ಭಾರತದ ಜನಪ್ರಿಯ 125 ಸಿಸಿ ಸ್ಕೂಟರ್‌ಗಳಾದ 'ಟಿವಿಎಸ್ ಜುಪಿಟರ್ 125' ಮತ್ತು 'ಸುಜುಕಿ ಆಕ್ಸೆಸ್ 125' ನಡುವಿನ ಹೋಲಿಕೆ ಇಲ್ಲಿದೆ. ಈ ಎರಡೂ ಸ್ಕೂಟರ್‌ಗಳ ಬೆಲೆ, ಮೈಲೇಜ್, ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸ್ಟೋರೇಜ್ ಸಾಮರ್ಥ್ಯದಲ್ಲಿರುವ ಪ್ರಮುಖ ವ್ಯತ್ಯಾಸಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ನವದೆಹಲಿ (ಆ.7): ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 125 ಸಿಸಿ ಸಾಮರ್ಥ್ಯದ ಸ್ಕೂಟರ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಪೈಕಿ 'ಟಿವಿಎಸ್ ಜುಪಿಟರ್ 125' (TVS Jupiter 125) ಮತ್ತು 'ಸುಜುಕಿ ಆಕ್ಸೆಸ್ 125' (Suzuki Access 125) ಅತ್ಯಂತ ಜನಪ್ರಿಯ ಮಾಡೆಲ್‌ಗಳಾಗಿ ಹೊರಹೊಮ್ಮಿವೆ. ನಿತ್ಯದ ಪ್ರಯಾಣಕ್ಕೆ ಸೂಕ್ತವಾಗಿ ವಿನ್ಯಾಸಗೊಳಿಸಲಾದ ಈ ಎರಡೂ ಸ್ಕೂಟರ್‌ಗಳು ಬ್ರೇಕಿಂಗ್, ವೈಶಿಷ್ಟ್ಯ ಹಾಗೂ ಬೆಲೆಯಲ್ಲಿ ತಮ್ಮದೇ ಆದ ವ್ಯತ್ಯಾಸಗಳನ್ನು ಹೊಂದಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಇವೆರಡರಲ್ಲಿ ಯಾವುದು ಅತ್ಯುತ್ತಮ ಅನ್ನೋ ವಿವರ ಇಲ್ಲಿದೆ.

ಬೆಲೆಯಲ್ಲಿ ಯಾವುದು ಅಗ್ಗ?

ಎರಡೂ ಸ್ಕೂಟರ್‌ಗಳ ಬೆಲೆಯು ಅವುಗಳ ವಿವಿಧ ರೂಪಾಂತರಗಳಿಗೆ (Variants) ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ

ಟಿವಿಎಸ್ ಜುಪಿಟರ್ 125: ಇದರ ಡಿಸ್ಕ್ (Disc) ವೇರಿಯೆಂಟ್ ಆರಂಭಿಕ ಬೆಲೆ ಸುಮಾರು ₹81,100 (ಎಕ್ಸ್ ಶೋರೂಂ) ಆಗಿದ್ದರೆ, ಟಾಪ್-ಎಂಡ್ 'ಸ್ಮಾರ್ಟ್‌ಎಕ್ಸ್‌ಕನೆಕ್ಟ್' (SmartXonnect) ಮಾದರಿಯ ಬೆಲೆ ಸುಮಾರು ₹89,935 (ಎಕ್ಸ್ ಶೋರೂಂ) ವರೆಗೆ ತಲುಪುತ್ತದೆ.

ಸುಜುಕಿ ಆಕ್ಸೆಸ್ 125: ಇದರ ಬೆಲೆ ವ್ಯಾಪ್ತಿ ಜುಪಿಟರ್‌ಗಿಂತ ಕೊಂಚ ಹೆಚ್ಚಾಗಿದೆ. ಸ್ಟ್ಯಾಂಡರ್ಡ್ ಆವೃತ್ತಿಯ ಆರಂಭಿಕ ಬೆಲೆ ₹82,185 ರಿಂದ ಶುರುವಾದರೆ, ಟಾಪ್ ಮಾಡೆಲ್ 'ರೈಡ್ ಕನೆಕ್ಟ್ ಟಿಎಫ್‌ಟಿ ಎಬಿಎಸ್' (Ride Connect TFT ABS) ಆವೃತ್ತಿಯ ಬೆಲೆ ದೆಹಲಿಯಲ್ಲಿ ಸುಮಾರು ₹1.01 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ.

ಮೈಲೇಜ್ ಪ್ರಮಾಣ ಎಷ್ಟು?

ಟಿವಿಎಸ್ ಜುಪಿಟರ್ 125: ಕಂಪನಿಯು ಈ ಸ್ಕೂಟರ್ ಲೀಟರ್‌ಗೆ 50 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿದೆ.

ಸುಜುಕಿ ಆಕ್ಸೆಸ್ 125: ಕಂಪನಿಯ ಕ್ಲೇಮ್ ಪ್ರಕಾರ ಈ ಸ್ಕೂಟರ್ ಲೀಟರ್‌ಗೆ ಸುಮಾರು 45 ಕಿ.ಮೀ ಮೈಲೇಜ್ ನೀಡುತ್ತದೆ.

ಆದರೆ, ರಿಯಲ್‌ ಟೈಮ್‌ ರೈಡಿಂಗ್‌ನಲ್ಲಿ (Real-world conditions) ಎರಡೂ ಸ್ಕೂಟರ್‌ಗಳ ಮೈಲೇಜ್ ಪ್ರಮಾಣವು ಕಂಪನಿ ಕ್ಲೇಮ್‌ಗಿಂತ ಕೊಂಚ ಕಡಿಮೆಯಿರಬಹುದು.

