ಬ್ಯಾಂಕ್ ಉದ್ಯೋಗ ತೊರೆದು, ಕುಟುಂಬದ ವಿರೋಧದ ನಡುವೆಯೂ ಆಹಾರ ಉದ್ಯಮದಲ್ಲಿ ಯಶಸ್ಸು ಗಳಿಸಿದ ಲುಧಿಯಾನದ ನವನೂರ್ ಕೌರ್,  'ಜಾಗರ್‌ಕೇನ್'      ಎಂಬ ಸ್ಟಾರ್ಟ್‌ಅಪ್ ಆರಂಭಿಸಿದರು.  

ಲುಧಿಯಾನ ನಿವಾಸಿ ನವನೂರ್ ಕೌರ್ (Navnoor Kaur) ಸಾಂಪ್ರದಾಯಿಕ ಉದ್ಯೋಗವನ್ನು ತೊರೆದು ಹೊಸ ಹೆಜ್ಜೆ ಇಟ್ಟ ಮಹಿಳೆಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಹಾಗೆ ನೋಡುವುದಾದರೆ ಯಾವ ಜಾಬ್ ಮಹಿಳೆಯರಿಗೆ ಬಹಳ ಸೇಫ್ ಹಾಗೂ ಕಂಫರ್ಟಬಲ್ ಎನ್ನುತ್ತೇವೋ ಅಂತಹ ಉದ್ಯೋಗವನ್ನೇ ತೊರೆದವರು. ಹೌದು ನವನೂರ್ ತಮ್ಮ ಬ್ಯುಸಿನೆಸ್ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಉದ್ಯೋಗವನ್ನು ತೊರೆದ ನಂತರ ಯಾರೂ ಅವರಿಗೆ ಸಪೋರ್ಟ್ ಮಾಡಲಿಲ್ಲ. ಆದರೂ ನವನೂರ್ ಕುಟುಂಬದ ಇಚ್ಛೆಗೆ ವಿರುದ್ಧವಾಗಿ, ಆಹಾರ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅದು ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಈಗ ಅವರು ಯಶಸ್ವಿ ಮಹಿಳಾ ಉದ್ಯಮಿಯಾಗಿ ಖ್ಯಾತಿ ಗಳಿಸಿದ್ದಾರೆ. ಇಂದು ಅವರು ಕೋಟಿ ಕೋಟಿ ಲಾಭದಲ್ಲಿದ್ದು, ನವನೂರ್ ಕೌರ್ ಅವರ ಯಶೋಗಾಥೆ ನಿಮಗಾಗಿ... 

ಲುಧಿಯಾನದಲ್ಲಿ ಹುಟ್ಟಿ ಬೆಳೆದ ನವನೂರ್ ಕೌರ್ ಅವರ ತಂದೆ ಪ್ರಾಧ್ಯಾಪಕರು ಮತ್ತು ತಾಯಿ ಶಾಲಾ ಪ್ರಾಂಶುಪಾಲರು. ಬಾಲ್ಯದಿಂದಲೂ ನವನೂ‌ರ್ ಅಧ್ಯಯನದಲ್ಲಿ ಚಾಣಾಕ್ಷೆ. ಹಾಗಾಗಿ ತಮ್ಮ ಕರಿಣ ಪರಿಶ್ರಮದಿಂದಾಗಿ 2019 ರಲ್ಲಿ ಐಎಂಟಿ ಗಾಜಿಯಾಬಾದ್‌ನಿಂದ ಎಂಬಿಎ ಪದವಿ ಪಡೆದರು. ಎಂಬಿಎ ನಂತರ ನವನೂರ್ ಗುರ್ಗಾಂವ್‌ನ ಕೋಟಕ್ ಬ್ಯಾಂಕ್‌ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು. ಉತ್ತಮ ಸಂಬಳ ಮತ್ತು ಅತ್ಯಂತ ಸುರಕ್ಷಿತ ವೃತ್ತಿಜೀವನವನ್ನು ಹೊಂದಿದ್ದರೂ ಆಕೆ ಯಾವಾಗಲೂ ವಿಭಿನ್ನ ಮತ್ತು ಯಾವುದಾದರೂ ದೊಡ್ಡ ವ್ಯವಹಾರ ಮಾಡುವ ಕನಸು ಕಾಣುತ್ತಿದ್ದರು. 

