Asianet Suvarna News Asianet Suvarna News

Exclusive Interview: ಅಗ್ನಿವೀರರು ಕೇವಲ ಸೆಕ್ಯುರಿಟಿ ಗಾರ್ಡ್‌ ಆಗಬೇಕಿಲ್ಲ, ಅವರಿಗಿದೆ ಅಸಂಖ್ಯ ಉದ್ಯೋಗಾವಕಾಶ

ಕೋವಿಡ್‌ ನಂತರದ 2 ವರ್ಷಗಳಲ್ಲಿ ದೇಶದ ಆರ್ಥಿಕತೆ ಮತ್ತು ಉದ್ಯೋಗ ಕ್ಷೇತ್ರ ಹೇಗೆ ಬೆಳೆಯುತ್ತಿದೆ ಹಾಗೂ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಹೇಗೆ ದೇಶದ ಸೇನೆ ಮತ್ತು ಯುವಜನರ ಬದುಕನ್ನು ಬದಲಿಸಲಿದೆ ಎಂಬುದರ ಬಗ್ಗೆ ಅವರು ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

What Agniveers can do after 4 year stint in armed forces hls
Author
Bengaluru, First Published Jun 27, 2022, 12:30 PM IST

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಸ್ವಾಗತಾರ್ಹ ಎಂದು ಟ್ವೀಟ್‌ ಮಾಡಿದ್ದಿರಿ. ಈ ಯೋಜನೆ ಉದ್ಯೋಗಾಕಾಂಕ್ಷಿಗಳಿಗೆ ಯಾವ ರೀತಿಯಲ್ಲಿ ನೆರವಾಗುತ್ತದೆ ಎಂಬುದನ್ನು ಹೇಳುತ್ತೀರಾ?

ಅಗ್ನಿಪಥ ಯೋಜನೆ ಒಳ್ಳೆಯದೇ, ಅಲ್ಲವೇ ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಾನೇನೂ ವಿಷಯ ತಜ್ಞನಲ್ಲ. ಸೇನೆಯಲ್ಲಿ ಮಾನವ ಸಂಪನ್ಮೂಲದ ಅವಶ್ಯಕತೆ ಹಾಗೂ ಇತರೆ ಅಗತ್ಯತೆಯ ಆಧಾರದ ಮೇಲೆ ಸೇನೆಯೇ ಇದನ್ನು ನಿರ್ಧರಿಸಬೇಕು. ನನ್ನ ಅಭಿಪ್ರಾಯದಂತೆ ಸೇನೆಯಲ್ಲಿ ಶಾಶ್ವತವಾಗಿ ಸೇರ್ಪಡೆಯಾಗಲು ಸಾಧ್ಯವಿಲ್ಲದ ಶೇ.75ರಷ್ಟುಯುವಕರಿಗೆ ಕೂಡಾ ಬಿಎಸ್‌ಎಫ್‌, ಸಿಆರ್‌ಪಿಎಫ್‌, ರಾಜ್ಯ ಪೊಲೀಸ್‌ ಪಡೆಗಳಲ್ಲಿ ಮಾತ್ರವಲ್ಲದೇ ಖಾಸಗಿ ಕ್ಷೇತ್ರದಲ್ಲೂ ಉತ್ತಮ ಉದ್ಯೋಗಾವಕಾಶಗಳಿವೆ. ಅಗ್ನಿವೀರರು 4 ವರ್ಷದ ನಂತರ ಖಾಸಗಿ ಕಂಪನಿಗಳಲ್ಲಿ ಕೇವಲ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಬೇಕಾಗಿಲ್ಲ. ಯುವಕರು ಎಳೆ ವಯಸ್ಸಿನಲ್ಲೇ ಬದ್ಧತೆ, ಶಿಸ್ತುಪಾಲನೆ, ನೈತಿಕತೆಯ ಪಾಠ ಕಲಿತಿರುವುದರಿಂದ ಇದು ಅವರಿಗೆ ಇನ್ನಿತರ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ. ಸಾಫ್‌್ಟವೇರ್‌ ಪ್ರೋಗಾಮಿಂಗ್‌ನಂತಹ ತಾಂತ್ರಿಕ ಕೆಲಸಗಳನ್ನು ಹೊರತುಪಡಿಸಿ ಮಾರಾಟ, ಗ್ರಾಹಕರ ಸೇವೆಯಂತಹ ಉದ್ಯೋಗಗಳಲ್ಲಿ ಅವರು ತೊಡಗಿಸಿಕೊಳ್ಳಬಹುದು.

