ಪ್ರತಿನಿತ್ಯ 240 ಕೋಟಿ ಜನರು ಬಳಕೆ ಮಾಡುತ್ತಿರುವ ವಿಶ್ವವಿಖ್ಯಾತ ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬಿಟ್‌ ಕಾಯಿನ್‌ ರೀತಿ ತನ್ನದೇ ಆದ ‘ಲಿಬ್ರಾ’ ಹೆಸರಿನ ಕ್ರಿಪ್ಟೋ ಕರೆನ್ಸಿ ಬಿಡುಗಡೆ ಮಾಡುತ್ತಿದೆ.

ಇದು ಏನು? ಇದನ್ನು ಫೇಸ್‌ಬುಕ್‌ ಬಳಕೆದಾರರು ಹೇಗೆ ಬಳಸಬಹುದು? ಫೇಸ್‌ಬುಕ್‌ ಡಿಜಿಟಲ್‌ ಕರೆನ್ಸಿ ಜಾರಿಯಿಂದ ಬ್ಯಾಂಕಿಂಗ್‌ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆಯೇ? ನಾವು ಈ ಹಣ ಬಳಸಿ ವ್ಯವಹರಿಸುವುದು ವಿಶ್ವಾಸಾರ್ಹವೇ? ವಿಸ್ತೃತ ಮಾಹಿತಿ ಇಲ್ಲಿದೆ.

ಗ್ರಾಹಕರಿಗೆ ಜಿಎಸ್‌ಟಿ ಲಾಭ ವರ್ಗಾಯಿಸದ ವ್ಯಾಪಾರಿಗಳಿಗೆ ದಂಡ!

ಕ್ರಿಪ್ಟೋ ಕರೆನ್ಸಿ ಅಂದರೆ ಏನು?

ಬ್ಲಾಕ್‌ಚೈನ್‌ ಟೆಕ್ನಾಲಜಿಯನ್ನು ಅವಲಂಬಿಸುವ ಯಾವುದೇ ರೀತಿಯ ಕರೆನ್ಸಿ ಕ್ರಿಪ್ಟೋ ಕರೆನ್ಸಿ ಎಂದು ಪರಿಗಣಿತವಾಗುತ್ತದೆ. ವಾಸ್ತವದಲ್ಲಿ ಇದು ನಾಣ್ಯ ಅಥವಾ ಕರೆನ್ಸಿ ನೋಟು ಅಲ್ಲ. ಇದೊಂದು ವರ್ಚುವಲ್‌ ಹಣ. ಕೈಲಿ ಮುಟ್ಟಲಾಗದ ಕರೆನ್ಸಿ ಅಥವಾ ಪಾವತಿ ವ್ಯವಸ್ಥೆ. ಮಧ್ಯವರ್ತಿಗಳನ್ನು ಹೊಂದಿರದೆ ವ್ಯವಹಾರ ನಡೆಸಬಹುದಾದ ಡಿಜಿಟಲ್‌-ಆನ್‌ಲೈನ್‌ ಕರೆನ್ಸಿ. ಇಂಟರ್ನೆಟ್‌ ನೆಟ್‌ವರ್ಕ್ ಇದಕ್ಕೆ ಬೇಕಾಗುವ ಅವಶ್ಯಕ ವಾಹಕ.

ಇದೊಂದು ಸಣ್ಣ ಬದಲಾವಣೆ ದೇಶದ ಆರ್ಥಿಕತೆಗೆ ದೊಡ್ಡ ಸ್ಟಾರ್ಟ್ ನೀಡಬಹುದು

ಲಿಬ್ರಾ ಎಂದರೆ ಏನು?

