ಟೊಮ್ಯಾಟೊ ಬೆಲೆ 100 ರೂ. ಗಡಿ ದಾಟಲು ಕಾರಣ ಬಹಿರಂಗ: ಇನ್ನೂ 2 ತಿಂಗಳು ಕಡಿಮೆಯಾಗೋಲ್ಲ
ರಾಜ್ಯದಲ್ಲಿ ಟೊಮೆಟೋ ಬೆಲೆ ಏರಿಕೆಯಾಲು ಕಾರಣ ಬಹಿರಂಗವಾಗಿದ್ದು, ಮುಂದಿನ ಎರಡು ತಿಂಗಳ ಕಾಲ ಬೆಲೆ ಕಡಿಮೆ ಆಗುವುದಿಲ್ಲ ಎಂದು ರೈತರು ಹೇಳಿದ್ದಾರೆ.
ವರದಿ- ರವಿಚಂದ್ರ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜು.11): ರಾಜ್ಯದಲ್ಲಿ ಟೊಮೆಟೊ ಬೆಲೆ ಶತಕ ಬಾರಿಸಿದೆ. ತರಕಾರಿ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಟೊಮೆಟೊ ಬದಲು ಹುಣಸೆ ಹಣ್ಣು, ಸೇರಿದಂತೆ ಇತರೆ ಪದಾರ್ಥವನ್ನ ಬಳಸಲು ಮುಂದಾಗಿದ್ದಾರೆ. ಆದರೆ, ಹೊಸ ಬೆಳೆ ಬರುವವರೆಗೂ ಟೊಮೆಟೊ ಬೆಲೆ ಕಡಿಮೆ ಆಗೋದಿಲ್ಲವೆಂದು ರೈತರು ಹೇಳುತ್ತಿದ್ದಾರೆ. ಇನ್ನು ಟೊಮೆಟೋ ಬೆಲೆ ಏರಿಕೆಗೆ ಕಾರಣವನ್ನೂ ರೈತರು ಬಿಚ್ಚಿಟ್ಟಿದ್ದಾರೆ.
ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಪ್ರಮುಖ ತರಕಾರಿಗಳಲ್ಲಿ ಒಂದಾಗಿರುವ ಟೊಮೆಟೋ ಹಣ್ಣಿನ ಬೆಲೆ ಕಳೆದ ತಿಂಗಳು ದಿಢೀರನೇ ಏರಿಕೆಯಾಗಿತ್ತು. ಕೇವಲ 20 ರೂ.ಗೆ ಮಾರಾಟ ಆಗುತ್ತಿದ್ದ ಟೊಮೆಟೋ ಕೇವಲ 15 ದಿನಗಳಲ್ಲಿ 100 ರೂ. ಗಡಿ ದಾಟಿತ್ತು. ಇದಕ್ಕೆ ಕಾರಣವನ್ನು ಪತ್ತೆ ಮಾಡಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ದಿನಗಳೆದಂತೆ ಟೊಮೆಟೋ ಬೆಲೆ ಏರಿಕೆಗೆ ಕಾರಣವೂ ಬಹಿರಂಗವಾಗಿದೆ. ಅದರ, ಜೊತೆಗೆ, ಇನ್ನೂ ಎರಡು ತಿಂಗಳುಗಳ ಕಾಲ ಟೊಮೆಟೋ ಹಣ್ಣಿನ ಬೆಲೆ 100 ರೂ.ಗಿಂತ ಹೆಚ್ಚಿನ ದರದಲ್ಲಿಯೇ ಮಾರಾಟ ಆಗಲಿದೆ ಎಂಬ ಸತ್ಯವೂ ಬಹಿರಂಗವಾಗಿದೆ.
- ಟೊಮೆಟೋ ಬೆಲೆ ಏರಿಕೆಗೆ ಇಲ್ಲಿವೆ ಕಾರಣ..
- ತರಕಾರಿಗಳ ರಾಣಿ ಟೊಮೆಟೊ ಬೆಳೆಗೆ ಮಳೆಯ ಕೊರತೆ ಉಂಟಾಗಿತ್ತು.
- ಮುಂಗಾರು ಅವಧಿಯಲ್ಲಿ ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಟೊಮೆಟೊ ಬೆಳೆಗೆ ಎಲೆರೋಗವು ಕಾಣಿಸಿಕೊಂಡಿತ್ತು.
- ಇನ್ನು ಟೊಮೆಟೋ ಬೆಳೆಗೆ ಔಷಧ ಸಿಂಪಡಿಸಿದರೂ ಪ್ರಖರ ಬಿಸಿಲು ಇರದ ಕಾರಣ ರೋಗ ಗುಣಮುಖ ಆಗಲಿಲ್ಲ.
- ಟೊಮೆಟೋ ಇಳುವರಿಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿದೆ.
- ಈ ಮೇಲಿನ ಪ್ರಮುಖ ಕಾರಣಗಳಿಂದ ಟೊಮೆಟೋ ಬೆಳೆಯ ಇಳುವರಿಯಲ್ಲಿ ಕಡಿಮೆಯಾಗಿದೆ.
