Green Bonds: ಹಸಿರು ಬಾಂಡ್ ಅಂದ್ರೇನು? ಕೇಂದ್ರ ಬಜೆಟ್ ನಲ್ಲಿ ಇದನ್ನು ಘೋಷಿಸಲು ಕಾರಣವೇನು? ಇಲ್ಲಿದೆ ಮಾಹಿತಿ
*ಸುಸ್ಥಿರ ಪರಿಸರ ಯೋಜನೆಗಳಿಗೆ ಬಂಡವಾಳ ಸಂಗ್ರಹಣೆಗಾಗಿ ಗ್ರೀನ್ ಬಾಂಡ್
*2007 ರಲ್ಲಿ ಹಸಿರು ಬಾಂಡ್ ಗಳನ್ನು ಪ್ರಾರಂಭಿಸಿದ್ದ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್
*ಹಸಿರು ಬಾಂಡ್ ಗಳ ವಿತರಣೆಯಿಂದ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಲಿದೆ ಭಾರತ
Business Desk: ಕೇಂದ್ರ ಹಣಕಾಸು ಸಚಿವೆ (Union Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಫೆ.1ರಂದು ಮಂಡಿಸಿದ ಬಜೆಟ್ ನಲ್ಲಿ (Budget) ಹಸಿರು ಬಾಂಡ್ (green bond) ಬಿಡುಗಡೆ ಮಾಡೋದಾಗಿ ಘೋಷಿಸಿದ್ದಾರೆ. ಹವಾಮಾನ ಬದಲಾವಣೆ (Climate Change) ಅಪಾಯಗಳನ್ನು ಎದುರಿಸಲು ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳಲು ಯೋಜಿಸಿದ್ದು, ಈ ನಿಟ್ಟಿನಲ್ಲಿ ಬಂಡವಾಳ ಸಂಗ್ರಹಣೆಗಾಗಿ ಗ್ರೀನ್ ಬಾಂಡ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಸಾವರಿನ್ ಗ್ರೀನ್ ಬಾಂಡ್ ಗಳು (Green Bonds) ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಂಡವಾಳ ಎರವಲು ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದು, ಹಸಿರು ಮೂಲಸೌಕರ್ಯಕ್ಕೆ ಅಗತ್ಯವಾದ ಬಂಡವಾಳವನ್ನು ಒಟ್ಟುಗೂಡಿಸಲಿದೆ. 2023ನೇ ಆರ್ಥಿಕ ಸಾಲಿನಲ್ಲಿ ಗ್ರೀನ್ ಬಾಂಡ್ ಗಳನ್ನು ವಿತರಿಸಲು ನಿರ್ಧರಿಸೋ ಮೂಲಕ ಹವಾಮಾನಕ್ಕೆ (Climate) ಸಂಬಂಧಿಸಿದ ಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ಭಾರತ ಸರ್ಕಾರ ಎಷ್ಟು ಗಂಭೀರ ನಿಲುವು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.
Money Basics : ಹಣಕಾಸಿನ ಸಮಸ್ಯೆಗೆ ನಿಮ್ಮಲ್ಲೇ ಇದೆ ಪರಿಹಾರ!
ಹಸಿರು ಹಣಕಾಸು
ಸ್ಕಾಟ್ಲೆಂಡ್ ಗ್ಲಾಸ್ಗೋನಲ್ಲಿ 2021ರ ನವೆಂಬರ್ ನಲ್ಲಿ ನಡೆದ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ, 2070ರೊಳಗೆ ಭಾರತ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ತಲುಪೋ ಐತಿಹಾಸಿಕ ಘೋಷಣೆ ಮಾಡಿದರು. ಈ ಘೋಷಣೆ ಜಗತ್ತಿನ ಅನೇಕ ನಾಯಕರನ್ನು ಆಶ್ಚರ್ಯಚಕಿತರನ್ನಾಗಿಸಿತ್ತು ಕೂಡ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಈ ಮಹತ್ವದ ನಿರ್ಧಾರಕ್ಕೆ ಬದ್ಧವಾಗಿರಲು ಭಾರತ ಸರ್ಕಾರ, ಈಗಾಗಲೇ ಅನೇಕ ಪ್ರಮುಖ ಯೋಜನೆಗಳನ್ನು ಘೋಷಿಸಿದೆ. ಹಸಿರು ಹಣಕಾಸು ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಹೇಳಬಹುದು. ಹವಮಾನ ಬದಲಾವಣೆಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಉದ್ದೇಶಿಸಿ ಪರಿಸರ ಸುಸ್ಥಿರ ಪ್ರಾಜೆಕ್ಟ್ ಗಳಿಗಾಗಿ ಮಾಡೋ ನಿರ್ದಿಷ್ಟ ಆರ್ಥಿಕ ವ್ಯವಸ್ಥೆಯನ್ನೇ ಹಸಿರು ಹಣಕಾಸು ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರ ವಿತರಿಸಲು ನಿರ್ಧರಿಸಿರೋ ಹಸಿರು ಬಾಂಡ್ ಗಳು ಕೂಡ ಹಸಿರು ಹಣಕಾಸಿನ ಭಾಗವೇ ಆಗಿವೆ.
ಹಸಿರು ಬಾಂಡ್ ಅಂದ್ರೇನು?
