Vodafone Idea ಸರ್ಕಾರದಿಂದ ಆರ್ಥಿಕ ನೆರವು ಕೋರಿದೆ, ಇಲ್ಲದಿದ್ದರೆ 2025-26ರ ನಂತರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಬ್ಯಾಂಕ್‌ಗಳಿಂದ ಸಾಲ ಸಿಗದ ಹಿನ್ನೆಲೆಯಲ್ಲಿ ಕಂಪನಿಯು ಆರ್ಥಿಕ ಸಂಕಷ್ಟದಲ್ಲಿದೆ. 

ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್ -VIL) ಬಂದ್ ಆಗಲಿದೆ. 17ನೇ ಏಪ್ರಿಲ್ 2025ರಂದು ಕೇಂದ್ರ ದೂರಸಂಚಾರ ವಿಭಾಗಕ್ಕೆ ಪತ್ರವೊಂದನ್ನು ಬರೆದಿದ್ದ ವೊಡಫೋನ್ ಐಡಿಯಾ, ಕಂಪನಿಯ ಪುನಾರರಂಭಕ್ಕೆ ನೆರವು ಕೋರುವಂತೆ ಮನವಿ ಮಾಡಿಕೊಂಡಿತ್ತು. ಯಾವುದೇ ಬೆಂಬಲವಿಲ್ಲದೇ ಮತ್ತೆ ಕಂಪನಿಯ ರೀಎಂಟ್ರಿ ಅಸಾಧ್ಯ ಎಂದು ಹೇಳಿಕೊಂಡಿತ್ತು. ಟೆಲಿಕಾಂ ಕಾರ್ಯದರ್ಶಿಗೆ ವೊಡಾಫೋನ್ ಐಡಿಯಾ ಲಿಮಿಟೆಡ್ ಸಿಇಒ ಅಕ್ಷಯ್ ಮುಂದ್ರಾ ಪತ್ರ ಬರೆದು ಕಂಪನಿಯ ಆರ್ಥಿಕ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ್ದರು. ಸರ್ಕಾರದ ಆರ್ಥಿಕ ಬೆಂಬಲ ನೀಡದಿದ್ರೆ ವೊಡಾಫೋನ್ ಐಡಿಯಾ, 2025-26ರ ನಂತರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು. 

ಬ್ಯಾಂಕ್‌ನಿಂದ ಸಾಲ ಸಿಗದ ಹಿನ್ನೆಲೆ ಮುಂದಿನ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ಅಸಾಧ್ಯವಾಗಿದೆ. ಬ್ಯಾಂಕ್‌ಗಳು ಸಾಲ ನೀಡದಿದ್ದರೆ ಕಂಪನಿ ಕಾರ್ಯಾಚರಣೆಯ ಕಾರ್ಯಕ್ಷಮತೆಯಲ್ಲಿನ ಸುಧಾರಣೆ ಕೆಲಸಗಳು ಸ್ಥಗಿತಗೊಳ್ಳಲಿವೆ ಎಂದು ವೊಡಾಫೋನ್ ಐಡಿಯಾ ಹೇಳಿಕೊಂಡಿದೆ. 

ವೊಡಾಫೋನ್ ಐಡಿಯಾದಲ್ಲಿ ಭಾರತ ಸರ್ಕಾರವೇ ಶೇ.49ರಷ್ಟು ಷೇರುಗಳ ಪಾಲನ್ನು ಹೊಂದಿದೆ. ಸ್ಪೆಕ್ಟ್ರಮ್ ಶುಲ್ಕಗಳು ಮತ್ತು AGR ಬಾಕಿಗಳನ್ನು ಈಕ್ವಿಟಿ ಪಾಲಾಗಿ ಪರಿವರ್ತಿಸುವ ಮೂಲಕ, ಸರ್ಕಾರವು ಕಂಪನಿಯ ಅತಿದೊಡ್ಡ ಷೇರುದಾರನಾಗಿದೆ. ಹಾಗಾಗಿ ಸರ್ಕಾರದಿಂದ ವೊಡಾಫೋನ್ ಐಡಿಯಾ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಳ್ಳುತ್ತಿದೆ.