ಬ್ಯುಸಿನೆಸ್ ಆರಂಭಿಸುವ ಕಲ್ಪನೆ ಬಂದದ್ದು ಹೇಗೆ? 
ನವನೂರ್ ಅವರ ಕುಟುಂಬದ ಅನೇಕ ಸದಸ್ಯರು ಮಧುಮೇಹದಿಂದ ಬಳಲುತ್ತಿದ್ದರು. ಮಾರುಕಟ್ಟೆಯಲ್ಲಿ ರಾಸಾಯನಿಕ ಮುಕ್ತ ಮತ್ತು ಆರೋಗ್ಯಕರ ಬೆಲ್ಲದ ಆಯ್ಕೆ ಲಭ್ಯವಿಲ್ಲ ಎಂದು ಅವರು ಗಮನಿಸಿದರು. ಬೆಲ್ಲದ ವ್ಯಾಪಾರ ಆರಂಭಿಸುವ ಯೋಚನೆ ಅವರಿಗೆ ಬಂದಿದ್ದು ಇಲ್ಲೇ. ತಮ್ಮ ಉಳಿತಾಯದಿಂದ ನವನೂರ್ 'ಜಾಗರ್‌ಕೇನ್' ಎಂಬ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸಿದರು. ಈ ಕಂಪೆನಿ ಬೆಲ್ಲ ಮತ್ತು ಅದರ ಸಂಬಂಧಿತ ಉತ್ಪನ್ನಗಳನ್ನು ತಯಾರಿಸುತ್ತದೆ. ಆದರೆ ನವನೂರ್ ಅವರ ಕೆಲಸ ಬಿಡುವ ನಿರ್ಧಾರದಿಂದ ಅವರ ಕುಟುಂಬವು ಸಂತೋಷವಾಗಿರಲಿಲ್ಲ. ಇದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದ ನವನೂರ್ ಮೊದಲು ತಮ್ಮನ್ನು ತಾವು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸವನ್ನು ಪಾರಂಭಿಸಿದರು

ಉತ್ಪನ್ನಗಳು ರಫ್ತಾಗುತ್ತವೆ..ವಾರ್ಷಿಕ 2 ಕೋಟಿ ರೂ. ಆದಾಯ
ಆರಂಭಿಕ ದಿನಗಳಲ್ಲಿ, ನವನೂರ್ ತಮ್ಮ ಉತ್ಪನ್ನಗಳ ಮಾರುಕಟ್ಟೆಯನ್ನು ಸ್ವತಃ ವಹಿಸಿಕೊಂಡರು. ಮನೆ ಮನೆಗೆ ತೆರಳಿ ಉತ್ಪನ್ನಗಳನ್ನು ಪ್ರಚಾರ ಮಾಡಿದರು. ಕಡಿಮೆ ಬಾಳಿಕೆ ಮತ್ತು ಕಡಿಮೆ ಲಾಭಾಂಶದ ಕಾರಣ ಅಂಗಡಿಯವರು ಅವರ ಉತ್ಪನ್ನಗಳನ್ನು ತಿರಸ್ಕರಿಸಿದರು. ಅಂತಹ ಸಮಯದಲ್ಲಿ ಅವರ ತಂದೆಯ ವಿದ್ಯಾರ್ಥಿ ಕೌಶಲ್ ಅವರ ಸಪೋರ್ಟ್ ಸಿಕ್ಕಿತು. ಕೌಶಲ್ ಪಂಜಾಬ್‌ನಲ್ಲಿ ಉತ್ಪಾದನಾ ಘಟಕವನ್ನು ನಡೆಸುತ್ತಿದ್ದರು. ಇಬ್ಬರೂ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಕೌಶಲ್ ಉತ್ಪಾದನೆಯನ್ನು ನಿರ್ವಹಿಸಿದರೆ, ನವನೂರ್ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಅನ್ನು ನಿರ್ವಹಿಸುತ್ತಾರೆ. ಕೌಶಲ್ ಬೆಲ್ಲದ ಶೆಲ್ಸ್ ಜೀವಿತಾವಧಿಯನ್ನು 9 ತಿಂಗಳಿಗೆ ಹೆಚ್ಚಿಸಿದರು. ಇದು ಹಿಂದೆ ಕೇವಲ 1 ತಿಂಗಳಾಗಿತ್ತು. ಇದು ಅವರ ವ್ಯವಹಾರಕ್ಕೆ ಭಾರಿ ಬೆಳವಣಿಗೆಗೆ ಕಾರಣವಾಯಿತು. ಈಗ ಅವರ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ. 25 ಜನರಿಗೆ ಉದ್ಯೋಗಾವಕಾಶಗಳು ಸಿಕ್ಕಿವೆ. ನವನೂರ್ ವಾರ್ಷಿಕ 2 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. 

ನವನೂರ್ ಅವರ ಕಥೆ ತಮ್ಮ ಉದ್ಯೋಗ ತೊರೆದು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಸ್ಫೂರ್ತಿಯಾಗಿದೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿದೆ.