ಮುಂಬೈ(ಫೆ.17): ಗುಡಿಸಲೇ ಆಗಲಿ, ಅರಮನೆಯೇ ಆಗಲಿ ಪ್ರೀತಿಯ ಆಟ, ಪ್ರೀತಿಯ ಓಟ ಎಂದೂ ನಿಲ್ಲದು. ಪ್ರೀತಿಗೆ ಬಡವ ಬಲ್ಲಿದ ಎಂಬ ಅಂತರವಿಲ್ಲ. ಅರಮನೆ ಪ್ರೇಮ್ ಕಹಾನಿಗೂ, ಗುಡಿಸಲಿನ ಪ್ರೇಮ್ ಕಹಾನಿಗೂ ಏನು ವ್ಯತ್ಯಾಸ?।

ಆದರೆ ದೇಶದ ಉದ್ಯಮ ಸ್ರಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ ಪ್ರೇಮ್ ಕಹಾನಿ ಮಾತ್ರ ಕೊಂಚ ಭಿನ್ನ. ಭೇಟಿಗೂ ಮುನ್ನವೇ ಮುಖೇಶ್ ಮತ್ತು ನೀತಾ ನಡುವೆ ಪ್ರೇಮಾಂಕುರವಾಗಿ ಹೋಗಿತ್ತು ಅಂದರೆ ನಿಮಗೆಲ್ಲಾ ಅಚ್ಚರಿಯಾಗಬಹುದು.

ಹೌದು, ನೀತಾ ಯಾರೆಂದು ಗೊತ್ತಿರದ ಮುಖೇಶ್‌ಗೆ ಆಕೆಯ ಮೇಲೆ ಪ್ರೀತಿ ಬರುವಂತೆ ಮಾಡಿದ್ದು ಅವರ ತಂದೆ ಧೀರೂಭಾಯಿ ಅಂಬಾನಿ. ಸಮಾರಂಭವೊಂದರಲ್ಲಿ ನೀತಾ ಅವರನ್ನು ಕಂಡ ಧೀರೂಭಾಯಿ ಆಗಲೇ ಈಕೆಯೇ ತನ್ನ ಹಿರಿಯ ಸೊಸೆ ಎಂದು ನಿರ್ಧರಿಸಿ ಬಿಟ್ಟರು.

ಅಲ್ಲದೇ ನೀತಾ ಅವರನ್ನು ಭೇಟಿ ಮಾಡಿ ಕಚೇರಿಗೆ ಬಂದು ತಮ್ಮನ್ನು ಕಾಣುವಂತೆ ಹೇಳಿದ್ದರು. ಅದರಂತೆ ಮರುದಿನ ಧೀರೂಭಾಯಿ ಕಚೇರಿಗೆ ಹೋದ ನೀತಾ ಅವರಿಗೆ ನೇರವಾಗಿ ತಮ್ಮ ಹಿರಿಯ ಮಗ ಮುಖೇಶ್ ಜೊತೆ ಮದುವೆಯಾಗ್ತಿಯಾ ಅಂತಾ ಕೇಳಿದ್ದರು ಧೀರೂಭಾಯಿ.

ಧೀರೂಭಾಯಿ ಆಫರ್‌ನಿಂದ ದಿಗ್ಭ್ರಾಂತರಾದ ನೀತಾ ಮೌನಕ್ಕೆ ಶರಣಾದರೆ, ಒಮ್ಮೆ ಮುಖೇಶ್ ಅವರನ್ನು ಭೇಟಿ ಮಾಡುವಂತೆ ಧೀರೂಭಾಯಿ ಅವರೇ ಸಲಹೆ ನೀಡಿದ್ದರು. ಅದರಂತೆ ಮುಖೇಶ್ ಮತ್ತು ನೀತಾ ಭೇಟಿಯಾಗಿ ನಂತರ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.

ಅಷ್ಟೇ ಅಲ್ಲದೇ ಮುಖೇಶ್ ಮುಂಬೈನ ಟ್ರಾಫಿಕ್ ಸಿಗ್ನಲ್‌ವೊಂದರ ಬಳಿ ನೀತಾ ಅವರಿಗೆ ಪ್ರಪೋಸ್ ಮಾಡಿದ್ದರು. ಇದೂ ಕೂಡ ಆ ಸಮಯದಲ್ಲಿ ಭಾರೀ ಸದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೆಲ್ಲಾ ಈಗ ಇತಿಹಾಸ. ಮುಖೇಶ್ ಮತ್ತು ನೀತಾ ಜೋಡಿ ಇದೀಗ ಮಗಳು ಇಶಾ ಅಂಬಾನಿ ಮದುವೆ ಮಾಡಿ ಜವಾಬ್ದಾರಿ ಪೂರೈಸಿದೆ. ಇನ್ನೇನು ಮುಂದಿನ ಮಾರ್ಚ್ ತಿಂಗಳಲ್ಲಿ ಮಗ ಆಕಾಶ್ ಕೂಡ ಸಿಂಗಲ್‌ ಬದಲಾಗಿ ಮ್ಯಾರಿಡ್ ಎಂಬ ಸ್ಟೇಟಸ್ ಅಪ್ಡೇಟ್ ಮಾಡಲಿದ್ದಾರೆ.