ಮಹೀಂದ್ರಾ ಕಂಪನಿ ಮುಂದಿನ ದಿನಗಳಲ್ಲಿ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟುಕಂಪನಿಗಳು ಅಗ್ನಿವೀರರಿಗೆ ಉದ್ಯೋಗ ನೀಡಲು ಮುಂದೆ ಬರಲಿವೆ ಎಂದು ನಿಮಗೆ ಅನಿಸುತ್ತದೆಯೇ?

ಸಾಮಾನ್ಯವಾಗಿ ಎಲ್ಲ ಕಂಪನಿಗಳು ಯುವಕರನ್ನು ನೇಮಿಸಿಕೊಳ್ಳುತ್ತವೆ. ಆದರೆ ಕಾಲೇಜಿನಿಂದ ಪದವಿ ಪಡೆದ ಯುವಕರಿಗಿಂತ ಈಗಾಗಲೇ ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ ಯುವಕರನ್ನು ನೇಮಿಸಿಕೊಳ್ಳುವುದು ಹೆಚ್ಚು ಅನುಕೂಲಕರ ಎನಿಸುತ್ತದೆ.

ನಿಮ್ಮ ಪ್ರಕಾರ ಯಾವ ಯಾವ ಕ್ಷೇತ್ರಗಳಲ್ಲಿ ಅಗ್ನಿವೀರರನ್ನು ನೇಮಿಸಿಕೊಳ್ಳಬಹುದಾಗಿದೆ?

ಮಾರ್ಕೆಟಿಂಗ್‌, ಮಾರಾಟ, ಗ್ರಾಹಕರ ಸೇವೆ, ಲಾಜಿಸ್ಟಿಕ್ಸ್‌ ಮೊದಲಾದ ಕ್ಷೇತ್ರಗಳಲ್ಲಿ ಅವರನ್ನು ನೇಮಿಸಿಕೊಳ್ಳಬಹುದಾಗಿದೆ. ಇಗ್ನೋದಲ್ಲಿ ದೂರಶಿಕ್ಷಣದ ಮೂಲಕ ಅಗ್ನಿವೀರರು ಪದವಿ ಪಡೆದುಕೊಂಡಿರುತ್ತಾರೆ. ಐಐಟಿ, ಐಐಎಂನಂತಹ ಟಾಪ್‌ ಕಾಲೇಜುಗಳಲ್ಲಿ ನೀಡುವ ಶಿಕ್ಷಣದೊಂದಿಗೆ ಇದನ್ನು ಹೋಲಿಕೆ ಮಾಡಲಾಗದಿದ್ದರೂ, ಸಾಮಾನ್ಯವಾಗಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಯಂತೆ ಅಗ್ನಿವೀರರೂ ಪದವಿ ಪಡೆದುಕೊಂಡಿರುತ್ತಾರೆ.

ಕೇಂದ್ರ ಸರ್ಕಾರವು 10 ಲಕ್ಷ ಹೊಸ ನೇಮಕಾತಿ ನಡೆಸುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಆದರೆ ನಮ್ಮ ನೌಕ್ರಿ ಡಾಟ್‌ಕಾಮ್‌ನಲ್ಲಿ ಯೋಗ್ಯರಿಗೆ ಬಹಳಷ್ಟುಉದ್ಯೋಗಾವಕಾಶಗಳು ತೆರೆದಿವೆ.

ಕೋವಿಡ್ ಬಳಿಕ ಚೇತರಿಕೆ ಹಾದಿಯಲ್ಲಿ ಭಾರತದ ಉದ್ಯೋಗಾವಕಾಶ, ನೌಕರಿ.ಕಾಂ ಸ್ಥಾಪಕ ಸಂಜೀವ್ ಬಿಖ್‌ಚಂದಾನಿ ಜೊತೆ ಸಂವಾದ

ಅಂದರೆ ನೀವು ಸರ್ಕಾರಿ ಕ್ಷೇತ್ರಕ್ಕಿಂತ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂದು ಹೇಳುತ್ತೀರಾ?

