ವಿಜಯ್ ಮಲ್ಯ ಮತ್ತು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ನಡುವಿನ 9,000 ಕೋಟಿ ರೂ. ಸಾಲದ ಪ್ರಕರಣದಲ್ಲಿ, ಬಾಂಬೆ ಹೈಕೋರ್ಟ್ ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸೂಚಿಸಿದೆ. ಈ ಕಾನೂನು ಸಮರ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಒಪ್ಪಂದವಾದರೆ ಮಲ್ಯ ಭಾರತಕ್ಕೆ ಮರಳುವ ಸಾಧ್ಯತೆಗಳಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಬರೋಬ್ಬರಿ 9,000 ಕೋಟಿ ರೂಪಾಯಿ ಸಾಲ ಸುಸ್ತಿದಾರ ಹಾಗೂ ತಲೆಮರೆಸಿಕೊಂಡಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ನಡುವಿನ ದಶಕದ ಸುದೀರ್ಘ ಕಾನೂನು ಸಮರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಅತ್ಯಂತ ಮಹತ್ವದ ಆದೇಶ ಹಾಗೂ ಟಿಪ್ಪಣಿ ನೀಡಿದೆ.

ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ವಾಣಿಜ್ಯ ವಿವಾದವನ್ನು ಈಗಲಾದರೂ ಪರಸ್ಪರ ಮಾತುಕತೆ ಅಥವಾ ಸೂಕ್ತ ಮಾರ್ಗದ ಮೂಲಕ ಮುಕ್ತಾಯಗೊಳಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಮುಂದುವರಿಸುತ್ತಲೇ ಹೋದರೆ ದೇಶದ ಅರ್ಥವ್ಯವಸ್ಥೆಯ ಮೇಲೆಯೇ ನೇರ ಹಾಗೂ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ದೇಶದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ: ಹೈಕೋರ್ಟ್ ಕಳವಳ

ಪ್ರಕರಣದ ವಿಚಾರಣೆ ವೇಳೆ ಖಡಕ್ ಟಿಪ್ಪಣಿ ಮಾಡಿದ ನ್ಯಾಯಾಲಯ, 'ವಾಣಿಜ್ಯ ವಿವಾದಗಳ ಪರಿಹಾರವು ಆಯಾ ವಿವಾದದ ಆಂತರಿಕ ಚೌಕಟ್ಟಿನಲ್ಲೇ ಅಡಗಿರುತ್ತದೆ. ಸಂಬಂಧಪಟ್ಟ ಎರಡೂ ಕಡೆಯವರು ಈ ಕಾನೂನು ಸಮರದಿಂದ ಮುಂದುವರಿದು (Move Forward) ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗದಿದ್ದರೆ, ಅದು ಭಾರತದ ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ' ಎಂದು ಎಚ್ಚರಿಸಿದೆ. ಸುಮಾರು ಒಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವುದು ಅತ್ಯಗತ್ಯವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

PMLA ಕೋರ್ಟ್ ಆದೇಶ ಸವಾಲು ಮಾಡಿದ್ದ ಮಲ್ಯ:

ವಿಜಯ್ ಮಲ್ಯ ಸಲ್ಲಿಸಿದ್ದ 2020ರ ಅರ್ಜಿಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದ್ದ ಮಲ್ಯ ಅವರ ಸ್ವತ್ತು ಹಾಗೂ ಆಸ್ತಿಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸಾಲ ವಸೂಲಾತಿಗಾಗಿ ಬಳಸಿಕೊಳ್ಳಲು ಹವಾಲಾ ತಡೆ ಕಾಯ್ದೆ (PMLA) ವಿಶೇಷ ನ್ಯಾಯಾಲಯ ಅನುಮತಿ ನೀಡಿತ್ತು. ವಿಶೇಷ ನ್ಯಾಯಾಲಯದ ಈ ನಿರ್ಧಾರವನ್ನು ಪ್ರಶ್ನಿಸಿ ಮಲ್ಯ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮಗೆ ಸೇರಿದ ಜಪ್ತಿಯಾದ ಆಸ್ತಿಗಳನ್ನು ಬ್ಯಾಂಕ್‌ಗಳಿಗೆ ಹಸ್ತಾಂತರಿಸುವುದು ಕಾನೂನುಬಾಹಿರ ಎಂದು ವಾದಿಸಿದ್ದರು. ಆದರೆ ಹೈಕೋರ್ಟ್, ನಿರಂತರ ಕಾನೂನು ಹೋರಾಟ ನಡೆಸುವ ಬದಲು ಪ್ರಾಯೋಗಿಕ ಮತ್ತು ಪರಸ್ಪರ ಒಪ್ಪಿತ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ತಿಳಿಸಿದೆ.

ಜಾರಿ ನಿರ್ದೇಶನಾಲಯಕ್ಕೆ (ED) ನೋಟೀಸ್ ಜಾರಿ:

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಜಾರಿ ನಿರ್ದೇಶನಾಲಯಕ್ಕೆ (ED) ನೋಟೀಸ್ ಜಾರಿ ಮಾಡಿದೆ. ಮಲ್ಯ ವಿರುದ್ಧ ನಡೆಯುತ್ತಿರುವ ತನಿಖೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಇಲ್ಲಿಯವರೆಗೆ ಜಪ್ತಿ ಮಾಡಲಾಗಿರುವ ಎಲ್ಲಾ ಸ್ಥಿರ ಮತ್ತು ಚರ ಆಸ್ತಿಗಳ ಸಂಪೂರ್ಣ ವಿವರಗಳನ್ನು ಹೊಂದಿದ ನಿಖರ ವರದಿಯನ್ನು ಸಲ್ಲಿಸುವಂತೆ ಇಡಿ ಉಪ ನಿರ್ದೇಶಕರಿಗೆ ಆದೇಶಿಸಿದೆ. ಜಪ್ತಿಯಾದ ಆಸ್ತಿಗಳನ್ನು ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ಇಡಿ ಸಲ್ಲಿಸುವ ವರದಿ ಮುಂದಿನ ವಿಚಾರಣೆಯಲ್ಲಿ ಅತ್ಯಂತ ನಿರ್ಣಾಯಕವಾಗಲಿದೆ.

ಮತ್ತೆ ಬೆಂಗಳೂರಿಗೆ ಬರ್ತಾರಾ ವಿಜಯ್ ಮಲ್ಯ?

ಬಾಂಬೆ ಹೈಕೋರ್ಟ್‌ನ ಈ ಪ್ರಮುಖ ಸುಳಿವು ಹಾಗೂ ಮಧ್ಯಸ್ಥಿಕೆಯ ಸೂಚನೆಯಿಂದಾಗಿ, ಮಲ್ಯ ಅವರೊಂದಿಗಿನ ಬ್ಯಾಂಕ್‌ಗಳ ವ್ಯವಹಾರ ಇತ್ಯರ್ಥವಾಗುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ಬ್ಯಾಂಕ್‌ಗಳು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಒಪ್ಪಂದ ಏರ್ಪಟ್ಟರೆ, ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ತಮ್ಮ ನೆಚ್ಚಿನ ಬೆಂಗಳೂರಿಗೆ ಮರಳುವ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸ್ವದೇಶಕ್ಕೆ ಹಿಂದಿರುಗುವ ದಾರಿ ಸುಗಮವಾಗಬಹುದು ಎಂಬ ಚರ್ಚೆಗಳು ವಾಣಿಜ್ಯ ವಲಯದಲ್ಲಿ ಆರಂಭವಾಗಿವೆ.