ಅಮೆರಿಕದ ಎಸ್ ವಿಬಿ ಬ್ಯಾಂಕ್ ಪತನ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಭಾರತದ ಷೇರು ಮಾರುಕಟ್ಟೆ ಕೂಡ ಇದರ ಹೊಡೆತಕ್ಕೆ ನಲುಗಿದೆ. ಹಾಗಾದ್ರೆ ಎಸ್ ವಿಬಿ ಬ್ಯಾಂಕಿಗೂ ಭಾರತಕ್ಕೂ ಏನಾದ್ರೂ ನಂಟಿದೆಯಾ? ಮುಂದಿನ ದಿನಗಳಲ್ಲೂ ಇದು ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಬಲ್ಲದಾ? ಇಲ್ಲಿದೆ ಮಾಹಿತಿ. 

ಮುಂಬೈ (ಮಾ.14): ಅಮೆರಿಕದ ‘ಸಿಲಿಕಾನ್‌ ವ್ಯಾಲಿ ಬ್ಯಾಂಕ್‌’ಪತನ ಭಾರತದ ಷೇರು ಮಾರಕಟ್ಟೆ ಮೇಲೆ ಕೂಡ ಪರಿಣಾಮ ಬೀರಿದೆ. ಬ್ಯಾಂಕ್, ಹಣಕಾಸು ಹಾಗೂ ಐಟಿ ಕಂಪನಿಗಳ ಷೇರುಗಳ ಮೇಲೆ ಇದು ಪರಿಣಾಮ ಬೀರಿದೆ. ಶುಕ್ರವಾರ (ಮಾ.10) ಪ್ರಾರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು 2.67ಲಕ್ಷ ಕೋಟಿ ರೂ. ಕಳೆದುಕೊಂಡಿದ್ದರು. 3,206 ಷೇರುಗಳಲ್ಲಿ1,966 ಷೇರುಗಳ ವಹಿವಾಟು ತಗ್ಗಿತ್ತು. ಸೋಮವಾರ ಕೂಡ ಬ್ಯಾಂಕ್ ಷೇರುಗಳು ಶೇ.2ರಷ್ಟು ಇಳಿಕೆ ದಾಖಲಿಸಿದ್ದವು. ಇಂದು ಕೂಡ ಬ್ಯಾಂಕಿಂಗ್ ಷೇರುಗಳು ಚೇತರಿಕೆ ಕಂಡಿಲ್ಲ. ಹೆಚ್ಚಿನ ನಷ್ಟದೊಂದಿಗೆ ಸೂಚ್ಯಂಕಗಳನ್ನು ಗಮನಾರ್ಹವಾಗಿ ಕೆಳಗೆ ತಳ್ಳಿವೆ. ಎಸ್ ವಿಬಿ ಬ್ಯಾಂಕ್ ಸ್ಟಾರ್ಟಪ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳಿಗೆ ಸಾಲ ನೀಡುವ ಉದ್ದೇಶದಿಂದ ಸ್ಥಾಪನೆಯಾದ ಬ್ಯಾಂಕ್ ಆಗಿದೆ. ಹೀಗಾಗಿ ಈ ಬ್ಯಾಂಕ್ ಪತನ ಸ್ಟಾರ್ಟಪ್ ಗಳು ಹಾಗೂ ಐಟಿ ಕಂಪನಿಗಳ ಷೇರುಗಳ ಮೇಲೂ ಪರಿಣಾಮ ಬೀರಿದೆ. ಅಮೆರಿಕದ ಮಾರುಕಟ್ಟೆಯಲ್ಲಿನ ತಲ್ಲಣಗಳು ಜಾಗತಿಕ ಮಾರುಕಟ್ಟೆ ಮೇಲೆ ಕೂಡ ಪರಿಣಾಮ ಬೀರಿದೆ. ಹೀಗಾಗಿ ಭಾರತ ಸೇರಿದಂತೆ ಅನೇಕ ದೇಶಗಳ ಷೇರು ಮಾರುಕಟ್ಟೆಗಳು ಈ ಘಟನೆ ಬಳಿಕ ನಷ್ಟದ ವಹಿವಾಟು ದಾಖಲಿಸಿವೆ.

