SCO ಶೃಂಗಸಭೆಗೆ ಪಾಲ್ಗೊಳ್ಳಲು ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಮ್ಮ ಲಿಮೋಸಿನ್ ಲಕ್ಷುರಿ ಕಾರಿನಲ್ಲಿ ಆಗಮಿಸಿದ್ದಾರೆ. ಈ ವೇಳೆ ಇದೇ ಕಾರಿನಲ್ಲಿ ಪ್ರಧಾನಿ ಮೋದಿಯೂ ಪ್ರಯಾಣ ಮಾಡಿದ್ದಾರೆ. ಪುಟಿನ್ ಬಳಸುವ ಲಿಮೋಸಿನ್ ಕಾರಿನ ವಿಶೇಷತೆ ಏನು?
ತೈಂಜಿನ್ (ಸೆ.01) ಶಾಂಘೈ ಕಾರ್ಪೋರೇಶನ್ ಆರ್ಗನೈಸೇಶನ್ (SCO) ಶೃಂಗಸಭೆ ಈ ಬಾರಿ ಅತ್ಯಂತ ಮಹತ್ವದ್ದಾಗಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೆರಿಗೆ ನೀತಿಯಿಂದ ಕೆರಳಿರುವ ಭಾರತ, ಚೀನಾ, ರಷ್ಯಾ ಪರ್ಯಾ ವ್ಯಾಪಾರ ಒಪ್ಪಂದ ಕುರಿತು ಈ ಸಭೆ ವಿಶ್ವದ ಗಮನಸೆಳೆದಿದೆ. ಚೀನಾದ ತೈಂಜಿನ್‌ನಲ್ಲಿ ನಡೆಯುತ್ತಿರುವ SCO ಶೃಂಗಸಭೆಯಲ್ಲಿ ಪಾಲಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಮ್ಮ ರಷ್ಯನ್ ಬೀಸ್ಟ್ ಲಿಮೋಸಿನ್ ಕಾರಿನಲ್ಲಿ ಆಗಮಿಸಿದ್ದಾರೆ. ಆದರೆ ಈ ಕಾರಿನಲ್ಲಿ ವಿಶೇಷ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಯಾಣ ಮಾಡಿದ್ದಾರೆ. ಪ್ರೊಟೋಕಾಲ್ ಹಾಗೂ ಭದ್ರತಾ ಕಾರಣಗಳಿಂದ ರಷ್ಯನ್ ಅಧ್ಯಕ್ಷರು ಮಾತ್ರ ಪ್ರಯಾಣಿಸುವ ಈ ಬೀಸ್ಟ್ ಕಾರಿನಲ್ಲಿ ಪುಟಿನ್, ಪ್ರಧಾನಿ ಮೋದಿಗೂ ಜಾಗ ನೀಡಿದ್ದಾರೆ. ಬರೋಬ್ಬರಿ 6,200 ಕೆಜಿ ತೂಕದ ಈ ಕಾರು ಹಲವು ವಿಶೇಷತೆಗಳಿಂದ ಕೂಡಿದೆ.
ರಷ್ಯಾ ಅಧ್ಯಕ್ಷರ ಅಧಿಕೃತ ಕಾರು
ತೈಂಜೀನ್‌ನಲ್ಲಿ ನಡೆಯುತ್ತಿರುವ SCO ಶೃಂಗಸಭೆಯ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಹಾಗೂ ಮೋದಿ ಜೊತೆಯಾಗಿ ಲಿಮೋಸಿನ್ ಕಾರಿನಲ್ಲಿ ಆಗಮಿಸಿದ್ದಾರೆ. ಈ ಲಿಮೋಸಿನ್ ಕಾರು ರಷ್ಯಾ ಔರಸ್ ಬೀಸ್ಟ್ ಸೆಡಾನ್ ಬ್ರ್ಯಾಂಡ್ ಕಾರು ಇದಾಗಿದೆ. ಇದು ಸಂಪೂರ್ಣವಗಿ ಮೇಡ್ ಇನ್ ರಷ್ಯ ಕಾರು. ಇದು ರಷ್ಯಾ ಅಧ್ಯಕ್ಷರ ಅಧಿಕೃತ ಕಾರು. 2018ರಿಂದ ರಷ್ಯಾ ಅಧ್ಯಕ್ಷರಿಗೆ ಲಿಮೋಸಿನ್ ಕಾರನ್ನು ಬಳಕೆ ಮಾಡಲಾಗುತ್ತಿದೆ. ಇದಕ್ಕೂ ಮೊದಲು ಮರ್ಸಿಡಿಸ್ ಬೆಂಜ್ ಎಸ್ 600 ಗಾರ್ಡ್ ಪುಲ್‌ಮ್ಯಾನ್ ಕಾರನ್ನು ಬಳಕೆ ಮಾಡಲಾಗುತ್ತಿತ್ತು.
