ಮದ್ಯದ ದೊರೆ ಎಂದೇ ಪ್ರಸಿದ್ಧಿ ಪಡೆದಿರುವ ವಿಜಯ್‌ ಮಲ್ಯ ಮಗ ಸಿದ್ಧಾರ್ಥ್‌ ಮಲ್ಯ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ತಮ್ಮ ಜೀವನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡು ಅದನ್ನು ಸಾಧಿಸಿ ತೋರಿಸಿದ್ದಾರೆ.

ಮದ್ಯದ ಉದ್ಯಮದಿಂದಲೇ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ವಿಜಯ್ ಮಲ್ಯ ಮಗ ಸಿದ್ಧಾರ್ಥ್ ಮಲ್ಯ ಈಗ ಸುದ್ದಿಯಲ್ಲಿದ್ದಾರೆ. ಮದ್ಯದ ಸಾಮ್ರಾಜ್ಯ ಕಟ್ಟಿದ ಫ್ಯಾಮಿಲಿ ವಾರಸುದಾರರಾಗಿದ್ದರೂ, ಸಿದ್ಧಾರ್ಥ್ ಕಳೆದ 8 ವರ್ಷಗಳಿಂದ ಒಂದು ಹನಿ ಮದ್ಯವನ್ನೂ ಮುಟ್ಟಿಲ್ಲ. ಈ ಖುಷಿ ಸುದ್ದಿಯನ್ನು ಸಿದ್ಧಾರ್ಥ್‌ ಮಲ್ಯ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

8 ವರ್ಷದಿಂದ ಮದ್ಯ ಮುಟ್ಟದ ಮರಿ ಮಲ್ಯ

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಿದ್ಧಾರ್ಥ್‌ ಮಲ್ಯ, ಇಂದಿಗೆ ಮದ್ಯಪಾನ ಮಾಡದೆ 8 ವರ್ಷಗಳು ಪೂರ್ಣಗೊಂಡಿವೆ. ನಿಮ್ಮ ಜೀವನಕ್ಕೆ ಯಾವುದು ಒಳ್ಳೆಯದು ಎಂಬುದು ನಿಮಗಿಂತ ಯಾರಿಗೂ ಚೆನ್ನಾಗಿ ಗೊತ್ತಿರೋದಿಲ್ಲ. ನಿಮ್ಮ ಜೀವನದ ಜವಾಬ್ದಾರಿ ನಿಮ್ಮದೇ. ನೀವು ಬಯಸುವ ಬದಲಾವಣೆಯನ್ನು ತರಲು ಬೇಕಾದ ಶಕ್ತಿ ನಿಮ್ಮೊಳಗೇ ಇದೆ ಎಂದಿದ್ದಾರೆ.

ಮದ್ಯ ಬಿಟ್ಟಿದ್ದೇಕೆ?

ಸಿದ್ಧಾರ್ಥ್ ಮಲ್ಯ ಮದ್ಯವನ್ನು ಫ್ಯಾಷನ್ಗಾಗಿ ಅಥವಾ ಟ್ರೆಂಡ್ಗಾಗಿ ಬಿಟ್ಟಿಲ್ಲ. ಮದ್ಯಪಾನದಿಂದ ಅವ್ರು ತೀವ್ರ ಆತಂಕ (Anxiety) ಅನುಭವಿಸ್ತಿದ್ದರಂತೆ. ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸುವ ನಿರ್ಧಾರ ತೆಗೆದುಕೊಂಡರು. 2020ರಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲೂ, ಮದ್ಯದ ಉದ್ಯಮ ನಡೆಸುವ ಕುಟುಂಬದಿಂದ ಬಂದವನಾದ ನಾನು ಯಾಕೆ ಮದ್ಯ ಬಿಡುತ್ತಿದ್ದೇನೆ ಎಂದು ಹಲವರು ಕೇಳಬಹುದು. ಆದರೆ ನನ್ನ ಮನಸ್ಸಿನ ನೆಮ್ಮದಿಗಾಗಿ ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ್ದರು. ಅಂದಿನಿಂದಲೂ ಅವರು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ ಬರುತ್ತಿದ್ದಾರೆ.

ಹೊಸ ವಿಡಿಯೋದಲ್ಲಿ ಕೂಡ ಜನರಿಗೆ ಸ್ಪೂರ್ತಿ ನೀಡುವ ಕೆಲ್ಸವನ್ನು ಸಿದ್ಧಾರ್ಥ್‌ ಮಲ್ಯ ಮಾಡಿದ್ದಾರೆ. ಚಟ ಕೆಟ್ಟದ್ದು ಎಂಬುದು ಗೊತ್ತಾದಾಗ ಅದನ್ನು ಬಿಡುವ ಪ್ರಯತ್ನ ಮಾಡ್ಬೇಕು. ಯಾವುದೇ ಚಟ ಬಿಡೋದು ಸುಲಭವಲ್ಲ. ಆದ್ರೆ ಮನಸ್ಸು ಮಾಡಿ, ಅದಕ್ಕಿರುವ ಮಾರ್ಗ ಕಂಡುಕೊಂಡರೆ ಎಲ್ಲವೂ, ಎಲ್ಲರಿಂದಲೂ ಸಾಧ್ಯ. ನನಗೆ ಈ ಪಯಣದಲ್ಲಿ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಸಿದ್ಧಾರ್ಥ್‌ ಮಲ್ಯ ಹೇಳಿದ್ದಾರೆ. ಸಿದ್ಧಾರ್ಥ್‌ ಮಲ್ಯ ಈ ವಿಡಿಯೋವನ್ನು ಲಂಡನ್‌ ನಲ್ಲಿ ಶೂಟ್‌ ಮಾಡಿದ್ದಾರೆ. ಮಲ್ಯ ಅವರ ಈ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಸಿದ್ಧಾರ್ಥ್‌ ಮಲ್ಯ ವಿಡಿಯೋಕ್ಕೆ ಸಾಕಷ್ಟು ಮೆಚ್ಚುಗೆಯ ಕಮೆಂಟ್‌ ಬಂದಿದೆ.

View post on Instagram