ಎಸ್ ವಿಬಿ ಪತನಕ್ಕೆ ಕಾರಣವೇನು?
ಪತನವಾಗುವ ತನಕ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಅನ್ನು ಅಮೆರಿಕದ 16ನೇ ಅತೀದೊಡ್ಡ ಬ್ಯಾಂಕ್ ಎಂದು ಪರಿಗಣಿಸಲಾಗಿತ್ತು. ಈ ಬ್ಯಾಂಕ್ ಸ್ಟಾರ್ಟಪ್ ಗಳು ಹಾಗೂ ಮಾಹಿತಿ ತಂತ್ರಜ್ಞಾನ ವಲಯದ ಸಂಸ್ಥೆಗಳಿಗೆ ಸಾಲ ನೀಡುತ್ತಿದ್ದ ಕಾರಣ ಜನಪ್ರಿಯತೆ ಗಳಿಸಿತ್ತು. ಎಸ್ ವಿಬಿ ಫೈನಾನ್ಷಿಯಲ್ ಗ್ರೂಪ್ ಈ ಬ್ಯಾಂಕ್ ನಿರ್ವಹಣೆ ಮಾಡುತ್ತಿದ್ದು, ಅಮೆರಿಕ ಹೊರತುಪಡಿಸಿ ಭಾರತ ಸೇರಿದಂತೆ 10 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಳೆದ ಕೆಲ ವರ್ಷಗಳಲ್ಲಿ ಸ್ಟಾರ್ಟಪ್‌ ವಲಯದ ಕಂಪನಿಗಳು ಭಾರೀ ಲಾಭದಲ್ಲಿದ್ದು, ತಮ್ಮಲ್ಲಿದ್ದ ಹೆಚ್ಚಿನ ಹಣವನ್ನು ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಆರಂಭಿಸಿದ್ದವು. ಇದರಿಂದ 2017ರಲ್ಲಿ ಬ್ಯಾಂಕ್‌ನ ಠೇವಣಿ ಗಾತ್ರ 3.60 ಲಕ್ಷ ಕೋಟಿ ರು. ಇದ್ದಿದ್ದು, 2021ರ ಅಂತ್ಯದ ವೇಳೆಗೆ 15.50 ಲಕ್ಷ ಕೋಟಿ ರೂ. ತಲುಪಿತ್ತು. ಆದರೆ ಇದೇ ಸಮಯದಲ್ಲಿ ಸಾಲ ನೀಡಿಕೆ ಪ್ರಮಾಣ 1.90 ಲಕ್ಷ ಕೋಟಿ ರೂ.ನಿಂದ ಕೇವಲ 5.4 ಲಕ್ಷ ಕೋಟಿ ರೂ.ಗೆ ಹೆಚ್ಚಿತು. 

ಹೆಸರಿನ ಗೊಂದಲ: ಅಮೆರಿಕದ ಎಸ್‌ವಿಬಿ ಬ್ಯಾಂಕ್‌ ಪತನದಿಂದ ಮುಂಬೈ ಎಸ್‌ವಿಸಿ ಗ್ರಾಹಕರಿಗೆ ಆತಂಕ..!

ಆದಾಯ ತಗ್ಗಿ ಪಾವತಿಸಬೇಕಾದ ಬಡ್ಡಿ ಪ್ರಮಾಣ ಹಲವು ಪಟ್ಟು ಹೆಚ್ಚಿತ್ತು. ಹೀಗಾಗಿ ಬ್ಯಾಂಕ್‌, ಹೆಚ್ಚುವರಿ ಹಣವನ್ನು, ಅಮೆರಿಕದ ಸರ್ಕಾರಿ ಬಾಂಡ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತು. ಆದರೆ ಕೇಂದ್ರೀಯ ಬ್ಯಾಂಕ್‌ ಯಾವಾಗ ಬ್ಯಾಂಕ್‌ ಬಡ್ಡಿ ದರ ಏರಿಕೆ ಮಾಡಲು ಆರಂಭಿಸಿತೋ ಆಗ ಬಾಂಡ್‌ನ ಬಡ್ಡಿದರ ಇಳಿಯಲು ಆರಂಭವಾಯಿತು. ಇದೇ ಹೊತ್ತಿಗೆ ಅತ್ತ ಟೆಕ್‌ ವಲಯದ ಕಂಪನಿಗಳಿಗೂ ಹೊಸ ಹೂಡಿಕೆ ಕಡಿಮೆಯಾದ ಕಾರಣ, ಅವು ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಲ್ಲಿದ್ದ ಠೇವಣಿ ಹಿಂದಕ್ಕೆ ಪಡೆಯಲು ಪ್ರಾರಂಭಿಸದವು. ಆಗ ಬ್ಯಾಂಕ್‌ ಅನಿವಾರ್ಯವಾಗಿ ಬಾಂಡ್‌ಗಳನ್ನು ತಾನು ಖರೀದಿಸಿದ ದರಕ್ಕಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಬೇಕಾಗಿ ಬಂತು. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಬ್ಯಾಂಕ್‌ 16000 ಕೋಟಿ ರೂ. ನಷ್ಟ ಅನುಭವಿಸಿತು.ಈ ನಷ್ಟ ಭರಿಸಲು ಮಾರುಕಟ್ಟೆಯಿಂದ 20,000 ಕೋಟಿ ರೂ. ಸಂಗ್ರಹಣೆಗೆ ಮುಂದಾಗಿರುವುದಾಗಿ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನ ಮಾತೃ ಸಂಸ್ಥೆ ಎಸ್‌ವಿಬಿ ಫೈನಾನ್ಷಿಯಲ್‌ ಗ್ರೂಪ್‌ ಘೋಷಣೆ ಮಾಡಿತು. ಆಗ ಬ್ಯಾಂಕ್‌ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ಹೊರಬಿತ್ತು. ಇದರಿಂದ ಭೀತರಾದ ಬ್ಯಾಂಕ್‌ನ ಠೇವಣಿದಾರರು ಗುರುವಾರ ಹಾಗೂ ಶುಕ್ರವಾರ ಬ್ಯಾಂಕ್‌ನಿಂದ ಹಣ ಹಿಂಪಡೆಯಲು ಏಕಾಏಕಿ ಮುಗಿಬಿದ್ದರು.

