ಆನ್‌ಲೈನ್ ಶಾಪಿಂಗ್ ವೇಳೆ ಆರ್ಡರ್ ಮಾಡಿದ ವಸ್ತು ಸಿಗದೆ ಗ್ರಾಹಕರು ಪರದಾಡುವ ಘಟನೆಗಳು ಆಗಾಗ್ಗೆ ನಡೆಯುತ್ತವೆ. ಆದರೆ ಈ ಬಾರಿ 5 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್ ಮಾಡಿ, ಡೆಲಿವರಿಗಾಗಿ ಕಾಯುತ್ತಿದ್ದ ಗ್ರಾಹಕರಿಗೆ Myntra ನೀಡಿದ ಶಾಕ್ ಇದೀಗ ಗ್ರಾಹಕ ಕೋರ್ಟ್‌ವರೆಗೂ ಹೋಗಿದೆ.
ಆನ್‌ಲೈನ್ ಶಾಪಿಂಗ್ ವೇಳೆ ಆರ್ಡರ್ ಮಾಡಿದ ವಸ್ತು ಸಿಗದೆ ಗ್ರಾಹಕರು ಪರದಾಡುವ ಘಟನೆಗಳು ಆಗಾಗ್ಗೆ ನಡೆಯುತ್ತವೆ. ಆದರೆ ಈ ಬಾರಿ 5 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್ ಮಾಡಿ, ಡೆಲಿವರಿಗಾಗಿ ಕಾಯುತ್ತಿದ್ದ ಗ್ರಾಹಕರಿಗೆ Myntra ನೀಡಿದ ಶಾಕ್ ಇದೀಗ ಗ್ರಾಹಕ ಕೋರ್ಟ್‌ವರೆಗೂ ಹೋಗಿದೆ. ಪ್ರಕರಣದಲ್ಲಿ Myntraಗೆ ಒಟ್ಟು ₹60,000 ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.
₹59,750 ಕೊಟ್ಟು 5 ಗ್ರಾಂ ಚಿನ್ನ ಆರ್ಡರ್
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲ್ ನಿವಾಸಿಯಾಗಿರುವ 32 ವರ್ಷದ ಗ್ರಾಹಕರು 2025ರ ಅಕ್ಟೋಬರ್ 5ರಂದು Myntra ಮೂಲಕ Kalyan Jewellersನ 24K (999 ಪ್ಯೂರಿಟಿ) 5 ಗ್ರಾಂ ಚಿನ್ನದ ನಾಣ್ಯ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅವರು ₹59,750 ಅನ್ನು UPI ಮೂಲಕ ಪಾವತಿಸಿದ್ದರು. Myntra ಆರ್ಡರ್ ಅನ್ನು ದೃಢಪಡಿಸಿ, ಅಕ್ಟೋಬರ್ 22ರೊಳಗೆ ಡೆಲಿವರಿ ಮಾಡುವುದಾಗಿ ತಿಳಿಸಿತ್ತು.
ಡೆಲಿವರಿ ಇಲ್ಲ, ಕ್ಯಾನ್ಸಲ್‌ಗೂ ಅವಕಾಶ ಇಲ್ಲ
ಆದರೆ ನಿಗದಿತ ಸಮಯದಲ್ಲಿ ಚಿನ್ನದ ನಾಣ್ಯ ಡೆಲಿವರಿ ಆಗಲಿಲ್ಲ. ಗ್ರಾಹಕರು ಹಲವು ಬಾರಿ ಇ-ಮೇಲ್ ಮತ್ತು ಚಾಟ್ ಮೂಲಕ Myntra ಅನ್ನು ಸಂಪರ್ಕಿಸಿ, ಚಿನ್ನವನ್ನು ಡೆಲಿವರಿ ಮಾಡಿ ಅಥವಾ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಮನವಿ ಮಾಡಿದರು. ಆದರೆ 41 ದಿನಗಳಿಗೂ ಹೆಚ್ಚು ಕಾಲ ಆರ್ಡರ್ ಕ್ಯಾನ್ಸಲ್ ಮಾಡಲು Myntra ಅವಕಾಶ ನೀಡಲಿಲ್ಲ. ಚಿನ್ನದ ಉತ್ಪನ್ನಗಳಿಗೆ ಕ್ಯಾನ್ಸಲೇಶನ್ ಅನ್ವಯಿಸುವುದಿಲ್ಲ ಎಂಬ ತನ್ನ ನಿಯಮವನ್ನು ಕಂಪನಿ ಉಲ್ಲೇಖಿಸಿತ್ತು.
