Asianet Suvarna News Asianet Suvarna News

Sudha Murthy Retires: ಇನ್ಫಿ ಪ್ರತಿಷ್ಠಾನದೊಂದಿಗಿನ 25 ವರ್ಷಗಳ ಪಯಣಕ್ಕೆ ಸುಧಾ ಮೂರ್ತಿ ವಿದಾಯ

ಸುಧಾಮೂರ್ತಿ ಹಾಗೂ ಇನ್ಪೋಸಿಸ್ ಪ್ರತಿಷ್ಠಾನ ಒಂದಕ್ಕೊಂದು ಬೆಸೆದುಕೊಂಡಿರೋ ವಿಷಯಗಳು. ಆದ್ರೆ ಇದೇ ತಿಂಗಳ 31ರಂದು ಸುಧಾಮೂರ್ತಿ ಇನ್ಫೋಸಿಸ್ ಪ್ರತಿಷ್ಠಾನದಿಂದ ನಿವೃತ್ತಿಯಾಗಲಿದ್ದಾರೆ. ಅವರ ಮುಂದಿನ ಯೋಜನೆಗಳೇನು? ಅವರ ಸಮಾಜಸೇವೆ ಮುಂದುವರಿಯಲಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Sudha Murthy retires from Infosys Foundation on Dec 31 what is her next plan anu
Author
Bangalore, First Published Dec 11, 2021, 7:47 PM IST

ಸುಧಾಮೂರ್ತಿ( Sudha Murty)ಹೆಸರು ಕೇಳಿದ ತಕ್ಷಣ ಸಹನೆ, ವಾತ್ಸಲ್ಯ, ನಿಷ್ಕಲ್ಮಶ ನಗುವಿನ ಮಾತೃ ಸ್ವರೂಪಿ ಪ್ರತಿರೂಪವೊಂದು ಮನಸ್ಸಿನಲ್ಲಿ ಮೂಡುತ್ತದೆ. ದೇಶದ ಅದೆಷ್ಟೋ ಮಕ್ಕಳು, ಅಸಹಾಯಕರು, ದೀನರ ಪಾಲಿಗೆ ಆಕೆ ನಿಜಕ್ಕೂ ದೇವತೆ.  ದುಡ್ಡಿರೋದೇ ಪರೋಪಕಾರಕ್ಕೆ ಎಂದು ನಂಬಿ ಅದರಂತೆ ನಡೆದುಕೊಂಡ ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ (Infosys Foundation) ಮೂಲಕ ಕಳೆದ 25 ವರ್ಷಗಳಲ್ಲಿ ಮಾಡಿದ ಜನಪರ ಕಾರ್ಯಗಳನ್ನು ಪಟ್ಟಿ ಮಾಡೋದು ಅಥವಾ ವರ್ಣಿಸೋದು ಕಷ್ಟದ ಕೆಲಸವೇ ಸರಿ. ತಮ್ಮ ಸಮಾಜಮುಖಿ ಕಾರ್ಯಗಳ (Social works)ಅನುಷ್ಠಾನಕ್ಕಾಗಿ  ಇನ್ಫೋಸಿಸ್ ಪ್ರತಿಷ್ಠಾನವನ್ನು (Infosys Foundation) ಹುಟ್ಟುಹಾಕಿದ ಸುಧಾಮೂರ್ತಿ,  ಅದರೊಂದಿಗಿನ ತಮ್ಮ 25 ವರ್ಷಗಳ ಪ್ರಯಾಣವನ್ನು ಮುಗಿಸಲಿದ್ದಾರೆ. ಡಿಸೆಂಬರ್ 31ರಂದು ಸುಧಾಮೂರ್ತಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ(President) ಸ್ಥಾನದಿಂದ ನಿವೃತ್ತಿಯಾಗಲಿದ್ದಾರೆ ಎಂದು ಸಂಸ್ಥೆ ಹಲವು ದಿನಗಳ ಹಿಂದೆಯೇ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಸುಧಾಮೂರ್ತಿ ಇನ್ಫೋಸಿಸ್ ಪ್ರತಿಷ್ಠಾನ ಹುಟ್ಟುಹಾಕಿದ ಬಗೆ ಹಾಗೂ ಅದರ ಸಾಧನೆಗಳ ಬಗ್ಗೆ ಒಂದಿಷ್ಟು ಮೆಲುಕು ಹಾಕೋ ಪ್ರಯತ್ನ ಇಲ್ಲಿದೆ.