ಫೇಸ್‌ಬುಕ್‌ ತಾನು ಜಾರಿಗೆ ತರಲು ಹೊರಟಿರುವ ಕ್ರಿಪ್ಟೋ ಕರೆನ್ಸಿಗೆ ‘ಲಿಬ್ರಾ’ ಎಂಬ ಹೆಸರಿಟ್ಟಿದೆ. ಇದೊಂದು ಬಿಟ್‌ ಕಾಯಿನ್‌ ರೀತಿಯ ಡಿಜಿಟಲ್‌ ಕರೆನ್ಸಿ. ಕ್ಷಣಾರ್ಧದಲ್ಲಿ ವಿಶ್ವದ ಯಾವುದೇ ಮೂಲೆಗೆ ಬಹುತೇಕ ಶುಲ್ಕರಹಿತವಾಗಿ ಹಣ ವರ್ಗಾವಣೆ ಮಾಡಬಹುದು.

ವಿಶೇಷ ಎಂದರೆ ಬಿಟ್‌ಕಾಯಿನ್‌ ರೀತಿ ಮೌಲ್ಯ ಏರಿಳಿತ ಆಗುವುದಿಲ್ಲವಂತೆ. ಡಾಲರ್‌, ಯುರೋ, ಯೆನ್‌ನಂತಹ ಜಾಗತಿಕ ಕರೆನ್ಸಿಗಳ ಬೆಂಬಲದೊಂದಿಗೆ ಸ್ಥಿರ ಮೌಲ್ಯ ಹೊಂದಿರುತ್ತದೆಯಂತೆ. ಹೀಗಾಗಿ ಬ್ಯಾಂಕ್‌ ಖಾತೆ ಮತ್ತು ಕ್ರೆಡಿಟ್‌ ಕಾರ್ಡ್‌ ಹೊಂದಿರದ ಲಕ್ಷಾಂತರ ಬಳಕೆದಾರರೂ ಲಿಬ್ರಾ ಬಳಸಿ ಇ-ಕಾಮರ್ಸ್‌ ವಹಿವಾಟು ನಡೆಸುವುದು ಸುಲಭವಾಗಲಿದೆ ಎಂದು ಫೇಸ್‌ಬುಕ್‌ನ ಮೂಲಗಳು ಹೇಳಿಕೊಂಡಿವೆ.

ಹೇಗೆ ಕೆಲಸ ಮಾಡುತ್ತದೆ?

ಲಿಬ್ರಾಗೆ ಒಂದು ಮೌಲ್ಯ ಇರುತ್ತದೆ (ಎಷ್ಟುಮೌಲ್ಯ ಎಂದು ಫೇಸ್‌ಬುಕ್‌ ಅಧಿಕೃತವಾಗಿ ಘೋಷಣೆ ಮಾಡಿಲ್ಲ). ಅಷ್ಟನ್ನು ಪಾವತಿಸಿ ಈ ಡಿಜಿಟಲ್‌ ಕರೆನ್ಸಿ ಖರೀದಿಸಬಹುದು. ಬ್ಯಾಂಕ್‌ ಖಾತೆ ಅಥವಾ ಡೆಬಿಟ್‌ ಕಾರ್ಡ್‌ ಮೂಲಕವೂ ಲಿಬ್ರಾ ಖರೀದಿಸಬಹುದು.

ಅದಕ್ಕಾಗಿ ನೀವು ಪಾವತಿಸುವ ಹಣ ಬ್ಯಾಂಕ್‌ ಖಾತೆಯಲ್ಲಿ ಭದ್ರವಾಗಿರುತ್ತದೆ. ಅಂದರೆ 1 ಡಾಲರ್‌ ಅಥವಾ 1 ಯುರೋ ಮೌಲ್ಯದ ಲಿಬ್ರಾ ಖರೀದಿಸಿದರೆ, ಅಷ್ಟೇ ಮೊತ್ತ ಬ್ಯಾಂಕ್‌ನಲ್ಲಿರುತ್ತದೆ. ಆ ಹಣಕ್ಕೆ ಬಡ್ಡಿ ಬರುತ್ತದೆ. ಜಾಗತಿಕ ಕರೆನ್ಸಿ ಮೌಲ್ಯದ ಆಧಾರದ ಮೇಲೆ ಲಿಬ್ರಾ ಮೌಲ್ಯವನ್ನು ನಿಗದಿಗೊಳಿಸಲಾಗುತ್ತದೆ.

