ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ನಾಯಕ ಕ್ಸಿ ಜಿಂಪಿಂಗ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ನಂತರ ಟ್ರಂಪ್ ಸಲಹೆಗಾರ ಪೀಟರ್ ನವರೋ ಭಾರತವನ್ನು ಮತ್ತೆ ಟೀಕಿಸಿದ್ದಾರೆ.
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಕಾರಣಕ್ಕೆ ಭಾರತದ ಮೇಲೆ ಭಾರಿ ಸುಂಕ ಹೇರಿ ಆಟ ಶುರು ಮಾಡಿದ್ದ ಅಮೆರಿಕಾಗೆ ಈಗ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ನಾಯಕ ಕ್ಸಿ ಜಿಂಪಿಂಗ್ ಅವರನ್ನು ಭೇಟಿ ಮಾಡಿದ ನಂತರ ಮತ್ತಷ್ಟು ಉರಿ ಶುರುವಾಗಿದ್ದು, ಟ್ರಂಪ್ ಸಲಹಾಗಾರರು ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮುಂದುವರೆಸಿದ್ದಾರೆ. ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡುವಿನ ಭೇಟಿಯನ್ನು ಒಂದು ನಾಚಿಕೇಗೇಡಿನ ವರ್ತನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಕರೆದಿದ್ದು, ರಷ್ಯಾದೊಂದಿಗಿನ ಭಾರತದ ವ್ಯಾಪಾರ ಸಂಬಂಧಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಪುಟಿನ್ -ಮೋದಿ ಭೇಟಿ ನಾಚಿಕೆಗೇಡಿನ ವಿಚಾರ ಎಂದ ಟ್ರಂಪ್ ಸಲಹೆಗಾರ:
ಪ್ರಧಾನಿ ಮೋದಿ ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ಅವರೊಂದಿಗೆ ಹಾಸಿಗೆ ಹಿಡಿಯುವುದನ್ನು ನೋಡುವುದು ನಾಚಿಕೆಗೇಡಿನ ಸಂಗತಿ. ಅವರು ಏನು ಯೋಚಿಸುತ್ತಿದ್ದಾರೆಂದು ನನಗೆ ಖಚಿತವಿಲ್ಲ. ಅವರು ರಷ್ಯಾದೊಂದಿಗೆ ಅಲ್ಲ, ನಮ್ಮೊಂದಿಗೆ ಇರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡಿದ ಒಂದು ದಿನದ ನಂತರ, ಅಲ್ಲಿ ಅವರು ಶಾಂಘೈ ಸಹಕಾರ ಸಂಸ್ಥೆ (SCO)ಯಲ್ಲಿ ಭಾಗವಹಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಅಮೆರಿಕಾದ ಹೊಟ್ಟೆ ಉರಿಯುವಂತೆ ಮಾಡಿದೆ.
ಭಾರತವನ್ನು ಸುಂಕಗಳ ರಾಜ ಎಂದು ಕರೆದಿದ್ದ ಪೀಟರ್ ನವರೋ
ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕ ಹೇರಿರುವ ಟ್ರಂಪ್ ಈಗ ನಿರಂತರವಾಗಿ ರಷ್ಯಾ ಜೊತೆಗಿನ ಭಾರತದ ಸಂಬಂಧವನ್ನು ಟೀಕಿಸುತ್ತಲೇ ಬಂದಿದ್ದಾರೆ. ಭಾರತ ರಷ್ಯಾದಿಂದ ತೈಲ ಖರೀದಿ ಮಾಡ್ತಿರುವುದರಿಂದ ಈ ತೈಲದಿಂದ ಬಂದ ಹಣವನ್ನು ಬಳಸಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ವಾದ ಮಾಡುತ್ತಲೇ ಬಂದಿದ್ದಾರೆ. ಇದಕ್ಕೂ ಮೊದಲು ಪೀಟರ್ ನವರೊ ಭಾರತವನ್ನು ಸುಂಕಗಳ ಮಹಾರಾಜ ಎಂದು ಕರೆದಿದ್ದರು, ಭಾರತದ ಸುಂಕಗಳು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿವೆ ಮತ್ತು ತಮ್ಮ ದೇಶವು ಅದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತದೆ ಎಂದು ಅವರು ಹೇಳಿದ್ದರು. ಭಾರತದ ಮೇಲೆ ಒಟ್ಟು 50 ಶೇಕಡಾ ತೆರಿಗೆಯನ್ನು ಅಮೆರಿಕಾ ವಿಧಿಸಿದೆ. ಶೇಕಡಾ 25 ಪರಸ್ಪರ ತೆರಿಗೆ ಆಗಿದ್ದಾರೆ. ಮತ್ತುಳಿದ 25 ರಷ್ಯಾದಿಂ ತೈಲ ಖರೀದಿಸುತ್ತಿರುವುದಕ್ಕೆ ದಂಡವಾಗಿ ವಿಧಿಸಲಾಗುತ್ತಿದೆ ಎಂದು ಅಮೆರಿಕಾ ಹೇಳಿದೆ.