32ಲಕ್ಷ ರೂ.ನಿಂದ 400ಕೋಟಿ ರೂ.ತಲುಪಿದ ಕಥೆ
ಇನ್ಫೋಸಿಸ್ ಪ್ರತಿಷ್ಠಾನವನ್ನು 1996 ಡಿಸೆಂಬರ್ 6ರಂದು 32ಲಕ್ಷ ರೂಪಾಯಿಯೊಂದಿಗೆ ಪ್ರಾರಂಭಿಸಲಾಯಿತು. ಸುಧಾಮೂರ್ತಿ ಅವರೇ ಹೇಳುವಂತೆ ಆ ಕಾಲಕ್ಕೆ ಇದು ದೊಡ್ಡ ಮೊತ್ತ. ಇಷ್ಟು ಹಣವನ್ನು ಏನು ಮಾಡೋದು ಎಂಬ ಪ್ರಶ್ನೆ ಆಗ ಅವರನ್ನು ಕಾಡಿತ್ತಂತೆ. ಆದ್ರೆ ನಂತರ ಎಷ್ಟು ಹಣವಿದ್ರೂ ಸಾಲದು. ಸಮಸ್ಯೆಗಳು ಅದಕ್ಕಿಂತ ನೂರು ಪಟ್ಟು ಹೆಚ್ಚಿವೆ ಎಂಬುದು ಅವರಿಗೆ ಬಂತು ಎಂದು ಸುಧಾಮೂರ್ತಿ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ ಕೂಡ. ಇಂದು ಇನ್ಫೋಸಿಸ್ ಪ್ರತಿಷ್ಠಾನ 400ಕೋಟಿ ರೂ.ಗೆ ಬೆಳೆದು ನಿಂತಿದೆ. ಆದ್ರೆ ಈ ಮೊತ್ತ ಕೂಡ ಸಮಾಜಸೇವೆ ಮಾಡಲು ಕಡಿಮೆ ಮೊತ್ತನೇ. ಏಕೆಂದ್ರೆ ನಮ್ಮ ಮುಂದೆ ಅಷ್ಟೇ ಸವಾಲುಗಳಿವೆ. ಕೋವಿಡ್, ಅಪೌಷ್ಟಿಕತೆ, ಹಸಿವು, ಶಿಕ್ಷಣ ಇಂಥ ಹತ್ತಾರು ಸಮಸ್ಯೆಗಳಿವೆ ಎನ್ನುತ್ತಾರೆ ಸುಧಾಮೂರ್ತಿ.

ಇಸ್ಫೋಸಿಸ್‌ನಿಂದ ಜಯದೇವ ಆಸ್ಪತ್ರೆಗೆ ಉಚಿತ ಕಟ್ಟಡ: ಸುಧಾಮೂರ್ತಿಗೆ ಬಿಎಸ್‌ವೈ ಅಭಿನಂದನೆ

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ
ಸುಧಾಮೂರ್ತಿ ಅವರ ನೇತೃತ್ವದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಶಿಕ್ಷಣ(Education), ಆರೋಗ್ಯಸೇವೆ (health service), ಗ್ರಾಮೀಣಾಭಿವೃದ್ಧಿ (Rural development)ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಕೂಡ ಸಂಸ್ಥೆ ನೆರವು ನೀಡುತ್ತಿದೆ. ಪ್ರತಿಷ್ಠಾನದಿಂದ ಸಮಾಜದ ಅಶಕ್ತ ವರ್ಗದ ಜನರಿಗಾಗಿ ಈ ತನಕ 14 ಸಾವಿರ ಶೌಚಾಲಯಗಳು(Toilets), 60 ಸಾವಿರ ಗ್ರಂಥಾಲಯಗಳನ್ನು(Libraries) ಸ್ಥಾಪಿಸಲಾಗಿದೆ. ಅನೇಕ ಆಸ್ಪತ್ರೆಗಳು(Hospitals), ಶಾಲೆಗಳು(Schools), ಅನಾಥಾಶ್ರಮಗಳು(Orphanage) ಹಾಗೂ ನಿರಾಶ್ರಿತರ ಕೇಂದ್ರಗಳನ್ನು ಕೂಡ ತೆರೆಯಲಾಗಿದೆ. ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಕೂಡ ಪ್ರತಿಷ್ಠಾನ ಆಸ್ಪತ್ರೆಗಳ ನಿರ್ಮಾಣ, ಪಿಪಿಇ ಕಿಟ್ ಗಳಿಗಾಗಿ 150ಕೋಟಿ ರೂ. ವ್ಯಯಿಸಲಾಗಿದೆ. 

