ಇಸ್ಫೋಸಿಸ್‌ನಿಂದ ಜಯದೇವ ಆಸ್ಪತ್ರೆಗೆ ಉಚಿತ ಕಟ್ಟಡ: ಸುಧಾಮೂರ್ತಿಗೆ ಬಿಎಸ್‌ವೈ ಅಭಿನಂದನೆ
ಪತ್ರ ಬರೆದು ಸುಧಾಮೂರ್ತಿಗೆ ಅಭಿನಂದನೆ ಸಲ್ಲಿಸುತ್ತೇನೆ: ಸಿಎಂ ಬಿ.ಎಸ್. ಯಡಿಯೂರಪ್ಪ| ಕಲಬುರಗಿ ಜಯದೇವ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸೂಚಿಸಿದ ಸಿಎಂ| ಬಡ ರೋಗಿಗಳಿಗೆ ಸುಧಾಮೂರ್ತಿ ಅವರು ನೀಡುತ್ತಿರುವ ಸಹಕಾರ ಶ್ಲಾಘನೀಯ: ಬಿಎಸ್‌ವೈ|
ಬೆಂಗಳೂರು(ಅ.14): ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಟ್ಟಡ ನಿರ್ಮಿಸಿ, ಉಚಿತವಾಗಿ ಉಪಕರಣ ಒದಗಿಸಲು ಮುಂದಾಗಿರುವ ಇಸ್ಫೋಸಿಸ್ ಪ್ರತಿಷ್ಠಾನದ ಡಾ. ಸುಧಾಮೂರ್ತಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಯದೇವ ಹೃದ್ರೋಗ ಆಸ್ಪತ್ರೆಯ ಆಡಳಿತ ಮಂಡಳಿ ಸಭೆಯಲ್ಲಿ ವಿವಿಧ ಜಯದೇವ ಆಸ್ಪತ್ರೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಈ ವೇಳೆ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್, ಬೆಂಗಳೂರು ಜಯದೇವ ಆಸ್ಪತ್ರೆಯ ಆವರಣದಲ್ಲಿ ಇಸ್ಫೋಸಿಸ್ ಪ್ರತಿಷ್ಠಾನದ ವತಿಯಿಂದ 325 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡವನ್ನು ಉಚಿತವಾಗಿ ನಿರ್ಮಿಸಲಾಗುತ್ತಿದೆ. ಈಗಾಗಲೇ 635 ಹಾಸಿಗೆ ಸಾಮರ್ಥ್ಯವಿರುವ ಆಸ್ಪತ್ರೆಯು ಮುಂದಿನ ವರ್ಷದಿಂದ ಒಟ್ಟು 950 ಹಾಸಿಗೆಗಳ ಮೂಲಕ ಭಾರತದಲ್ಲೇ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಲಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ, ಕಟ್ಟಡ ನಿರ್ಮಾಣ ಮಾಡುತ್ತಿರುವುದಲ್ಲದೆ ಉಚಿತವಾಗಿ ಉಪಕರಣಗಳನ್ನೂ ಒದಗಿಸಲು ಡಾ. ಸುಧಾಮೂರ್ತಿ ಮುಂದೆ ಬಂದಿದ್ದಾರೆ. ಬಡ ರೋಗಿಗಳಿಗೆ ಅವರು ನೀಡುತ್ತಿರುವ ಸಹಕಾರ ಶ್ಲಾಘನೀಯ. ಈ ಬಗ್ಗೆ ಅವರಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಮೈಸೂರು ಝೂಗೆ 20 ಲಕ್ಷ ರು. ದೇಣಿಗೆ ಕೊಟ್ಟ ಸುಧಾಮೂರ್ತಿ
ಇನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಿಂದ 150 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಲಬುರಗಿ ಜಯದೇವ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು. ಹಾಲಿ ಕಲಬುರಗಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಯದೇವ ಆಸ್ಪತ್ರೆಗೆ ಶೀಘ್ರವಾಗಿ ಸ್ವಂತ ಕಟ್ಟಡ ಒದಗಿಸಬೇಕಾಗಿದೆ. ಈಗಾಗಲೇ 150 ಕೋಟಿ ವೆಚ್ಚದಲ್ಲಿ 300 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿದರು.
ರಾಜೀವ್ ಆಸ್ಪತ್ರೆಗೆ ಮೆಚ್ಚುಗೆ ಬಳಿಕ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ನಾಗರಾಜ್ ಸೇರಿ ಆಸ್ಪತ್ರೆಯ ಪದಾಧಿಕಾರಿಗಳೊಂದಿಗೆ ಆಡಳಿತ ಮಂಡಳಿಯ ಸಭೆ ನಡೆಸಿದರು. ಈ ವರ್ಷ ಕೊರೋನಾದಿಂದಾಗಿ ಆರೋಗ್ಯ ಕ್ಷೇತ್ರಕ್ಕೇ ದೊಡ್ಡ ಸವಾಲಿನ ವರ್ಷ. ಇಂತಹ ಸಮಯದಲ್ಲಿ ಮೊದಲ ಕೊರೋನಾ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ವೈದ್ಯರಿಗೆ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.