ವಾರಕ್ಕೆ ಕೇವಲ 3 ಗಂಟೆ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸುವ ವ್ಯಕ್ತಿಯ ಕುತೂಹಲಕಾರಿ ಕಥೆ. ಈ ವ್ಯಕ್ತಿ ಯಾರು? ಈತ ಮಾಡುವ ಕೆಲಸ ಏನು ಎಂಬುದರ ಮಾಹಿತಿ ಈ ಲೇಖನದಲ್ಲಿದೆ.

ನವದೆಹಲಿ: ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ, ಲಾರ್ಸೆನ್ ಆಂಡ್ ಟೂಬ್ರೊ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ವಾರಕ್ಕೆ 90 ಗಂಟೆ ಕೆಲಸ ಮಾಡುವಂತೆ ಸಲಹೆ ನೀಡುತ್ತಾರೆ. ಸಾಮಾನ್ಯವಾಗ ಐಟಿ ಸೇರದಂತೆ ಎಲ್ಲಾ ವಲಯದ ನೌಕರರು ವಾರಕ್ಕೆ ಕನಿಷ್ಠ 40 ಗಂಟೆ ಕೆಲಸ ಮಾಡುತ್ತಾರೆ. ಖಾಸಗಿ ಕಂಪನಿಗಳಲ್ಲಿ 8 ರಿಂದ 9 ಗಂಟೆ ಕೆಲಸ ಮಾಡೋದು ಕಡ್ಡಾಯವಾಗಿರುತ್ತದೆ. ಆದ್ರೆ ಕೆಲವರು ದಿನದ ಹೆಚ್ಚಿನ ಸಮಯವನ್ನು ಕಚೇರಿಯಲ್ಲಿಯೇ ಕಳೆಯುತ್ತಾರೆ. ವ್ಯಕ್ತಿಯೊಬ್ಬ ವಾರಕ್ಕೆ ಕೇವಲ 3 ಗಂಟೆ ಕೆಲಸ ಮಾಡುವ ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸುತ್ತಾರೆ. ಈ ಕುತೂಹಲಕಾರಿ ವ್ಯಕ್ತಿ ಯಾರು? ಮೂರು ಗಂಟೆ ಈತ ಮಾಡುವ ಕೆಲಸ ಯಾವುದು? ಆತನ ಜೀವನಶೈಲಿ ಹೇಗಿದೆ ಎಂದು ನೋಡೋಣ ಬನ್ನಿ. 

ವಾರದ 168 ಗಂಟೆಯಲ್ಲಿ ಕೇವಲ 3 ಗಂಟೆ ಕೆಲಸ ಮಾಡುವ ಈ ವ್ಯಕ್ತಿ ವಾರಕ್ಕೊಮ್ಮೆ ಥೈಲ್ಯಾಂಡ್‌ನಿಂದ ಸಿಂಗಾಪುರಕ್ಕೆ ಪ್ರಯಾಣಿಸುತ್ತಾರೆ. ಇತ್ತೀಚೆಗೆ ಸಿಎನ್‌ಬಿಸಿ ಮೇಕ್ ಇಟ್‌ಗೆ ನೀಡಿದ ಸಂದರ್ಶನದಲ್ಲಿ ಈ ವ್ಯಕ್ತಿ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಮೂರು ಗಂಟೆ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪದಾನೆ ಮಾಡುವ ವ್ಯಕ್ತಿಯ ಹೆಸರು ಶಾವೊ ಚುನ್ ಚೆನ್. ಇವರು ವಯಸ್ಸು ಕೇವಲ 39.

