ಮುಂಬೈ[ಫೆ.12]: 46 ಸಾವಿರ ಕೋಟಿ ರು. ಸಾಲದ ಸುಳಿಗೆ ಸಿಲುಕಿದ ಹಿನ್ನೆಲೆಯಲ್ಲಿ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ದಿವಾಳಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಅದರ ಮಾಲೀಕ ಅನಿಲ್‌ ಅಂಬಾನಿ ಮತ್ತೊಂದು ಸಾಹಸಕ್ಕೆ ಇಳಿಯುತ್ತಿದ್ದಾರೆ. ಮುಂಬೈನಲ್ಲಿ ಬೃಹತ್‌ ಮೆಗಾ ಫಿನ್‌ಟೆಕ್‌ (ಹಣಕಾಸು ತಂತ್ರಜ್ಞಾನ) ಹಬ್‌ ನಿರ್ಮಾಣ ಮಾಡಲು ಅವರು ಉದ್ದೇಶಿಸಿದ್ದು, ಇದಕ್ಕೆ ಫೆ.8ರಂದು ಮಹಾರಾಷ್ಟ್ರ ಸರ್ಕಾರದ ಒಪ್ಪಿಗೆ ಸಿಕ್ಕಿದೆ.

ನವಿ ಮುಂಬೈನ ಧೀರೂಭಾಯ್‌ ಅಂಬಾನಿ ನಾಲೆಡ್ಜ್‌ ಸಿಟಿಯಲ್ಲಿ ರಿಲಯನ್ಸ್‌ ರಿಯಾಲ್ಟಿಸಂಸ್ಥೆ ಮೆಗಾ ಸ್ಮಾರ್ಟ್‌ ಫಿನ್‌ಟೆಕ್‌ ಹಬ್‌ ಅನ್ನು ನಿರ್ಮಾಣ ಮಾಡಲಿದೆ. ಇದು 30 ದಶಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿರುತ್ತದೆ. ಅಭಿವೃದ್ಧಿ ಹೊಂದಿದ ಕಟ್ಟಡವನ್ನು ಭೋಗ್ಯ ಅಥವಾ ಮಾರಾಟ ಮಾಡುವ ಯೋಜನೆ ಅಂಬಾನಿಗೆ ಇದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ 15 ದಶಲಕ್ಷ ಚದರಡಿ ವಿಸ್ತೀರ್ಣ ಹೊಂದಿದ್ದು, ಅದಕ್ಕಿಂತ 2 ಪಟ್ಟು ವಿಶಾಲವಾಗಿ ಅಂಬಾನಿ ಫಿನ್‌ಟೆಕ್‌ ಹಬ್‌ ಇರುತ್ತದೆ.

ಅಂಬಾನಿ ನಾಲೆಡ್ಜ್‌ ಸಿಟಿ 132 ಎಕರೆ ವಿಸ್ತೀರ್ಣ ಹೊಂದಿದೆ. ರಿಲಯನ್ಸ್‌ ಕಮ್ಯುನಿಕೇಷನ್‌ ಕಂಪನಿ ಅಲ್ಲಿಂದಲೇ ಕಾರ್ಯಾಚರಿಸುತ್ತಿತ್ತು. ಇದೀಗ ಆ ಕಂಪನಿ ದಿವಾಳಿಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಫಿನ್‌ಟೆಕ್‌ ಹಬ್‌ ನಿರ್ಮಾಣಕ್ಕೆ ಅಂಬಾನಿ ಉದ್ದೇಶಿಸಿದ್ದಾರೆ. ಇದಕ್ಕೆ 14 ಸಾವಿರ ಕೋಟಿ ರು. ವಿನಿಯೋಗಿಸಲಿದ್ದಾರೆ ಎಂದು ಹೇಳಲಾಗಿದೆ.