ನಾವು ಸರ್ಕಾರದ ಜೊತೆಯಲ್ಲಿ ನೇರವಾಗಿ ಕೆಲಸ ಮಾಡದೇ ಇರುವುದರಿಂದ ನನಗೆ ಸರ್ಕಾರಿ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂಬುದು ನಮಗೆ ತಿಳಿದಿದೆ.

ಬ್ಯಾಂಕುಗಳ ವಿಲೀನದಿಂದಾಗಿ ಉದ್ಯೋಗಾವಕಾಶಗಳ ಮೇಲೆ ಯಾವ ರೀತಿ ಪರಿಣಾಮ ಉಂಟಾಗುತ್ತದೆ?

ನನ್ನ ಪ್ರಕಾರ ಸರ್ಕಾರ 2 ಸರ್ಕಾರಿ ಬ್ಯಾಂಕುಗಳನ್ನು ವಿಲೀನ ಮಾಡುತ್ತಿದೆಯೆಂದರೆ ಅದರಿಂದ ಉದ್ಯೋಗದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದೇನೂ ಅನ್ನಿಸುವುದಿಲ್ಲ.

ಕೇಂದ್ರದ ಸ್ಕಿಲ್‌ ಇಂಡಿಯಾ ಯೋಜನೆಯ ಫಲಾನುಭವಿಗಳಿಗೆ ಖಾಸಗಿ ಕ್ಷೇತ್ರಗಳಲ್ಲೂ ಉದ್ಯೋಗಗಳು ಸಿಗುತ್ತಿವೆಯೇ?

ಜಾರ್ಖಂಡದ ಯಾವುದೋ ಸಣ್ಣ ಹಳ್ಳಿಯಲ್ಲಿ ಕೌಶಲ್ಯ ಕಲಿತ ಯುವಕನೊಬ್ಬನಿಗೆ ಕೂಡಲೇ ಮುಂಬೈಯಂತಹ ಮಹಾನಗರದಲ್ಲಿ ಉದ್ಯೋಗ ಸಿಗಬೇಕು ಎಂದರೆ ಕಷ್ಟ. ಕೌಶಲ್ಯವು ಪುನರಾವರ್ತಿತ ಅಭ್ಯಾಸದಿಂದ ಸಿದ್ಧಿಸುತ್ತದೆ. ಹೀಗಾಗಿ ಅಪ್ರೆಂಟಿಸ್‌ಶಿಪ್‌ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಬೆಳಿಗ್ಗೆ 3 ಗಂಟೆ ಪಾಠ, ನಂತರ 6 ಗಂಟೆ ಕೆಲಸದ ಪದ್ಧತಿಯನ್ನು ಸುಮಾರು 1 ವರ್ಷ ಮಾಡಿದರೆ ಅಪ್ರೆಂಟಿಸ್‌ಶಿಪ್‌ ಮುಗಿಸಿದವರಿಗೆ ಖಾಸಗಿ ಕಂಪನಿಗಳು ನೇರವಾಗಿ ಕೆಲಸ ನೀಡಲು ಮುಂಬರುತ್ತವೆ.

ಇಂದಿಗೂ ಸರ್ಕಾರಿ ಉದ್ಯೋಗ ಪಡೆಯುವುದೇ ಉದ್ಯೋಗಾಕಾಂಕ್ಷಿಗಳ ಮೊದಲ ಆಯ್ಕೆಯಾಗಿರುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರತಿಷ್ಠೆ ಹಾಗೂ ಭದ್ರತೆಯನ್ನು ಬಯಸುವ ಕೆಲವು ಗುಂಪುಗಳು ಸರ್ಕಾರಿ ಉದ್ಯೋಗ ಬಯಸುವುದು ಸಾಮಾನ್ಯವಾಗಿದೆ. ಖಾಸಗಿ ಕ್ಷೇತ್ರಕ್ಕೆ ಹೋಲಿಸಿದರೆ ಕೆಳಹಂತದ ಉದ್ಯೋಗಿಗಳಿಗೂ ಸರ್ಕಾರ ಹೆಚ್ಚಿನ ವೇತನವನ್ನು ನೀಡುತ್ತದೆ. ಕೋವಿಡ್‌ ನಂತರ ಈಗ ಬಹಳಷ್ಟುಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮರುಕಳಿಸುತ್ತಿವೆ. ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಹಾಗೂ ಐಟಿ ಉದ್ಯೋಗಿಗಳಿಗೆ ಐಟಿಯೇತರ ಕಂಪನಿಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ.