- ಅಲ್ಲದೇ ಉತ್ತರ ಪ್ರದೇಶ, ಛತ್ತೀಸ್‌ಘಡ ಹಾಗೂ ದೆಹಲಿಯಲ್ಲಿ ಟೊಮೆಟೊ ಬೆಳೆ ಕಡಿಮೆಯಾಗಿದೆ.
- ಕರ್ನಾಟಕದಿಂದ ಉತ್ತರ ಭಾರತದ ರಾಜ್ಯಗಳಿಗೆ ಟೊಮೆಟೊ ರಪ್ತು ಮಾಡಲಾಗುತ್ತಿದೆ.
ಎರಡು ತಿಂಗಳು ದುಬಾರಿ ಬೆಲೆ ಮುಂದುವರಿಕೆ ಯಾಕೆ ಗೊತ್ತಾ? :
ಮೇ ತಿಂಗಳ ಅಂತ್ಯಕ್ಕೆ ಟೊಮೆಟೋ ಬೆಳೆಯ ಕಟಾವು ಪೂರ್ಣಗೊಳ್ಳುವ ಹಂತವನ್ನು ತಲುಪಿರುತ್ತದೆ. ಮುಂಗಾರು ಮಳೆ ಸರಿಯಾದ ಸಮಯಕ್ಕೆ ಆರಂಭವಾಗಿದ್ದರೆ ಅಥವಾ ಮುಂಗಾರು ಪೂರ್ವ ಮಳೆ ಸುರಿದರೆ ಟೊಮೆಟೋ ಸಸಿ ನಾಟಿ ಮಾಡಲಾಗುತ್ತಿತ್ತು. ಇನ್ನು ಜುಲೈ ತಿಂಗಳ ಆರಂಭದ ವೇಳೆಗೆ ಟೊಮೆಟೋ ಬೆಳೆಯ ಮೊದಲ ಕಟಾವು ಆರಂಭ ಆಗಬೇಕಿತ್ತು. ಆದರೆ, ಮುಂಗಾರು ಮಳೆಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಬೆಳೆಯೂ ಇಲ್ಲದಂತಾಗಿದ್ದು, ಬೆಲೆ ಏರಿಕೆಯಾಗಿದೆ. ಜೊತೆಗೆ, ಕಳೆದ 15 ದಿನಗಳಿಂದೀಚೆಗೆ ಮುಂಗಾರು ಮಳೆ ಸುರಿದಿದ್ದು, ಹೊಸ ಬೆಳೆ ಬರಲು ಇನ್ನೂ ಕನಿಷ್ಠ 2 ತಿಂಗಳು ಸಮಯ ಬೇಕಾಗಲಿದೆ. ಆದ್ದರಿಂದ ಹೊಸ ಬೆಳೆಯ ಟೊಮೆಟೋ ಬಮದ ನಂತರವೇ ಬೆಲೆ ಕಡಿಮೆಯಾಗುವ ಸಂಭವವಿದೆ. ಅಲ್ಲಿಯವರೆಗೂ 100 ರೂ.ಗಿಂತ ಹೆಚ್ಚಿನ ಬೆಲೆಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ರೈತರು ಹೇಳಿದ್ದಾರೆ.
ಹಾಸನ: ಬೆಲೆ ಏರಿಕೆ, ಹೊಲಕ್ಕೆ ನುಗ್ಗಿ ಟೊಮ್ಯಾಟೋ ಕದ್ದ ಕಳ್ಳರು..!
ಮಹಾರಾಷ್ಟ್ರದ ಟೊಮೆಟೋ ಆಮದು ಸ್ಥಗಿತ:
ಈ ವರ್ಷ ಕರ್ನಾಟಕದ ಟೊಮೆಟೊಗೆ ಹೊರ ರಾಜ್ಯಗಳಿಂದಲೂ ಅತ್ಯಧಿಕ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಟೊಮೆಟೊ ಸಿಗದ ಕಾರಣ ಹೆಚ್ಚಿನ ಬೆಲೆ ನಿಗದಿಪಡಿಸಿ, ವ್ಯಾಪಾರ ಮಾಡಲಾಗುತ್ತಿದೆ. ಅಲ್ಲದೇ ಪ್ರತಿವರ್ಷ ನಮ್ಮ ರಾಜ್ಯಕ್ಕೆ ನಾಸಿಕ್ ಮಾರುಕಟ್ಟೆಯಿಂದ ಟೊಮೆಟೊ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ನಾಸಿಕ್‌ನಲ್ಲಿಯು ಬೆಳೆ ಬಂದಿಲ್ಲ. ಹೀಗಾಗಿ ನಾಸಿಕ್ , ತಮಿಳುನಾಡು, ಚನೈ ಮಾರುಕಟ್ಟೆಗಳಿಗೆ ಕರ್ನಾಟಕದಿಂದಲೇ ಟೊಮೆಟೋ ರಫ್ತು ಮಾಡಲಾಗುತ್ತಿದೆ. ಆದ್ದರಿಂದ ಸದ್ಯಕ್ಕೆ ಟೊಮೆಟೋ ಬೆಲೆ ಇಳಿಕೆಯಾಗುವ ಸಾಧ್ಯತೆ ಕಂಡುಬರುತ್ತಿಲ್ಲ.