ಲಿಬ್ರಾ ಮೂಲಕ ಎಲ್ಲಿಗೆ ಬೇಕಾದರೂ ಹಣ ಕಳುಹಿಸಬಹುದು. ಹಣ ವಾಪಸ್‌ ಪಡೆಯಬೇಕು ಎಂದಾದರೆ, ಅಂದಿನ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಯಾವ ಕರೆನ್ಸಿ ರೂಪದಲ್ಲಿ ಬೇಕೋ ಅದರಂತೆ ಹಣ ವಾಪಸ್‌ ಪಡೆದು, ಬ್ಯಾಂಕ್‌ ಖಾತೆಗೆ ಜಮೆ ಮಾಡಿಕೊಳ್ಳಬಹುದು.

ಹೂಡಿಕೆಯ ಟಾಪ್ 10 ಪಟ್ಟಿಯಲ್ಲಿದೆ ಬೆಂಗಳೂರು

ಎಫ್‌ಬಿ ಕರೆನ್ಸಿ ಬಳಕೆ ಹೇಗೆ? ಇದರ ಪ್ರಯೋಜನವೇನು?

ಪೇಸ್‌ಬುಕ್‌ ಪರಿಚಯಿಸಲಿರುವ ‘ಲಿಬ್ರಾ’ ಕರೆನ್ಸಿ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಣದ ವರ್ಗವಣೆ ಸೌಲಭ್ಯವನ್ನು ನೀಡಲಿದೆ. ಅಂತೆಯೇ, ಅತಿ ಕಡಿಮೆ ಶುಲ್ಕದಲ್ಲಿ ಜಾಗತಿಕ ಹಣದ ವ್ಯವಹಾರಕ್ಕಾಗಿ ಲಿಬ್ರಾ ಕಾಯಿನ್‌ ಉಪಯೋಗಕ್ಕೆ ಬರಲಿದೆ.

ಡಿಜಿಟಲ್‌ ಕರೆನ್ಸಿ ಬಿಟ್‌ ಕಾಯಿನ್‌ ಮಾದರಿಯಲ್ಲಿ ಜಾಗತಿಕ ಬಳಕೆಗೆ ಹೊಸ ಕರೆನ್ಸಿ ಸೃಷ್ಟಿಸಿ ಚಲಾವಣೆಗೆ ತರುವುದರಿಂದ ಫೇಸ್‌ಬುಕ್‌ ತಾಣದಲ್ಲಿ ಇ-ಕಾಮರ್ಸ್‌ ವಹಿವಾಟು ಮತ್ತು ಜಾಹೀರಾತುಗಳು ಹೆಚ್ಚುಗೊಳ್ಳಬಹುದು. ಮಾಸ್ಟರ್‌ ಕಾರ್ಡ್‌, ವೀಸಾ ಮತ್ತು ಪೇಪಾಲ್‌ಗಳ ಸಹಯೋಗದೊಂದಿಗೆ ಫೇಸ್‌ಬುಕ್‌ ತನ್ನ ಮಹತ್ವಾಕಾಂಕ್ಷಿ ಡಿಜಿಟಲ್‌ ಕರೆನ್ಸಿ ಜಾರಿಗೆ ತರಲು ಮುಂದಾಗಿದೆ.

ಹಣಕಾಸು ವಹಿವಾಟು ಸಂಸ್ಥೆಗಳಾದ ಪೇಪಾಲ್‌, ಮಾಸ್ಟರ್‌ ಕಾರ್ಡ್‌ ಮತ್ತು ವೀಸಾ ಹೊರತಾಗಿ ಊಬರ್‌, ಲಿಫ್ಟ್‌, ಸ್ಟೆ್ರೖಪ್‌ ಮತ್ತು ವೊಡಾಫೋನ್‌ಗಳೊಂದಿಗೂ ಫೇಸ್‌ಬುಕ್‌ ‘ಲಿಬ್ರಾ’ ಸಹಯೋಗ ಹೊಂದಿದೆ. ಇ-ಕಾಮರ್ಸ್‌ ಪ್ಲಾಟ್‌ಫಾಮ್‌ರ್‍ ಸಹಯೋಗಯೋಗದೊಂದಿಗೆ ಆನ್‌ಲೈನ್‌ ಶಾಪಿಂಗ್‌ನಲ್ಲಿಯೂ ‘ಲಿಬ್ರಾ’ ಕರೆನ್ಸಿ ಬಳಕೆ ಮಾಡಬಹುದು ಎಂಬ ನೀರೀಕ್ಷೆಯಲ್ಲಿದೆ ಫೇಸ್‌ಬುಕ್‌.

