ಮಕ್ಕಳನ್ನು ಸ್ಕೂಲ್ ಗೆ ಸೇರಿಸೋದು ಈಗ ದೊಡ್ಡ ತಲೆನೋವಿನ ವಿಷ್ಯ. ಗವರ್ನಮೆಂಟ್ ಸ್ಕೂಲ್ ಬೇಡ ಎನ್ನುವ ಪಾಲಕರಿಗೆ ಪ್ರೈವೇಟ್ ಸ್ಕೂಲ್ ಫೀಸ್ ತುಂಬೋದು ಕಷ್ಟವಾಗಿದೆ. ವರ್ಷವಿಡಿ ದುಡಿದ ಹಣ ಮಕ್ಕಳ ಶಾಲೆಗೆ ಹೋಗ್ತಿದೆ. ನಮ್ಮ ದೇಶದಲ್ಲೇ ಫೀಸ್ ದುಬಾರಿ, ಇನ್ನು ದೊಡ್ಡಣ್ಣ ಅಮೆರಿಕಾದಲ್ಲಿ ಎಷ್ಟಿದೆ ಗೊತ್ತಾ?
ಅಮೆರಿಕದಲ್ಲಿ ಕೇವಲ 2 ವರ್ಷದ ಮಗುವನ್ನು ಪ್ರೀ-ಸ್ಕೂಲ್ಗೆ ಸೇರಿಸಬೇಕೆಂದ್ರೂ ನಿಮ್ಮ ಖಾತೆಯಲ್ಲಿ ಲಕ್ಷ ಲಕ್ಷ ಹಣ ಇರ್ಬೇಕು. ಅಮೆರಿಕದ ಸಿಮ್ಸ್ಬರಿ ನಗರದಲ್ಲಿ ವಾಸಿಸುವ ಸೋನಲ್ ಚೌಧರಿ ತಮ್ಮ ಮಗಳ ಅಡ್ಮಿಷನ್ಗಾಗಿ ಎಷ್ಟು ಖರ್ಚು ಮಾಡಿದ್ದೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದಕ್ಕರ ದಾಖಲೆ ಕೂಡ ನೀಡಿದ್ದಾರೆ.
ಅಮೆರಿಕಾದಲ್ಲಿ ಪ್ರೀ ಸ್ಕೂಲ್
ಸೋನಲ್ ಚೌಧರಿ, 68 ವರ್ಷಗಳ ಇತಿಹಾಸ ಹೊಂದಿರುವ ಒಂದು ಪ್ರೀ-ಸ್ಕೂಲ್ಗೆ ಭೇಟಿ ನೀಡಿದ್ದರು. ಅಲ್ಲಿನ ಸಿಬ್ಬಂದಿ ಫೀಸ್ ಜೊತೆಗೆ ಮಕ್ಕಳಿಗೆ ಹೇಗೆ ಕಲಿಸುತ್ತಾರೆ ಎಂಬುದನ್ನೂ ವಿವರಿಸಿದ್ದಾರೆ. ಈ ಶಾಲೆಯಲ್ಲಿ ಪ್ರತಿ 8 ಮಕ್ಕಳಿಗೆ 2 ಶಿಕ್ಷಕರಿರುತ್ತಾರೆ. ಮಕ್ಕಳಿಗೆ ಹಾಡು, ಆಟ, ಯೋಗ, ಚಿತ್ರಕಲೆ, ಬೋರ್ಡ್ ಚಟುವಟಿಕೆಗಳು ಸೇರಿದಂತೆ ಆಟವಾಡುತ್ತಲೇ ಶಿಕ್ಷಣ ನೀಡಲಾಗುತ್ತೆ. ಕ್ಲಾಸ್ ನಲ್ಲೇ ಮಕ್ಕಳಿಗಾಗಿ ಆಟಿಕೆಗಳು, ಜಾರುಬಂಡಿ, ವಿವಿಧ ಕಲಿಕಾ ಸಾಮಗ್ರಿಗಳನ್ನು ಇಟ್ಟು, ಮಕ್ಕಳಿಗೆ ಬೇಸರವಾಗದಂತೆ ನೋಡಿಕೊಳ್ಳಲಾಗುತ್ತೆ. ಆಶ್ಚರ್ಯದ ವಿಷಯ ಅಂದ್ರೆ, ಈ ತರಗತಿಗಳು ಬೆಳಗ್ಗೆ 8.45 ರಿಂದ ಶುರುವಾಗಿ 11.45ಕ್ಕೆ ಮುಕ್ತಾಯವಾಗುತ್ತೆ. ಅಂದರೆ ದಿನಕ್ಕೆ ಕೇವಲ ಮೂರು ಗಂಟೆಗಳ ಕಾಲ ಮಾತ್ರ ಶಾಲೆ ನಡೆಯುತ್ತೆ.
