಡನ್‌ನ ಸಾಂಪ್ರದಾಯಿಕ ಬಿಳಿ ಉಡುಪಿನ ಕೋಡ್, ಹಸಿರು ಹುಲ್ಲಿನ ಅಂಕಣ, ಸ್ಟ್ರಾಬೆರಿ ಮತ್ತು ಕ್ರೀಮ್ ಸವಿಯುವ ಸಂಸ್ಕೃತಿ ಹಾಗೂ ಬ್ರಿಟಿಷ್ ರಾಜಮನೆತನದ 'ರಾಯಲ್ ಬಾಕ್ಸ್' ಪಕ್ಕದಲ್ಲೇ ಕೂತು ಪಂದ್ಯ ನೋಡುವ ಕ್ರೇಜ್ ಯಾರಿಗೂ ಕಮ್ಮಿಯಾಗಿಲ್ಲ. ಅಮೆರಿಕ ಮತ್ತು ಆಸ್ಟ್ರೇಲಿಯನ್ ಓಪನ್‌ಗಿಂತ ವಿಂಬಲ್ಡನ್ ಇಂದಿಗೂ ತನ್ನ ರಾಜಗಾಂಭೀರ್ಯವನ್ನು ಉಳಿಸಿಕೊಂಡಿದೆ.
ಭವಿಷ್ಯದಲ್ಲಿ ಐಪಿಎಲ್‌ಗೂ ಬರಬಹುದು ಈ ಮಾದರಿ
ವಿಂಬಲ್ಡನ್ ಡಿಬೆಂಚರ್ ಜಾಗತಿಕವಾಗಿ ಮೌಲ್ಯ ಪಡೆದುಕೊಳ್ಳುತ್ತಿರುವ ನಡುವೆ ಭವಿಷ್ಯದ ದಿನಗಳಲ್ಲಿ ಈ ಮಾದರಿ ಐಪಿಎಲ್‌ಗೂ ಬಂದರೂ ಅಚ್ಚರಿಯಿಲ್ಲ. ಅದಕ್ಕೆ ಕಾರಣ ಐಪಿಎಲ್‌ನ ಕೆಲವೊಂದು ಪಂದ್ಯಗಳಿಗೆ ಇರುವ ಕ್ರೇಜ್. ಆರ್‌ಸಿಬಿ-ಚೆನ್ನೈ, ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್, ಆರ್‌ಸಿಬಿ-ಕೆಕೆಆರ್ ಟೀಮ್ ಪಂದ್ಯಗಳ ಕಾರ್ಪೋರೇಟ್ ಬಾಕ್ಸ್ ಹಾಗೂ ವಿಐಪಿ ಟಿಕೆಟ್‌ಗಳನ್ನು ಡಿಬೆಂಚರ್ ರೀತಿ ಮಾರಾಟ ಮಾಡಿ ಹಣ ಮಾಡಲು ಐಪಿಎಲ್ ಆಡಳಿತ ಮಂಡಳಿ ಅಥವಾ ಬಿಸಿಸಿಐ ಕೂಡ ಮುಂದಾಗಬಹುದು. ಆ ದಿನಗಳು ದೂರವಿಲ್ಲ.