ಶಾವೊ ಚುನ್ ಚೆನ್ ಕೆಲಸ ಏನು? 
ಪ್ರಸ್ತುತ ಶಾವೊ ಚುನ್ ಚೆನ್ ಪ್ರಸ್ತುತ ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ಶಾವೊ ಚುನ್ ಚೆನ್ ಪತ್ನಿಯೊಂದಿಗೆ ಥೈಲ್ಯಾಂಡ್‌ನಲ್ಲಿ ವಾಸವಾಗಿದ್ದು, ವಾರಕ್ಕೊಮ್ಮೆ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುತ್ತಾರೆ. ಸಿಂಗಾಪುರ ವಿಶ್ವವಿದ್ಯಾಲಯದಲ್ಲಿ ವಾರಕ್ಕೆ ಮೂರು ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ವಿಷಯದಲ್ಲಿ ಉಪನ್ಯಾಸ ನೀಡುತ್ತಾರೆ. ಈ ಮೂರು ಗಂಟೆಯ ಉಪನ್ಯಾಸಕ್ಕಾಗಿ ಒಳ್ಳೆಯ ಸಂಬಳವನ್ನು ಪಡೆದುಕೊಳ್ಳುತ್ತಾರೆ.

ಸಂದರ್ಶನದಲ್ಲಿ ಶಾವೊ ಚುನ್ ಚೆನ್ ನೀಡಿರುವ ಪ್ರಕಾರ, ತಿಂಗಳಿಗೆ ಸುಮಾರು $1,540 ರಿಂದ $3,070 (ಸುಮಾರು ರೂ. 1.3 ಲಕ್ಷದಿಂದ ರೂ. 2.6 ಲಕ್ಷ ರೂ) ಸಂಬಳ ಪಡೆಯುತ್ತಾರೆ. ಈ ಸಂಬಳದಲ್ಲಿಯೇ ಶಾವೊ ಚುನ್ ಚೆನ್ ತಮ್ಮ ವಿಮಾನ ಪ್ರಯಾಣ ಮತ್ತು ಕುಟುಂಬ ನಿರ್ವಹಣಾ ವೆಚ್ಚವನ್ನು ನೋಡಿಕೊಳ್ಳುತ್ತಾರೆ.

ಗೂಗಲ್‌ನಲ್ಲಿ ಕೆಲಸ ಕಳೆದುಕೊಂಡ ಬಳಿಕ ನಾನು ಇದನ್ನು ಅರಿತುಕೊಂಡಿದ್ದೇನೆ. ಈ ಉಪಾಯದಿಂದ ವ್ಯವಸ್ಥೆಯನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡಿಕೊಂಡಿದ್ದೇನೆ. ಸಿಂಗಾಪುರದಲ್ಲಿ ಮೂರು ಗಂಟೆ ಕೆಲಸ ಮಾಡುವ ಮೂಲಕ ಥೈಲ್ಯಾಂಡ್‌ನಲ್ಲಿ ನೆಮ್ಮದಿ ಬದುಕು ನಡೆಸುತ್ತಿದ್ದೇನೆ. ಸಿಂಗಾಪುರದಲ್ಲಿ ಪಡೆಯುವ ಸಂಬಳದಿಂದ ಥೈಲ್ಯಾಂಡ್‌ನಲ್ಲಿ ಜೀವನ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸಬಲ್ಲೆ. ಥೈಲ್ಯಾಂಡ್‌ನಲ್ಲಿ ಜೀವನ ವೆಚ್ಚ ಸಿಂಗಾಪುರಕ್ಕಿಂತ ಕಡಿಮೆಯಾಗಿದೆ, ಆದ್ದರಿಂದ ಹೆಚ್ಚು ಖರ್ಚು ಮಾಡಬೇಕಾಗಿಲ್ಲ ಎಂದು ಶಾವೊ ಚುನ್ ಚೆನ್ ಹೇಳುತ್ತಾರೆ. 

