ಮದ್ಯದ ದರ ಏರಿಕೆಯಿಂದಾಗಿ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಕುಂಠಿತವಾಗಿದ್ದು, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ.10ರಿಂದ 15ರಷ್ಟು ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ತಿಳಿಸಿದೆ.

ಬೆಂಗಳೂರು (ಆ.19): ಮದ್ಯದ ದರ ಏರಿಕೆಯಿಂದಾಗಿ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಕುಂಠಿತವಾಗಿದ್ದು, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ.10ರಿಂದ 15ರಷ್ಟು ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ತಿಳಿಸಿದೆ.

ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಸುಂಕದಲ್ಲಿ ಬಿಯರ್‌ಗೆ ಶೇ.10 ಹಾಗೂ ಉಳಿದ ಮದ್ಯಕ್ಕೆ ಶೇ.20ರಷ್ಟು ಸುಂಕ ಹೆಚ್ಚಿಸಲಾಗಿದೆ. ಅದರಂತೆ ಕಳೆದ ತಿಂಗಳಿಂದ ಮದ್ಯದ ಬೆಲೆ ಹೆಚ್ಚಾಗಿದೆ. ಹೀಗಾಗಿ ಆಗಸ್ಟ್‌ ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಕೇವಲ 15 ದಿನಗಳಲ್ಲೇ ಬಿಯರ್‌ ಹೊರತುಪಡಿಸಿ ಉಳಿದ ಮದ್ಯದ ಮಾರಾಟ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.14.25ರಷ್ಟು ಕುಸಿತ ಕಂಡಿದೆ.

ಕಾ​ವೇರಿ ಸ​ಮಸ್ಯೆ ಕೇವಲ ರಾ​ಜ​ಕೀಯ ಹೋ​ರಾ​ಟ​ವ​ಲ್ಲ: ಸಂಸದೆ ಸು​ಮ​ಲ​ತಾ

ಒಕ್ಕೂಟ ನೀಡಿರುವ ಮಾಹಿತಿಯಂತೆ ಜುಲೈ ತಿಂಗಳಲ್ಲಿ 3,556.25 ಕೋಟಿ ರು. ಮೊತ್ತದ ಬಿಯರ್‌ ಸೇರಿದಂತೆ ಎಲ್ಲ ಬಗೆಯ ಮದ್ಯಗಳು ಮಾರಾಟವಾಗಿದ್ದವು. ಅದೇ ಆಗಸ್ಟ್‌ ತಿಂಗಳ 15 ದಿನಗಳಲ್ಲಿ 1,302.90 ಕೋಟಿ ರು. ಮದ್ಯ ಮಾರಾಟವಾಗಿದೆ. ಅದರಲ್ಲಿ ಬಿಯರ್‌ 234.19 ಕೋಟಿ ರು. ಹಾಗೂ ಇತರ ಮದ್ಯ 1,068.71 ಕೋಟಿ ರು. ಮಾರಾಟವಾಗಿದೆ.

2022-23ರಲ್ಲಿ ಆಗಸ್ಟ್‌ನ ಮೊದಲ 15 ದಿನಗಳ ಕಾಲ 25.80 ಲಕ್ಷ ಬಾಕ್ಸ್‌ಗಳಷ್ಟು ಮದ್ಯ ಹಾಗೂ 10.34 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿತ್ತು. ಅದೇ ಈ ವರ್ಷದ ಆಗಸ್ಟ್‌ 1ರಿಂದ 15ರವರೆಗೆ 21.87 ಲಕ್ಷ ಬಾಕ್ಸ್‌ ಮದ್ಯ ಹಾಗೂ 12.52 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿದೆ. ಈ ಲೆಕ್ಕದಂತೆ ಬಿಯರ್‌ ಮಾರಾಟದ ಪ್ರಮಾಣ ಹೆಚ್ಚಾಗಿದ್ದರೆ, ಇತರ ಮದ್ಯದ ಮಾರಾಟ ಪ್ರಮಾಣ ಶೇ.14.25ರಷ್ಟು ಕುಸಿತ ಕಂಡಿದೆ. ಅಲ್ಲದೆ, ಸ್ಕಾಚ್‌ ಮದ್ಯ ಕುಡಿಯುತ್ತಿದ್ದವರು ಪ್ರೀಮಿಯಂ ಬ್ರ್ಯಾಂಡ್‌ಗೆ ಹಾಗೂ ಪ್ರೀಮಿಯಂ ಬ್ರ್ಯಾಂಡ್‌ ಸೇವಿಸುತ್ತಿರುವವರು ಅದಕ್ಕಿಂತ ಕೆಳಗಿನ ಬ್ರ್ಯಾಂಡ್‌ ಸೇವಿಸುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್​ನಲ್ಲಿ ಊಟದ ದರ ದುಬಾರಿ: ಬಡವರ ಹೊಟ್ಟೆ ಮೇಲೆ ಸಿದ್ದು ಸರ್ಕಾರ ಬರೆ!

ಮದ್ಯ ಮಾರಾಟದ ಪ್ರಮಾಣದಲ್ಲಿ ಇಳಿಕೆಯ ಜತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಕಲಿ ಮದ್ಯ ಮಾರಾಟವೂ ಹೆಚ್ಚಾಗಿದೆ. ಅದರಲ್ಲೂ ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲೇಬಲ್‌ ಇರುವ ನಕಲಿ ಮದ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನಕಲಿ ಮದ್ಯ ಮಾರಾಟ ತಡೆಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಅಧ್ಯಕ್ಷ ಎಸ್‌.ಗುರುಸ್ವಾಮಿ ಆಗ್ರಹಿಸಿದ್ದಾರೆ.