ಮಗಳಿಗೆ ಬ್ಯುಸಿನೆಸ್‌ ಮೇಲೆ ಆಸಕ್ತಿಯಿಲ್ಲ, ಅದಕ್ಕಾಗಿ ಬಿಸ್ಲೆರಿ ಮಾರಾಟ: ಮಾಲೀಕ ರಮೇಶ್‌ ಚೌಹಾಣ್‌!


ದೇಶದ ಅತ್ಯಂತ ಪ್ರಸಿದ್ಧ ಪ್ಯಾಕೇಜ್ಡ್‌ ವಾಟರ್‌ ಕಂಪನಿ ಬಿಸ್ಲೆರಿ ಮಾರಾಟಕ್ಕೆ ಸಿದ್ಧವಾಗಿದೆ. ಟಾಟಾ ಕಂಪನಿಗೆ ಅಂದಾಜು 7 ಸಾವಿರ ಕೋಟಿ ರೂಪಾಯಿಗೆ ಕಂಪನಿ ಮಾರಾಟವಾಗುವ ಕುರಿತಾಗಿ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಕಂಪನಿಯ ಮಾಲೀಕ ರಮೇಶ್‌ ಚೌಹಾಣ್‌, ಬಿಸ್ಲೆರಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದೇಕೆ ಎಂದು ಮಾತನಾಡಿದ್ದಾರೆ.
 

Why Owner Ramesh Chauhan Selling Bisleri Everything You Need To Know san

ನವದೆಹಲಿ (ನ.24): ಪ್ರಖ್ಯಾತ ಸಾಫ್ಟ್‌ ಡ್ರಿಂಕ್‌ ಬ್ರ್ಯಾಂಡ್ ಗಳಾದ ಥಂಬ್ಸ್‌ ಅಪ್‌, ಗೋಲ್ಡ್‌ ಸ್ಪಾಟ್‌ ಹಾಗಗೂ ಲಿಮ್ಕಾವನ್ನು ಅಮೆರಿಕದ ಕೊಕಾ ಕೊಲಾ ಕಂಪನಿಗೆ ಮಾರಾಟ ಮಾಡಿದ 30 ವರ್ಷಗಳ ಬಳಿಕ, ರಮೇಶ್ ಚೌಹಾಣ್‌ ಮತ್ತೊಂದು ಪ್ರಸಿದ್ಧ ಪ್ಯಾಕೇಜ್ಡ್‌ ವಾಟರ್‌ ಕಂಪನಿ ಬಿಸ್ಲೆರಿ ಇಂಟರ್‌ನ್ಯಾಷನಲ್‌ ಕಂಪನಿಯನ್ನು ಮಾರಾಟ ಮಾಡಲು ಸಜ್ಜಾಗಿದ್ದಾರೆ. ವಾಣಿಜ್ಯ ಮಾಧ್ಯಮ ವರದಿಗಳ ಪ್ರಕಾರ, ಟಾಟಾ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ (ಟಿಸಿಪಿಎಲ್‌) ಅಂದಾಜು 6 ರಿಂದ 7 ಸಾವಿರ ಕೋಟಿ ರೂಪಾಯಿಗೆ ಬಿಸ್ಲೆರಿಯನ್ನು ಖರೀದಿ ಮಾಡಲಿದೆ ಎನ್ನಲಾಗುತ್ತಿದೆ. ಬಿಸ್ಲೆರಿ ಡೀಲ್‌ ವಿಚಾರ ಹೊರಬೀಳುತ್ತಿದ್ದಂತೆ, ಪಿಟಿಐಗೆ ಮಾತನಾಡಿರುವ ಬಿಸ್ಲೆರಿಯ ಚೇರ್ಮನ್‌ ರಮೇಶ್‌ ಚೌಹಾಣ್‌, ಟಾಟಾ ಕನ್ಸ್ಯೂಮರ್‌ ಮಾತ್ರವಲ್ಲ, ಪ್ಯಾಕೇಜ್ಡ್‌ ವಾಟರ್‌ ಬ್ಯುಸಿನೆಸ್‌ ಕಂಪನಿಯನ್ನು ಮಾರಾಟ ಮಾಡಲು ಸೂಕ್ತ ಖರೀದಿದಾರರಿಗೆ ಹುಡುಕಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ಟಾಟಾದ ಜೊತೆಗೆ 7 ಸಾವಿರ ಕೋಟಿ ರೂಪಾಯಿಯ ಒಪ್ಪಂದ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ. ತಮ್ಮ ಕಂಪನಿಯನ್ನು ಇನ್ನಷ್ಟು ವಿಸ್ತಾರ ಮಾಡುವ ಆಸೆ 82 ವರ್ಷದ ರಮೇಶ್‌ ಚೌಹಾಣ್‌ ಅವರಿಗೆ ಇದೆ. ಆದರೆ, ಅವರಿಗೆ ಯಾವುದದೇ ಉತ್ತರಾಧಿಕಾರಿಯಿಲ್ಲ ಅದಕ್ಕಾಗಿ ಕಂಪನಿಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿದ್ದಾರೆ.