ಫೇಸ್‌ಬುಕ್‌ನ 27ಕ್ಕೂ ಹೆಚ್ಚು ಪಾಲುದಾರರು ಈ ಕರೆನ್ಸಿ ಬಳಕೆಗೆ ತರಲು ನೆರವಾಗುತ್ತಿದ್ದಾರೆ. ಜೊತೆಗೆ ಫೇಸ್‌ಬುಕ್‌ ತನ್ನ ಹಾಲಿ ಮತ್ತು ಭವಿಷ್ಯತ್ತಿನ ಪಾಲುದಾರ ಸಂಸ್ಥೆಗಳಿಂದ 1 ಶತಕೋಟಿ ಡಾಲರ್‌ ಹಣವನ್ನು ಬೆಂಬಲ ನಿಧಿಯಾಗಿ ಸಂಗ್ರಹಿಸುವ ವಿಶ್ವಾಸ ಹೊಂದಿದೆ.

ಈ ಯೋಜನೆಯು ಅಧಿಕೃತವಾಗಿ ಪ್ರಾರಂಭವಾಗುವುದಕ್ಕೂ ಮೊದಲು ಫೇಸ್‌ಬುಕ್‌ ಸುಮಾರು 100ಕ್ಕೂ ಹೆಚ್ಚು ಸಂಸ್ಥೆಗಳೊಟ್ಟಿಗೆ ಪಾಲುದಾರಿಕೆಯನ್ನು ಹೊಂದುವ ನಿರೀಕ್ಷೆಯಲ್ಲಿದೆ. ಎಲ್ಲವೂ ಸೂಸೂತ್ರವಾಗಿ ನಡೆದರೆ ಮುಂದಿನ ವರ್ಷದಿಂದಲೇ ಜಾರಿಯಾಗಲಿದೆ.

ವಾಟ್ಸ್‌ಆ್ಯಪ್‌, ಮೆಸೆಂಜರ್‌ ಮೂಲಕವೂ ಬಳಸಬಹುದು

ಲಿಬ್ರಾ ಸೇವೆ ಬಳಸುವವರಿಗಾಗಿ ‘ಕ್ಯಾಲಿಬ್ರಾ’ ಎಂಬ ಡಿಜಿಟಲ್‌ ವ್ಯಾಲೆಟ್‌ ಅನ್ನು ಫೇಸ್‌ಬುಕ್‌ ಅಭಿವೃದ್ಧಿಪಡಿಸಿದೆ. ಅದರಲ್ಲಿ ಹಣ ತೊಡಗಿಸಿ, ಲಿಬ್ರಾ ಕರೆನ್ಸಿಯನ್ನು ಖರೀದಿಸಬಹುದು. 240 ಕೋಟಿ ಫೇಸ್‌ಬುಕ್‌ ಬಳಕೆದಾರರು ತಮ್ಮ ಬಳಿ ಇರುವ ನಗದನ್ನು ಡಿಜಿಟಲ್‌ ಹಣವಾಗಿ ಪರಿವರ್ತಿಸಿ, ಫೇಸ್‌ಬುಕ್‌ ಜಾಲತಾಣದೊಳಗೆ ಬಳಸಿಕೊಳ್ಳಬಹುದಾಗಿದೆ.