ಸುರಕ್ಷತೆಯಲ್ಲಿ ಯಾವುದು ಮುಂಚೂಣಿ?

ಸುರಕ್ಷತೆಯ ದೃಷ್ಟಿಯಿಂದ ಇವೆರಡರ ನಡುವೆ ಪ್ರಮುಖ ವ್ಯತ್ಯಾಸವಿದೆ

ಸುಜುಕಿ ಆಕ್ಸೆಸ್ 125: ಇದರ 'ರೈಡ್ ಕನೆಕ್ಟ್ ಎಬಿಎಸ್' ಮತ್ತು 'ರೈಡ್ ಕನೆಕ್ಟ್ ಟಿಎಫ್‌ಟಿ ಎಬಿಎಸ್' ಆವೃತ್ತಿಗಳಲ್ಲಿ ರಿಯಲ್‌ 'ಸಿಂಗಲ್-ಚಾನೆಲ್ ಎಬಿಎಸ್' (Single-Channel ABS) ಬ್ರೇಕಿಂಗ್ ಸಿಸ್ಟಮ್ ನೀಡಲಾಗಿದೆ. ಉಳಿದ ಬೇಸಿಕ್ ಮಾದರಿಗಳಲ್ಲಿ ಕಂಬೈನ್ಡ್ ಬ್ರೇಕ್ ಸಿಸ್ಟಮ್ (CBS) ಲಭ್ಯವಿದೆ.

ಟಿವಿಎಸ್ ಜುಪಿಟರ್ 125: ಇದರ ಡಿಸ್ಕ್ ವೇರಿಯೆಂಟ್‌ನಲ್ಲಿ 'ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿ' (SBT) ನೀಡಲಾಗಿದೆ. ಇದು ಎಬಿಎಸ್ ಇಲ್ಲದೆ ಮುಂಭಾಗ ಹಾಗೂ ಹಿಂಭಾಗದ ಬ್ರೇಕ್‌ಗಳನ್ನು ಒಟ್ಟಿಗೆ ಜೋಡಿಸಿ ಕಾರ್ಯನಿರ್ವಹಿಸುತ್ತದೆ.

ಹೀಗಾಗಿ, ಮಳೆಗಾಲದ ರಸ್ತೆಗಳು ಅಥವಾ ತೀವ್ರ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವ ಸವಾರರಿಗೆ ಸುಜುಕಿ ಆಕ್ಸೆಸ್‌ನ ಎಬಿಎಸ್ (ABS) ಆವೃತ್ತಿಯು ಹೆಚ್ಚು ಸುರಕ್ಷಿತ ಆಯ್ಕೆಯಾಗಿದೆ.

ಸ್ಟೋರೇಜ್ ಮತ್ತು ತಾಂತ್ರಿಕ ವೈಶಿಷ್ಟ್ಯಗಳು

ಅಂಡರ್-ಸೀಟ್ ಸ್ಟೋರೇಜ್: ಸುಜುಕಿ ಆಕ್ಸೆಸ್ 125 ಸ್ಕೂಟರ್‌ನಲ್ಲಿ 24.4 ಲೀಟರ್ ಸಾಮರ್ಥ್ಯದ ಸ್ಟೋರೇಜ್ ಸ್ಪೇಸ್ ಸಿಗಲಿದ್ದು, ಒಂದು ಫುಲ್-ಫೇಸ್ ಹೆಲ್ಮೆಟ್ ಇಡಲು ಇದು ಸಾಕಾಗುತ್ತದೆ. ಇನ್ನೊಂದೆಡೆ, ಜುಪಿಟರ್ 125 ನಲ್ಲಿ 33 ಲೀಟರ್ ಸ್ಟೋರೇಜ್ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಟಿವಿಎಸ್ ಉಪಯುಕ್ತ ಜಾಗವನ್ನು ಅಳೆಯುವ ವಿಧಾನ ವಿಭಿನ್ನವಾಗಿದ್ದು, ಖರೀದಿಸುವ ಮುನ್ನವೇ ಪರೀಕ್ಷಿಸುವುದು ಸೂಕ್ತ.

ಫೀಚರ್ಸ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್: ಆಕ್ಸೆಸ್ 125 ನ ಟಾಪ್ ಆವೃತ್ತಿಯಲ್ಲಿ 4.2-ಇಂಚಿನ ಕಲರ್ ಟಿಎಫ್‌ಟಿ (TFT) ಡಿಸ್‌ಪ್ಲೇ ನೀಡಲಾಗಿದೆ. ಇದು ಬ್ಲೂಟೂತ್ ಕನೆಕ್ಟಿವಿಟಿ, ನೇವಿಗೇಷನ್ ಮತ್ತು ಕಾಲ್ ಅಲರ್ಟ್‌ಗಳನ್ನು ಬೆಂಬಲಿಸುತ್ತದೆ. ಜುಪಿಟರ್ 125 ನಲ್ಲಿ ಸೆಮಿ-ಡಿಜಿಟಲ್ ಸ್ಪೀಡೋಮೀಟರ್ ಮತ್ತು ಮೊಬೈಲ್ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಲೈಟಿಂಗ್: ಎರಡೂ ಸ್ಕೂಟರ್‌ಗಳ ಹೆಚ್ಚಿನ ಆವೃತ್ತಿಗಳಲ್ಲಿ ಎಲ್‌ಇಡಿ (LED) ಲೈಟಿಂಗ್ ವ್ಯವಸ್ಥೆಯನ್ನು ಸ್ಟ್ಯಾಂಡರ್ಡ್ ಫೀಚರ್ ಆಗಿ ನೀಡಲಾಗಿದೆ.