ಕೊನೆಗೆ Myntraನೇ ಆರ್ಡರ್ ಕ್ಯಾನ್ಸಲ್ ಮಾಡಿತು
ಗ್ರಾಹಕರಿಗೆ ಚಿನ್ನ ಸಿಗಲಿಲ್ಲ, ಕ್ಯಾನ್ಸಲ್ ಮಾಡಲು ಕೂಡ ಅವಕಾಶ ಸಿಗಲಿಲ್ಲ. ಹೀಗಿರುವಾಗ ಕೊನೆಗೆ Myntra ಯಾವುದೇ ಸ್ಪಷ್ಟ ಕಾರಣ ನೀಡದೆ ಆರ್ಡರ್ ಅನ್ನು ಏಕಪಕ್ಷೀಯವಾಗಿ ಕ್ಯಾನ್ಸಲ್ ಮಾಡಿತು. ಇದರ ನಡುವೆ ಚಿನ್ನದ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಗ್ರಾಹಕರು ಅದೇ ಮೊತ್ತಕ್ಕೆ 5 ಗ್ರಾಂ ಚಿನ್ನವನ್ನು ಮತ್ತೆ ಖರೀದಿಸುವ ಅವಕಾಶವನ್ನೂ ಕಳೆದುಕೊಂಡರು.
Myntraಗೆ ₹60,000 ಪಾವತಿಸುವಂತೆ ಕೋರ್ಟ್ ಆದೇಶ
ಈ ಪ್ರಕರಣವನ್ನು ಕರ್ನೂಲ್ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ವಿಚಾರಣೆ ನಡೆಸಿತು. 2026ರ ಜುಲೈ 22ರಂದು ಆಯೋಗ ತನ್ನ ಆದೇಶ ನೀಡಿದೆ. Myntra ಗ್ರಾಹಕರಿಗೆ ₹50,000 ಪರಿಹಾರ ನೀಡಬೇಕು. ಇದರ ಜೊತೆಗೆ ₹10,000 ವ್ಯಾಜ್ಯ ವೆಚ್ಚ ಪಾವತಿಸಬೇಕು ಎಂದು ಆದೇಶಿಸಲಾಗಿದೆ. ಅಂದರೆ ಒಟ್ಟು ₹60,000 ಪಾವತಿಸಬೇಕಾಗಿದೆ.
ನಾವು ಕೇವಲ ಮಧ್ಯವರ್ತಿಗಳು ಎಂದ Myntra
ವಿಚಾರಣೆ ವೇಳೆ Myntra ತನ್ನದು ಕೇವಲ ಇ-ಕಾಮರ್ಸ್ ಮಧ್ಯವರ್ತಿ ವೇದಿಕೆ ಎಂಬ ವಾದ ಮುಂದಿಟ್ಟಿತ್ತು. ಆದರೆ ಗ್ರಾಹಕ ಆಯೋಗ ಈ ವಾದವನ್ನು ಒಪ್ಪಲಿಲ್ಲ.ಗ್ರಾಹಕರಿಂದ ಪಾವತಿ ಸ್ವೀಕರಿಸುವುದು ಮತ್ತು ಪ್ಲಾಟ್‌ಫಾರ್ಮ್ ಶುಲ್ಕ ಪಡೆಯುವುದು ಸೇರಿದಂತೆ ವಹಿವಾಟಿನಲ್ಲಿ Myntra ನೇರವಾಗಿ ಭಾಗಿಯಾಗಿರುವುದರಿಂದ, ಸೇವೆಯ ಕೊರತೆಗೆ ಕಂಪನಿಯೂ ಜವಾಬ್ದಾರಿಯಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು.