ಭಾರತದ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.3.2 ಹೆಚ್ಚಳ

ಮೂರ್ತಿ ಪ್ರತಿಷ್ಠಾನದ(Murthy Foundation) ಮೂಲಕ ಸೇವೆ ಮುಂದುವರಿಕೆ
ಸುಧಾಮೂರ್ತಿ ಇನ್ಪೋಸಿಸ್ ಪ್ರತಿಷ್ಠಾನದಿಂದ ನಿವೃತ್ತಿ ಹೊಂದುತ್ತಿರಬಹುದು, ಆದ್ರೆ ಅವರ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿವೆ. ಅವರು ತಮ್ಮದೇ ಸ್ವಂತ ಹಣದಲ್ಲಿ ಮೂರ್ತಿ ಪ್ರತಿಷ್ಠಾನ ಪ್ರಾರಂಭಿಸಿ ಆ ಮೂಲಕ ಸೇವೆ ಮುಂದುವರಿಸೋದಾಗಿ ಈಗಾಗಲೇ ತಿಳಿಸಿದ್ದಾರೆ.  'ಕಳೆದ 25ವರ್ಷಗಳಿಂದ ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಸಮಾಜಸೇವೆ ಮಾಡೋ ಅವಕಾಶ ದೊರೆತಿರೋದಕ್ಕೆ ನಾನು ಅಭಾರಿಯಾಗಿದ್ದೇನೆ. ನನ್ನ ದೇಶದ ನೈಜ್ಯ ಸ್ಥಿತಿ ಹಾಗೂ ಸಾಮಾನ್ಯಜನರ ಅಗತ್ಯಗಳ ಬಗ್ಗೆ ಪ್ರತಿಷ್ಠಾನ ನನ್ನ ಕಣ್ಣು ತೆರೆಸಿತು. ಇನ್ಫೋಸಿಸ್ ಪ್ರತಿಷ್ಠಾನದ ಜೊತೆಗಿನ ನನ್ನ ಈ ಅಮೂಲ್ಯ ಪಯಣಕ್ಕೆ ಅನೇಕರ ಬೆಂಬಲವಿದೆ. ಮುಖ್ಯವಾಗಿ ನನ್ನ ಕುಟುಂಬ, ನನ್ನ ತಂಡ, ಸಂಸ್ಥೆಯ ಉನ್ನತ ಆಡಳಿತ ಮಂಡಳಿ, ವಿವಿಧ ಉದ್ಯೋಗಿಗಳು ಹಾಗೂ ಫಲಾನುವಿಗಳು ಕೂಡ. ಇಲ್ಲಿನ ನೆನಪುಗಳನ್ನು ಸದಾ ಹಸಿರಾಗಿಸಿಕೊಳ್ಳುವ ಜೊತೆ ನನ್ನ ಸಮಾಜಸೇವೆಯನ್ನು ನನ್ನದೇ ಮಾರ್ಗದಲ್ಲಿ ಮುಂದುವರಿಸುತ್ತೇನೆ' ಎಂದು ಪ್ರತಿಷ್ಠಾನದಿಂದ ನಿರ್ಗಮಿಸೋ ವಿಚಾರಕ್ಕೆ ಸಂಬಂಧಿಸಿ ಸುಧಾಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. 

Follow Us:
Download App:
  • android
  • ios