ತೆಲಂಗಾಣದ ಅಬಕಾರಿ ಇಲಾಖೆ ಒಂದೇ ಒಂದು ಬಾಟಲ್ ಮದ್ಯವನ್ನು ಕೂಡ ಮಾರದೇ 2,600 ಕೋಟಿ ರೂಪಾಯಿ ಹಣ ಸಂಗ್ರಹಿಸಿದೆ.  ಹಾಗಾದರೆ ಇಷ್ಟೊಂದು ಮೊತ್ತದ ಹಣ ಬಂದಿರುವುದು ಎಲ್ಲಿಂದ? 

ತೆಲಂಗಾಣ: ಅಬಕಾರಿ ಇಲಾಖೆ ಅತ್ಯಧಿಕ ಮೊತ್ತದ ಆದಾಯ ತರುವ ಇಲಾಖೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ತೆಲಂಗಾಣದ ಅಬಕಾರಿ ಇಲಾಖೆ ಒಂದೇ ಒಂದು ಬಾಟಲ್ ಮದ್ಯವನ್ನು ಕೂಡ ಮಾರದೇ 2,600 ಕೋಟಿ ರೂಪಾಯಿ ಹಣ ಸಂಗ್ರಹಿಸಿದೆ. ಹಾಗಾದರೆ ಇಷ್ಟೊಂದು ಮೊತ್ತದ ಹಣ ಬಂದಿರುವುದು ಎಲ್ಲಿಂದ? 

ಮದ್ಯದಂಗಡಿಗಳ ಸ್ಥಾಪನೆಗೆ ಅನುಮತಿ ಕೋರಿ ಸಾರ್ವಜನಿಕರಿಂದ, ಉದ್ಯಮಿಗಳಿಂದ ಸಲ್ಲಿಕೆಯಾದ ಅರ್ಜಿ ಶುಲ್ಕದಿಂದಲೇ ಇಷ್ಟೊಂದು ಹಣ ಸಂಗ್ರಹವಾಗಿದೆ ಎಂದು ತೆಲಂಗಾಣ ಅಬಕಾರಿ ಇಲಾಖೆ ಹೇಳಿದೆ. ರಾಜ್ಯದಲ್ಲಿ 2,620 ಮದ್ಯದಂಗಡಿಗಳ ಹಂಚಿಕೆಗಾಗಿ ಸುಮಾರು 1.32 ಲಕ್ಷ ಅರ್ಜಿದಾರರು ಸಲ್ಲಿಸಿದ ಅರ್ಜಿ ಶುಲ್ಕದ ರೂಪದಲ್ಲಿ ಮೊತ್ತದಲ್ಲಿ ಇಷ್ಟೊಂದು ಹಣ ಗಳಿಸಲಾಗಿದೆ. 2023-25ರ ಹೊಸ ಮದ್ಯ ನೀತಿಯ ಪ್ರಕಾರ ಮದ್ಯದಂಗಡಿಗೆ ಅರ್ಜಿ ಶುಲ್ಕವನ್ನು 2 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಶಾಕ್‌ ಕೊಟ್ಟ ಮದ್ಯಪ್ರಿಯರು: ಎಣ್ಣೆ ಮಾರಾಟದಲ್ಲಿ ಭಾರಿ ಇಳಿಮುಖ

ರಾಜ್ಯ ಸರ್ಕಾರವು ಅರ್ಜಿ ಸಲ್ಲಿಕೆಗೆ ಆಗಸ್ಟ್ 18 ಕೊನೆ ದಿನವೆಂದು ಘೋಷಿಸಿತ್ತು. ಹೀಗಾಗಿ ಈ ಕೊನೆ ದಿನಾಂಕದಂದೇ ಅಬಕಾರಿ ಕಚೇರಿಗಳು ಜನರಿಂದ ತುಂಬಿ ತುಳುಕಿದವು. ಕೊನೆ ದಿನ ಹಾಗೂ ಅದಕ್ಕಿಂತ ಹಿಂದಿನ ದಿನ ಒಟ್ಟು 87 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಆಗಸ್ಟ್ 18ರ ಸಂಜೆ ವೇಳೆಗೆ ಅರ್ಜಿ ಸಲ್ಲಿಕೆ ಅವಧಿ ಕೊನೆಗೊಂಡಿತ್ತು. ತೆಲಂಗಾಣದ ಸರೂರನಗರದಲ್ಲಿ (Saroornagar) ಅತಿ ಹೆಚ್ಚು ಅಂದರೆ 10,908 ಅರ್ಜಿಗಳು ಬಂದಿದ್ದವು, ಹಾಗೆಯೇ ಎರಡನೇ ಸ್ಥಾನದಲ್ಲಿ ಶಂಶಾಬಾದ್‌ (Shamshabad) ಇದ್ದು, ಇಲ್ಲಿಂದ 10,811 ಅರ್ಜಿಗಳು ಬಂದಿದ್ದವು ಕುಮ್ರಂಭೀಮ್ ಆಸಿಫಾಬಾದ್‌ (Kumrambhim Asifabad) ಜಿಲ್ಲೆಯಿಂದ ಕಡಿಮೆ ಅಂದರೆ 967 ಅರ್ಜಿಗಳು ಬಂದಿದ್ದವು. 

