Asianet Suvarna News Asianet Suvarna News

ಸಾವರಿನ್ ಗೋಲ್ಡ್ ಬಾಂಡ್ ನಾಲ್ಕನೇ ಸರಣಿ ಇಂದಿನಿಂದ ಪ್ರಾರಂಭ; ಖರೀದಿ ಹೇಗೆ? ಇಲ್ಲಿದೆ ಮಾಹಿತಿ

ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಲು ಬಯಸೋರಿಗೆ ಮತ್ತೆ ಅವಕಾಶ ತೆರೆದಿದೆ. ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2022-23ನೇ ಸಾಲಿನ ನಾಲ್ಕನೇ ಸರಣಿಯ ಚಂದಾದಾರಿಕೆ ಇಂದಿನಿಂದ (ಮಾ.6) ಮಾ.10ರ ತನಕ ಐದು ದಿನಗಳ ಕಾಲ ನಡೆಯಲಿದೆ. 

Sovereign Gold Bond Scheme 2022 23 Series IV opens for subscription from March 6th to 10th Details here anu
Author
First Published Mar 6, 2023, 11:48 AM IST

ನವದೆಹಲಿ (ಮಾ.6): ಭಾರತೀಯ ರಿರ್ವ್ ಬ್ಯಾಂಕ್ (ಆರ್ ಬಿಐ) ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2022-23ನೇ ಸಾಲಿನ ನಾಲ್ಕನೇ ಸರಣಿಯ ಚಂದಾದಾರಿಕೆ ಇಂದಿನಿಂದ (ಮಾ.6) ಮಾ.10ರ ತನಕ ಐದು ದಿನಗಳ ಕಾಲ ನಡೆಯಲಿದೆ. ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,611 ರೂ. ನಿಗದಿಪಡಿಸಲಾಗಿದೆ. ಇನ್ನು ಸಾವರಿನ್  ಗೋಲ್ಡ್ ಬಾಂಡ್ ಗೆ ಡಿಜಿಟಲ್ ಪಾವತಿ ಮಾಡಿದ್ರೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್ ಸಿಗಲಿದೆ.  ಅಂದರೆ ನೀವು 10ಗ್ರಾಂ ಚಿನ್ನ ಖರೀದಿಸಿದರೆ 500ರೂ. ಡಿಸ್ಕೌಂಟ್ ಸಿಗಲಿದೆ. ಅಂದರೆ ಡಿಜಿಟಲ್ ಪಾವತಿ ಮಾಡೋರಿಗೆ ಸಾವರಿನ್ ಗೋಲ್ಡ್ ಬಾಂಡ್ ಬೆಲೆ ಪ್ರತಿ ಗ್ರಾಂಗೆ 5,561ರೂ. ಆಗಿರಲಿದೆ. 2022-23ನೇ ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ  ಮೂರನೇ ಸರಣಿಯ ಚಂದಾದಾರಿಕೆ ಡಿಸೆಂಬರ್ 19ರಿಂದ ಡಿಸೆಂಬರ್ 23ರ ತನಕ ನಡೆದಿತ್ತು. ಇನ್ನುಎರಡನೇ ಸರಣಿ ಚಂದಾದಾರಿಕೆ  ಆಗಸ್ಟ್ 22ರಿಂದ 26ರ ತನಕ ನಡೆದಿತ್ತು. ಇನ್ನು ಮೊದಲನೇ ಸರಣೆ ಚಂದಾದಾರಿಕೆ ಜೂನ್ 20-24ರ ತನಕ ನಡೆದಿತ್ತು. ಒಬ್ಬ ವ್ಯಕ್ತಿ  ಅಥವಾ ಹಿಂದೂ ಅವಿಭಕ್ತ ಕುಟುಂಬ ವಾರ್ಷಿಕ ಗರಿಷ್ಠ 4ಕೆ.ಜಿ.ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ ಹಾಗೂ ಅದೇ ಮಾದರಿಯ ಇತರ ಸಂಸ್ಥೆಗಳು ಗರಿಷ್ಠ 20ಕೆ.ಜಿ  ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 1ಗ್ರಾಂ ಚಿನ್ನವಾದ್ರೂ ಖರೀದಿಸಬೇಕು. ಅದಕ್ಕೆ ಕಡಿಮೆ ಚಿನ್ನ ಖರೀದಿಸಲು ಅವಕಾಶವಿಲ್ಲ.

ಯಾರು ಖರೀದಿಸಬಹುದು?
ಭಾರತದಲ್ಲಿ ವಾಸಿಸುವ ವ್ಯಕ್ತಿಗಳು, ಅವಿಭಜಿತ ಹಿಂದೂ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಖರೀದಿಸಬಹುದು ಎಮದು ಆರ್ ಬಿಐ ತಿಳಿಸಿದೆ.

8 ವರ್ಷಕ್ಕೆ ದುಪ್ಪಟ್ಟಾದ ಭಾರತೀಯರ ಆದಾಯ: ಪ್ರಧಾನಿ ಮೋದಿ ಆಡಳಿತದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

ಎಲ್ಲಿ ಸಿಗುತ್ತೆ?
ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕ್ ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ  (SHCIL), ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL),ಅಂಚೆ ಕಚೇರಿಗಳು ಹಾಗೂ ಸ್ಟಾಕ್ ಎಕ್ಸ್ ಚೇಂಜ್ ಗಳು, ಎನ್ ಎಸ್ ಇ ಹಾಗೂ ಬಿಎಸ್ ಇ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಮಾರಾಟ ಮಾಡಲಾಗುತ್ತಿದೆ. 

ಬಡ್ಡಿ ಎಷ್ಟಿದೆ? 
ಸಾವರಿನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ (Interest) ಗಳಿಸಲಿದ್ದಾರೆ.  6 ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ (Capital gains) ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ (GST) ಮತ್ತು ಮೇಕಿಂಗ್ ಶುಲ್ಕಗಳನ್ನು (Making Charges) ವಿಧಿಸಲಾಗೋದಿಲ್ಲ.

ಪಾವತಿ ಹೇಗೆ?
ಸಾವರಿನ್ ಗೋಲ್ಡ್ ಬಾಂಡ್ ಗಳಿಗೆ ನಗದು ಪಾವತಿ ಮೂಲಕ ಅಥವಾ ಡಿಮ್ಯಾಂಡ್ ಡ್ರಾಫ್ಟ್, ಚೆಕ್ ಅಥವಾ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಅದಾನಿ ವಿರುದ್ಧದ ಹಿಂಡನ್‌ಬರ್ಗ್‌ ವರದಿಗೆ ಆಸೀಸ್‌ ಮಾಜಿ ಪ್ರಧಾನಿ ಕಿಡಿಕಿಡಿ

ಏನಿದು ಸಾವರಿನ್ ಗೋಲ್ಡ್ ಬಾಂಡ್ ಯೋಜನೆ?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ  ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ (Invest) ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ ಚಿನ್ನದ ಗಟ್ಟಿ, ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡೋ ಬದಲು ಭೌತಿಕ ಸ್ವರೂಪದಲ್ಲಿರದ ಚಿನ್ನದ ಮೇಲೆ ಹೂಡಿಕೆ ಮಾಡೋದು. ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸೋ ಜೊತೆಗೆ ಸ್ವ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯವಾಗಿ ಬದಲಾಯಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ  2015ರ ನವೆಂಬರ್​ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಾಂಡ್ ಗಳನ್ನು ವಿತರಿಸುತ್ತದೆ. 

Follow Us:
Download App:
  • android
  • ios