ಭಾರತದ ಅತೀ ದೊಡ್ಡ ಬ್ಯಾಂಕ್ ಎಸ್‌ಬಿಐ, ಎಟಿಎಂ ವಹಿವಾಟು ನಿಯಮ ಬದಲಾಯಿಸಿದೆ. ಉಚಿತ ವಹಿವಾಟು ಮಿತಿ ಬದಲಾಗಿದ್ದು, ಎಸ್‌ಬಿಐ ಎಟಿಎಂಗಳಲ್ಲಿ 5, ಇತರ ಬ್ಯಾಂಕ್ ಎಟಿಎಂಗಳಲ್ಲಿ 10 ಉಚಿತ ವಹಿವಾಟು ಲಭ್ಯವಿದೆ. ಮಿತಿ ಮೀರಿದರೆ, ಎಸ್‌ಬಿಐ ಎಟಿಎಂನಲ್ಲಿ 15 ರೂ., ಇತರ ಬ್ಯಾಂಕ್ ಎಟಿಎಂಗಳಲ್ಲಿ 21 ರೂ. ಶುಲ್ಕ ವಿಧಿಸಲಾಗುವುದು. ಬ್ಯಾಲೆನ್ಸ್ ಪರಿಶೀಲನೆಗೆ ಶುಲ್ಕವಿಲ್ಲ. (50 ಪದಗಳು)

ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ವಹಿವಾಟು ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಎಸ್‌ಬಿಐ ಎಟಿಎಂ ವಹಿವಾಟು ಶುಲ್ಕ ಮತ್ತು ಉಚಿತ ಬಳಕೆಯ ಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ.

ಉಚಿತ ವಹಿವಾಟಿನ ಮಿತಿಯಲ್ಲಿ ಬದಲಾವಣೆ: ಈಗಾಗಲೇ 2025 ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಉಳಿತಾಯ ಖಾತೆದಾರರಿಗೆ ಲಭ್ಯವಿರುವ ಉಚಿತ ಎಟಿಎಂ ವಹಿವಾಟುಗಳ ಸಂಖ್ಯೆಯಲ್ಲಿ ಎಸ್‌ಬಿಐ ಬದಲಾವಣೆ ಮಾಡಿದೆ. ಎಸ್‌ಬಿಐ ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ ನಡೆಸುವ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳಿಗೆ ಪರಿಷ್ಕೃತ ನಿಯಮ ಅನ್ವಯಿಸುತ್ತದೆ. 

ಹೊಸ ನಿಯಮದ ಪ್ರಕಾರ, ಎಲ್ಲಾ ಗ್ರಾಹಕರು ತಮ್ಮ ಸರಾಸರಿ ಮಾಸಿಕ ಬ್ಯಾಲೆನ್ಸ್ ಅಥವಾ ಸ್ಥಳವನ್ನು (ಮೆಟ್ರೋ ಅಥವಾ ನಾನ್-ಮೆಟ್ರೋ) ಲೆಕ್ಕಿಸದೆ ಎಸ್‌ಬಿಐ ಎಟಿಎಂಗಳಲ್ಲಿ 5 ಉಚಿತ ವಹಿವಾಟು ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ 10 ಉಚಿತ ವಹಿವಾಟು ನಡೆಸಬಹುದು. ಸರಾಸರಿ ಮಾಸಿಕ ಬ್ಯಾಲೆನ್ಸ್ 25,000 ರೂಪಾಯಿಯಿಂದ 50,000 ರೂಪಾಯಿ ವರೆಗೆ ಇರುವ ಗ್ರಾಹಕರಿಗೆ ಇತರ ಬ್ಯಾಂಕ್ ಎಟಿಎಂಗಳಲ್ಲಿ 5 ಉಚಿತ ವಹಿವಾಟು ಇರುತ್ತದೆ. 1,00,000 ರೂಪಾಯಿಗಿಂತ ಹೆಚ್ಚು ಮಾಸಿಕ ಬ್ಯಾಲೆನ್ಸ್ ಹೊಂದಿರುವ ಖಾತೆದಾರರು ಎಸ್‌ಬಿಐ ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ ಅನಿಯಮಿತ ಉಚಿತ ವಹಿವಾಟು ನಡೆಸಬಹುದು.