ಮೇಕ್‌ ಇನ್‌ ಇಂಡಿಯಾ, ಆತ್ಮ ನಿರ್ಭರ ಭಾರತದಂತಹ ಯೋಜನೆಯಿದ್ದರೂ ವಿಶ್ವಸಂಸ್ಥೆಯ ವರದಿ ಪ್ರಕಾರ 1.75 ಕೋಟಿ ಜನರು ಉದ್ಯೋಗಾವಕಾಶ ಅರಸಿ ವಿದೇಶಗಳಿಗೆ ತೆರಳುತ್ತಿದ್ದಾರೆ. ಈ ಪ್ರತಿಭಾ ಪಲಾಯನ ಏಕೆ ಆಗುತ್ತಿದೆ?

ವಿದೇಶಕ್ಕೆ ತೆರಳಿದ ಹಲವರು ದೇಶಕ್ಕೆ ಮರಳಿ ಕೊಡುಗೆ ನೀಡುತ್ತಿದ್ದಾರೆ. ನಾವು ಈ ವಿಷಯದಲ್ಲಿ ಮುಕ್ತವಾಗಿರಬೇಕು. ಹೊರದೇಶಕ್ಕೆ ಹೋಗುವವರಿಗೆ ಹೋಗಲು ಅವಕಾಶವಿರಬೇಕು. ದೇಶಕ್ಕೆ ಮರಳಲು ಬಯಸುವವರನ್ನು ಸ್ವಾಗತಿಸಬೇಕು. ಭಾರತದಲ್ಲಿರುವವರಿಗೂ ಉತ್ತಮ ಅವಕಾಶಗಳು ಸಿಗುವಂತೆ ನೋಡಿಕೊಳ್ಳಬೇಕು. ಕೋವಿಡ್‌ ನಂತರ ಭಾರತ ಸರ್ಕಾರದ ಸ್ಟಾರ್ಚ್‌ ಅಪ್‌ ಇಂಡಿಯಾ ಯೋಜನೆ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯಿಂದಾಗಿ ಹಲವು ಹೊಸ ಕಂಪನಿಗಳು ಹುಟ್ಟುತ್ತಿವೆ. ಅವು ಇನ್ನಷ್ಟುಹೊಸ ಉದ್ಯೋಗಾವಕಾಶವನ್ನು ಹುಟ್ಟುಹಾಕುತ್ತಿವೆ.

ಆರ್ಥಿಕತೆಯ ಪುನಶ್ಚೇತನಕ್ಕೆ ಇರುವ ಸಮಸ್ಯೆಗಳು ಯಾವುವು?

ಉಕ್ರೇನ್‌ ಯುದ್ಧ, ಜಾಗತಿಕ ತೈಲ ಬೆಲೆಯೇರಿಕೆ, ಚೀನಾದೊಂದಿಗಿನ ಬಿಕ್ಕಟ್ಟು ಮೊದಲಾದವು ಚಿಂತೆಗೀಡು ಮಾಡುವ ವಿಚಾರಗಳಾಗಿವೆ. ಇವುಗಳ ಮೇಲೆ ನಾವು ಅವಲಂಬಿತರಾಗಿರುವುದರಿಂದ ಚಿಂತಿಸಬೇಕಾದ ಅಗತ್ಯವಿದೆ.

ಐಟಿ ಕ್ಷೇತ್ರವು ಭಾರತದಲ್ಲಿ ಸುಮಾರು ಎಷ್ಟುಉದ್ಯೋಗಾವಕಾಶಗಳನ್ನು ಹುಟ್ಟುಹಾಕಬಹುದು?