ಗೂಗಲ್‌ನಲ್ಲಿ 10 ವರ್ಷ ಕೆಲಸ
ಶಾವೊ ಚುನ್ ಚೆನ್ ಸುಮಾರು 10 ವರ್ಷಗಳ ಕಾಲ ಗೂಗಲ್‌ನಲ್ಲಿ ಕೆಲಸ ಮಾಡಿದ್ದಾರೆ. ನವೆಂಬರ್ 2024 ರಲ್ಲಿ ಗೂಗಲ್ ಲೇಆಫ್ ಮಾಡಿತ್ತು. ಈ ಲೇಆಫ್‌ನಲ್ಲಿ ಶಾವೊ ಚುನ್ ಚೆನ್ ತಮ್ಮ ಕೆಲಸ ಕಳೆದುಕೊಂಡಿದ್ದರು. ಕೆಲಸ ಕಳೆದುಕೊಂಡ ಸಂದರ್ಭದಲ್ಲಿ ಶಾವೊ ಚುನ್ ಚೆನ್ ಅವರ ಪೋರ್ಟ್‌ಪೊಲಿಯೋ 2 ಮಿಲಿಯನ್ ಡಾಲರ್ ಆಗಿತ್ತು. ಆದ್ರೆ ಈ ಹಣದಲ್ಲಿ ಇಡೀ ಜೀವನಕ್ಕೆ ಸಾಕಾಗಲ್ಲ ಎಂಬುದನ್ನು ಶಾವೊ ಚುನ್ ಚೆನ್ ಅರಿತುಕೊಂಡರು.

ಗೂಗಲ್‌ನಲ್ಲಿ ಕೆಲಸ ಕಳೆದುಕೊಂಡ ನಂತರ ನಾನು ನಿಜವಾದ ಆರ್ಥಿಕ ಸ್ವಾತಂತ್ಯ ಏನು ಎಂದು ಅರಿತುಕೊಂಡೆ. ನಾನು ಕಳೆದ 14 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ ಮಾನಸಿಕ ಮತ್ತು ದೈಹಿಕವಾಗಿಯೂ ನನಗೆ ವಿಶ್ರಾಂತಿಯ ಅಗತ್ಯವಿತ್ತು. 14 ವರ್ಷ ದುಡಿದ ಬಳಿಕ ನಿಜಜವಾಗಿಯೂ ನನಗೆ ಏನು ಬೇಕು ಅನ್ನೋದರ ಕುರಿತು ಯೋಚಿಸಿದೆ. ಆಗ ಜೀವನದಲ್ಲಿ ಏನು ಅವಶ್ಯ ಎಂಬ ವಿಷಯ ತಿಳಿಯಿತು ಎಂದು ಶಾವೊ ಚುನ್ ಚೆನ್ ಹೇಳುತ್ತಾರೆ.

ಆದಾಯದ ಮೂಲಗಳನ್ನು ಕಂಡುಕೊಂಡ ಶಾವೊ 
ಕೆಲಸ ಕಳೆದುಕೊಂಡ ವರ್ಷದಲ್ಲಿ ಶಾವೊ ಚುನ್ ಚೆನ್ ಸ್ಥಿರ ಮತ್ತು ನಿರಂತರದ ಆದಾಯದ ಮೂಲಗಳನ್ನು ಕಂಡು ಕೊಂಡಿದ್ದಾರೆ. ಹಾಗೆಯೇ ಸ್ಥಿರ ಆಸ್ತಿಗಳನ್ನು ಸಹ ಶಾವೊ ಚುನ್ ಚೆನ್ ಹೊಂದಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ಮಾಡೋದರ ಜೊತೆಯಲ್ಲಿ ಯುಟ್ಯೂಬ್‌ ಚಾನೆಲ್ ಹೊಂದಿದ್ದಾರೆ. ಸ್ಥಳೀಯವಾಗಿ ತರಬೇತಿ ಕೇಂದ್ರವನ್ನು ಶಾವೊ ಹೊಂದಿದ್ದು, ಒಂದು ಗಂಟೆಯ ಕ್ಲಾಸ್‌ಗೆ 500 ರೂಪಾಯಿ ಶುಲ್ಕ ವಿಧಿಸುತ್ತಾರೆ.