ಹಾಸನ: ಬೆಲೆ ಏರಿಕೆ, ಹೊಲಕ್ಕೆ ನುಗ್ಗಿ ಟೊಮ್ಯಾಟೋ ಕದ್ದ ಕಳ್ಳರು..!
ಹಾಸನ ಜಿಲ್ಲೆ ಹಳೇಬೀಡು ಸಮೀಪದ ಗೋಣಿಸೋಮನಹಳ್ಳಿ ಗ್ರಾಮದಲ್ಲಿ ಗ್ರಾಮದ ರೈತರೊಬ್ಬರ ಹೊಲಕ್ಕೆ ನುಗ್ಗಿ ಸುಮಾರು 90 ಬಾಕ್ಸ್ ಟೊಮ್ಯಾಟೋ ಹಣ್ಣನ್ನು ಕಳ್ಳತನ ಮಾಡಿದ ಕಳ್ಳರು.
ಹಳೇಬೀಡು(ಜು.06): ರಾಜ್ಯದಲ್ಲಿ ಟೊಮ್ಯಾಟೋ ಬೆಲೆ ಏರಿಕೆ ಬೆನ್ನ ಹಿಂದೆಯೇ ಟೊಮ್ಯಾಟೋ ಕಳವು ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಹಳೇಬೀಡು ಸಮೀಪದ ಗೋಣಿಸೋಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಗ್ರಾಮದ ರೈತರೊಬ್ಬರ ಹೊಲಕ್ಕೆ ನುಗ್ಗಿದ ಕಳ್ಳರು, ಸುಮಾರು 90 ಬಾಕ್ಸ್ ಟೊಮ್ಯಾಟೋ ಹಣ್ಣನ್ನು ಕಳ್ಳತನ ಮಾಡಿದ್ದಾರೆ. ರಾಜ್ಯದ ಬಹುತೇಕ ಕಡೆ ಟೊಮ್ಯಾಟೋ ದರ ಕೆಜಿಯೊಂದಕ್ಕೆ 150 ರೂ.ದಾಟಿರುವ ಹಿನ್ನೆಲೆಯಲ್ಲಿ ಇದರ ಬೆಲೆ ಸುಮಾರು 3 ಲಕ್ಷ ರೂ.ಆಗಲಿದೆ ಎಂದು ಅಂದಾಜಿಸಲಾಗಿದೆ.
ಗ್ರಾಮದ ಧರಣಿ (ಸೋಮಶೇಖರ್) ಎಂಬುವರು ಸುಮಾರು ಎರಡು ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆದಿದ್ದು, ಇನ್ನೆರಡು ದಿನದಲ್ಲಿ ಚಿಕ್ಕಮಗಳೂರು ಮಾರುಕಟ್ಟೆಗೆ ಸಾಗಿಸಲು ಹಣ್ಣನ್ನು ಕೊಯ್ಯಲು ನಿರ್ಧರಿಸಿದ್ದರು. ಆದರೆ, ಮಂಗಳವಾರ ರಾತ್ರಿ ಕಳ್ಳರು ಇವರ ಹೊಲಕ್ಕೆ ನುಗ್ಗಿ 90 ಬಾಕ್ಸ್‌ನಷ್ಟುಟೊಮ್ಯಾಟೋ ಹಣ್ಣನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ, ಕಳವು ಮಾಡುವ ಬಿರುಸಿನಲ್ಲಿ ಟೊಮ್ಯಾಟೋ ಗಿಡಗಳನ್ನೆಲ್ಲಾ ಹಾಳು ಮಾಡಿದ್ದಾರೆ.
ಹಾಸನದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ!
ಬುಧವಾರ ಬೆಳಗ್ಗೆ ಧರಣಿಯವರು ಹೊಲಕ್ಕೆ ಹೋದಾಗ ಸಂಗತಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಅವರು ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಬಗ್ಗೆ ಮಾತನಾಡಿದ ಧರಣಿ, ಸುಮಾರು ಏಳೆಂಟು ವರ್ಷಗಳಿಂದಲೂ ಟೊಮ್ಯಾಟೋ ಬೆಳೆಯುತ್ತಿದ್ದೇನೆ. ಒಂದು ವರ್ಷವೂ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಈ ವರ್ಷ ಉತ್ತಮ ಬೆಳೆ ಬಂದಿದ್ದು, ಬೆಲೆ ಕೂಡ ಉತ್ತಮವಾಗಿದೆ. ಹೀಗಾಗಿ, ಬೆಳೆಗಾಗಿ ಮಾಡಿರುವ ಸಾಲ ತೀರಿಸಿಕೊಂಡು ನಿಟ್ಟಿಸಿರು ಬಿಡುವ ಯೋಚನೆ ಮಾಡಿದ್ದೆ. ನನ್ನ ಜಮೀನಿನಲ್ಲಿ ಟೊಮ್ಯಾಟೋ ಕಳ್ಳತನ ಮಾಡಿರುವುದು ನಿಜಕ್ಕೂ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.