ಪ್ರತಿ ವರ್ಷ ಇಂತಿಷ್ಟುಉದ್ಯೋಗವನ್ನು ಐಟಿ ಕ್ಷೇತ್ರ ಸೃಷ್ಟಿಸುತ್ತಿದೆ ಎಂದು ಅಂಕಿಸಂಖ್ಯೆ ನೀಡಿ ಹೇಳಲಾರೆ. ಆದರೆ ಐಟಿ ಕ್ಷೇತ್ರ ಬೆಳೆಯುತ್ತಿರುವುದರಿಂದ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಾಕಷ್ಟುಉದ್ಯೋಗ ಸೃಷ್ಟಿಸಿದೆ. ಸದ್ಯಕ್ಕೆ ಎಷ್ಟುಅರ್ಹರಿದ್ದಾರೆಯೋ ಎಲ್ಲರಿಗೂ ನೇಮಕಾತಿ ಮಾಡಿಕೊಳ್ಳುವ ಸಾಮರ್ಥ್ಯವನ್ನು ಐಟಿ ಕ್ಷೇತ್ರ ಹೊಂದಿದೆ ಎನ್ನಬಹುದು. ಕೋವಿಡ್‌ನ ಕಾರಣದಿಂದ ಜಗತ್ತು ಡಿಜಿಟಲ್‌ನತ್ತ ಮುಖಮಾಡಿದ್ದು ಐಟಿ ಕ್ಷೇತ್ರ ಪುಟಿದು ಏಳಲು ಒಂದು ಕಾರಣ. ಇದರೊಂದಿಗೆ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಎಂಜಿನಿಯರ್‌ಗಳನ್ನು ಪೂರೈಸುತ್ತದೆ.

ದೇಶದಲ್ಲಿ ನಿರುದ್ಯೋಗ ದರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಭಾರತಾದ್ಯಂತ 90,000ದಿಂದ ಒಂದು ಲಕ್ಷ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳು ಕೆಲಸಕ್ಕಾಗಿ ಜನರನ್ನು ನೇಮಕ ಮಾಡಿಕೊಳ್ಳುತ್ತಿವೆ. ಸಿಎಂಐ ದತ್ತಾಂಶಗಳು ಬೇರೇನೋ ಸೂಚಿಸಬಹುದು. ನನ್ನ ಪ್ರಕಾರ ಅರ್ಹತೆ ಹೊಂದಿದವರು ಹಾಗೂ ಪ್ರತಿಭೆಯುಳ್ಳವರ ಉದ್ಯೋಗ ನೇಮಕಾತಿಗಳು ಹೆಚ್ಚಾಗುತ್ತಿವೆ.

ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುವಂತೆ ಶಿಕ್ಷಣ ಕ್ಷೇತ್ರದಲ್ಲಿ ಯಾವ ಬದಲಾವಣೆಗಳನ್ನು ತರಬಹುದು?

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಂತೆ ಸೂಚನೆ ನೀಡುತ್ತಿವೆ. ಇದೇ ವಾರ ಉದ್ಯೋಗ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ನೀತಿ ಆಯೋಗ ಸಭೆ ಆಯೋಜಿಸಿತ್ತು.

ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದಿನಲ್ಲಿ 50 ಪಟ್ಟು ಹೆಚ್ಚಳ, ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ

ಕೇರಳದಲ್ಲಿ ಪದವಿ ಪಡೆದ ತಕ್ಷಣ ಯುವಕರು ದೇಶ ಬಿಟ್ಟು, ಕೊಲ್ಲಿ ರಾಷ್ಟ್ರ ಹಾಗೂ ಯುರೋಪಿಯನ್‌ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶ ಹುಡುಕುವ ಟ್ರೆಂಡ್‌ ಇದೆ. ಯುವಕರು ದೇಶದಲ್ಲಿ ಕೆಲಸ ಮಾಡಲು ಬಯಸುತ್ತಿಲ್ಲ ಏಕೆ?

