ಪ್ರಧಾನಿ ನರೇಂದ್ರ ಮೋದಿಯವರಿಗೆ ലഭಿಸಿದ ಉಡುಗೊರೆಗಳ ಇ-ಹರಾಜಿನಿಂದ 2021 ರಿಂದ 2025ರ ಅವಧಿಯಲ್ಲಿ ಒಟ್ಟು 52.2 ಕೋಟಿ ರೂಪಾಯಿ ಸಂಗ್ರಹವಾಗಿದೆ. 2023ರಲ್ಲಿ ನಡೆದ ಹರಾಜಿನಲ್ಲಿ ಸಾರ್ವಕಾಲಿಕ ಗರಿಷ್ಠ ಮೊತ್ತ ಸಂಗ್ರಹವಾಗಿದ್ದು, ಈ ಹಣವನ್ನು ರಾಷ್ಟ್ರೀಯ ಯೋಜನೆಗಳಿಗೆ ಬಳಸಲಾಗುತ್ತದೆ.
ನವದೆಹಲಿ (ಆ.12): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶ-ವಿದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳು, ಪ್ರವಾಸಗಳ ಸಂದರ್ಭದಲ್ಲಿ ನೀಡಲಾದ ನೆನಪಿನ ಕಾಣಿಕೆಗಳು (mementos) ಹಾಗೂ ಉಡುಗೊರೆಗಳ ಇ-ಹರಾಜಿನಿಂದ (e-auction) ಕಳೆದೆರಡು ವರ್ಷಗಳಲ್ಲಿ ಭಾರಿ ಮೊತ್ತದ ಹಣ ಸಂಗ್ರಹವಾಗಿದೆ. ಕೇಂದ್ರ ಸಾಂಸ್ಕೃತಿಕ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, 2021 ರಿಂದ 2025ರ ಅವಧಿಯಲ್ಲಿ ನಡೆದ ಏಳು ಆವೃತ್ತಿಗಳ ಇ-ಹರಾಜಿನಲ್ಲಿ ಕಲಾಕೃತಿಗಳು, ಶಿಲ್ಪಕಲೆಗಳು ಹಾಗೂ ಕರಕುಶಲ ವಸ್ತುಗಳು ಸೇರಿದಂತೆ ಸಾವಿರಾರು ಉಡುಗೊರೆಗಳನ್ನು ಹರಾಜು ಹಾಕಲಾಗಿದ್ದು, ಬರೋಬ್ಬರಿ 52.2 ಕೋಟಿ ರೂಪಾಯಿ ಸಂಗ್ರಹವಾಗಿದೆ.
2019 ಕ್ಕಿಂತ ಮೊದಲು, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ (NGMA) ಸ್ಮರಣಿಕೆಗಳು ಮತ್ತು ಉಡುಗೊರೆಗಳ ಹರಾಜನ್ನು ಆಯೋಜಿಸಿರಲಿಲ್ಲ. ಈ ಮಾಹಿತಿಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.
ವರ್ಷವಾರು ಹರಾಜು ಆದಾಯದ ವಿವರ (ಕೋಟಿ ರೂಪಾಯಿಗಳಲ್ಲಿ)
- 1ನೇ ಆವೃತ್ತಿ (2021): ₹3.1 ಕೋಟಿ
- 2ನೇ ಆವೃತ್ತಿ (2022): ₹3.6 ಕೋಟಿ
- 3ನೇ ಆವೃತ್ತಿ (2023): ₹15.8 ಕೋಟಿ (ಸಾರ್ವಕಾಲಿಕ ಗರಿಷ್ಠ)
- 4ನೇ ಆವೃತ್ತಿ (2023): ₹14.4 ಕೋಟಿ
- 5ನೇ ಆವೃತ್ತಿ (2024): ₹11.2 ಕೋಟಿ
- 6ನೇ ಆವೃತ್ತಿ (2024): ₹2.2 ಕೋಟಿ
- 7ನೇ ಆವೃತ್ತಿ (2025): ₹1.9 ಕೋಟಿ
2023ರಲ್ಲೇ ಸಾರ್ವಕಾಲಿಕ ದಾಖಲೆ
ಮಾಹಿತಿಯ ಪ್ರಕಾರ, 2023ರ ಅವಧಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಅತ್ಯಂತ ಹೆಚ್ಚಿನ ಆಸಕ್ತಿ ತೋರಿದ್ದು, ಭಾರಿ ಪ್ರಮಾಣದ ಹಣ ಸಂಗ್ರಹವಾಗಿದೆ. 2023ರಲ್ಲಿ ನಡೆದ 3ನೇ ಆವೃತ್ತಿಯಲ್ಲಿ ₹15.8 ಕೋಟಿ ಹಾಗೂ 4ನೇ ಆವೃತ್ತಿಯಲ್ಲಿ ₹14.4 ಕೋಟಿ ಲಭಿಸುವ ಮೂಲಕ ಒಂದೇ ವರ್ಷದಲ್ಲಿ ಬರೋಬ್ಬರಿ ₹30.2 ಕೋಟಿ ಹರಿದುಬಂದಿದೆ.
ಅದೇ ರೀತಿ 2024ರಲ್ಲಿ ನಡೆದ 5ನೇ ಆವೃತ್ತಿಯಲ್ಲಿ ₹11.2 ಕೋಟಿ ಹಾಗೂ 6ನೇ ಆವೃತ್ತಿಯಲ್ಲಿ ₹2.2 ಕೋಟಿ ಸಂಗ್ರಹವಾದರೆ, ಇತ್ತೀಚೆಗೆ 2025ರಲ್ಲಿ ನಡೆದ 7ನೇ ಆವೃತ್ತಿಯಲ್ಲಿ ₹1.9 ಕೋಟಿ ರೂ. ಆದಾಯ ಬಂದಿದೆ. ಪ್ರಧಾನಿಗೆ ಸಿಗುವ ಪ್ರತಿಯೊಂದು ಉಡುಗೊರೆಯನ್ನು ದೇಶದ ಸಾರ್ವಜನಿಕ ಆಸ್ತಿಯನ್ನಾಗಿ ಪರಿವರ್ತಿಸಿ, ಅದರಿಂದ ಬರುವ ಹಣವನ್ನು ರಾಷ್ಟ್ರೀಯ ಯೋಜನೆಗೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


