ಕರಾವಳಿಯ ಆರ್ಥಿಕ ಶಕ್ತಿ: 3 ವರ್ಷದಲ್ಲಿ ರಾಜ್ಯ ಜಿಡಿಪಿಯಲ್ಲಿ ದಕ್ಷಿಣ ಕನ್ನಡದ ಪಾಲು ಶೇ.2 ಹೆಚ್ಚಳ
ರಾಜ್ಯದ ಒಟ್ಟು ಜಿಡಿಪಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.5.4ರಷ್ಟು ಪಾಲು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಉತ್ತಮ ಹೂಡಿಕೆ ವಾತಾವರಣ ಕಲ್ಪಿಸಿದರೆ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಜಿಡಿಪಿಯನ್ನು ಇನ್ನೂ ಶೇ.2ರಷ್ಟು ಹೆಚ್ಚಿಸಬಹುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಪ್ರಯತ್ನ ಮಾಡಿದರೆ 3 ವರ್ಷದಲ್ಲಿ ಉನ್ನತಿ
ವಿಧಾನಸಭೆ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ(ಜಿಡಿಪಿ) ದಕ್ಷಿಣ ಕನ್ನಡ ಜಿಲ್ಲೆ ಶೇ.5.4ರಷ್ಟು ಪಾಲು ಹೊಂದಿದ್ದು, ಆ ಭಾಗದಲ್ಲಿ ಬಂಡವಾಳ ಹೂಡಿಕೆಗೆ ನಾವೆಲ್ಲರೂ ಸೇರಿ ಉತ್ತಮ ವಾತಾವರಣ ಕೊಟ್ಟಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಶೇ.2ರಷ್ಟು ಜಿಡಿಪಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯದ ಜಿಲ್ಲಾ ಜಿಡಿಪಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ
ಬುಧವಾರ ಪ್ರಶ್ನೋತ್ತರದ ವೇಳೆ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿಯಲ್ಲಿ ಆರ್ಥಿಕ ಬೆಳವಣಿಗೆಗೆ ಉತ್ತಮ ಸಾಮರ್ಥ್ಯವಿದೆ. ರಾಜ್ಯದ ಜಿಲ್ಲಾ ಜಿಡಿಪಿ ಪ್ರಕಾರ ಬೆಂಗಳೂರು ಶೇ.39.9ರಷ್ಟು ಪಾಲಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಶೇ.5.4ರಷ್ಟು ಪಾಲು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಿದೆ. ನಾವೆಲ್ಲರೂ ಸೇರಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಕೊಟ್ಟರೆ ಜಿಲ್ಲೆಯ ಆರ್ಥಿಕತೆಯ ಪ್ರಗತಿ ವೇಗ ಮತ್ತಷ್ಟು ಹೆಚ್ಚಲಿದೆ ಎಂದರು.
3 ವರ್ಷದಲ್ಲಿ 2.50 ಲಕ್ಷ ಉದ್ಯೋಗ ಸೃಷ್ಟಿ:
ರಾಜ್ಯದ ಐಟಿ ರಫ್ತು ಪ್ರಮಾಣ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 5.50 ಲಕ್ಷ ಕೋಟಿ ರು. ದಾಟುವ ಸಾಧ್ಯತೆ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 1 ಲಕ್ಷ ಕೋಟಿ ಮೊತ್ತದ ರಫ್ತು ಹೆಚ್ಚಳ ಆಗುವ ನಿರೀಕ್ಷೆ ಇದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2,129 ಕಂಪನಿಗಳು/ನವೋದ್ಯಮಗಳು ಆರಂಭಗೊಂಡಿದ್ದು, ಇದರಿಂದ 2.50 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು.
ಐಟಿ ರಫ್ತು ಹೆಚ್ಚಳ:
ಕಳೆದ ಮೂರು ವರ್ಷಗಳಲ್ಲಿ ಐಟಿ ರಫ್ತು ಪ್ರಮಾಣ ಏರಿಕೆಯಾಗುತ್ತಿದೆ. 2023-24ರಲ್ಲಿ 4.09 ಲಕ್ಷ ಕೋಟಿ ರು. ಹಾಗೂ 2024-25ರಲ್ಲಿ 4.50 ಲಕ್ಷ ಕೋಟಿ ರು. ಇತ್ತು. 2025-26ಕ್ಕೆ ಇದು 5.50 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಐಟಿ ಮತ್ತು ಬಿಟಿ ವಲಯಕ್ಕೆ ಸಂಬಂಧಿಸಿ ಕ್ರಮವಾಗಿ 5 ಮತ್ತು 13 ಹಾಗೂ ನವೋದ್ಯಮಗಳಿಗೆ ಸಂಬಂಧಿಸಿದ 475 ತ್ರಿಪಕ್ಷೀಯ ಒಪ್ಪಂದಗಳಾಗಿವೆ. ಅಂತೆಯೇ ರಾಜೀವ್ ಗಾಂಧಿ ಉದ್ಯಮಶೀಲತೆ ಅಡಿ 60, ಮಹಿಳಾ ಉದ್ಯಮಶೀಲತಾ ಅಡಿ ನಾಲ್ಕು ಸಂಸ್ಥೆಗಳು, ಗ್ರಾಸ್‌ರೂಟ್ ಇನ್ನೋವೇಷನ್ ಕಾರ್ಯಕ್ರಮದಡಿ 27 ನವೋದ್ಯಮಗಳೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ.
ಎಲಿವೇಟ್ ಯೋಜನೆ ಅಡಿ 90 ನವೋದ್ಯಮಗಳಿಗೆ ಒಟ್ಟು 19.70 ಕೋಟಿ ರು. ಅನುದಾನ
ಎಲಿವೇಟ್ ಯೋಜನೆ ಅಡಿ 90 ನವೋದ್ಯಮಗಳಿಗೆ ಒಟ್ಟು 19.70 ಕೋಟಿ ರು. ಅನುದಾನ ನೀಡುವ ಮೂಲಕ ಕರಾವಳಿ ಜಿಲ್ಲೆಗಳಿಗೆ ಉತ್ತೇಜನ ನೀಡಲಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ಮತ್ತು ಕರಾವಳಿಯಲ್ಲಿ ಹೂಡಿಕೆಗೆ ಒಳ್ಳೆಯ ವಾತಾವರಣ ಇಲ್ಲ ಎಂದು ಸಚಿವರು ಹೊರಗೆ ಮಾತನಾಡಿದ್ದಾರೆ. ಈಗ ಉತ್ತಮ ಸಾಮರ್ಥ್ಯವಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