ಇದು ಪಬ್‌ಜಿ ಆಟಗಳಲ್ಲಿ ಕಂಡುಬರುವ ಟೋಕನ್‌ಗಳಂತಿರುತ್ತದೆ. ಹಾಗಂತ ಇದು ಫೇಸ್‌ಬುಕ್‌ ಬಳಕೆದಾರರಿಗಷ್ಟೇ ಇರುವ ಸೇವೆಯಲ್ಲ. ಯಾರು ಬೇಕಾದರೂ ಉಪಯೋಗಿಸಬಹುದಾಗಿದೆ. ಸೀಮಾತೀತವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ. ಮೆಸೆಂಜರ್‌, ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರೂ ಲಿಬ್ರಾವನ್ನು ಬಳಕೆ ಮಾಡಿ ವ್ಯವಹಾರ ನಡೆಸಬಹುದು.

ಬೇರೆ ಕ್ರಿಪ್ಟೋ ಕರೆನ್ಸಿಗಳಿಗಿಂತ ಹೇಗೆ ಭಿನ್ನ?

ಹಲವಾರು ತಜ್ಞರು ಮತ್ತು ವಿಮರ್ಶಕರ ಪ್ರಕಾರ ಕ್ರಿಪ್ಟೋ ಕರೆನ್ಸಿ ಊಹಿಸಲಾಗದ, ಕಣ್ಣಿಗೆ ಕಾಣದ ಡಿಜಿಟಲ್‌ ಹಣ. ಸಾಮಾನ್ಯವಾಗಿ ಬಿಟ್‌ ಕಾಯಿನ್‌ ಮೌಲ್ಯವು ಕೆಲವೇ ಕೆಲ ಡಾಲರ್‌ನಿಂದ 18,000 ಡಾಲರ್‌ವರೆಗೆ ಏರಿಕೆಯಾಗುತ್ತದೆ.

ಸದ್ಯ ಒಂದು ಬಿಟ್‌ ಕಾಯಿನ್‌ ಮೌಲ್ಯ 9,318 ಡಾಲರ್‌ (ಅಂದಾಜು 6.50 ಲಕ್ಷ) ಇದೆ. ಇದು ಏರಿಳಿತವಾಗುತ್ತಲೇ ಇರುತ್ತದೆ. ಆದರೆ ಈ ರೀತಿಯ ಏರಿಳಿತ, ಚಂಚಲತೆಯನ್ನು ಫೇಸ್‌ಬುಕ್‌ನ ಕ್ರಿಪ್ಟೋ ಕರೆನ್ಸಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಡಾಲರ್‌, ಯುರೋ, ಯೆನ್‌ನಂತಹ ಜಾಗತಿಕ ಕರೆನ್ಸಿಗಳ ಬೆಂಬಲದೊಂದಿಗೆ ಇದು ಸ್ಥಿರ ಮೌಲ್ಯ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

ಲಿಬ್ರಾಗಾಗಿ ಎಟಿಎಂ ನಿರ್ಮಾಣ!

ಸೋಷಿಯಲ್‌ ಮೀಡಿಯಾಗಳಲ್ಲೇ ದೈತ್ಯಾಕಾರವಾಗಿ ಬೆಳೆದಿರುವ ಫೇಸ್‌ಬುಕ್‌ ಕಂಪನಿ, ತನ್ನ ಮಹತ್ವಾಕಾಂಕ್ಷಿ ಯೋಜನೆಗಾಗಿ ಎಟಿಎಂ ನಿರ್ಮಾಣ ಮಾಡುವ ಯೋಚನೆ ಕೂಡ ಹೊಂದಿದೆಯಂತೆ. ಅಂದರೆ ಬಳಕೆದಾರರು ತಮ್ಮ ಕ್ರಿಪ್ಟೋ ಕರೆನ್ಸಿಯನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಬೂತ್‌ಗಳನ್ನು ಸ್ಥಾಪಿಸುವುದು. ಆದರೆ ಇದಕ್ಕೆ ಸಾಕಷ್ಟುಸಮಯ ಹಿಡಿಯುತ್ತದೆ.

ಫೇಸ್‌ಬುಕ್‌ ಕರೆನ್ಸಿ ನಂಬಲರ್ಹವೇ?