ತಮ್ಮ 37 ವರ್ಷದ ಪುತ್ರಿ ಜಯಂತಿ ಚೌಹಾಣ್‌ಗೆ ಬ್ಯುಸಿನೆಸ್‌ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲದೇ ಇರುವುದು ಕೂಡ ಕಂಪನಿಯನ್ನು ಮಾರಾಟ ಮಾಡಲು ಕಾರಣ ಎಂದು ಹೇಳಿದ್ದಾರೆ. ಆಕೆಗೆ ಫ್ಯಾಶನ್‌ ಹಾಗೂ ಫೋಟೋಗ್ರಫಿ ಮೇಲೆ ಹೆಚ್ಚಿನ ಆಸಕ್ತಿ ಇದೆ ಎಂದಿದ್ದಾರೆ. ದೇಶದಲ್ಲಿ ಅತಿದೊಡ್ಡ ಪ್ಯಾಕೇಜ್ಡ್‌ ವಾಟರ್‌ ಕಂಪನಿ ಎನ್ನುವ ಹೆಮ್ಮೆ ಬಿಸ್ಲೆರಿಗೆ ಇದೆ. ಹಾಗೇನಾದರೂ ಕಂಪನಿ ಮಾರಾಟವಾದರೂ ಪ್ರಸ್ತುತ ಇರುವ ಮ್ಯಾನೇಜ್‌ಮೆಂಟ್‌ ಎರಡು ವರ್ಷಗಳವರೆಗೆ ಕೆಲಸ ಮಾಡುತ್ತದೆ ಎಂದಿದ್ದಾರೆ.

ಟಾಟಾ ಗ್ರೂಪ್‌ ಖಂಡಿತವಾಗಿ ಕಂಪನಿಯನ್ನು ವಿಸ್ತಾರ ಮಾಡುತ್ತದೆ: ಟಾಟಾ ಗ್ರೂಪ್‌ ಖಂಡಿತವಾಗಿ ಬಿಸ್ಲೆರಿ ಕಂಪನಿಯನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನುವ ವಿಶ್ವಾಸವಿದೆ ಎಂದು ಚೌಹಾಣ್‌ ಹೇಳಿದ್ದಾರೆ. ನನಗೆ ಟಾಟಾದ ಸಂಸ್ಕೃತಿ ಇಷ್ಟ. ಹಾಗಾಗಿ ಉಳಿದೆಲ್ಲಾ ಖರೀದಿದಾರರಿಗಿಂತ ಮೊದಲು ನಾನು ಟಾಟಾವನ್ನು ಆರಿಸಿಕೊಂಡೆ. ರಿಲಯನ್ಸ್‌ ರಿಟೇಲ್‌, ನೆಸ್ಲೆ ಡ್ಯಾನೋನ್‌ ಕೂಡ ಬಿಸ್ಲೆರಿಯನ್ನು ಖರೀದಿ ಮಾಡಲು ಉತ್ಸುಕವಾಗಿದೆ ಎಂದು ರಮೇಶ್‌ ಚೌಹಾಣ್‌ ಹೇಳಿದ್ದಾರೆ.

ಬಿಸ್ಲೆರಿ ಮಾರಾಟಕ್ಕಿದೆ, ಖರೀದಿ ಮಾಡ್ತಿರೋ ಕಂಪನಿ ಇದು!

ಬಿಸ್ಲೆರಿ ಮಾರಾಟವಾದಲ್ಲಿ, ಕಂಪನಿಯಲ್ಲಿ ಸಣ್ಣ ಪ್ರಮಾಣದ ಷೇರು ಕೂಡ ನಾನು ಇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇಡೀ ಉದ್ಯಮವನ್ನೇ ನಾನು ಮಾರಾಟ ಮಾಡಿದ ಬಳಿಕ, ಅದೇ ಕಂಪನಿಯಲ್ಲಿ ಸಣ್ಣ ಪ್ರಮಾಣದ ಷೇರು ಇರಿಸಿಕೊಳ್ಳುವುದು ನನಗೆ ಇಷ್ಟವಾಗೋದಿಲ್ಲ. ಇದೇ ವೇಳೆ,  ಬಾಟಲಿ ನೀರಿನ ವ್ಯಾಪಾರದಿಂದ ಹೊರಬಂದ ನಂತರ, ಅವರು ನೀರು ಕೊಯ್ಲು, ಪ್ಲಾಸ್ಟಿಕ್ ಮರುಬಳಕೆಯಂತಹ ಪರಿಸರ ಮತ್ತು ದಾನ ಕಾರ್ಯಗಳತ್ತ ಗಮನ ಹರಿಸಲು ಬಯಸುವುದಾಗಿ ತಿಳಿಸಿದ್ದಾರೆ.

