ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ಭಾಗ, ಬೆಂಗಳೂರು-ನೆಲಮಂಗಲ ಹೆದ್ದಾರಿ ಮತ್ತು ಮುಳಬಾಗಿಲು-ಆಂಧ್ರ ಗಡಿ ವಿಭಾಗದ ಟೋಲ್ ದರಗಳನ್ನು ಹೆಚ್ಚಿಸಿದೆ.
ಬೆಂಗಳೂರು (ಜು.23): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಬುಧವಾರ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ (Bengaluru-Chennai Expressway) ಕರ್ನಾಟಕ ಭಾಗದ ಟೋಲ್ ದರಗಳನ್ನು ಮತ್ತು ರಾಜ್ಯದ ಮೂಲಕ ಹಾದುಹೋಗುವ ಇತರ ಎರಡು ಹೆದ್ದಾರಿಗಳ ಶುಲ್ಕವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಎನ್‌ಹೆಚ್‌ಎಐ ಪ್ರಕಾರ, ಪರಿಷ್ಕೃತ ಟೋಲ್ ದರಗಳು ಮಾರ್ಚ್ 31, 2027 ರವರೆಗೆ ಜಾರಿಯಲ್ಲಿರಲಿವೆ. ನ್ಯಾಷನಲ್ ಎಕ್ಸ್‌ಪ್ರೆಸ್‌ವೇ 7 ರ (NE-7) ಬೆಂಗಳೂರು-ಬೇತಮಂಗಲ ವಿಭಾಗ ಮತ್ತು ಎನ್‌ಹೆಚ್-4 ರಲ್ಲಿ ಇಂಟರ್‌ಚೇಂಜ್ ಹೊಂದಿರುವ ಎನ್‌ಹೆಚ್ 207 ರ ಕಡೆಗೆ ಹೋಗುವ 0.7 ಕಿಮೀ ಸಂಪರ್ಕ ರಸ್ತೆಗೆ ಈ ಶುಲ್ಕ ಏರಿಕೆ ಅನ್ವಯವಾಗಲಿದೆ.
ಚೆನ್ನೈ ಎಕ್ಸ್‌ಪ್ರೆಸ್‌ವೇ ಟೋಲ್ ದರಗಳ ವಿವರ
ಕರ್ನಾಟಕದಲ್ಲಿ, ಹೊಸಕೋಟೆಯಿಂದ ಆಂಧ್ರಪ್ರದೇಶದ ಗಡಿ ತಲುಪುವ ಬೇತಮಂಗಲದವರೆಗೆ ಈ ಎಕ್ಸ್‌ಪ್ರೆಸ್‌ವೇ 70.7 ಕಿಲೋಮೀಟರ್ ವ್ಯಾಪಿಸಿದೆ. ಈ ಮಾರ್ಗದಲ್ಲಿ ನಾಲ್ಕು ಟೋಲ್ ಪ್ಲಾಜಾಗಳಿವೆ: ಹೆಡಗಿನಬೆಲೆ (ಹೊಸಕೋಟೆ ಬಳಿ), ಅಗ್ರಹಾರ (ಕೋಲಾರ ಜಿಲ್ಲೆಯ ಮಾಲೂರು ಬಳಿ), ಕೃಷ್ಣರಾಜಪುರ (ಬಂಗಾರಪೇಟೆ ಬಳಿ) ಮತ್ತು ಸುಂದರಪಾಳ್ಯ (ಬೇತಮಂಗಲ ಬಳಿ).