ಬಳಕೆದಾರರ ಡೇಟಾ ಬಳಕೆ ಕುರಿತ ಫೇಸ್‌ಬುಕ್‌ ಇತಿಹಾಸವನ್ನು ಗಮನಿಸಿದವರು ಫೇಸ್‌ಬುಕ್‌ನಲ್ಲಿ ಹಣ ಹೂಡಿಕೆ ಮಾಡಲು ಸಂಶಯಪಡುವುದು ಸಹಜವೇ. ಆದರೆ ಫೇಸ್‌ಬುಕ್‌ನ ಕ್ರಿಪ್ಟೋಕರೆನ್ಸಿ ಬಗ್ಗೆ ಅಷ್ಟೇನೂ ಅನುಮಾನ ಪಡಬೇಕಿಲ್ಲ ಎಂದು ಹೇಳಲಾಗುತ್ತಿದೆ.

ಇಷ್ಟಾಗಿಯೂ ಕ್ರಿಪ್ಟೋಕರೆನ್ಸಿ ಮೂಲಕ ಹಣ ಕೂಡಿಡಲು ಹೋಗಿ ಅದೆಷ್ಟೋ ಜನರು ಕೈ ಸುಟ್ಟುಕೊಂಡ ಉದಾಹರಣೆಗಳಿರುವುದರಿಂದ ಇದರ ಬಗ್ಗೆಯೂ ಎಚ್ಚರದಿಂದ ಇರುವುದು ಒಳ್ಳೆಯದು.

ಬ್ಯಾಂಕುಗಳ ವಹಿವಾಟಿಗೆ ತೊಂದೆರೆ?

‘ಲಿಬ್ರಾ’ ಕರೆನ್ಸಿ ಮೂಲಕ ವಿಶ್ವದ ಯಾವುದೇ ಮೂಲೆಗಾದರೂ ಹಣ ರವಾನಿಸಬಹುದು. ಇದಕ್ಕೆ ಹೆಚ್ಚಿನ ಶುಲ್ಕವೇನೂ ಇರುವುದಿಲ್ಲ. ಹೀಗಾಗಿ ಹಣ ‘ವರ್ಗಾವಣೆ ಸೇವೆ ಒದಗಿಸುವ ವೆಸ್ಟರ್ನ್‌ ಯುನಿಯನ್‌ ಮನಿ ಟ್ರಾನ್ಸ್‌ಫರ್‌ನಂತಹ ಕಂಪನಿಗಳಿಗೆ ಲಿಬ್ರಾದಿಂದ ಹಿನ್ನಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಜೊತೆಗೆ 200 ಕೋಟಿಯಷ್ಟಿರುವ ಫೇಸ್‌ಬುಕ್‌ನ ಬಳಕೆದಾರರಲ್ಲಿ ಒಂದಿಷ್ಟುಮಂದಿಯಾದರೂ ಡಿಜಿಟಲ್‌ ಕರೆನ್ಸಿ ಸೇವೆಯನ್ನು ಉಪಯೋಗಿಸಿದರೆ ಬ್ಯಾಂಕುಗಳ ವಹಿವಾಟಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಬಳಕೆದಾರರ ಖಾಸಗಿತನಕ್ಕೆ ಭಾರೀ ದೊಡ್ಡ ಸವಾಲು ಮತ್ತು ಸಮಸ್ಯೆಯನ್ನು ಒಡ್ಡಲಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಎಫ್‌ಬಿ ಕರೆನ್ಸಿ ಬಿಡುಗಡೆ ಕಷ್ಟ

ಬಳಕೆದಾರರ ಖಾಸಗಿತನ ಉಲ್ಲಂಘನೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ ಈಗಾಗಲೇ ಅಮೆರಿಕದ ಫೆಡರಲ್‌ ಸಂಸ್ಥೆಯ ತನಿಖೆಗೆ ಗುರಿಯಾಗಿದೆ. ಮಾತ್ರವಲ್ಲದೆ ಅಮೆರಿಕದ ಸಂಸತ್ತಿನಿಂದ ಹೊಸ ಆ್ಯಂಟಿ ಟ್ರಸ್ಟ್‌ ತನಿಖೆಯನ್ನು ಕೂಡ ಎದುರಿಸುತ್ತಿದೆ.