ಚೀನಾ ಬಳಿಕ ಇಂದು ಪ್ರಧಾನಿ ಮೋದಿ-ಪುಟಿನ್ ಭೇಟಿ; ವಿಶ್ವಮಟ್ಟದಲ್ಲಿ ತೀವ್ರ ಸಂಚಲನ!
ಬಸ್‌ಗಿಂತಲೂ ಹೆಚ್ಚು ತೂಕದ ಕಾರು
ಲಿಮೋಸಿನ್ ಕಾರಿನ ತೂಕ ಬರೋಬ್ಬರಿ 6,200 ಕೆಜಿ. ವೋಲ್ವೋ ಸೇರಿದಂತೆ ಮಲ್ಟಿ ಆ್ಯಕ್ಸಲ್ ಬಸ್ ತೂಕಕ್ಕಿಂತಲೂ ಹೆಚ್ಚಿದೆ ಈ ಕಾರಿನ ತೂಕ. ಈ ಕಾರಿನಲ್ಲಿ ಬಳಸಿರುವ ಪ್ರತಿಯೊಂದು ವಸ್ತುಗಳು, ಗಾಜು ಸೇರಿದಂತೆ ಬುಲೆಟ್ ಪ್ರೂಫ್ ಹಾಗೂ ಸ್ಫೋಟ ತಡೆಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಈ ಕಾರಿನ ತೂಕ ಹೆಚ್ಚು. ಈ ಕಾರು ಒಂದು ಸೆಕೆಂಡ್‌ಗೆ 250 ಕಿ.ಮೀ ಗರಿಷ್ಠ ವೇಗ ತಲುಪಲಿದೆ.

VR10 ಬ್ಯಾಲಿಸ್ಟಿಕ್ ಪ್ರೊಟೆಕ್ಷನ್ ಈ ಕಾರಿಗಿದೆ. ಬುಲೆಟ್ ತಡೆಯುವ ಶಖ್ತಿ, ಗ್ರೇನೇಡ್ ಸ್ಪೋಟವನ್ನು ತಡೆಯಲಿದೆ. ತುರ್ತು ಆಮ್ಲಜನ ಪೂರೈಕೆಯೂ ಈ ಕಾರಿನಲ್ಲಿದೆ. ಬೆಂಕಿ ಸೇರಿದಂತೆ ಹಲವು ಅಪಾಯ ನಿರೋಧ ಸಾಮರ್ಥ್ಯ ಈ ಕಾರಿಗಿದೆ. ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಪೆಡಸ್ಟ್ರಿಯನ್ ಎಮರ್ಜೆನ್ಸಿ ಬ್ರೇಕಿಂಗ್ ಎನಾನ್ಸ್ ಸಿಸ್ಟಮ್, ಕಚೇರಿ ಕೆಲಸಗಳನ್ನು ಕಾರಿನಲ್ಲಿ ಕುಳಿತು ಮಾಡಬಹುದಾದ ಸೌಲಭ್ಯ, ಮಿನಿ ಫ್ರಿಡ್ಜ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಈ ಕಾರಿನಲ್ಲಿದೆ.
ತುರ್ತು ಸಂದರ್ಭವನ್ನೂ ನಿಭಾಯಿಸಲಿದೆ ಈ ಕಾರು
ತುರ್ತು ಸಂದರ್ಭದಲ್ಲಿ ಅಥವಾ ಅವಘಡದ ಸಂದರ್ಭದಲ್ಲಿ ಕಾರಿನ ಡೋರ್ ಲಾಕ್ ಆದರೆ ತುರ್ತು ನಿರ್ಗಮನ ಸೌಲಭ್ಯವೂ ಈ ಕಾರಿನಲ್ಲಿದೆ. ಯಾವುದೇ ಸಂದರ್ಭದಲ್ಲೂ ಸಂಪರ್ಕದಲ್ಲಿರುವಂತ ಕಮ್ಯಾನಿಕೇಶನ್ ಸಿಸ್ಟಮ್ ಈ ಕಾರಿನಲ್ಲಿದೆ. ಪ್ರಮುಖವಾಗಿ ಈ ಲಿಮೋಸಿನ್ ಕಾರುಗಳು ಅಧ್ಯಕ್ಷರ ಅವಶ್ಯಕತೆ, ಸುರಕ್ಷತೆ, ಪ್ರಯಾಣ ಸೇರಿದಂತೆ ಹಲವು ಕಾರಣಗಳಿಂದ ಕಸ್ಟಮೈಸ್ ಮಾಡಲಾಗುತ್ತದೆ. ಹೀಗಾಗಿ ಈ ಕಾರಿನ ಅಸಲಿ ಬೆಲೆ ಎಲ್ಲೂ ಬಹಿರಂಗ ಮಾಡುವುದಿಲ್ಲ.
ಈ ಕಾರು 4.4 ಲೀಟರ್ V8 ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಎಲೆಕ್ಟ್ರಿಕ್ ಮೋಟಾರ್ ಕೂಡ ಈ ಕಾರಿನಲ್ಲಿದೆ. 600 ಹೆಚ್‌ಪಿ ಪವರ್ ಹಾಗೂ 880 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.