ಕಾರ್, ಜೀಪ್, ವ್ಯಾನ್ ಮತ್ತು ಲಘು ಮೋಟಾರು ವಾಹನಗಳಿಗೆ (LMV) ಈ ಕೆಳಗಿನಂತೆ ಟೋಲ್ ಶುಲ್ಕ ಪರಿಷ್ಕರಿಸಲಾಗಿದೆ:
ಹೆಡಗಿನಬೆಲೆ ಟೋಲ್ ಪ್ಲಾಜಾ
- ಅಗ್ರಹಾರದಿಂದ: ₹50
- ಕೃಷ್ಣರಾಜಪುರದಿಂದ: ₹120
- ಸುಂದರಪಾಳ್ಯದಿಂದ: ₹150
ಅಗ್ರಹಾರ ಟೋಲ್ ಪ್ಲಾಜಾ
- ಹೆಡಗಿನಬೆಲೆಯಿಂದ: ₹50
- ಕೃಷ್ಣರಾಜಪುರದಿಂದ: ₹70
- ಸುಂದರಪಾಳ್ಯದಿಂದ: ₹95
ಕೃಷ್ಣರಾಜಪುರ ಟೋಲ್ ಪ್ಲಾಜಾ
- ಹೆಡಗಿನಬೆಲೆಯಿಂದ: ₹120
- ಅಗ್ರಹಾರದಿಂದ: ₹70
- ಸುಂದರಪಾಳ್ಯದಿಂದ: ₹30
ಸುಂದರಪಾಳ್ಯ ಟೋಲ್ ಪ್ಲಾಜಾ
- ಹೆಡಗಿನಬೆಲೆಯಿಂದ: ₹150
- ಅಗ್ರಹಾರದಿಂದ: ₹95
- ಕೃಷ್ಣರಾಜಪುರದಿಂದ: ₹30
ಮಿನಿ ಬಸ್‌ಗಳು, ಟ್ರಕ್‌ಗಳು ಮತ್ತು ಬಸ್‌ಗಳು ಸೇರಿದಂತೆ ಇತರ ದೊಡ್ಡ ವಾಹನಗಳ ಟೋಲ್ ದರಗಳನ್ನು ಸಹ ಹೆಚ್ಚಿಸಲಾಗಿದೆ. 24 ಗಂಟೆಗಳ ಒಳಗೆ ಹಿಂತಿರುಗುವ (Return Journey) ಪ್ರಯಾಣಿಕರಿಗೆ ಶೇ. 50 ರಷ್ಟು ರಿಯಾಯಿತಿ ಸಿಗಲಿದೆ. ತಿಂಗಳಿಗೆ 50 ಏಕಮುಖ (Single Journeys) ಪ್ರಯಾಣ ಮಾಡುವವರಿಗೆ ಅನ್ವಯವಾಗುವ ಶುಲ್ಕದ ಮೂರನೇ ಎರಡರಷ್ಟು ದರ ಇರಲಿದೆ.
ಉತ್ತಮ ಆದಾಯ ಸಂಗ್ರಹ
ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ವಿಭಾಗದಲ್ಲಿ ಟೋಲ್ ಸಂಗ್ರಹವು "ನಿರೀಕ್ಷೆಗಿಂತ ಉತ್ತಮವಾಗಿದೆ" ಎಂದು ಎನ್‌ಹೆಚ್‌ಎಐ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ತಿಳಿಸಿದ್ದಾರೆ. "ನೇರ ಸಂಪರ್ಕವಿಲ್ಲದಿದ್ದರೂ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ಸವಾರರು ಎಕ್ಸ್‌ಪ್ರೆಸ್‌ವೇ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. ಈ ಹೊಸ ದರ ಏರಿಕೆಗೆ ಮೊದಲು ಕರ್ನಾಟಕ ಭಾಗದಿಂದ ನಿತ್ಯ ₹10 ರಿಂದ ₹12 ಲಕ್ಷ ಟೋಲ್ ಸಂಗ್ರಹವಾಗುತ್ತಿತ್ತು ಎಂದು ಎನ್‌ಹೆಚ್‌ಎಐ ಮಾಹಿತಿ ನೀಡಿದೆ.
ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲೂ ದರ ಏರಿಕೆ
ರಾಷ್ಟ್ರೀಯ ಹೆದ್ದಾರಿ 48 ರ 19.5 ಕಿಮೀ ಉದ್ದದ ಬೆಂಗಳೂರು-ನೆಲಮಂಗಲ ವಿಭಾಗವನ್ನು ಬಳಸುವ ವಾಹನ ಸವಾರರೂ ಸಹ ಇನ್ಮುಂದೆ ಹೆಚ್ಚಿನ ಶುಲ್ಕ ನೀಡಬೇಕಾಗಿದೆ. ಕಾರು, ಜೀಪ್, ವ್ಯಾನ್ ಹಾಗೂ ಲಘು ಮೋಟಾರು ವಾಹನಗಳಿಗೆ ಪರಿಷ್ಕೃತ ಶುಲ್ಕ ಒಮ್ಮುಖ ಪ್ರಯಾಣಕ್ಕೆ (One-way) ₹105 ಮತ್ತು 24 ಗಂಟೆಗಳ ಒಳಗಿನ ರಿಟರ್ನ್ ಪ್ರಯಾಣಕ್ಕೆ ₹155 ಆಗಿದೆ. ಇದಲ್ಲದೆ, ರಾಷ್ಟ್ರೀಯ ಹೆದ್ದಾರಿ 75 ರ (ಮಂಗಳೂರು-ವೇಲೂರು) 22.19 ಕಿಮೀ ಉದ್ದದ ಮುಳಬಾಗಿಲು - ಆಂಧ್ರಪ್ರದೇಶ ಗಡಿ ವಿಭಾಗದಲ್ಲೂ ಟೋಲ್ ದರಗಳನ್ನು ಹೆಚ್ಚಿಸಲಾಗಿದೆ.