ಭಾರತದ ಮೇಲೇನು ಪರಿಣಾಮ?
ಎಸ್ ವಿಬಿ ಮಾತೃಸಂಸ್ಥೆ ಎಸ್ ವಿಬಿ ಫೈನಾನ್ಷಿಯಲ್ ಗ್ರೂಪ್ ಭಾರತದ ಬ್ಲೂಸ್ಟೋನ್, ಕಾರ್ ವಾಲೆ, ಇನ್ ಮೊಬಿ ಹಾಗೂ ಲಾಯಲ್ಟಿ ರಿವಾರ್ಡಜ್ ನಲ್ಲಿ ಹೂಡಿಕೆ ಹೊಂದಿವೆ. ಹೀಗಾಗಿ ಎಸ್ ವಿಬಿ ಪತನ ಭಾರತದ ಸ್ಟಾರ್ಟ್ ಅಪ್ ಗಳ ಮೇಲೆ ಪರಿಣಾಮ ಬೀರದು ಎಂದು ಹೇಳಲಾಗದು. ಇನ್ನು ವೈ ಕಾಂಬಿನೇಟರ್ ಎಂಬ ಎಸ್ ವಿಬಿ ಗ್ರಾಹಕ ಸಂಸ್ಥೆ ಭಾರತದ 19 ಸ್ಟಾರ್ಟ್ ಅಪ್ ಗಳಲ್ಲಿ ಊಡಿಕೆ ಮಾಡಿದೆ. ಹೀಗಾಗಿ ಎರಡನೇ ಹಂತದಲ್ಲಿ ಭಾರತದ ಮೇಲೆ ಇದರ ಪರಿಣಾಮ ಗೋಚರಿಸುವ ಸಾಧ್ಯತೆಯಿದೆ. 

282 ಲಕ್ಷ ಕೋಟಿ ವಿತ್‌ಡ್ರಾ, 48 ಗಂಟೆಗಳಲ್ಲೇ ಬಂದ್‌ ಆದ ಅಮೆರಿಕದ 2ನೇ ಅತಿದೊಡ್ಡ ಬ್ಯಾಂಕ್‌!

ಷೇರು ಮಾರುಕಟ್ಟೆ ಮೇಲೇನು ಪರಿಣಾಮ?
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಶುಕ್ರವಾರ ಭಾರತ ಸೇರಿದಂತೆ ವಿವಿಧ ಮಾರುಕಟ್ಟೆಗಳು ಕುಸಿಯಲು ಎಸ್ ವಿಬಿ ಪತನ ಕಾರಣ ಹೌದು. ಅಮೆರಿಕದ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಿದ ಪಿಣಾಮ ಭಾರೀ ನಷ್ಟ ಸಂಭವಿಸಿತ್ತು. ಅದರಲ್ಲೂ ಎಸ್ ವಿಬಿಗೆ ಸಂಬಂಧಿಸಿದ ಶೇ.60ರಷ್ಟು ಭಾರೀ ಕುಸಿತ ದಾಖಲಿಸಿದ್ದವು. ಇದು ಭಾರತ ಸೇರಿದಂತೆ ಇತರ ರಾಷ್ಟ್ರಗಳ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿತು. ಮುಖ್ಯವಾಗಿ ಬ್ಯಾಂಕಿಂಗ್ ವಲಯದ ಷೇರುಗಳು ನಷ್ಟ ಅನುಭವಿಸಿದವು.