ಮೂರು ಗಂಟೆ ಕ್ಲಾಸ್ಗೆ ಲಕ್ಷ ಲಕ್ಷ ಫೀಸ್!
ಶಾಲೆ ನೀಡಿರುವ ಫೀಸ್ ವಿವರದ ಪ್ರಕಾರ, 2 ವರ್ಷದ ಮಗುವನ್ನು ವಾರಕ್ಕೆ 2 ದಿನ ಕಳುಹಿಸಿದರೆ ಸುಮಾರು 3.9 ಲಕ್ಷ, 3 ದಿನಕ್ಕೆ 5.6 ಲಕ್ಷ, 4 ದಿನಕ್ಕೆ 7.4 ಲಕ್ಷ ಮತ್ತು 5 ದಿನ ಕಳುಹಿಸಿದರೆ ಸುಮಾರು 9.3 ಲಕ್ಷ ವಾರ್ಷಿಕ ಫೀಸ್ ಪಾವತಿಸಬೇಕು. 3 ರಿಂದ 5 ವರ್ಷದ ಮಕ್ಕಳಿಗೂ ವಾರದಲ್ಲಿ ಎಷ್ಟು ದಿನ ಬರುತ್ತಾರೋ ಅದರ ಆಧಾರದ ಮೇಲೆ ಸುಮಾರು 3 ಲಕ್ಷದಿಂದ 7 ಲಕ್ಷದವರೆಗೆ ಶುಲ್ಕ ನಿಗದಿಯಾಗಿದೆ. ಇದರ ಜೊತೆಗೆ ಬೆಳಗ್ಗೆ ಬೇಗ ಬಿಡಲು ಅಥವಾ ಮಧ್ಯಾಹ್ನ ಹೆಚ್ಚು ಹೊತ್ತು ಶಾಲೆಯಲ್ಲೇ ಇರಿಸಲು ಪ್ರತಿದಿನ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಸೋನಲ್ ಹೇಳುವಂತೆ, ಇವು ಖಾಸಗಿ ಪ್ರೀ-ಸ್ಕೂಲ್ಗಳಾಗಿದ್ದು, ಕಿಂಡರ್ಗಾರ್ಟನ್ನಿಂದ 12ನೇ ತರಗತಿವರೆಗೆ ಅಮೆರಿಕದ ಬಹುತೇಕ ಸರ್ಕಾರಿ ಶಾಲೆಗಳು ಉಚಿತವಾಗಿವೆ. ಸುಮಾರು 90 ಶೇಕಡಾ ಮಕ್ಕಳು ಅಲ್ಲೇ ಓದುತ್ತಾರೆ. ಆದರೆ ಈ ಪ್ರೀ-ಸ್ಕೂಲ್ಗಳಲ್ಲಿ ಶಿಕ್ಷಕರ ಸಂಖ್ಯೆ, ಮಕ್ಕಳ ಆರೈಕೆ ಮತ್ತು ಕಲಿಕೆಯ ಗುಣಮಟ್ಟವನ್ನು ನೋಡಿದರೆ ಹಲವರು ಈ ಫೀಸ್ ಸಮಂಜಸ ಎಂದು ಅಭಿಪ್ರಾಯಪಡುತ್ತಾರೆ. ಮಕ್ಕಳಿಗೆ ಒಂದು ವರ್ಷಕ್ಕೆ ನೀಡುವ ಈ ಪೀಸ್ ನಲ್ಲಿ ಭಾರತದಲ್ಲಿ ಒಂದು ಹೊಸ ಮಾರುತಿ ಸುಜುಕಿ ಬ್ರೆಝಾ ಕಾರನ್ನೇ ಖರೀದಿಸಬಹುದು ಅಂತ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.