ವಿದೇಶದಲ್ಲಿ ಉದ್ಯೋಗ ಮಾಡುವವರು ಬಿಲಿಯನ್‌ಗಟ್ಟಲೇ ಹಣವನ್ನು ಪ್ರತಿ ವರ್ಷ ದೇಶಕ್ಕೆ ಕಳುಹಿಸುತ್ತಾರೆ. ಇದು ಒಳ್ಳೆಯ ವಿದೇಶಿ ವಿನಿಮಯ ಸಂಗ್ರಹಕ್ಕೆ ಕಾರಣವಾಗುತ್ತಿದೆ. ಇದು ತಪ್ಪಲ್ಲ. ಆದರೆ ದೇಶದಲ್ಲೂ ಉತ್ತಮ ಉದ್ಯೋಗಾವಕಾಶಗಳು ಲಭ್ಯವಾಗಬೇಕು. ಇದರಿಂದಾಗಿ ಅವರು ದೇಶಕ್ಕೆ ಮರಳಲು ನಿರ್ಧರಿಸಿದರೂ ಅವರಿಗೆ ಉತ್ತಮ ಉದ್ಯೋಗಾವಕಾಶ ಸಿಗುವಂತಿರಬೇಕು. ಭಾರತದಲ್ಲಿ ಸ್ಟಾರ್ಚ್‌ಅಪ್‌ಗಳಿಗೆ ಉತ್ತಮ ಭವಿಷ್ಯವಿದೆ. ಇಂದು ಬೃಹತ್‌ ಕಂಪನಿಗಳೆನಿಸಿದ ವಿಪ್ರೊ, ಇಸ್ಫೋಸಿಸ್‌ 40 ವರ್ಷಗಳ ಹಿಂದೆ ಸ್ಟಾರ್ಚ್‌ಅಪ್‌ ಆಗಿದ್ದವು. ನಾಳೆ ದೊಡ್ಡ ಕಂಪನಿಗಳಾಗುವ ಸಾಮರ್ಥ್ಯವುಳ್ಳವು ಇಂದು ಸ್ಟಾರ್ಚ್‌ಅಪ್‌ ರೂಪದಲ್ಲಿವೆ. ನಾವದನ್ನು ಪ್ರೋತ್ಸಾಹಿಸುತ್ತೇವೆ.

ಭಾರತದ ಜವಳಿ ಮೊದಲಾದ ಸಾಂಪ್ರದಾಯಿಕ ಉದ್ಯಮಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗುವ ಸಾಧ್ಯತೆಗಳಿವೆ? ಡಿಜಿಟಲ್‌ ಇಂಡಿಯಾದ ಭವಿಷ್ಯವೇನು?

ಹೊಸ ತಂತ್ರಜ್ಞಾನ ಸಾಂಪ್ರದಾಯಿಕ ಉದ್ಯಮ ಸೇರಿದಂತೆ ಬಹುತೇಕ ಎಲ್ಲ ಉದ್ಯಮಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಅದೇ ರೀತಿ, ಡಿಜಿಟಲ್‌ ಕಂಪನಿಗಳಿಗೆ ಉತ್ತಮ ಭವಿಷ್ಯವಿದೆ. ಬಹಳಷ್ಟುಅವಕಾಶಗಳು ಹಾಗೂ ದೊಡ್ಡ ಮಾರುಕಟ್ಟೆಲಭ್ಯವಿದೆ. ಈ ಉದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ ಎನಿಸಿಕೊಂಡಿದೆ. ನನ್ನ ಪ್ರಕಾರ ಡಿಜಿಟಲ್‌ ಇಂಡಿಯಾ ದೇಶದ ಭವಿಷ್ಯವಾಗಿದೆ. ತಂತ್ರಜ್ಞಾನವನ್ನು ಎಲ್ಲೆಡೆ ಬಳಸಿಕೊಳ್ಳಬಹುದು. ದೇಶದಲ್ಲಿ ಇಂದು ಹಲವಾರು ಸ್ಟಾರ್ಚ್‌ಅಪ್‌ಗಳು ಹುಟ್ಟಿಕೊಳ್ಳುತ್ತಿವೆ. ಕೃಷಿ ಕ್ಷೇತ್ರದಲ್ಲೂ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸ್ಟಾರ್ಚ್‌ಅಪ್‌ಗಳಿವೆ.