ಇದೇ ವೇಳೆ ಭಾರತದಲ್ಲಿ ಬಿಟ್‌ ಕಾಯಿನ್‌ ಮತ್ತು ಆ ರೀತಿಯ ಡಿಜಿಟಲ್‌ ಕರೆನ್ಸಿ ಹೊಂದುವುದು, ಮಾರುವುದು, ಖರೀದಿಸುವುದು, ವರ್ಗಾಯಿಸುವುದು ಮತ್ತು ಆದರ ಮೂಲಕ ವಹಿವಾಟು ನಡೆಸುವ ಎಲ್ಲ ರೀತಿಯ ಕೃತ್ಯಗಳನ್ನು ಭಾರತ ಸರ್ಕಾರ ಕಾನೂನು ಬಾಹಿರವೆಂದು ಪರಿಗಣಿಸಿ, ತತ್ಸಂಬಂಧಿ ಅಪರಾಧ ಎಸಗುವವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಉದ್ದೇಶಿಸಿದೆ. ಹೀಗಾಗಿ ಭಾರತದಲ್ಲಿ ಲಿಬ್ರಾ ಕರೆನ್ಸಿ ಚಾಲ್ತಿಗೆ ಬರುವುದು ಕಷ್ಟಎಂದು ಹೇಳಲಾಗಿದೆ.

ಕೊಟಕ್‌, ಪ್ಲೇಬಾಯ್‌ ಸೋತಿದ್ದವು; ಎಫ್‌ಬಿ ಗೆಲ್ಲುತ್ತಾ?

ಕೊಟಕ್‌, ಪ್ಲೇ ಬಾಯ್‌ ಸೇರಿದಂತೆ ಹಲವಾರು ದೈತ್ಯ ಕಂಪನಿಗಳು ತಮ್ಮದೇ ಆದ ಕ್ರಿಪ್ಟೋಕರೆನ್ಸಿ ಸೃಷ್ಟಿಸಲು ಪ್ರಯತ್ನಿಸಿದ್ದವು. ಆದರೆ ಸಂಪನ್ಮೂಲಗಳ ಕೊರತೆಯಿಂದ ತಮ್ಮ ನಿರ್ಧಾರ ಕೈಬಿಟ್ಟಿದ್ದವು. ಹೀಗಿರುವಾಗ ಫೇಸ್‌ಬುಕ್‌ ‘ಲಿಬ್ರಾ’ ಕರೆನ್ಸಿ ಪ್ರಾರಂಭಿಸಿ ಯಶಸ್ಸು ಗಳಿಸುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.

ಆದರೆ ಫೇಸ್‌ಬುಕ್‌ ಅಳಿ ಅಪರಿಮಿತ ಡೇಟಾ ಮತ್ತು ಅಗಾಧ ಪ್ರಮಾಣದ ಕಂಪ್ಯೂಟಿಂಗ್‌ ತಂತ್ರಜ್ಞಾನ ಇರುವುದು ಫೇಸ್‌ಬುಕ್‌ನ ಪ್ಲಸ್‌ಪಾಯಿಂಟ್‌. ಅಲ್ಲದೆ ಫೇಸ್‌ಬುಕ್‌ ಈ ಬಗ್ಗೆ ಈಗಾಗಲೇ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮತ್ತು ಯುಎಸ್‌ ಟ್ರೆಶರಿ ಮತ್ತು ಹಣ ವರ್ಗಾವಣೆ ಸಂಸ್ಥೆಗಳಾದ ವೆಸ್ಟರ್ನ್‌ ಯೂನಿಯನ್‌ಗಳೊಟ್ಟಿಗೆ ಮಾತುಕತೆ ನಡೆಸಿದೆ. ಹೀಗಾಗಿ ಫೇಸ್‌ಬುಕ್‌ನ ಮಹತ್ವಾಕಾಂಕ್ವಿ ಯೋಜನೆ ಕೆಳಗೆ ಬೀಳುವುದಿಲ್ಲ ಎಂದೂ ಹೇಳಲಾಗುತ್ತಿದೆ.