ಸೌಂದರ್ಯವರ್ಧಕ ಕ್ಷೇತ್ರಕ್ಕೆ ಟಾಟಾ ಗ್ರೂಪ್ ಎಂಟ್ರಿ; ಶೀಘ್ರದಲ್ಲಿ ಬರಲಿವೆಯಾ ಟಾಟಾ ಬ್ಯೂಟಿ ಟೆಕ್ ಮಳಿಗೆಗಳು?

2023ರ ಹಣಕಾಸು ವರ್ಷದಲ್ಲಿ 220 ಕೋಟಿ ಲಾಭ: 2023ರ ಹಣಕಾಸು ವರ್ಷದ ವೇಳೆಗೆ ಬಿಸ್ಲೆರಿ ಬ್ರ್ಯಾಂಡ್‌ನ ಒಟ್ಟು ವ್ಯವಹಾರ 2500 ಕೋಟಿ ರೂಪಾಯಿ ಆಗಿದ್ದು, ಲಾಭ 220 ಕೋಟಿ ಎನಿಸಿದೆ. 2021ರ ಮಾರ್ಚ್‌ನಲ್ಲಿ ಮುಗಿದ ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿ ಒಟ್ಟು 1181.7 ಕೋಟಿ ಮಾರಾಟ ದಾಖಲು ಮಾಡಿದ್ದರೆ, 95 ಕೋಟಿ ಆದಾಯ ಸಂಪಾದನೆ ಮಾಡಿತ್ತು. 2020ರ ಮಾರ್ಚ್‌ನಲ್ಲಿ ಮುಗಿದ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ 1472 ಕೋಟಿ ಆಗಿದ್ದರೆ, ನಿವ್ವಳ ಆದಾಯ 100 ಕೋಟಿ ರೂಪಾಯಿ ಆಗಿತ್ತು.

ಯಾರಿವರು ರಮೇಶ್ ಚೌಹಾಣ್‌: ಮುಂಬೈನಲ್ಲಿ ಜಯಂತಿಲಾಲ್‌ ಹಾಗೂ ಜಯಾ ಚೌಹಾಣ್‌ ದಂಪತಿಗೆ 1940 ಜೂನ್‌ 17 ರಂದು ಹುಟ್ಟಿದ ರಮೇಶ್‌ ಚೌಹಾಣ್‌ ಭಾರತದಲ್ಲಿ ಬಿಸ್ಲೆರಿ ಬ್ರ್ಯಾಂಡ್‌ನ ಸಂಸ್ಥಾಪಕರು. ಆಪ್ತರು ಇವರಿಗೆ ಆರ್‌ಜೆಸಿ ಎಂದೇ ಕರೆಯುತ್ತಾರೆ. ಮೆಕಾನಿಕಲ್‌ ಇಂಜಿನಿಯರಿಂಗ್‌ ಹಾಗೂ ಬ್ಯುಸಿನೆಟ್‌ ಮ್ಯಾನೇಜ್‌ಮೆಂಟ್‌ ವಿದ್ಯಾಭ್ಯಾಸ ಮಾಡಿರುವ ಚೌಹಾಣ್‌, ಮೊದಲಿನಿಂದಲು ಭವಿಷ್ಯದ ಕುರಿತಾಗಿ ಚಿಂತೆ ಮಾಡುವ ವ್ಯಕ್ತಿ. ಭಾರತದಲ್ಲಿ ನೀರನ್ನು ಮಾರಾಟ ಮಾಡುವ ಕಲ್ಪನೆಯೇ ಇಲ್ಲದ ಸಮಯದಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ಬಾಟಲಿ ನೀರಿನ ವ್ಯಾಪಾರ ಆರಂಭಿಸಿದ್ದರು. ಇವರ ಪಾರ್ಲೆ ಎಕ್ಸ್‌ಪೋರ್ಟ್ಸ್‌ 1969ರಲ್ಲಿ ಇಟಲಿಯ ಉದ್ಯಮಿಯಿಂದ ಬಿಸ್ಲೆರಿಯನ್ನು ಖರೀದಿ ಮಾಡಿತ್ತು. ಬಳಿಕ ಭಾರತದಲ್ಲಿ ಇದರ ಮಾರಾಟ ಆರಂಭಿಸಿತ್ತು. 50 ವರ್ಷಗಳ ಉದ್ಯಮದಲ್ಲಿ ಚೌಹಾಣ್‌, ಬಿಸ್ಲೆರಿಯನ್ನು ಭಾರತದ ಅತಿದೊಡ್ಡ ಬ್ರ್ಯಾಂಡ್‌ ಆಗಿ ಮಾಡಿದ್ದರು. 

Latest Videos
Follow Us:
Download App:
  • android
  • ios