VILಗೆ ದಿವಾಳಿಯಾಗುವ ಆತಂಕ 
ಸರ್ಕಾರದಿಂದ ಯಾವುದೇ ಸಹಾಯ ದೊರೆಯದಿದ್ದರೆ ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ ಆರ್ಥಿಕ ದಿವಾಳಿಯಾಗುವ ಆತಂಕ ಎದುರಾಗಿದೆ. ಸರ್ಕಾರದ ನೆರವು ಸಿಗದಿದ್ದರೆ ಮತ್ತು ಕಂಪನಿಯು AGR ಬಾಕಿಗಳನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಕಂಪನಿಯು NCLT ಅನ್ನು ಸಂಪರ್ಕಿಸಬೇಕಾಗುತ್ತದೆ. ಆದ್ರೆ ಅತ್ಯಂತ ದೀರ್ಘವಾದ ಪ್ರಕ್ರಿಯೆಯಾಗಿದೆ ಎಂದು ವರದಿಯಾಗಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ನೆಟ್‌ವರ್ಕ್ ಜೊತೆಗೆ ಸ್ಪೆಕ್ಟ್ರಮ್ ಸ್ವತ್ತುಗಳ ಮೌಲ್ಯವೂ ಕಡಿಮೆಯಾಗುತ್ತದೆ. ದೂರಸಂಪರ್ಕ ಸೇವೆಯಲ್ಲಿ ಸೀಮಿತ ಸಮಯಕ್ಕೆ ಅಡಚಣೆಯುಂಟಾಗಬಹುದು. ಒಂದು ವೇಳೆಯಲ್ಲಿ ಅಡಚಣೆಯುಂಟಾದ್ರೆ 20 ಕೋಟಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.

ಮೇ 19ಕ್ಕೆ ಅರ್ಜಿ ಮುಂದೂಡಿಕೆ
ಸುಮಾರು 30,000 ಕೋಟಿ ರೂ.ಗಳ ಎಜಿಆರ್ ಬಾಕಿ ಮನ್ನಾ ಕೋರಿ ವಿಐಎಲ್ ಸಲ್ಲಿಸಿದ್ದ ಹೊಸ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ. ಕಂಪನಿಯ ಪರ ವಕೀಲ ಮುಕುಲ್ ರೋಹಟಗಿ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠದಿಂದ ತುರ್ತು ವಿಚಾರಣೆಯನ್ನು ಕೋರಿದ್ದರು. ಅರ್ಜಿಯ ವಿಚಾರಣೆ ಮೇ 19 ರಂದು ನಡೆಯಲಿದೆ. 

ಆರ್ಥಿಕ ಸಹಾಯ ನೀಡಲು ಸಾಧ್ಯವಿಲ್ಲ: ಸಿಂಧಿಯಾ
ಈ ಹಿಂದೆ ಸಂದರ್ಶನದಲ್ಲಿ ವೊಡಾಫೋನ್ ಐಡಿಯಾ ಆರ್ಥಿಕ ಪರಿಸ್ಥಿತಿ ಕುರಿತು ಮಾತನಾಡಿದ್ದ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಈ ಸಂದರ್ಭದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಕಾರ್ಯನಿರ್ವಹಿಸೋದು ವೊಡಾಫೋನ್ ಐಡಿಯಾದ ಕೆಲಸವಾಗಿದೆ. ಇಂದು ಪ್ರಸ್ತುತ ಕೇಂದ್ರ ಸರ್ಕಾರದ ಬಳಿಯಲ್ಲಿ ಕಂಪನಿಯ ಶೇ.49ರಷ್ಟು (ಶೇ.48.99) ಪಾಲುದಾರಿಕೆಯನ್ನು ಹೊಂದಿದೆ. ವೊಡಾಫೋನ್ ಐಡಿಯಾವನ್ನು ಸಾರ್ವಜನಿಕ ವಲಯದ ಉದ್ಯಮವನ್ನಾಗಿ ಮಾಡುವ ಯಾವುದೇ ಯೋಚನೆ ಮತ್ತು ಪ್ರಸ್ತಾವನನೆ ಸರ್ಕಾರದ ಮುಂದಿಲ್ಲ. ನಾವು ಶೇ.49ರ ಪಾಲುದಾರಿಕೆಯಲ್ಲಿ ಮುಂದುವರಿಯುತ್ತವೆ ಎಂದು ಹೇಳಿದ್ದರು. 

ವೊಡಾಫೋನ್ ಐಡಿಯಾದಲ್ಲಿನ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳುವ ಯಾವುದೇ ಪ್ರಸ್ತಾವನೆಗಳು ಇಲ್ಲ. ಒಂದು ವೇಳೆ ಪಾಲುದಾರಿಕೆಗೆ ಹೆಚ್ಚಿಸಿಕೊಂಡರೆ ಖಾಸಗಿ ಒಡೆತನದಲ್ಲಿರುವ ವೊಡಾಫೋನ್ ಐಡಿಯಾ ಸಾರ್ವಜನಿಕ ವಲಯಕ್ಕೆ ಸೇರಿದಂತಾಗುತ್ತದೆ ಎಂದುಸ ಸಿಂಧಿಯಾ ಹೇಳಿದ್ದರು.