ಉದಾಹರಣೆಗೆ ಗ್ರಾಮಾಫೋನು ಎಂಬ ಒಂದು ಸ್ಟಾರ್ಟ್‌ಅಪ್ ರೈತರಿಗೆ ಮಾಹಿತಿ ನೀಡುತ್ತದೆ. ಆ್ಯಪ್‌ ಮೂಲಕ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ಮಧ್ಯಪ್ರದೇಶದ ಗ್ರಾಮೀಣ ಭಾಗದಲ್ಲಿ ಈ ಸ್ಟಾರ್ಚ್‌ಅಪ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಆರೋಗ್ಯ ಸೇವೆ ಒದಗಿಸುವ ಮೆಡ್‌ಕಾರ್ಪ್ ಕಂಪನಿ, ಹೈನುಗಾರಿಕೆಗೆ ನೆರವಾಗುವ ಡಿಜಿನಿಧಿ ಫಿನ್‌ಟೆಕ್‌ ಕಂಪನಿ ಮೊದಲಾದವುಗಳಲ್ಲಿ ನಾವು ಹೂಡಿಕೆ ಮಾಡಿದ್ದೇವೆ. ಇದರ ಮೂಲಕ ಹಳ್ಳಿಗಳಲ್ಲೂ ಹಲವರು ಸ್ವಂತ ಉದ್ಯಮ ಹೊಂದಿರುವವರು ಇದ್ದಾರೆ. ಗ್ರಾಮಾಫೋನು ಇಂದೋರ್‌ನ ಕಂಪನಿಯಾಗಿದೆ. ಇದು ಮಧ್ಯಪ್ರದೇಶದ ರೈತರಿಗೆ ನೆರವಾಗುತ್ತದೆ. ಮೆಡ್‌ಕಾಫ್ಸ್‌ರ್‍ ಕೋಟಾ ಮೂಲದ್ದಾಗಿದೆ. ಇವು ಪಟ್ಟಣ ಪ್ರದೇಶದಲ್ಲಿರುವ ಕಂಪನಿಗಳಾದರೂ ಅವರ ಕಾರ್ಯಾಚರಣೆಯ ವ್ಯಾಪ್ತಿ ವಿಶಾಲವಾಗಿದೆ.

ಭಾರತದ ಆನ್ಲೈನ್‌ ಉದ್ಯಮಗಳಾದ ಝೊಮ್ಯಾಟೊ, ಸ್ವಿಗ್ಗಿ ಅಥವಾ ಉಬರ್‌ನಂತಹ ಕಂಪನಿಗಳು ಉದ್ಯೋಗಿಗಳಿಗೆ ಅಮೆರಿಕ ಮೊದಲಾದ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವೇತನ ನೀಡುತ್ತವೆಯಲ್ಲವೇ?

ಇದು ಆನ್ಲೈನ್‌ ಮಾತ್ರವಲ್ಲ, ದೇಶದ ಎಲ್ಲ ಬಗೆಯ ಉದ್ಯಮಗಳಿಗೂ ಅನ್ವಯಿಸುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಿರುತ್ತದೆ. ಪ್ರತಿ ಕಂಪನಿ ಲಾಭದಲ್ಲಿದ್ದಾಗ ಮಾತ್ರ ಮುಂದುವರೆಯಲು ಸಾಧ್ಯ. ಹೀಗಾಗಿ ಅವರೇ ತಮ್ಮ ಅನುಕೂಲತೆಗೆ ತಕ್ಕಂತೆ ವೇತನಗಳನ್ನು ನಿರ್ಧರಿಸುತ್ತಾರೆ.

ಮುಂದಿನ 5ರಿಂದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಹೇಗೆ ಬದಲಾಗಬಹುದು ಎಂದು ನಿರೀಕ್ಷಿಸಿದ್ದೀರಿ?

ಅಲ್ಪಾವಧಿಯಲ್ಲಿ ಕೆಲವು ಏರಿಳಿತಗಳಾಗುವ ಸಾಧ್ಯತೆ ಇದ್ದರೂ, ದೀರ್ಘಾವಧಿಯಲ್ಲಿ ಭಾರತದ ಆರ್ಥಿಕತೆಗೆ ಹಾಗೂ ಭಾರತೀಯರಿಗೆ ಉಜ್ವಲ ಭವಿಷ್ಯವಿದೆ.

- ಸಂದರ್ಶನ

ಸಂಜೀವ್‌ ಬಿಕ್‌ಚಂದಾನಿ, ನೌಕ್ರಿ ಡಾಟ್‌ಕಾಮ್‌ನ ಮಾತೃಸಂಸ್ಥೆ ಇಸ್ಫೋಎಜ್‌ ಸಂಸ್ಥಾಪಕ

ಸಂದರ್ಶಕ: ಅಭಿಲಾಷ್‌ ನಾಯಕ್‌, ಬಿಸಿನೆಸ್‌ ಎಡಿಟರ್‌ ಏಷ್ಯಾನೆಟ್‌ ನ್ಯೂಸ್‌

Follow Us:
Download App:
  • android
  • ios