ಪ್ರತಿ ಮದ್ಯದಂಗಡಿಗೂ ಸುಮಾರು 50 ಮಂದಿಯಿಂದ ಪೈಪೋಟಿ ಇದ್ದು, ಲಕ್ಕಿ ಡ್ರಾ ವ್ಯವಸ್ಥೆಯ ಮೂಲಕ ಆಗಸ್ಟ್ 21 ರಂದೇ ಮದ್ಯದಂಗಡಿಗಳನ್ನು ಹಂಚಿಕೆ ಮಾಡಲಾಗಿದೆ. ತೆಲಂಗಾಣ ಅಬಕಾರಿ ಇಲಾಖೆಯು ಡಿಸೆಂಬರ್ 1, 2023 ರಿಂದ ನವೆಂಬರ್ 2025 ರವರೆಗೆ ಎರಡು ವರ್ಷಗಳ ಅವಧಿಗೆ ಮದ್ಯ ಮಾರಾಟ ಅಂಗಡಿಗಳಿಗೆ ಪರವಾನಗಿಗಳನ್ನು ನೀಡುತ್ತದೆ. ಅವಧಿ ಮುಗಿದ ನಂತರ ಮತ್ತೆ ಅರ್ಜಿ ಆಹ್ವಾನಿಸಲಾಗುತ್ತದೆ. 

ತೆರಿಗೆ ಏರಿಕೆಯಿಂದ ಮದ್ಯ ಮಾರಾಟ ತೀವ್ರ ಇಳಿಕೆ: ಅಬಕಾರಿ ಇಲಾಖೆಯ ಆದಾಯ ಗಣನೀಯ ಕುಸಿತ

ಪ್ರತಿ ಅಂಗಡಿಯ ವಾರ್ಷಿಕ ಪರವಾನಗಿ ಶುಲ್ಕವೂ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ 50 ಲಕ್ಷದಿಂದ 1.1 ಕೋಟಿ ರೂವರೆಗೂ ಇದೆ. ಅರ್ಹ ಅರ್ಜಿದಾರರು ಒಂದು ವರ್ಷಕ್ಕೆ ಅಬಕಾರಿ ತೆರಿಗೆಯಾಗಿ ಈ ಮೊತ್ತದ 25 ಪ್ರತಿಶತವನ್ನು ಸಲ್ಲಿಸಬೇಕು. ಇದರ ಜೊತೆಗೆ ವಿಶೇಷ ಚಿಲ್ಲರೆ ಅಬಕಾರಿ ತೆರಿಗೆ ಎಂದು ವಾರ್ಷಿಕ 5 ಲಕ್ಷ ರೂ ಪಾವತಿ ಮಾಡಬೇಕು. ತೆಲಂಗಾಣ (Telangana State) ರಾಜ್ಯಾದ್ಯಂತ 2,620 ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗಿದೆ. 

ಇದರಲ್ಲಿ ಶೇ. 15 ರಷ್ಟು ಅಂಗಡಿಗಳನ್ನು ಸರ್ಕಾರವೂ ವಿವಿಧ ದುರ್ಬಲ ವರ್ಗಗಳಿಗೆ ಮೀಸಲಿಟ್ಟಿದೆ. ಎಸ್‌ಸಿ ಎಸ್‌ಟಿ ಮತ್ತು ಸಂಪ್ರದಾಯಿಕವಾಗಿ ಶೇಂದಿ ತೆಗೆದು ಮಾರುವ ಮೂಲಕ ಇದನ್ನೇ ವೃತ್ತಿಯಾಗಿಸಿಕೊಂಡಿರುವ ಈಡಿಗ (Gouds)ಸಮುದಾಯಕ್ಕೆ 786 ಅಂಗಡಿಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಶೇಕಡಾ 10 ಎಸ್ ಸಮುದಾಯಕ್ಕೆ ಶೇ.5 ಎಸ್‌ಟಿ (ST) ಸಮುದಾಯಕ್ಕೆ ಮೀಸಲಾಗಿದೆ. 

2,620 ಶಾಪ್‌ಗಳಲ್ಲಿ 615 ಶಾಪ್‌ಗಳು ರಾಜಧಾನಿ ಹೈದರಾಬಾದ್‌ನಲ್ಲೇ (Hyderabad) ಇದೆ. ಪ್ರಸ್ತುತ ಪರವಾನಗಿಗಳು ನವೆಂಬರ್ 30 ರವರೆಗೆ ಚಾಲ್ತಿಯಲ್ಲಿದ್ದರೂ ಕೂಡ ರಾಜ್ಯ ಸರ್ಕಾರ ನವೆಂಬರ್ ನಿಂದ ಡಿಸೆಂಬರ್ ಆಸುಪಾಸಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಟೆಂಡರ್ ಪ್ರಕ್ರಿಯೆಯನ್ನು ಬಹಳ ಮುಂಚಿತವಾಗಿ ಪ್ರಾರಂಭಿಸಿದೆ