ಭಾರತವನ್ನು 'ಕ್ರೆಮ್ಲಿನ್‌ಗೆ ಲಾಂಡ್ರೋಮ್ಯಾಟ್' (ಭಾರತ ರಷ್ಯಾ ಉಕ್ರೇನ್ ಯುದ್ಧದಲ್ಲಿ ಪರೋಕ್ಷ ಪಾಲುದಾರ ಎಂಬಾರ್ಥ) ಉಕ್ರೇನ್‌ನ ಪರೋಕ್ಷ ಎಂದು ಕರೆದ ಅವರು, ಭಾರತೀಯ ಸಂಸ್ಕರಣಾಗಾರರು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿ, ಸಂಸ್ಕರಿಸುತ್ತಿದ್ದಾರೆ ಮತ್ತು ಹೆಚ್ಚಿನ ಬೆಲೆಗೆ ರಫ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದು ಉಕ್ರೇನಿಯನ್ನರನ್ನು ಕೊಲ್ಲುತ್ತದೆ. ಮತ್ತು ತೆರಿಗೆದಾರರಾಗಿ ನಾವು ಏನು ಮಾಡಬೇಕು? ನಾವು ಅವರಿಗೆ ಹೆಚ್ಚಿನ ಹಣವನ್ನು ಕಳುಹಿಸಬೇಕು ಎಂದು ದೂರಿದ ಅವರು ಭಾರತ ರಫ್ತು ಮಾಡ್ತಿರುವ ವಸ್ತುಗಳ ಮೇಲಿನ ಟ್ರಂಪ್ ಹೇರಿರುವ ದಂಡವನ್ನು ಸಮರ್ಥಿಸಿಕೊಂಡಿದ್ದಾರೆ.
ಟ್ರಂಪ್ ಭಾರತದ ಮೇಲೆ ಹೇರಿರುವ ತೆರಿಗೆ ನೀತಿಗೆ ಅಮೆರಿಕ ಆರ್ಥಿಕ ತಜ್ಞರಿಂದಲೇ ಅಸಮಾಧಾನ:
ಆದರೆ ಪ್ರಪಂಚದ ಅತ್ಯಂತ ಬಲಿಷ್ಠ ಆರ್ಥಿಕತೆಯಲ್ಲಿ ಒಂದಾಗಿರುವ ಭಾರತದ ಮೇಲೆ ತೆರಿಗೆ ಯುದ್ಧಕ್ಕಿಳಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿ ವಿರುದ್ಧ ಅಲ್ಲಿನ ಆರ್ಥಿಕ ತಜ್ಞರೇ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ಅಮೆರಿಕಾದ ಈ ಆರ್ಥಿಕ ಸಮರವೂ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡಂತೆ ಎಂದು ಅಮೆರಿಕಾದ ಪ್ರಸಿದ್ಧ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್ ಇತ್ತೀಚೆಗೆ ಹೇಳಿದ್ದರು ರಷ್ಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕಾದ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್, ಬ್ರಿಕ್ಸ್ ಅನ್ನು ಪಶ್ಚಿಮಾತ್ಯ ರಾಷ್ಟ್ರಗಳಿಗೆ ಆರ್ಥಿಕ ಪರ್ಯಾಯವಾಗಲು ಒತ್ತಾಯಿಸುತ್ತಿರುವ ಭಾರತದ ವಿರುದ್ಧ ವಿಶ್ವದ ಕಠಿಣ ವ್ಯಕ್ತಿಯಂತೆ ವರ್ತಿಸುತ್ತಿರುವ ಅಮೆರಿಕದ ನಡೆಯೂ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡತೆ ಎಂದು ಬಣ್ಣಿಸಿದ್ದರು. ವಿಶ್ವಸಂಸ್ಥೆಯ ಪ್ರಕಾರ ಭಾರತ ಈಗ ಭೂಮಿಯ ಮೇಲಿನ ಅತಿದೊಡ್ಡ ಆರ್ಥಿಕವಾಗಿ ಸಧೃಡ ದೇಶವಾಗಿದೆ. ಇಂತಹ ಸಂದರ್ಭದಲ್ಲಿ ಭಾರತ ಏನು ಮಾಡಬೇಕೆಂದು ಅಮೆರಿಕ ಹೇಳುತ್ತಿರುವುದು, ಇಲ್ಲಿ 'ಇಲಿ ಆನೆಗೆ ಮುಷ್ಟಿಯಿಂದ ಹೊಡೆದಂತೆ' ಎಂದು ಅವರು ಹೇಳುವ ಮೂಲಕ ಟ್ರಂಪ್ ಅವರ ತೆರಿಗೆ ನೀತಿಗೆ ಅವರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು.
ಅದೇನೆ ಇರಲಿ ಭಾರತದ ವಿರುದ್ಧ ಬಾಂಗ್ಲಾದೇಶ ಹಾಗೂ ಪಾಕಿಸ್ತಾನವನ್ನು ಎತ್ತಿಕಟ್ಟಿ ಗಡಿಯಲ್ಲಿ ಕುಮಕ್ಕು ನೀಡುವುದಕ್ಕೆ ಪ್ರೇರಣೆ ನೀಡ್ತಿರುವ ಹಾಗೂ ಅಲ್ಲಿ ಗಾಜಾದಲ್ಲಿಯೂ ಇಸ್ರೇಲ್ ಬೆನ್ನಹಿಂದೆ ಸಧೃಡವಾಗಿ ನಿಂತಿರುವ ಅಮೆರಿಕಾವೂ, ಈಗ ಭಾರತವೂ, ರಷ್ಯಾದ ತೈಲ ಖರೀದಿಸುತ್ತಿರುವುದರಿಂದ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ ಎಂದು ಹೇಳುತ್ತಿರುವುದು ಅಮೆರಿಕಾದ ದ್ವಿಮುಖ ನೀತಿಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ನಾಪತ್ತೆಯಾದ ಗಂಡನ ಮತ್ತೊಂದು ಸಂಸಾರ: ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಹೆಂಡ್ತಿಯಿಂದ ಪತ್ತೆ
ಇದನ್ನೂ ಓದಿ: ನೋ ಹೆಲ್ಮೆಟ್ ನೋ ಪೆಟ್ರೋಲ್ ಎಂದ ಬಂಕ್ ಸಿಬ್ಬಂದಿಗೆ ಗುಂಡಿಕ್ಕಿದ ಬೈಕ್ ಸವಾರರು