ಇದನ್ನೂ ಓದಿ: ನಿವೃತ್ತಿಯಾಗಿರುವ ಅಧಿಕಾರಿಗಳಿಗೆ SBIಯಲ್ಲಿ 1194 ಹುದ್ದೆಗಳು, ಇಂದೇ ಅರ್ಜಿ ಸಲ್ಲಿಸಿ

ಉಚಿತ ಎಟಿಎಂ ವಹಿವಾಟುಗಳ ಮಾಸಿಕ ಮಿತಿ ಮೀರಿದರೆ ಎಸ್‌ಬಿಐ ಎಟಿಎಂಗಳಲ್ಲಿ (State Bank of India-SBI ATM) ಪ್ರತಿ ವಹಿವಾಟಿಗೂ 15 ರೂಪಾಯಿ ಮತ್ತು ಜಿಎಸ್‌ಟಿ ವಿಧಿಸಲಾಗುವುದು. ಇದು ಯಾವ ಸ್ಥಳದ ಎಟಿಎಂ ಇದೆ ಎಂಬುದನ್ನು ಲೆಕ್ಕಿಸದೆ ಈ ಶುಲ್ಕ ವಿಧಿಸಲಾಗುತ್ತದೆ. ಮಾಸಿಕ ಮಿತಿ ಮೀರಿದರೆ ಇತರ ಬ್ಯಾಂಕುಗಳ ಎಟಿಎಂಗಳಲ್ಲಿನ ವಹಿವಾಟುಗಳಿಗೆ ಮೆಟ್ರೋ ನಗರಗಳು ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ಪ್ರತಿ ವಹಿವಾಟಿಗೂ 21 ರೂಪಾಯಿ ಮತ್ತು ಜಿಎಸ್‌ಟಿ ವಿಧಿಸಲಾಗುವುದು. 

ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೇಟ್‌ಮೆಂಟ್‌ಗಳಿಗೆ ಎಸ್‌ಬಿಐ ಎಟಿಎಂಗಳಲ್ಲಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಮಿನಿ ಸ್ಟೇಟ್‌ಮೆಂಟ್ ಪಡೆಯಲು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ 10 ರೂಪಾಯಿ ಮತ್ತು ಜಿಎಸ್‌ಟಿ ಶುಲ್ಕ ಅನ್ವಯಿಸುತ್ತದೆ. ಇದರ ಜೊತೆಗೆ 2025 ಮೇ 1 ರಿಂದ ಎಟಿಎಂ ವಹಿವಾಟು ಶುಲ್ಕವನ್ನು ಪ್ರತಿ ವಹಿವಾಟಿಗೆ 23 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ. ಎಟಿಎಂ ಇಂಟರ್‌ಚೇಂಜ್ ಶುಲ್ಕ ಹೆಚ್ಚಿಸಿದ ನಂತರ ಎಟಿಎಂ ಹಣ ಹಿಂಪಡೆಯುವ ಗರಿಷ್ಠ ಶುಲ್ಕವನ್ನು ಪ್ರತಿ ವಹಿವಾಟಿಗೆ 23 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಪ್ರಕಟಿಸಿತ್ತು.

ಇದನ್ನೂ ಓದಿ: ನಿಮ್ಮ ಬ್ಯಾಂಕ್ ಖಾತೆಗೆ ತಪ್ಪಾಗಿ ಬೇರೊಬ್ಬರ ಹಣ ಬಂದರೆ ಖರ್ಚು ಮಾಡಬಹುದೇ? ಹಣ ಡ್ರಾ ಮಾಡಿದರೆ ಏನಾಗುತ್ತೆ?

ಎಟಿಎಂ ಆದಾಯ: ಎಟಿಎಂ ಹಣ ಹಿಂಪಡೆಯುವಿಕೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಣನೀಯ ಆದಾಯ ಗಳಿಸಲು ಸಾಧ್ಯವಾಗಿದೆ. ಅದೇ ಸಮಯದಲ್ಲಿ ಇತರ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಕಳೆದ ಐದು ವರ್ಷಗಳಲ್ಲಿ ಎಟಿಎಂ ಹಣ ಹಿಂಪಡೆಯುವಿಕೆಯಿಂದ ಎಸ್‌ಬಿಐ 2,043 ಕೋಟಿ ರೂಪಾಯಿ ಲಾಭ ಗಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಮಾತ್ರ ಈ ಸೇವೆಗಳಿಂದ ಲಾಭ ಗಳಿಸಿವೆ.