ಸುಸ್ಥಿರ ಪರಿಸರ ಯೋಜನೆಗಳಿಗೆ ಅಗತ್ಯವಾದ ಹಣವನ್ನು ಹೊಂದಿಸಲು ಸರ್ಕಾರ ಬಳಸೋ ಹಣಕಾಸು ಸಾಧನವೇ ಹಸಿರು ಬಾಂಡ್. ಸರ್ಕಾರ ವಿವಿಧ ಯೋಜನೆಗಳಿಗೆ ಹಣವನ್ನು ಕಲೆಹಾಕಲು ಸರ್ಕಾರಿ ಬಾಂಡ್ ವಿತರಣೆ ಮಾಡೋದು ಎಲ್ಲರಿಗೂ ಗೊತ್ತಿದೆ. ಅದೇರೀತಿಯಲ್ಲಿ ಸುಸ್ಥಿರ ಪರಿಸರಕ್ಕೆ ಪೂರಕವಾದ ಯೋಜನೆಗಳ ಮೇಲೆ ಹೂಡಿಕೆ ಮಾಡಲು ಬಂಡವಾಳ ಸಂಗ್ರಹಕ್ಕೆ ಹಸಿರು ಬಾಂಡ್ ಗಳನ್ನು ಸರ್ಕಾರ ವಿತರಿಸುತ್ತದೆ. ಅಂದ ಹಾಗೇ ಹಸಿರು ಬಾಂಡ್ ಹೊಸ ಪ್ರಯೋಗ ಎಂದು ಭಾವಿಸಬೇಡಿ. ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ 2007 ರಲ್ಲಿಹಸಿರು ಬಾಂಡ್ ಗಳನ್ನು ಪ್ರಾರಂಭಿಸಿದ್ದವು. ಸುಸ್ಥಿರ ಪರಿಸರ ಯೋಜನೆಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಬಹುದು.
ಅನೇಕ ವಿಧದ ಪರಿಸರ ಸುಸ್ಥಿರ ಯೋಜನೆಗಳಿದ್ದು,ಅವುಗಳಲ್ಲಿ ಹಸಿರು ಬಾಂಡ್ ಗಳ ಮೂಲಕ ಸಂಗ್ರಹಿಸಿದ ಹಣವನ್ನು ಹೂಡಿಕೆ ಮಾಡಬಹುದು. ಹಸಿರು ಬಾಂಡ್ ಗಳ ಮೂಲಕ ಸಂಗ್ರಹಿಸಿದ ಬಂಡವಾಳವನ್ನು ಯಾವೆಲ್ಲ ಯೋಜನೆಗಳಲ್ಲಿ ಬಳಸಬಹುದು ಎಂಬುದಕ್ಕೆ ಇಲ್ಲಿವೆ ನಿದರ್ಶನಗಳು
ನವೀಕರಿಸೋ ಇಂಧನ ಯೋಜನೆಗಳು: ಸೌರವಿದ್ಯುತ್ ಘಟಕಗಳು, ವಿಂಡ್ ಮಿಲ್ ಗಳು, ಬಯೋಗ್ಯಾಸ್ ಘಟಕಗಳ ಸ್ಥಾಪನೆ.
ಶುದ್ಧ ಸಾರಿಗೆ ಯೋಜನೆಗಳು: ಎಲೆಕ್ಟ್ರಿಕ್ ಕಾರುಗಳು ಹಾಗೂ ಅವುಗಳ ಚಾರ್ಜಿಂಗ್ ನೆಟ್ವರ್ಕ್, ಹಸಿರು ಇಂಧನಗಳಲ್ಲಿನ ಸಂಶೋಧನೆಗೆ ಹಣದ ಹೂಡಿಕೆ
ಇಂಧನ ದಕ್ಷತೆ ಯೋಜನೆಗಳು: ಶೂನ್ಯ ತ್ಯಾಜ್ಯವನ್ನೊಳಗೊಂಡ ಹಸಿರು ಕಟ್ಟಡಗಳ ನಿರ್ಮಾಣ, ತ್ಯಾಜ್ಯ ಸಾಮಗ್ರಿಗಳ ಪರಿಸರಸ್ನೇಹಿ ಮರುಬಳಕೆ, ಇಂಧನ ಉಳಿತಾಯ ಗುರಿ ಹೊಂದಿರೋ ಯೋಜನೆಗಳು.
ಆಯ್ದ ರಾಷ್ಟ್ರಗಳ ಸಾಲಿಗೆ ಭಾರತ
ಹಸಿರು ಬಾಂಡ್ ಗಳ ವಿತರಣೆಯಿಂದ ಭಾರತ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಲಿದೆ. ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು ಹಸಿರು ಬಾಂಡ್ ವಿತರಣೆಯಲ್ಲಿ ಮುಂಚೂಣಿಯಲ್ಲಿವೆ. ಇವು ಪ್ರಗತಿ ಸಾಧಿಸುತ್ತಿರೋ ಹಸಿರು ಬಾಂಡ್ ಮಾರುಕಟ್ಟೆಯತ್ತ ಗಮನ ಕೇಂದ್ರೀಕರಿಸಿವೆ. ಅಂದಾಜು ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ಹಸಿರು ಬಾಂಡ್‌ಗಳಿಗೆ ಜಾಗತಿಕ ಮಾರುಕಟ್ಟೆ ಲಭ್ಯವಿದೆ.